"ಪಾತ್ರಕ್ಕಿಂತಲೂ ಚಿಕ್ಕವರಾಗಿ ಕಾಣಿಸುತ್ತಿದ್ದೆ ಎಂಬ ಒಂದೇ ಒಂದು ಕಾರಣ ರಿಜೆಕ್ಟ್ ಆಗ್ತಿದ್ದೆ" ಅಮೂಲ್ಯ ಭಾರದ್ವಾಜ್
ಕಲರ್ಸ್ ಕನ್ನಡ ವಾಹಿನಿಯಲ್ಲಿ ಕೆ.ಎಸ್. ರಾಮ್ ಜೀ ನಿರ್ದೇಶನದಡಿಯಲ್ಲಿ ಪ್ರಸಾರವಾಗುತ್ತಿರುವ ಹೊಚ್ಚ ಹೊಸ ಧಾರಾವಾಹಿ 'ಬೃಂದಾವನ'ದಲ್ಲಿ ನಾಯಕಿ ಪುಷ್ಪಾ ಪಾತ್ರದಲ್ಲಿ ಅಭಿನಯಿಸುತ್ತಿರುವ ಮುದ್ದು ಮುಖದ ಚೆಲುವೆಯ ಹೆಸರು ಅಮೂಲ್ಯ ಭಾರದ್ವಾಜ್. ಮುಗ್ಧ ಹಳ್ಳಿ ಹುಡುಗಿಯಾಗಿ 'ಬೃಂದಾವನ' ಧಾರಾವಾಹಿಯಲ್ಲಿ ಬಣ್ಣ ಹಚ್ಚಿರುವ ಅಮೂಲ್ಯ ಭಾರದ್ವಾಜ್ ಅದ್ಭುತ ನಟನೆಯ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆಯುತ್ತಿದ್ದಾರೆ.
ಸಾಂಸ್ಕೃತಿಕ ನಗರಿ ಮೈಸೂರಿನ ಹುಡುಗಿ ಅಮೂಲ್ಯ ಅವರು ಬಿಕಾಂ ಪದವೀಧರೆ ಹೌದು. ಮೊದಲಿನಿಂದಲೂ ನಟನೆಯತ್ತ ವಿಶೇಷ ಒಲವು ಮೂಡಿಸಿಕೊಂಡಿದ್ದ ಅಮೂಲ್ಯ ಭಾರದ್ವಾಜ್‌ಗೆ ನಟಿಯಾಗುವ ಬಯಕೆ. ಅದೇ ಕಾರಣದಿಂದ ಬಿಕಾಂ ಪದವಿ ಪಡೆದ ಬಳಿಕ ಯಾವುದೇ ಕೆಲಸಗಳತ್ತ ಮುಖ ಮಾಡದೇ ನಟಿಯಾಗಿ ಭಡ್ತಿ ಪಡೆಯುವ ತವಕದಲ್ಲಿದ್ದರು ಅಮೂಲ್ಯ.

"ಶಾಂತಂ ಪಾಪಂ" ಧಾರಾವಾಹಿಯಲ್ಲಿ ನಟಿಸುವ ಮೂಲಕ ಕಿರುತೆರೆ ಪಯಣ ಶುರು ಮಾಡಿರುವ ಅಮೂಲ್ಯ ಅವರು ಸುಮಾರು ಆಡಿಶನ್‌ಗಳಲ್ಲಿ ಭಾಗವಹಿಸಿದ್ದರು. ಆದರೆ, ಅಮೂಲ್ಯ ನೋಡುವುದಕ್ಕೆ ಸಣ್ಣ ಇರುವ ಕಾರಣ ಅಷ್ಟು ಬೇಗ ಸೆಲೆಕ್ಟ್ ಆಗುತ್ತಿರಲಿಲ್ಲ. ಹೌದು, ಪಾತ್ರಕ್ಕಿಂತಲೂ ಚಿಕ್ಕವರಾಗಿ ಕಾಣಿಸುತ್ತಾರೆ ಎಂಬ ಒಂದೇ ಒಂದು ಕಾರಣ ಈಕೆಯನ್ನು ಪ್ರತಿ ಆಡಿಶನ್‌ನಲ್ಲಿ ರಿಜೆಕ್ಟ್ ಆಗುವಂತೆ ಮಾಡುತ್ತಿತ್ತು.
ಕೊನೆಗೆ "ಶಾಂತಂ ಪಾಪಂ" ಮೂಲಕ ಕಿರುತೆರೆಗೆ ಲಗ್ಗೆ ಇಟ್ಟ ಈಕೆ ಆ ಧಾರಾವಾಹಿಯ ಮೂರು ಎಪಿಸೋಡ್‌ಗಳಲ್ಲಿ ಬಣ್ಣ ಹಚ್ಚಿದರು. ತದ ನಂತರ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಪೌರಾಣಿಕ ಧಾರಾವಾಹಿ 'ದಾಸ ಪುರಂದರ'ದಲ್ಲಿ ನಾಯಕಿಯಾಗಿ ನಟಿಸುವ ಸುವರ್ಣಾವಕಾಶ ಪಡೆದುಕೊಂಡರು. ಹೌದು, 'ದಾಸ ಪುರಂದರ' ಧಾರಾವಾಹಿಯಲ್ಲಿ ನಾಯಕ ಶ್ರೀನಿವಾಸ ನಾಯಕನ ಪತ್ನಿ ಸರಸ್ವತಿಯಾಗಿ ಮೋಡಿ ಮಾಡಿದ ಅಮೂಲ್ಯ ಕಡಿಮೆ ಅವಧಿಯಲ್ಲಿಯೇ ವೀಕ್ಷಕರ ಮನ ಸೆಳೆದು ಬಿಟ್ಟರು.

ಈ ಧಾರಾವಾಹಿ ಇದೇ ಮಾರ್ಚ್‌ನಲ್ಲಿ ಮುಕ್ತಾಯಗೊಂಡಿತ್ತು. ನಂತರ ಕಿರುತೆರೆಯಲ್ಲಿ ಅಷ್ಟಾಗಿ ಕಾಣಿಸಿಕೊಂಡಿರದ ಅಮೂಲ್ಯ 'ಬೃಂದಾವನ'ದ ಮೂಲಕ ಕಿರುತೆರೆಗೆ ಮರಳಿದ್ದಾರೆ. 'ಬೃಂದಾವನ' ಧಾರಾವಾಹಿಯಲ್ಲಿ ಹಳ್ಳಿ ಹುಡುಗಿ ಪುಷ್ಪ ಪಾತ್ರದಲ್ಲಿ ಕಿರುತೆರೆಗೆ ಕಂ ಬ್ಯಾಕ್ ಆದ ಅಮೂಲ್ಯ ಮತ್ತೊಮ್ಮೆ ತಮ್ಮ ನಟನೆಯ ಮೂಲಕ ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.


Click it and Unblock the Notifications











