Amruthadhaare ; ಕೊನೆಗೂ ಕೂಡಿ ಬಂತು ಅಮೃತ ಘಳಿಗೆ, ಗೌತಮ್‌ಗೆ ಸಿಕ್ಕೇ ಬಿಟ್ಳು ಭೂಮಿಕಾ - ಕನಸಲ್ಲ ತಾನೇ ?
'ಅಮೃತಧಾರೆ' ಧಾರಾವಾಹಿಯಲ್ಲಿ ಸದ್ಯ ಗೌತಮ್ ವನವಾಸ ಮುಂದುವರೆದಿದೆ. ತನ್ನೆಲ್ಲಾ ಆಸ್ತಿ-ಹಣ- ಅಂತಸ್ತು ಶಕುಂತಲಾ ಮಡಿಲಿಗೆ ಹಾಕಿ ಗೌತಮ್ ಸದ್ಯ ತನ್ನ ನೆಮ್ಮದಿ ಹುಡುಕಿಕೊಂಡು ಅಲೆಯುತ್ತಿದ್ದಾನೆ. ಕೋಟ್ಯಾಧಿಪತಿಯಾಗಿದ್ದ ಗೌತಮ್ ಸದ್ಯ ಕ್ಯಾಬ್ ಡ್ರೈವರ್ ಆಗಿದ್ದಾನೆ. ಮತ್ತೊಂದು ಕಡೆ ಶಕುಂತಲಾ ವಿರುದ್ಧ ಹೋರಾಡಲು ಸಾಧ್ಯವಾಗದೇ ಶಸ್ತ್ರ ತ್ಯಾಗ ಮಾಡಿರುವ ಭೂಮಿಕಾ ತನ್ನ ಮಗು ಜೊತೆ ಕರೆದುಕೊಂಡು ಕುಶಾಲ ನಗರದಲ್ಲಿ ಬಿಡಾರ ಹೂಡಿದ್ದಾಳೆ. ಮಲ್ಲಿ ಕೂಡ ಜೊತೆಯಲ್ಲಿದ್ದಾಳೆ.
ಕಥೆ ಐದು ವರ್ಷ ಮುಂದಕ್ಕೋಗಿದ್ದು ಹಲವು ಬಾರಿ ಗೌತಮ್ ಕಣ್ಣೆದುರೇ ಭೂಮಿಕಾ ಇದ್ದರೂ ಕೂಡ ಇಬ್ಬರ ಭೇಟಿಯಾಗಿಲ್ಲ. ಇನ್ನೂ ತನ್ನ ಮಗು ಜೊತೆ ಗೌತಮ್ ಹಲವು ಸಲ ಕಾಲವನ್ನು ಕೂಡ ಕಳೆದಿದ್ದು ತನಗೆ ಸಿಗುತ್ತಿರುವ ಹುಡುಗ ಅಪ್ಪುನೇ ತನ್ನ ಮಗ ಆಕಾಶ್ ಎನ್ನುವ ವಿಚಾರ ಗೌತಮ್‌ಗೆ ಇನ್ನೂ ಗೊತ್ತಾಗಿಲ್ಲ.

ಈ ಹಿನ್ನೆಲೆ ಗೌತಮ್ ಮತ್ತು ಭೂಮಿಕಾ ಮುಖಾಮುಖಿಯಾಗುವುದು ಯಾವಾಗ ..? ಇನ್ನೆಷ್ಟು ದಿನ ಕಥೆಯನ್ನು ಹೀಗೆ ಮುಂದುವರೆಸಿಕೊಂಡು ಹೋಗುತ್ತಾರೆ ಎನ್ನುವ ಪ್ರಶ್ನೆ ಹಲವರಲ್ಲಿತ್ತು. ಇದೇ ವಿಚಾರಕ್ಕೆ ಬೇಸರ ಕೂಡ ಮನೆ ಮಾಡಿತ್ತು.
