Amruthadhaare ; ಭೂಮಿಕಾ ಎದುರು ಮತ್ತೆ ಬಂದ 'ಮನೆದೇವರು', ಇಬ್ಬರು ಈಗ ನೆರೆಹೊರೆಯವರು- ಮನೆ ಮತ್ತೆ ಖಾಲಿನಾ ?
ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್ ಸದ್ಯ ವಠಾರದಲ್ಲಿ ವಾಸ ಮಾಡುತ್ತಿದ್ದಾನೆ. ಇನ್ನೊಂದು ಕಡೆ ಕುಶಾಲನಗರದಿಂದ ಕಾಲ್ಕಿತ್ತ ಭೂಮಿಕಾ ಈಗ ಮಲ್ಲಿ ಜೊತೆ ಬೆಂಗಳೂರಿನಲ್ಲಿಯೇ ಬಂದು ವಾಸ ಮಾಡುತ್ತಿದ್ದಾಳೆ. ಮತ್ತೊಂದು ಕಡೆ ಹೆಂಡ್ತಿ ಮತ್ತು ಮಗನ ಪ್ರೀತಿಯಿಂದ ವಂಚಿತಗೊಂಡಿರುವ ಗೌತಮ್‌ಗೆ ಸ್ವಂತ ಮಗಳು ಇನ್ನೂ ಸಿಕ್ಕಿಲ್ಲ. ಆದರೆ.. ಗೌತಮ್‌ಗೆ ಈಗ ಬಾಲಕಿ ಒಬ್ಬಳು ಸಿಕ್ಕಿದ್ದಾಳೆ.
ಅನಾಥಾಶ್ರಮದಲ್ಲಿ ಇರಲು ಒಪ್ಪದ ಆಕೆಯನ್ನು ಗೌತಮ್ ದತ್ತು ಪಡೆದಿದ್ದಾನೆ. ಮಗಳಂತೆಯೇ ಸಾಕುತ್ತಿದ್ದಾನೆ. ಮಾತು ಬಾರದ ಹುಡುಗಿಯಲ್ಲಿ ತನ್ನ ಮಗಳನ್ನು ಕಾಣುತ್ತಿದ್ದಾನೆ. ಇನ್ನು ಈ ಹುಡುಗಿ ವಠಾರಕ್ಕೆ ಬಂದ ದಿನದಿಂದ ವಠಾರದ ವಾಸ್ತು ಬದಲಾಗಿದೆ. ಅಲ್ಲಿನ ಸಮಸ್ಯೆಗಳು ಬಗೆಹರಿದಿವೆ. ಬಾಲಕಿ ಕೈಯಲ್ಲಿ ತ್ರಿಶೂಲಾಕಾರದ ಮಚ್ಚೆಯನ್ನು ನೋಡಿರುವ ವಠಾರದ ಹಿರಿಯರು ಈಕೆ ಸಾಮಾನ್ಯದವಳಲ್ಲ. ಅದೃಷ್ಟ ದೇವತೆ ಎಂದು ಹೇಳಿದ್ದಾರೆ.

ಇದೇ ಸಮಯದಲ್ಲಿ ಮಲ್ಲಿ ನೀರಿನ ವಿಚಾರದಲ್ಲಿ ಮನೆಯ ಓನರ್ ಜೊತೆ ಕಿರಿಕ್ ಮಾಡಿದ್ದಾಳೆ. ಮಲ್ಲಿ ಮಾತುಗಳಿಂದ ಪಿತ್ತ ನೆತ್ತಿಗೇರಿಸಿಕೊಂಡ ಓನರ್ ಮನೆ ಖಾಲಿ ಮಾಡುವಂತೆ ಹೇಳಿದ್ದಾನೆ. ಬೇರೆ ದಾರಿ ಇಲ್ಲದೇ ಕಂಗಾಲಾದ ಭೂಮಿಕಾಗೆ ಈಗ ಗೆಳತಿಯ ಸಹಾಯದಿಂದ ಗೌತಮ್ ಇರುವ ವಠಾರದಲ್ಲಿಯೇ ಮನೆ ಸಿಕ್ಕಿದೆ. ಈ ಮೂಲಕ ಗೌತಮ್‌ನಿಂದ ದೂರ ಇರಬೇಕು ಎಂದುಕೊಂಡ ಭೂಮಿಕಾ ತನಗೆ ಅರಿವು ಇಲ್ಲದಂತೆಯೇ ಮತ್ತೆ ಗೌತಮ್ ಹತ್ತಿರ ಬಂದಿದ್ದಾಳೆ.
ಇನ್ನು ತಮ್ಮ ವಠಾರಕ್ಕೆ ಹೊಸಬರು ಬಂದಿರುವ ವಿಚಾರವನ್ನು ತಿಳಿಯುವ ಗೌತಮ್ ಅವರಿಗಾಗಿ ಟೀ ಮಾಡಿಕೊಂಡು ಕೊಡಲು ಹೋಗಿದ್ದಾನೆ. ಮನೆಯ ಬಾಗಿಲು ಬಡೆದಿದ್ದಾನೆ. ಆಗ ಭೂಮಿಕಾ ಬಾಗಿಲು ತೆರೆದಿದ್ದಾಳೆ. ಈ ಮೂಲಕ ಮತ್ತೆ ಎದುರು ಬದುರಾಗಿದ್ದಾರೆ.
