ರಕ್ಷಿತ್ ಶೆಟ್ಟಿ ಜೊತೆ ಮೂರು ಬಾರಿ ನನ್ನ ಮದುವೆ ಮಾಡಿಸಿದ್ದಾರೆ, ಯೂಟ್ಯೂಬ್‌ನಲ್ಲಿ 10000- ಅನುಶ್ರೀ..!
ಸಾಮಾನ್ಯಕ್ಕೆ ವಯಸ್ಸಿಗೆ ಬಂದ ಯುವಕ ಯುವತಿಯರು ಎಲ್ಲಿಯೇ ಹೋಗಲಿ ಅಲ್ಲಿ ಮೊದಲು ಎದುರಾಗುವುದು ಮದುವೆಯ ಕುರಿತ ಪ್ರಶ್ನೆಯೇ. ಇನ್ನು ಸೆಲೆಬ್ರೆಟಿಗಳ ಪಾಡಂತೂ ಇದಕ್ಕಿಂತ ಭಿನ್ನ.
ಯಾವ ಸಿನಿಮಾ ಕಾರ್ಯಕ್ರಮಕ್ಕೆ ಹೋಗಲಿ, ಸಭೆ-ಸಮಾರಂಭಕ್ಕೆ ತೆರಳಲಿ, ಪಾರ್ಟಿಗೆ ಹೋಗಲಿ.. ಸಿಕ್ಕ-ಸಿಕ್ಕಲ್ಲಿ ಮದುವೆಯ ಪ್ರಶ್ನೆಯನ್ನ ಕೇಳಿ ಕೊಡಬಾರದ ಟಾರ್ಚರ್ ಕೊಡ್ತಾರೆ. ಕನ್ನಡ ಕಿರುತೆರೆಯ ಸ್ಟಾರ್ ನಿರೂಪಕಿ ಅನುಶ್ರೀ ಅವರಿಗೆ ಈ ತರಹದ ಅನುಭವ ಅನೇಕ ಬಾರಿಯಾಗಿದೆ.

ಇಷ್ಟೇ ಯಾಕೆ.. ವಯಸ್ಸು ಮೂವತ್ತು ಪ್ಲಸ್ ಆದರೂ, ಅನುಶ್ರೀ ಮದುವೆಯಾಗದೇ ಇರುವುದಕ್ಕೆ ಬೇಸತ್ತ ಅನೇಕರು ಸಾಮಾಜಿಕ ಜಾಲತಾಣದಲ್ಲಿ ಇವರ ಮದುವೆಯನ್ನು ಮಾಡಿಸಿದ ಉದಾಹರಣೆ ಇದೆ. ಹೀಗಾಗಿಯೇ ಮದುವೆ ಬಗ್ಗೆ ಗಂಭೀರವಾಗಿ ಆಲೋಚನೆ ಮಾಡುವುದನ್ನೇ ಬಿಟ್ಟಿರುವ ಅನುಶ್ರೀ, ಸದ್ಯಕ್ಕೆ.. ತಮ್ಮ ಮದುವೆಯ ಕುರಿತು ಹಿಂದೆ ಎಲ್ಲ ಕೇಳಿ ಬಂದ ಊಹಾಪೋಹಗಳ ಬಗ್ಗೆ ಮಾತನಾಡಿದ್ದಾರೆ. ಮದುವೆ ಪ್ರಶ್ನೆಗೆ ಬಿದ್ದು ಬಿದ್ದು ನಕ್ಕಿದ್ದಾರೆ.
ಹೌದು, ಇಲ್ಲಿಯವರೆಗೆ ಸಾವಿರಾರು ಸೆಲೆಬ್ರಿಟಿಗಳ ಇಂಟರ್ ವ್ಯೂವ್ ಮಾಡಿರುವ ಅನುಶ್ರೀ ತುಳುದಲ್ಲಿ ಸಂದರ್ಶನವೊಂದನ್ನ ನೀಡಿದ್ದಾರೆ. ದಿ ಪವರ್ ಹೌಸ್ ವೈನ್ಸ್ ಯುಟ್ಯೂಬ್ ಚಾನೆಲ್ ನ ಪಾಡ್ ಕಾಸ್ಟ್ ನಲ್ಲಿಅನೇಕ ವಿಚಾರಗಳ ಬಗ್ಗೆ ಮನ ಬಿಚ್ಚಿ ಮಾತನಾಡಿದ್ದಾರೆ.