ಆದರೆ.. ಅದ್ಯಾಕೋ ಸ್ವತಃ ನಿರ್ದೇಶಕರಿಗೆ ಕಥೆಯನ್ನು ರಬ್ಬರನಂತೆ ಎಳೆಯುವ ಮನಸು ಇದ್ದಂತೆ ಇಲ್ಲ. ಹೀಗಾಗಿಯೇ ಏನೋ ಸದ್ಯ ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್‌ಗೆ ಭೂಮಿಕಾ ಸಿಗುವ ಕಾಲ ಬಂದಂತೆ ಇದೆ. ಈ ಕುರಿತು ಸದ್ಯ ಪ್ರೋಮೋ ಬಿಡುಗಡೆ ಮಾಡಲಾಗಿದ್ದು ಪ್ರೋಮೋ ಹಲವರ ಹೃದಯವನ್ನು ಗೆದ್ದಿದೆ. ಕುತೂಹಲ ಕೆರಳಿಸಿದೆ.
ಇಂದು (ಸೆಪ್ಟೆಂಬರ್17) ಬಿಡುಗಡೆಯಾದ ಪ್ರೋಮೊದಲ್ಲಿ ತೋರಿಸಲಾಗಿರುವಂತೆ ಭೂಮಿಕಾಳನ್ನು ಹುಡುಕುತ್ತಾ ಹುಡುಕುತ್ತಾ ಆನಂದ್ ಜೊತೆ ಗೌತಮ್ ಭೂಮಿಕಾ ಕೆಲಸ ಮಾಡುತ್ತಿರುವ ಶಾಲೆಯ ಬಳಿ ಬಂದಿದ್ದಾನೆ. ಇದೇ ಸಮಯದಲ್ಲಿ ಭೂಮಿಕಾ ಕೈಯಲ್ಲಿದ್ದ ಪೇಪರ್‌ಗಳೆಲ್ಲ ಕೆಳಗೆ ಬಿದ್ದಿದ್ದು ಮಕ್ಕಳು ಎತ್ತಿ ನೀಡಿದ್ದಾರೆ. ಇದನ್ನು ಗೌತಮ್ ಗಮನಿಸುತ್ತಿದ್ದು ಆಟೋದತ್ತ ಹೋಗುತ್ತಿರುವ ಭೂಮಿಕಾಳನ್ನೇ ನೋಡುತ್ತಾನೆ. ಆ ನಂತರ ಆಟೋದಿಂದ ಭೂಮಿಕಾ ಇಣುಕಿ ನೋಡಿದ್ದು ಗೌತಮ್‌ಗೆ ಆಶ್ಚರ್ಯದ ಜೊತೆ ಖುಷಿಯಾಗಿದೆ.
ಸದ್ಯ ಭೂಮಿಕಾ ಕೆಲಸ ಮಾಡುತ್ತಿರುವ ಸ್ಕೂಲ್ ಗೌತಮ್‌ಗೆ ಗೊತ್ತಾಗಿದ್ದು, ಮರು ದಿನ ವಿದ್ಯಾರ್ಥಿನಿ ಬಳಿ ಗೌತಮ್ ಹೂ ಜೊತೆಯಲ್ಲಿ ಪತ್ರವನ್ನು ಭೂಮಿಕಾಗೆ ತಲುಪಿಸಿದ್ದಾನೆ. ಪತ್ರವನ್ನು ಭೂಮಿಕಾ ಓದಲು ತೆರೆದಿದ್ದು, ನಿಮಗೆ ಹೂ ಕೊಡೋ ಧೈರ್ಯ ಯಾರಿಗಿದೆ? ನಾನು, ನಿಮ್ಮ ಗೌತಮ್ ಎಂದು ಪತ್ರದಲ್ಲಿ ಗೌತಮ್ ಬರೆದಿದ್ದಾನೆ.

ಪತ್ರದಲ್ಲಿ ಬರೆದ ಸಾಲನ್ನು ಓದಿ ಭೂಮಿಕಾ ಕೂಡ ಖುಷಿಯಾಗಿದ್ದು, ಗೌತಮ್ ಮತ್ತು ಭೂಮಿಕಾ ಮುಖಾಮುಖಿಯಾಗಿದ್ದಾರೆ. ಆಗ ನಾವಿಬ್ಬರು ಒಟ್ಟಿಗೆ ಬದುಕೋಕೆ ನೂರಾರು ಕಾರಣಗಳಿತ್ತು. ಯಾಕೆ ನನ್ನನ್ನು ಒಂಟಿಯಾಗಿ ಮಾಡಿ ಬಿಟ್ಟು ಹೋದ್ರಿ..? ಎಂದು ಗೌತಮ್ ಪ್ರಶ್ನೆ ಮಾಡಿದ್ದಾನೆ.