ಇಂದಿನ (ಅಕ್ಟೋಬರ್ 13 ) ಸಂಚಿಕೆ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ. ಗೌತಮ್ ಮತ್ತೆ ತನ್ನೆದುರು ಪ್ರತ್ಯಕ್ಷ ಆಗಿರುವುದನ್ನು ಕಂಡು ಭೂಮಿಕಾ ಈಗ ವಠಾರದಿಂದ ಕೂಡ ಜಾಗ ಖಾಲಿ ಮಾಡ್ತಾಳಾ..? ಅಥವಾ ನನ್ನನ್ಯಾಕೇ ಫಾಲೋ ಮಾಡ್ತಿದ್ದೀರಾ ಎಂದು ಮತ್ತೆ ಗೌತಮ್ ಮನಸನ್ನು ನೋಯಿಸುತ್ತಾಳಾ..? ಎನ್ನುವ ಪ್ರಶ್ನೆ ಧಾರಾವಾಹಿಯ ಪ್ರೇಕ್ಷಕರಿಗೆ ಕಾಡುತ್ತಿದೆ.
ಸದ್ಯ ಇಂದು ಬಿಡುಗಡೆಯಾದ ಈ ಪ್ರೋಮೊಗೆ ನಾನಾ ರೀತಿಯ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಅಯ್ಯೋ ಏನ್ರೀ ಡೈರೆಕ್ಟರ್ ಇದು ನೀವು ಕೊಡೋ ಟ್ವಿಸ್ಟ್ ಗಳು ನೋಡಿದ್ರೆ ನಮಗೆ ಹಾರ್ಟ್ ಅಟ್ಟ್ಯಾಕ್ ಆಗುತ್ತೆ ಎಂದು ಒಬ್ಬರು ಹೇಳಿದರೆ ಭೂಮಿ ಗುಂಡಗಿದೆ!! ಎನ್ನುವುದಕ್ಕೆ ಇದೇ ಸಾಕ್ಷಿ!!! ಗೌತಮ್ ನೀನು ತುಂಬಾ ಒಳ್ಳೆಯವನಾಗಬೇಡಪ್ಪಾ! ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.

ಈಗಿನ ಎಪಿಸೋಡ್ ಎಕ್ಸಲೆಂಟ್ ಆಗಿದೆ. ಮತ್ತೆ ಇಲ್ಲಿಂದ ಅವರನ್ನು ಬೇರೆ ಹೋಗುವಂತೆ ಮಾಡ್ಬೇಡಿ. ಈಗಲಾದ್ರೂ ಅವರು ಮಾತಾಡಿ ನಿಜ ಹೇಳಿ ಮನೆಯಲ್ಲಿ ಇರುವವರಿಗೆ ಬುದ್ಧಿ ಕಲಿಸುವಂತೆ ಮಾಡಲಿ. ಅದಕ್ಕೂ ಮುನ್ನ ಗೌತಮ್ ಮಗು ಅಂತ ಸಾಬೀತು ಮಾಡಿ ಎಂದು ಮತ್ತೊಬ್ಬರು ಬೇಡಿಕೆಯನ್ನಿಟ್ಟಿದ್ದಾರೆ. ಮನವಿಯನ್ನು ಮಾಡಿದ್ದಾರೆ. ಮತ್ತೂ ಕೆಲವರು ಈ ಮನೆಯನ್ನು ಕೂಡ ಖಾಲಿ ಮಾಡಿಸ್ತೀರಾ ಹೇಗೆ ಎಂದು ಪ್ರಶ್ನೆಯನ್ನು ಕೂಡ ಮಾಡಿದ್ದು ಇನ್ನು ಕೆಲವರಿಗೆ 'ಅಮೃತಧಾರೆ' ಧಾರಾವಾಹಿ ಸಾಗುತ್ತಿರುವುದನ್ನು ನೋಡಿ ರವಿಚಂದ್ರನ್ ಮತ್ತು ಸುಧಾರಾಣಿ ಅಭಿನಯದ ''ಮನೆ ದೇವರು'' ಚಿತ್ರವನ್ನು ನೆನಪು ಮಾಡಿಕೊಂಡಿದ್ದಾರೆ.
ಅಂದ್ಹಾಗೇ ಅಮೃತಧಾರೆ ಧಾರಾವಾಹಿಯಲ್ಲಿ ಈ ಹಿಂದೆ ನೀಡಲಾದ ತಿರುವುಗಳು ಪ್ರೇಕ್ಷಕರಿಗೆ ಇಷ್ಟವಾಗಿದ್ದವು. ಇದಕ್ಕೆ ಪುರಾವೆ ಎನ್ನುವಂತೆ 38ನೇ ವಾರದ ಟಿಆರ್ಪಿಯಲ್ಲಿ ''ಅಮೃತಧಾರೆ'' ಧಾರಾವಾಹಿ ಸೀದಾ ಮೊದಲನೇ ಸ್ಥಾನಕ್ಕೇರಿತ್ತು. ಅರ್ಬನ್ ಮತ್ತು ರೂರಲ್ ಮಾರುಕಟ್ಟೆಯಲ್ಲಿ 9.4 ಟಿವಿಆರ್ ಪಡೆಯುವ ಮೂಲಕ ''ಅಮೃತಧಾರೆ'' ಕರುನಾಡು ಮೆಚ್ಚಿದ ನಂಬರ್ ಒನ್ ಧಾರಾವಾಹಿ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಈ ವಾರ ಟಿಆರ್‌ಪಿ ರೇಸ್‌ನಲ್ಲಿ ''ಅಮೃತಧಾರೆ'' ಮತ್ತೆ ನಂಬರ್ ಒನ್ ಬರುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications











