Amruthadhaare ; ಮನೆಯಿಂದ ಹೊರ ಹೋದ ಭೂಮಿಕಾ, ಗಾಬರಿಯಾದ ಗೌತಮ್-ಕೋಟ್ಯಾಧಿಪತಿಯ ಮನೆಯಲ್ಲಿ ಒಂದು ಸಿಸಿಟಿವಿನೂ ಇಲ್ವಾ ?
''ಅಮೃತಧಾರೆ'' ಧಾರಾವಾಹಿಯಲ್ಲಿ ಮನೆಯಿಂದ ಹೊರ ಹೋಗಲು ಭೂಮಿಕಾ ಮುಂದಾಗಿದ್ದಾಳೆ. ಭಾಗ್ಯಮ್ಮನ ಮುಂದೆ ಕಣ್ಣೀರು ಹಾಕಿ ಮಗು ಜೊತೆ ಕೆಳಗಡೆ ಬಂದಿರುವ ಭೂಮಿಕಾನ ಶಕುಂತಲಾ ಮತ್ತೆ ಕೆಣಕುತ್ತಾಳೆ. ನನ್ನನ್ನು ಮನೆಯಿಂದ ಹೊರ ಹಾಕುವುದಾಗಿ ಹೇಳಿದ್ದೇ ಆದರೆ ಈಗ ನೀನೆ ಮನೆಯಿಂದ ಹೊರ ಹೋಗುವಂತಾಯ್ತು ಎಂದು ಹೇಳುತ್ತಾಳೆ. ನಾನು ಮಾಡಿದ್ದೇ ರೂಲ್ಸ್ ನಾನು ಆಡಿದ್ದೇ ಆಟ ಇನ್ಮುಂದೆ ಇಡೀ ಮನೆ ನನ್ನ ಕೈಯಲ್ಲಿರುತ್ತೆ ಎಂದು ಹೇಳುತ್ತಾಳೆ.
ಈ ಶಕುಂತಲಾ ಮತ್ತೆ ಅಧಿಕಾರಕ್ಕೆ ಬರುತ್ತಾಳೆ ಎಂದು ಬೀಗುತ್ತಾಳೆ. ಶಕುಂತಲಾಳ ಈ ಮಾತುಗಳಿಗೆ ಏನೋ ದೊಡ್ಡದಾಗಿ ಸಾಧನೆ ಮಾಡಿದ್ದೀರಾ ಎಂದು ಅಂದುಕೊಳ್ಳಬೇಡಿ. ಒಳ್ಳೆತನದಲ್ಲಿ ಗೆದ್ದರೆ ಅದು ಗೆಲುವು ಈ ರೀತಿ ಅಡ್ಡದಾರಿಯಲ್ಲಿ ಗೆದ್ದರೆ ಅದು ಮೋಸ. ಇವತ್ತು ನೀವು ಗೆದ್ದಿಲ್ಲ ನಿಮ್ಮ ಕೆಟ್ಟತನ ನಿಮ್ಮ ನೀಚತನ ಗೆಲ್ತು ಎನ್ನುವ ಭೂಮಿಕಾ ನೀವು ಹೇಳಿದಂತೆ ನಾನು ಮನೆಯಿಂದ ಹೊರಗೆ ಹೋಗ್ತಿದ್ದೀನಿ ಆದರೆ ಗೌತಮ್ ಅವರಿಗೆ ಏನಾದರೂ ಆದರೆ ನಾನು ಮತ್ತೆ ಬರ್ತಿನಿ ಎಂದು ಹೇಳಿ ಹೊರಡುತ್ತಾಳೆ.