ಸದ್ಯ ಗೌತಮ್ ಮಾತಿಗೆ ಭೂಮಿಕಾ ಉತ್ತರವೇನು ಎನ್ನುವ ಪ್ರಶ್ನೆ ಧಾರಾವಾಹಿಯ ಪ್ರೇಕ್ಷಕರಿಗೆ ಕಾಡುತ್ತಿದೆ.ಗೌತಮ್ ಪ್ರೀತಿಗೆ ಭೂಮಿಕಾ ಕರಗುತ್ತಾಳಾ..? ಅಥವಾ ಗೌತಮ್ ಒಳಿತು ಬಯಸಿ ಕಾರಣವನ್ನೇಳಿ ದೂರವಾಗುತ್ತಾಳಾ ..? ಎನ್ನುವ ಪ್ರಶ್ನೆ ಕೂಡ ಹಲವರಲ್ಲಿದೆ. ಇದಲ್ಲದೇ ಗೌತಮ್ ಬೆನ್ನ ಹಿಂದೆ ಶಕುಂತಲಾ ಏನೆಲ್ಲಾ ಆಟ ಆಡಿದ್ದಾಳೆ. ಹೆಣ್ಣು ಮಗು ಕಿಡ್ನ್ಯಾಪ್ ಮಾಡಿಸಿದ್ದು ಬೇರೆ ಯಾರು ಅಲ್ಲ ಬದಲಿಗೆ ಶಕುಂಲತಾನೇ ಎಂಬ ಇತ್ಯಾದಿ ವಿಚಾರಗಳನ್ನು ಗೌತಮ್‌ಗೆ ಭೂಮಿಕಾ ಹೇಳುತ್ತಾಳಾ ಎನ್ನುವುದನ್ನು ಕಾದು ನೋಡಬೇಕಿದೆ.
ಇನ್ನೂ ಇದೆಲ್ಲದರ ನಡುವೆ ಗೌತಮ್ ಮತ್ತು ಭೂಮಿಕಾ ಮುಖಾಮುಖಿಯಾದ ಹಿನ್ನೆಲೆ ಖುಷಿಯಾದ ಹಲವರಿಗೆ ಇದು ಪ್ರೇಕ್ಷಕರು ಹಿಡಿದಿಟ್ಟುಕೊಳ್ಳಲು, ಕುತೂಹಲ ಕೆರಳಿಸಲು, ಧಾರಾವಾಹಿ ತಂಡದವರು ಮಾಡುತ್ತಿರುವ ಗಿಮಿಕ್ಕಾ..? ಈ ಸನ್ನಿವೇಶವನ್ನು ಆ ನಂತರ ಕನಸಿನಂತೆ ತೋರಿಸಿ ಚಮಕ್ ಏನಾದರೂ ಕೂಡುತ್ತಾರಾ..? ಎನ್ನುವ ಚಿಂತೆ ಕೂಡ ಹಲವರನ್ನು ಕಾಡುತ್ತಿದೆ. ಇದಕ್ಕೆ ಕೈಗನ್ನಡಿ ಎಂಬಂತೆ ಇದನ್ನು ಕನಸ್ಸು ಅಂತ ತೋರಿಸ ಬೇಡಿ.. ಹಾಗೇನಾದ್ರೂ ಆದ್ರೇ ಈ ಡೈರೆಕ್ಟರ್ ಸಂಸಾರ ಹೀಗೆ ಹಾಳಾಗಿ ಹೋಗ್ಲಿ ದೇವರೆ ಎಂದು ಕೆಲವರು ಹಿಡಿಶಾಪವನ್ನು ಕಾಮೆಂಟ್‌ಗಳ ಮೂಲಕ ಹಾಕಿದ್ದಾರೆ.


Click it and Unblock the Notifications