ಇದೇ ಸಂದರ್ಶನದಲ್ಲಿ ಮದುವೆ ಬಗ್ಗೆ ಮಾತನಾಡಿರುವ ಅನುಶ್ರೀ, ಯೂಟ್ಯೂಬ್ ನಲ್ಲಿ ನನಗೆ ಇಲ್ಲಿಯವರೆಗೆ 10 ಸಾವಿರ ಮದುವೆ ಮಾಡಿಸಿದ್ದಾರೆ ಅಂದಿದ್ದಾರೆ. ಈ ಕಾರಣಕ್ಕೆ ನಾನು ನಿಜಕ್ಕೂ ಮದುವೆಯಾದರೂ ಕೂಡ ಯಾರು ನನ್ನ ನಂಬಲಿಕ್ಕಿಲ್ಲ ಎಂದಿರುವ ಅನುಶ್ರೀ, ರಕ್ಷಿತ್ ಶೆಟ್ಟಿ ಅವರ ಜೊತೆ ಮೂರು ಸಲ ನನ್ನ ಮದುವೆ ಮಾಡಿಸಿದ್ದಾರೆ ಎಂದಿದ್ದಾರೆ.

ನಮ್ಮಿಬ್ಬರ ಮದುವೆ ಸುದ್ದಿಯನ್ನ ನೋಡಿ ಒಂದು ಸಲ ನಾನೇ ಅವರಿಗೆ ಲಿಂಕ್ ಕೂಡ ಕಳಿಸಿ ಶುಭಾಶಯವನ್ನೂ ಕೋರಿದ್ದೆ ಆಗ ಅವರು ಹೋ ಇದ್ಯಾವಾಗ ಮಾರೆ ಆದದ್ದು ನೀವು ಕರಿಯಲೇ ಇಲ್ಲ ಅಂದರು. ನಾವೂ ಇಬ್ಬರು ಮದುವೆಗೆ ಬರಲಿಲ್ಲ ಆದರೂ ನಮ್ಮ ಮದುವೆಯಾಗಿದೆ ನೋಡಿ ಎಂದೆ ಎಂದು ಆ ದಿನ ಆ ಕ್ಷಣವನ್ನ ಮೆಲುಕು ಹಾಕಿ ನಕ್ಕಿದ್ದಾರೆ ಅನುಶ್ರೀ.
ಇನ್ನೂ ಸೋದರ ಸಂಬಂಧಿಯ ಗಂಡನನ್ನೂ ಕೂಡ ಬಿಟ್ಟಿಲ್ಲ ಎಂದಿರುವ ಅನುಶ್ರೀ, ನಿನ್ನ ಮದುವೆ ಮಾಡುವುದರಲ್ಲಿ ನನ್ನ ಗಂಡನನ್ನೂ ಬಿಟ್ಟಿಲ್ಲ ಮಾರಾಯ್ತಿ ಎಂದು ನನ್ನ ಕಸಿನ್ ನನಗೆ ಕರೆ ಮಾಡಿ ಹೇಳಿದ್ದಳು ಎಂದಿದ್ದಾರೆ. ನಾನು ಈಗ ಮದುವೆಯ ಕುರಿತು ಮಾಡುವ ಟ್ರೋಲ್ ಮತ್ತು ಅವರ ಇವರ ಜೊತೆ ಮಾಡಲಾಗುವ ನನ್ನ ಮದುವೆಯ ಸುದ್ದಿಯ ಬಗ್ಗೆ ತಲೆ ಕೆಡಿಸಿಕೊಳ್ಳಲ್ಲ ಎಂದು ಕೂಡ ಹೇಳಿದ್ದಾರೆ ಅನುಶ್ರೀ
ಮುಂದುವರೆದು ಮದುವೆಯ ಟಾಪಿಕ್ ಬಗ್ಗೆ ಗಂಭೀರವಾಗಿಯೂ ಮಾತನಾಡಿರುವ ಅನುಶ್ರೀ, ನನಗೆ ನನ್ನದೇ ಆದ ಜವಾಬ್ದಾರಿಗಳಿತ್ತು. ಕೆಲವು ಕನಸುಗಳಿತ್ತು. ಅದನ್ನೆಲ್ಲ ಮಾಡಿ ನಾನು ಮದುವೆ ಆಗುತ್ತೇನೆ ಎಂದು ನಿರ್ಧರಿಸಿದ್ದೆ. ಅದಕ್ಕೆ ನಾನು ಸಮಯ ತೆಗೆದುಕೊಳ್ಳುತ್ತೇನೆ. ಯಾರೋ ಹೇಳುತ್ತಾರೆ ಸಮಾಜದ ನೀತಿ ನಿಯಮಗಳ ಬಗ್ಗೆ ಇಷ್ಟೇ ವರ್ಷದಲ್ಲಿ ಮದುವೆ ಆಗಬೇಕೆಂದು. ಪ್ಲೀಸ್ ಆ ಥರ ಕೇಳ ಬೇಡಿ. ನೀವು ಮಾನಸಿಕವಾಗಿ ಮದುವೆ ಆಗಲು ರೆಡಿಯಾಗಿದ್ದೀರಾ. ಭಾವನಾತ್ಮಕವಾಗಿ, ದೈಹಿಕವಾಗಿ, ಆರ್ಥಿಕವಾಗಿ, ನೈತಿಕವಾಗಿ, ಪ್ರಾಕ್ಟಿಕಲಿ ರೆಡಿ ಇದ್ರೆ ಮಾತ್ರ ಮದುವೆ ಆಗಿ ಇಲ್ಲದಿದ್ರೆ ಆಗಲೇ ಬೇಡಿ ಎಂದಿದ್ದಾರೆ.