ಟೆನ್ಷನ್‌ನಲ್ಲಿ ಜೈದೇವ್
ಕಾಡಿನಲ್ಲಿ ಭೂಮಿಕಾ ಕೈಯಿಂದ ಹೇಗೋ ತಪ್ಪಿಸಿಕೊಂಡು ಬಂದಿರುವ ಜೈದೇವ್‌ಗೆ ಅಲ್ಲಿ ಗೌತಮ್ ಮನೆಯಲ್ಲಿ ನಡೆದ ಬೆಳವಣಿಗೆಗಳು ಇನ್ನೂ ಗೊತ್ತಾಗಿಲ್ಲ. ಹೀಗಾಗಿ ಟೆನ್ಷನ್‌ನಲ್ಲಿ ಒದ್ದಾಡುತ್ತಿದ್ದಾನೆ. ಆಗ ಶಕುಂತಲಾ ಫೋನ್ ಮಾಡಿದ್ದು, ಜೈದೇವ್ ಪ್ರಶ್ನೆಗಳ ಸುರಿಮಳೆಗೈಯುತ್ತಾನೆ. ಅವಳು ನೋಡಿದರೆ ಗನ್ ತಗೊಂಡು ಬಂದಿದ್ದಳು ನೀನು ನೋಡಿದರೆ ಫೋನ್ ರೀಸಿವ್ ಮಾಡ್ತಿಲ್ಲ ಟೆನ್ಷನ್ ಆಗಲ್ವಾ ಎಂದು ಹೇಳುತ್ತಾನೆ.
ಗನ್ ತಗೊಂಡು ಬಂದವಳಿಗೆ ಮಣ್ಣು ತಿನಿಸಿದೆ ಎನ್ನುವ ಶಕುಂತಲಾ
ಆತಂಕದಲ್ಲಿರುವ ಜೈದೇವ್‌ನ ಸಮಾಧಾನ ಮಾಡುವ ಶಕುಂತಲಾ, ಮನೆಯಲ್ಲಿ ನಡೆದ ವಿಚಾರವನ್ನೆಲ್ಲಾ ಹೇಳುತ್ತಾಳೆ. ಗನ್ ತಗೊಂಡು ಬಂದವಳಿಗೆ ಮಣ್ಣು ತಿನ್ನಿಸಿದ್ದಾಯ್ತು ಎನ್ನುವ ಶಕುಂತಲಾ ಅವಳನ್ನು ಮನೆಯಾಚೆ ಕಳುಹಿಸಿದ್ದಾಯ್ತು ಇವತ್ತಿಗೆ ನಮಗೆ ಇದ್ದಿದ್ದ ಕಂಟಕ ಕಳಿಯಿತು ಎಂದು ಹೇಳುತ್ತಾಳೆ. ಶಕುಂತಲಾ ಮಾತುಗಳನ್ನು ಕೇಳಿ ಜೈದೇವ್ ಮತ್ತು ದಿಯಾ ಖುಷಿಯಾಗುತ್ತಾರೆ.
ಭೂಮಿಕಾಳನ್ನು ತಡೆಯುವ ಪ್ರಯತ್ನ ಮಾಡುವ ಮಲ್ಲಿ
ಮನೆಯಿಂದ ಹೊರ ಹೋಗುತ್ತಿರುವ ಭೂಮಿಕಾಳನ್ನು ಮಲ್ಲಿ ತಡೆಯುವ ಪ್ರಯತ್ನ ಮಾಡುತ್ತಾಳೆ. ಆದರೆ ಭೂಮಿಕಾ ಮಾತು ಕೇಳುವುದಿಲ್ಲ. ಇದೇ ಸಮಯದಲ್ಲಿ ಗೌತಮ್ ಫೋನ್ ಮಾಡಿದ್ದು ಭೂಮಿಕಾ ಫೋನ್ ರಿಸೀವ್ ಮಾಡುವುದಿಲ್ಲ. ನನ್ನ ಮಾತು ಕೇಳಿ ಅಕ್ಕೋರೇ ನೀವು ಇಬ್ಬರು ದೂರವಾಗಿ ಬದುಕುವುದನ್ನು ನಮ್ಮಿಂದ ನೋಡಲು ಆಗುವುದಿಲ್ಲ ಎಂದು ಮಲ್ಲಿ ಹೇಳಿದರೂ, ನಾನು ನಿಮ್ಮ ಜೊತೆ ಬರುತ್ತೇನೆ ಎಂದರೂ ಕೇಳದ ಭೂಮಿಕಾ , ಮಲ್ಲಿಗೆ ಗದರಿ ಮನೆಯಿಂದ ಹೊರ ಹೋಗುತ್ತಾಳೆ.
