ಶೀಘ್ರದಲ್ಲೇ ಮದುವೆ ಎಂದಿದ್ದ ಅನುಶ್ರೀ ಕೈಗೆ ಉಂಗುರ; ವೀಡಿಯೋ ವೈರಲ್
ಕನ್ನಡ ನಿರೂಪಕಿ ಅನುಶ್ರೀ ಮದುವೆ ಬಗ್ಗೆ ಪದೇ ಪದೆ ಸುದ್ದಿ ಕೇಳಿ ಬರುತ್ತಲೇ ಇರುತ್ತದೆ. ಇತ್ತೀಚೆಗೆ ಸೋಶಿಯಲ್ ಮೀಡಿಯಾ ಲೈವ್ ಬಂದಿದ್ದ ಆಕೆ ತಮ್ಮ ಮದುವೆ ಬಗ್ಗೆ ಮಾತನಾಡಿದ್ದರು. ಶೀಘ್ರದಲ್ಲೇ ಮದುವೆ ಎಂದಿದ್ದರು. ಅಷ್ಟೇ ಅಲ್ಲ, ತಮ್ಮ ಕನಸಿಕ ಹುಡುಗನ ಬಗ್ಗೆಯೂ ಮಾತನಾಡಿದ್ದರು.
ಕಿರುತೆರೆ ಕಾರ್ಯಕ್ರಮ ನಿರೂಪಣೆ ಮೂಲಕ ಕನ್ನಡಿಗರ ಮನಗೆದ್ದವರು ಅನುಶ್ರೀ. ಸಾಕಷ್ಟು ವೇದಿಕೆ ಕಾರ್ಯಕ್ರಮಗಳನ್ನು ಕೂಡ ನಡೆಸಿ ಕೊಡುತ್ತಾರೆ. ಒಂದಷ್ಟು ಸಿನಿಮಾಗಳಲ್ಲಿ ಕೂಡ ಬಣ್ಣ ಹಚ್ಚಿದ್ದಾರೆ. ಕನ್ನಡದ ಬಹುಬೇಡಿಕೆಯ ನಿರೂಪಕಿಯಾಗಿರುವ ಅನುಶ್ರೀ ಲಕ್ಷ ಲಕ್ಷ ಸಂಭಾವನೆ ಪಡೆಯುತ್ತಾರೆ. ಜೀ ಕನ್ನಡ ವಾಹಿನಿ ಕಾರ್ಯಕ್ರಮಗಳ ಖಾಯಂ ನಿರೂಪಕಿಯಾಗಿ ಆಕೆ ಗುರ್ತಿಸಿಕೊಂಡಿದ್ದಾರೆ.

'ವಿದ್ಯಾಪತಿ' ಸಿನಿಮಾ ಬಿಡುಗಡೆ ವೇಳೆ ಚಿತ್ರತಂಡದ ಜೊತೆ ಅನುಶ್ರೀ ಇನ್‌ಸ್ಟಾಗ್ರಾಮ್ ಲೈವ್ ಬಂದಿದ್ದರು. ನಾಗಭೂಷಣ್ ಹಾಗೂ ಮಲೈಕಾ ಜೊತೆ ಮಾತುಕಥೆ ನಡೆಸಿದ್ದರು. ಆ ಸಮಯದಲ್ಲಿ ಮದುವೆ ಪ್ರಶ್ನೆ ಎದುರಾಗಿತ್ತು. "ಹುಡುಗ ಬಹಳ ರೆಸ್ಪಾನ್ಸಿಬಲ್ ಆಗಿರಬೇಕು. ನನ್ನ ಪರವಾಗಿ ಅಲ್ಲ, ಅವನ ಲೈಫ್ ಬಗ್ಗೆ ರೆಸ್ಪಾನ್ಸಿಬಲ್ ಆಗಿದ್ರೆ ಸಾಕು. ಅವನು ಬದುಕಬೇಕು, ನನ್ನನ್ನು ಬದುಕೋಕೆ ಬಿಡಬೇಕು" ಎಂದಿದ್ದಾರೆ. "ಈ ವರ್ಷ ನನ್ನ ಮದುವೆ ಗ್ಯಾರೆಂಟಿ" ಎಂದು ಆಕೆ ತಿಳಿಸಿದ್ದರು.