ಇನ್ನೂ ಬಾಲ್ಯದ ಕೆಲ ವಿಚಾರಗಳು ಅಪ್ಪ-ಅಮ್ಮನ ಜೀವನ ನಮ್ಮ ಮೇಲೂ ಪರಿಣಾಮ ಬೀರಿದೆ ಹೀಗಾಗಿ ವಯಸ್ಸಾಗ್ತಾ ಇದೆ ಅನ್ನುವ ಬಗ್ಗೆ ನಾನು ಯೋಚನೆ ಮಾಡ್ತಿಲ್ಲ ಅಂದಿದ್ದಾರೆ. ಮೊದಲು ಮದುವೆಯೇ ಬೇಡ ಅನ್ನುತ್ತಿದ್ದ ನಾನು ಈಗ ಮದುವೆಯಾಗುವ ನಿರ್ಧಾರವನ್ನ ಮಾಡಿದ್ದೇನೆ ಎಂದು ಹೇಳಿದ್ದಾರೆ. ಮುಂದೊಂದು ದಿನ ಖಂಡಿತ ಮದುವೆಯಾಗುವುದು ಪಕ್ಕ ಎಂದು ಕೂಡ ಹೇಳಿದ್ದಾರೆ. ಈ ಮೂಲಕ ತಮ್ಮ ಅಭಿಮಾನಿಗಳಿಗೆ ಶುಭ ಸಮಾಚಾರವನ್ನೂ ನೀಡಿದ್ದಾರೆ.
ಇದೆಲ್ಲದರ ಜೊತೆಯಲ್ಲಿ ಒಂದು ಹೆಣ್ಣು ತನ್ನವರನ್ನು ಬಿಟ್ಟು ಮನೆ ಬಿಟ್ಟು, ನಿಮ್ಮನ್ನು ನಂಬಿ ಬರುತ್ತಾಳೆ. ನೀವು ಅವರನ್ನು ಬಿಡುವಂತೆಯೇ ಇಲ್ಲ. ಮಕ್ಕಳನ್ನು ಹುಟ್ಟಿಸಿದ ನಂತರ ನಾನು ಮಕ್ಕಳನ್ನು ನೋಡಿಕೊಳ್ಳಲು ತಯಾರಿಲ್ಲ ಎಂದರೆ ಪಾಪ ಆ ಮಕ್ಕಳು ಏನು ತಪ್ಪು ಮಾಡಿರುತ್ತಾರೆ. ಅವರ ಕಷ್ಟ, ಅವರ ಜೀವನ ಕೇಳೋದ್ಯಾರು? ನೀವು ಜವಾಬ್ದಾರಿಗಳನ್ನು ತೆಗೆದುಕೊಳ್ಳಲು ಶಕ್ತರಾಗಿದ್ದೀರಿ ಎಂದರೆ ಮಾಡಿ. ಇಲ್ಲ ಅಂತಹ ವಿಚಾರಗಳಿಗೆ ಹೋಗಲೇ ಬೇಡಿ ಎಂದು ಮನವಿಯನ್ನೂ ಮಾಡಿಕೊಂಡಿದ್ದಾರೆ ಅನುಶ್ರೀ
ಸದ್ಯಕ್ಕೆ ಅನುಶ್ರೀ ಅವರ ಈ ಮಾತು-ಮಂಥನದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಮದುವೆಯಾಗುವುದಾಗಿ ಅನುಶ್ರೀ ಹೇಳಿದ್ದೇ ತಡ ಆ ಅದೃಷ್ಟವಂತ ಯಾರು ಅನ್ನುವ ಪ್ರಶ್ನೆಯನ್ನೂ ಕೂಡ ಒಂದು ವರ್ಗ ಇವರನ್ನ ಕೇಳುತ್ತಿದೆ.


Click it and Unblock the Notifications