ಪಾರ್ಟಿ ಮಾಡುವ ಶಕುಂತಲಾ, ಜೈದೇವ್ ಮತ್ತು ದಿಯಾ
ಜೈದೇವ್ ಮನೆಗೆ ಶಕುಂತಲಾ ಬಂದಿದ್ದು ಮೂವರು ಜನ ಖುಷಿಯಲ್ಲಿ ಪಾರ್ಟಿ ಮಾಡುತ್ತಿದ್ದಾರೆ. ಇಷ್ಟು ದಿನ ಜುರಾಸಿಕ್ ಪಾರ್ಕ್‌ನಂತೆ ಇದ್ದ ನಮ್ಮ ಮನೆಯನ್ನು ''ಜೂ'' ಮಾಡಿ ಅವಳು ಇಟ್ಟಿದ್ದಳು, ಅವಳು ಬರುವ ಮುಂಚೆ ನಮ್ಮ ಅಣ್ಣ ಎಂದು ಅನಿಸಿಕೊಂಡ ಆ ದಡ್ಡನಿಗೆ ಚೂರು ಗೊತ್ತಾಗುತ್ತಿರಲಿಲ್ಲ ಎಂದು ಜೈದೇವ್ ಹೇಳುತ್ತಾನೆ. ಈಗ ಮತ್ತೆ ಎಲ್ಲವೂ ಮೊದಲಿನಂತಾಯ್ತು ಎಂದು ಹೇಳುತ್ತಾನೆ. ಆಗ ಭೂಮಿಕಾ ಜೊತೆ ನಿನ್ನ ಮೊದಲನೇ ಹೆಂಡತಿ ಕೂಡ ಹೋದ್ಳು ಎಂದು ಶಕುಂತಲಾ ಹೇಳಿದ್ದು ಈ ವಿಚಾರ ಕೇಳಿ ಜೈದೇವ್ ಇನ್ನೂ ಖುಷಿ ಪಡುತ್ತಾನೆ.

ಮಲ್ಲಿಗೆ ಬುದ್ದಿವಾದ ಹೇಳುವ ಭೂಮಿಕಾ
ಭೂಮಿಕಾ ಬೇಡ ಅಂದರೂ ಕೂಡ ಹಿಂದೆ ಹಿಂದೆ ಹೋಗಿರುವ ಮಲ್ಲಿಗೆ ಭೂಮಿಕಾ ಬುದ್ದಿವಾದ ಹೇಳುತ್ತಾಳೆ. ನೀನು ಬಂದರೆ ನಿನ್ನ ಜವಾಬ್ಧಾರಿಯನ್ನು ನೋಡಿಕೊಳ್ಳೋರು ಯಾರು..? ನಿನಗೆ ಉಜ್ವಲ ಭವಿಷ್ಯ ಇದೆ ಎಂದೆಲ್ಲಾ ಹೇಳುತ್ತಾಳೆ. ಮಲ್ಲಿ ಎಷ್ಟೇ ಮನವೊಲಿಸಲು ಪ್ರಯತ್ನ ಮಾಡಿದರು ಕೂಡ ಒಪ್ಪದ ಭೂಮಿಕಾ ಇಡೀ ಸಾಮ್ರಾಜ್ಯ ಕುಸಿದು ಬೀಳುತ್ತೆ. ನಿನ್ನ ನಂಬಿಕೊಂಡು ಸಾವಿರಾರು ಜನ ಇದ್ದಾರೆ ಮಲ್ಲಿ ಅವರನ್ನೆಲ್ಲ ಕೈ ಬಿಡಬೇಡ ಎಂದು ಹೇಳುತ್ತಾಳೆ.
