"ಬಿಗ್ ಬಾಸ್‌ಗೆ ನನ್ನನ್ನು ಕರೆದಾಗ, ನನ್ನ ಯಾಕಪ್ಪ ಕರೀತಿದ್ದಾರೆ ಅನ್ನೋ ಗೊಂದಲವಿತ್ತು": ನಿರೂಪಕಿ ಅನುಶ್ರೀ
ನಿರೂಪಕಿ ಅನುಶ್ರೀ ಯಾರಿಗೆ ಗೊತ್ತಿಲ್ಲ ಹೇಳಿ? ಕನ್ನಡ ಕಿರುತೆರೆಯ ಅಚ್ಚುಮೆಚ್ಚಿನ ನಿರೂಪಕಿ ಅಂದರೆ ಅದು ಅನುಶ್ರೀ. ಇತ್ತೀಚೆಗೆ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಕಾಣಿಸಿಕೊಂಡ ಅನುಶ್ರೀ ತಮ್ಮ ಜೀವನದ ಬಹಳಷ್ಟು ವಿಚಾರಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.
ಹೌದು, 'ಚಿಲ್ಲಿಂಗ್ ವಿತ್ ಚಿಲಿಂಬಿ' ಎಂಬ ಪಾಡ್ ಕಾಸ್ಟ್ ಇದಾಗಿದ್ದು, ಪವರ್ ಹೌಸ್ ವೈಫ್ ಯೌಟ್ಯೂಬ್ ಚಾನೆಲ್‌ನಲ್ಲಿ ಇದು ಬಿಡುಗಡೆಯಾಗಿದೆ. ಇದರಲ್ಲಿ ಮಾತನಾಡುತ್ತಾ ಅನುಶ್ರೀ ಅವರು ಬಿಗ್ ಬಾಸ್ ಸೀಸನ್ 1 ನೆನಪಿಸಿಕೊಂಡಿದ್ದಾರೆ.