ಇತ್ತೀಚೆಗೆ ಸರಿಗಮಪ ಮಹಾಸಂಚಿಕೆ ವೇದಿಕೆಯಲ್ಲಿ ನಿರೂಪಕಿ ಅನುಶ್ರೀ ಕೈ ಬೆರಳಿಗೆ ಉಂಗುರ ಬಿದ್ದಿದೆ. ಹಾಗಂತ ಆಕೆಯ ಎಂಗೇಜ್‌ಮೆಂಟ್ ನಡೀಲಿಲ್ಲ. ತಮ್ಮ ಕೈಬೆರಳಿಗೆ ಸ್ವತಃ ಅನುಶ್ರೀ ಉಂಗುರು ತೊಡಿಸಿಕೊಂಡಿದ್ದಾರೆ. ಅದಕ್ಕೆ ಕಾರಣ ಹಾಸ್ಯ ಕಲಾವಿದ ಗಿಲ್ಲಿ ನಟ. ಕಿರುತೆರೆ ಹಾಸ್ಯ ಕಾರ್ಯಕ್ರಮಗಳಲ್ಲಿ ಸ್ಕಿಟ್ ಮಾಡಿ ವೀಕ್ಷಕರನ್ನು ಗಿಲ್ಲಿ ನಟ ರಂಜಿಸುತ್ತಿದ್ದಾರೆ. ಜೋಕ್ಸ್ ಹೇಳಿ ಎಲ್ಲರನ್ನು ನಗಿಸುತ್ತಾರೆ. ಪ್ರಾಪರ್ಟಿ ಜೋಕ್ಸ್ ಹೇಳುವುದರಲ್ಲಿ ನಿಸ್ಸೀಮ.
ರಿಂಗ್ ಹಿಡಿದು ವೇದಿಕೆ ಮೇಲೆ ಬಂದಿದ್ದ ಗಿಲ್ಲಿ ನಟ, ಅನುಶ್ರೀ ಕೈಗೆ ರಿಂಗ್ ಕೊಟ್ಟು ಹಾಕಿಕೊಳ್ಳಲು ಹೇಳಿದ್ದಾರೆ. "ಆಂಕರ್ ಕೈಗೆ ರಿಂಗ್ ಹಾಕಿದೆ. ಆಂಕರಿಂಗ್" ಎಂದು ಎಲ್ಲರನ್ನು ನಗಿಸೋ ಪ್ರಯತ್ನ ಮಾಡಿದ್ದಾರೆ. ಸದ್ಯ ಆ ವೀಡಿಯೋ ವೈರಲ್ ಆಗುತ್ತಿದೆ. ಕಷ್ಟದ ದಿನಗಳನ್ನು ಎದುರಿಸಿ ಬದುಕಿನಲ್ಲಿ ಗೆದ್ದವರು ಅನುಶ್ರೀ. ಮಂಗಳೂರಿನ ಸೂರತ್ಕಲ್‌ನಲ್ಲಿ ಹುಟ್ಟಿ ಬೆಳೆದ ಅನುಶ್ರೀ ಬಳಿಕ ಕನ್ನಡ ಕಿರುತೆರೆಗೆ ಪರಿಚಿತರಾಗಿದ್ದರು.