ಗೌತಮ್‌ಗೆ ಫೋನ್ ಮಾಡುವ ಪಾರ್ಥ
ಭೂಮಿಕಾ ಮತ್ತು ಮಲ್ಲಿ ಎಲ್ಲಿಯೂ ಕಾಣದ ಕಾರಣ ಆತಂಕಕ್ಕೊಳಗಾಗಿರುವ ಪಾರ್ಥ, ಗೌತಮ್‌ಗೆ ಕರೆ ಮಾಡಿದ್ದಾನೆ. ನಡೆದ ವಿಚಾರವನ್ನೆಲ್ಲಾ ಹೇಳಿ ಬೇಗ ಮನೆಗೆ ಬರುವಂತೆ ಹೇಳಿದ್ದಾನೆ. ಪಾರ್ಥ ಮಾತು ಕೇಳಿ ಗಾಬರಿಯಾಗಿರುವ ಗೌತಮ್ ಓಡೋಡಿ ಬಂದಿದ್ದು, ಪಾರ್ಥಗೆ ಆದ ಗಾಯ ಕಂಡು ಇನ್ನೂ ಗಾಬರಿಯಾಗಿದ್ದಾನೆ. ಭೂಮಿಕಾಗೆ ಏನೂ ಆಗಿಲ್ಲವಲ್ಲಾ ಎಂದು ಕೇಳುತ್ತಾನೆ. ಆಗ ಪಾರ್ಥ ಅತ್ತಿಗೆ ಮನೆಗೆ ಬಂದಿದ್ದರು ಆದರೆ ಈಗ ಕಾಣ್ತಿಲ್ಲ ಎಂದು ಹೇಳಿದ್ದು ಶಕುಂತಲಾಗೆ ಗೌತಮ್, ನೀವು ಭೂಮಿಕಾನ ನೋಡಲಿಲ್ವಾ ಎಂದು ಕೇಳುತ್ತಾನೆ.
ಒಂದು ಸಿಸಿಟಿವಿನೂ ಇಲ್ವಾ ?
ಇಂದು (ಸೆಪ್ಟೆಂಬರ್ 6) ಬಿಡುಗಡೆಯಾದ ಈ ಪ್ರೋಮೋವನ್ನು ನೋಡಿ ಹಲವು ಪ್ರೇಕ್ಷಕರು ತಮ್ಮ ಅಸಮಾಧಾನ ಹೊರ ಹಾಕುತ್ತಿದ್ದು, ಭೂಮಿಕಾ ಮನೆಯಾಚೆ ಹೋದ ನಂತರ ಧಾರಾವಾಹಿ ನೋಡುವ ಮನಸಾಗುತ್ತಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಅಮೃತಧಾರೆ ಹಳಿ ತಪ್ಪಿತು ಎನ್ನುತ್ತಿದ್ದಾರೆ. ಇನ್ನೂ ಕೆಲವರು ಗೌತಮ್ ದಿವಾನ್ ಕೋಟ್ಯಾಧಿಪತಿ. ಇಂತಹ ಕೋಟ್ಯಾಧಿಪತಿ ಮನೆಯಲ್ಲಿ ಒಂದು ಸಿಸಿಟಿವಿ ಕ್ಯಾಮರಾ ಇಲ್ವಾ ? ಆ ಕ್ಯಾಮರಾ ನೋಡಿದರೆ ಕ್ಷಣಾರ್ಧದಲ್ಲಿಯೇ ಶಕುಂತಲಾ ಮುಖವಾಡ ಗೌತಮ್ ಎದುರು ಕಳಚಿ ಬೀಳುತ್ತೆ. ಸತ್ಯ ಹೊರಗಡೆ ಬರುತ್ತೆ ಎಂದು ಕೂಡ ಪ್ರಶ್ನೆ ಮಾಡುತ್ತಿದ್ಧಾರೆ. ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.


Click it and Unblock the Notifications