"ಬಿಗ್ ಬಾಸ್ ಸೀಸನ್ 1 ನನಗೆ ಅವಕಾಶಗಳ ಬಾಗಿಲು ತೆರೆಯಿತು. ಏಕೆಂದರೆ, ಅದಕ್ಕೂ ಮೊದಲು ನಾನು ಹಲವಾರು ವಾಹಿನಿಗಳಲ್ಲಿ ನಿರೂಪಕಿಯಾಗಿ ಬೇರೆ ಬೇರೆ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದೆ. ಆದರೆ, ನನಗೆ ಅಷ್ಟೇನೂ ಹೆಸರು ಸಿಕ್ಕಿರಲಿಲ್ಲ. ಬಿಗ್ ಬಾಸ್‌ಗೆ ನನ್ನನ್ನು ಕರೆದಾಗ, ನನ್ನ ಯಾಕಪ್ಪ ಕರೆಯುತ್ತಿದ್ದಾರೆ. ನಾನು ಅಷ್ಟು ಫೇಮಸ್ ಅಲ್ವೇ ಅಲ್ಲ ಎಂಬ ಗೊಂದಲವು ನನ್ನಲ್ಲಿ ಮೂಡಿತ್ತು. ಆದರೆ, ಅಲ್ಲಿ ಹೋದಾಗ ಮಾತ್ರ ಎಲ್ಲವೂ ಬದಲಾಯಿತು. ಎರಡು ವಾರಕ್ಕೆ ಆಗುವಷ್ಟು ಬಟ್ಟೆಗಳನ್ನು ತನ್ನಿ. ನೀವೇ ಬರಬೇಕು ಎಂದು ಒತ್ತಾಯ ಮಾಡಿ ನನ್ನನ್ನು ಬಿಗ್ ಬಾಸ್‌ಗೆ ಸೇರಿಸಿದ್ದರು. ನಾನು ಎರಡೇ ವಾರಕ್ಕೆ ಬಟ್ಟೆಗಳನ್ನು ತೆಗೆದುಕೊಂಡು ಹೋಗಿದ್ದೆ. ಆದರೆ, ಫಿನಾಲೆಗೆ ಒಂದು ವಾರ ಇರುವವರೆಗೂ ಬಿಗ್ ಬಾಸ್ ಮನೆಯಲ್ಲಿದ್ದೆ. ಆಗ ಪ್ರತಿ ಮನೆಯ ಗೃಹಿಣಿಯರು, ಕಿರುತೆರೆ ಪ್ರೇಕ್ಷಕರು ನನ್ನನ್ನು ನೋಡಿ ಗುರುತಿಸಲು ಶುರು ಮಾಡಿದರು" ಎಂದು ಹೇಳಿಕೊಂಡಿದ್ದಾರೆ ಅನುಶ್ರೀ.
"ಬಿಗ್ ಬಾಸ್ ಮನೆಯಿಂದ ಹೊರ ಬಂದ ಮೇಲೆ ನನಗೆ ಅವಕಾಶಗಳ ಸುರಿಮಳೆಗೆ ಸುರಿಯುತ್ತು. ನಾನು ಕಾಶ್ಮೀರದಲ್ಲಿದ್ದಾಗ ನನಗೊಂದು ಫೋನ್ ಕಾಲ್ ಬಂತು. ನೆನಪಿರಲಿ ಸಿನಿಮಾ ನಟಿಯಾದ ವರ್ಷ ಅವರು ಕಾಲ್ ಮಾಡಿ ಸರಿಗಮಪ ಸೀಸನ್ ಆರಂಭವಾಗಲಿದೆ. ನೀನು ನಿರೂಪಕಿ ಆಗ್ತೀಯಾ ಎಂಬ ಆಫರ್ ಇಟ್ಟರು. ಅದುವರೆಗೂ 10 ಸೀಸನ್ ಮುಗಿದಾಗಿತ್ತು. ಸಂಗೀತ ಜ್ಞಾನ ಇರುವವರೇ ನಿರೂಪಕರಾಗಿದ್ದರು. ನನಗೆ ಇದು ಬಹಳ ಹೊಸ ವಿಚಾರವಾಗಿದ್ದರೂ ದೊಡ್ಡ ಜವಾಬ್ದಾರಿಯನ್ನು ಪರಿಗಣಿಸಿ ಧೈರ್ಯದಿಂದ ತೆಗೆದುಕೊಂಡೆ. ನನಗೆ ಸರಿಗಮಪ ಶೋ ಬಹಳಷ್ಟು ಧೈರ್ಯ ಸ್ಪೂರ್ತಿ ಹಾಗೂ ಜೀವನ ಪಾಠಗಳನ್ನು ಕಲಿಸಿದೆ. ಆಗ ಅರ್ಜುನ್ ಜನ್ಯ ಸರ್, ವಿಜಯ್ ಪ್ರಕಾಶ್ ಸರ್ ಹಾಗೂ ರಾಜೇಶ್ ಕೃಷ್ಣನ್ ಸರ್ ಅವರು ಸರಿಗಮಪಗೆ ಜಡ್ಜ್ ಆಗಿ ಬಂದರು. ನಾನು ನಿರೂಪಕಿಯಾಗಿ ಬಂದೆ. ಅಲ್ಲಿಂದ ನನ್ನ ಜೀವನದ ದಾರಿಯೇ ಬದಲಾಯಿತು." ಎಂದು ತಮ್ಮ ನಿರೂಪಣಾ ಜರ್ನಿಯ ಬಗ್ಗೆ ಮಾತನಾಡಿದ್ದಾರೆ ಅನುಶ್ರೀ.
"ಎಷ್ಟೋ ಬಾರಿ ಜೀವನದಲ್ಲಿ ಇನ್ನೇನು ಸಾಧ್ಯವೇ ಇಲ್ಲ ಎಂಬ ಹಂತಗಳಲ್ಲಿ ನಾವು ಬಂದು ನಿಲ್ಲುತ್ತೇವೆ. ಆಗ ಧೈರ್ಯಗೆಡಬೇಡಿ. ಯಾವುದೇ ಶಾರ್ಟ್ ಕಟ್ಟನ್ನು ತೆಗೆದುಕೊಳ್ಳಬೇಡಿ. ಹುಟ್ಟಿಸಿದ ದೇವರು ಹುಲ್ಲು ಮೈಸೆಲ್ಲಾ ಅನ್ನುವಂತೆ ನಮಗೆ ಯಾವತ್ತೂ ಮೋಸ ಆಗುವುದಿಲ್ಲ, ನಾವು ತಾಳ್ಮೆಯಿಂದ ಕಾಯಬೇಕು ಅಷ್ಟೇ. " ಎಂದು ತಮ್ಮ ಜೀವನ ಅನುಭವವನ್ನು ಹಂಚಿಕೊಂಡಿದ್ದಾರೆ ಅನುಶ್ರೀ.

ಸದ್ಯಕ್ಕೆ ಅನುಶ್ರೀ ಅವರು ಸರಿಗಮಪ ಸೇರಿದಂತೆ ಬಹಳಷ್ಟು ರಿಯಾಲಿಟಿ ಶೋ ಗಳಲ್ಲಿ ನಿರೂಪಣೆ ಮಾಡುತ್ತಾ ಬಹಳಷ್ಟು ಪಾಪ್ಯುಲಾರಿಟಿಯನ್ನು ಪಡೆದಿದ್ದಾರೆ. ತಮ್ಮದೇ ಯೂಟ್ಯೂಬ್ ಚಾನೆಲ್ ಮೂಲಕ ಸೆಲೆಬ್ರಿಟಿಗಳನ್ನು ಆಗಾಗ ಇಂಟರ್ ವ್ಯೂ ಮಾಡಿ ಪ್ರೇಕ್ಷಕರಲ್ಲಿ ಹೊಸ ದೃಷ್ಟಿಕೋನಗಳಿಗೆ ಅವಕಾಶ ಮಾಡಿಕೊಡುತ್ತಿದ್ದಾರೆ. ಸದ್ಯಕ್ಕೆ ಮಹಾ ನಟಿ ಶೋ ನ ನಿರೂಪಕಿಯಾಗಿ ಕಾರ್ಯನಿರ್ವಹಿಸುತ್ತಿದ್ದು ಇವರು ಕನ್ನಡ ಕಿರುತೆರೆ ಪ್ರೇಕ್ಷಕರ ಅಚ್ಚುಮೆಚ್ಚಿನ ನಿರೂಪಕಿ ಎಂಬುದರಲ್ಲಿ ಸಂಶಯವೇ ಇಲ್ಲ.


Click it and Unblock the Notifications