ಮಂಗಳೂರಿನ ನಮ್ಮ ಟಿವಿ ವಾಹಿನಿಯಲ್ಲಿ ಮೊದಲಿಗೆ 'ಅಂತ್ಯಾಕ್ಷರಿ' ಕಾರ್ಯಕ್ರಮ ನಿರೂಪಣೆ ಮಾಡಿದ್ದರು. ಬಳಿಕ ಈಟಿವಿಯಲ್ಲಿ ಪ್ರಸಾರವಾಗಿದ್ದ 'ಡಿಮ್ಯಾಂಡಪ್ಪೋ ಡಿಮ್ಯಾಂಡು' ಶೋ ನಿರೂಪಣೆ ಮಾಡಿದ್ದರು. ಬಳಿಕ ಒಂದೊಂದಾಗಿ ಕಾರ್ಯಕ್ರಮಗಳ ನಿರೂಪಣೆ ಅವಕಾಶ ಸಿಕ್ಕಿತ್ತು. ಜೀ ಕನ್ನಡ ವಾಹಿನಿಗೆ ಬಂದ ಬಳಿಕ ಹಿಂತಿರುಗಿ ನೋಡಲೇ ಇಲ್ಲ. ಹರಳು ಹುರಿದಂತೆ ಪಟಪಟ ಮಾತನಾಡುವ ಅನುಶ್ರೀ ತಮ್ಮ ವಾಕ್ಚಾತುರ್ಯದಿಂದ ಎಲ್ಲರನ್ನು ಮೋಡಿ ಮಾಡುತ್ತಾರೆ.
ಸುವರ್ಣ ಫಿಲ್ಮ್ಸ್ ಅವಾರ್ಡ್, ಫಿಲ್ಮ್‌ಫೇರ್ ಅವಾರ್ಡ್ಸ್, ಸೈಮಾ ಅವಾರ್ಡ್ಸ್ ಕಾರ್ಯಕ್ರಮಗಳನ್ನು ಕೂಡ ಅನುಶ್ರೀ ನಿರೂಪಣೆ ಮಾಡಿದ್ದಾರೆ. ಸಾಕಷ್ಟು ಸಿನಿಮಾ ಕಾರ್ಯಕ್ರಮಗಳು, ಸಂಘಸಂಸ್ಥೆಗಳು ನಡೆಸುವ ಕಾರ್ಯಕ್ರಮಗಳ ನಿರೂಪಣೆ ಮಾಡಿ ಗಮನ ಸೆಳೆದಿದ್ದಾರೆ. 'ಭೂಮಿತಾಯಿ' ಚಿತ್ರದ ಮೂಲಕ ನಟಿಯಾಗಿ ಅದೃಷ್ಟ ಪರೀಕ್ಷೆ ಮಾಡಿಕೊಂಡಿದ್ದರು.
'ಬೆಂಕಿಪಟ್ನ', 'ರಿಂಗ್ ಮಾಸ್ಟರ್', 'ಉಪ್ಪು ಹುಳಿ ಖಾರ' ಹೀಗೆ ಕೆಲ ಸಿನಿಮಾಗಳಲ್ಲಿ ಕೂಡ ನಟಿಸೋ ಪ್ರಯತ್ನ ಮಾಡಿದ್ದರು. ಬಳಿಕ ಸಿನಿಮಾಗಳಿಂದ ದೂರ ಉಳಿದುಬಿಟ್ಟರು. ಕಿರುತೆರೆಯಲ್ಲೇ ಫುಲ್ ಬ್ಯುಸಿಯಾಗಿದ್ದಾರೆ. ಬಿಗ್‌ಬಾಸ್ ಸೀಸನ್-1ರ ಸ್ಪರ್ಧಿಯೂ ಆಗಿದ್ದರು. ಮೊದಲ ದಿನ ಮನೆ ಪ್ರವೇಶಿಸಿದ್ದ ಅನುಶ್ರೀ 76 ದಿನಗಳ ಕಾಲ ಅಲ್ಲಿ ಉಳಿದಿದ್ದರು. ಇತರೆ ಸ್ಪರ್ಧಿಗಳಿಗೆ ಕಠಿಣ ಪೈಪೋಟಿ ನೀಡಿದ್ದರು.


Click it and Unblock the Notifications











