Swetha Changappa: ಜೋಡಿ ನಂ 1 ನಿರೂಪಕಿಗೆ ಶ್ವೇತಾ ಚೆಂಗಪ್ಪ ಸೀರೆ ಉಡುವುದಂದ್ರೆ ಬಲು ಇಷ್ಟ
ಧಾರಾವಾಹಿಗಳ ಜೊತೆಗೆ ರಿಯಾಲಿಟಿ ಶೋಗಳ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆದಿರುವ ಧಾರಾವಾಹಿಗಳ ಪೈಕಿ ಜೀ ಕನ್ನಡವೂ ಒಂದು. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಜೋಡಿ ನಂ 1' ಎರಡನೇ ಸೀಸನ್ ಈಗಾಗಲೇ ಶುರುವಾಗಿದೆ. ರಿಯಾಲಿಟಿ ಶೋಗಳ ಸ್ಪರ್ಧಿಗಳ ಹೊರತಾಗಿ ಆ ಕಾರ್ಯಕ್ರಮದ ಕೇಂದ್ರ ಬಿಂದು ಎಂದರೆ ಅದು ಶ್ವೇತಾ ಚೆಂಗಪ್ಪ.
ಅರಳು ಹುರಿದಂತೆ ಪಟಪಟನೆ ಮಾತನಾಡುತ್ತಾ, ಇನ್ನೋರ್ವ ನಿರೂಪಕ ಕುರಿ ಪ್ರತಾಪ್ ಅವರಿಗೆ ಸಾಥ್ ನೀಡುವ ಶ್ವೇತಾ ಚೆಂಗಪ್ಪ ನಿರೂಪಣೆಯ ಹೊರತಾಗಿ ತಮ್ಮ ಕಾಸ್ಟ್ಯೂಮ್ ಕಾರಣದಿಂದಾಗಿಯೂ ಫೇಮಸ್ಸು. ಪ್ರತಿ ವಾರವೂ ವಿಭಿನ್ಜ ರೀತಿಯ ಕಾಸ್ಟ್ಯೂಮ್‌ಗಳ ಮೂಲಕ ವೀಕ್ಷಕರ ಮನ ಸೆಳೆಯುತ್ತಿರುವ ಶ್ವೇತಾ ಕಳೆದ ವಾರ ಗ್ರ್ಯಾಂಡ್ ಓಪನಿಂಗ್ ದಿನ ಹಾಕಿರುವಂತಹ ಲೆಹೆಂಗಾವನ್ನು ವೀಕ್ಷಕರು ಅಷ್ಟೊಂದು ಮೆಚ್ಚಿರಲಿಲ್ಲ.

ಕಳೆದ ವಾರ ಶ್ವೇತಾ ಚೆಂಗಪ್ಪ ಧರಿಸಿದ ಕಾಸ್ಟ್ಯೂಮ್‌ಗೆ ನಕಾರಾತ್ಮಕ ಕಮೆಂಟ್‌ಗಳು ಬಂದ ಕಾರಣದಿಂದಲೋ ಏನೋ ಮುಂದಿನ ಸಂಚಿಕೆಗೆ ಆಕೆ ಸೀರೆಯಲ್ಲಿ ತೆರೆ ಮೇಲೆ ಬರಲಿದ್ದಾರೆ. ತಿಳಿ ನೀಲಿ ಬಣ್ಣಕ್ಕೆ ಪಿಂಕ್ ಕಾಂಬಿನೇಷನ್ ಇರುವ ಮೈಸೂರು ಸಿಲ್ಕ್ ಸೀರೆಯನ್ನು ಧರಿಸಿರುವ ಆಕೆ ಜೋಡಿ ನಂ 1ಗೆ ತಾನು ತಯಾರಾಗುತ್ತಿರುವ ವಿಡಿಯೋದ ತುಣುಕೊಂದನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
ಸೀರೆ ಉಟ್ಟು ಜುಟ್ಟು ಕಟ್ಟಿ ಅದಕ್ಕೆ ಮಲ್ಲಿಗೆ ಮುಡಿಯುತ್ತಿರುವಂತಹ ವಿಡಿಯೋವೊಂದನ್ನು ಹಂಚಿಕೊಂಡಿರುವ ಶ್ವೇತಾ ಚೆಂಗಪ್ಪ "ಸೀರೆ ಧರಿಸುವುದು ಎಂದರೆ ನನಗಂತೂ ತುಂಬಾ ಇಷ್ಟ. ನನ್ನ ಪ್ರಕಾರ ಭಾರತೀಯ ನಾರಿ ತುಂಬಾ ಅದ್ಭುತವಾಗಿ ಕಾಣಿಸುವುದು ಸೀರೆಯಲ್ಲಿಯೇ" ಎಂದು ಬರೆದುಕೊಂಡಿದ್ದಾರೆ.

ಮಾತ್ರವಲ್ಲದೇ ಇದರ ಜೊತೆಗೆ "ಪ್ರತಿಯೊಬ್ಬ ಹೆಣ್ಣು ಮಗಳು ಸುಂದರವಾಗಿ ಕಾಣಿಸುವುದು ಸೀರೆಯಿಂದಾಗಿಯೇ. ಅಂದ ಹಾಗೇ ಈ ಲುಕ್ ಎರಡನೇ ಎಪಿಸೋಡ್ ಗೆ" ಎಂದು ಶ್ವೇತಾ ಚೆಂಗಪ್ಪ ಬರೆದುಕೊಂಡಿದ್ದಾರೆ.
ಸುಮತಿ ಧಾರಾವಾಹಿಯ ಮೂಲಕ ಕಿರುತೆರೆಗೆ ಕಾಲಿಟ್ಟು ಮುಂದೆ ಕಾದಂಬರಿ, ಸುಕನ್ಯಾ, ಅರುಂಧತಿ, ಸೌಂದರ್ಯ ಹೀಗೆ ಬೆರಳೆಣಿಕೆಯಷ್ಟು ಧಾರಾವಾಹಿಗಳಲ್ಲಿ ನಟಿಸಿರುವ ಶ್ವೇತಾ ಚೆಂಗಪ್ಪ ಸದ್ಯ ನಿರೂಪಕಿಯಾಗಿ ಕಿರುತೆರೆಯಲ್ಲಿ ಬ್ಯುಸಿ. 'ಯಾರಿಗುಂಟು ಯಾರಿಗಿಲ್ಲ' ಕಾರ್ಯಕ್ರಮ ನಿರೂಪಕಿಯಾಗಿ ನಿರೂಪಣೆಗೆ ಕಾಲಿಟ್ಟ ಶ್ವೇತಾ ಮುಂದೆ ಕುಣಿಯೋಣು ಬಾರಾ, ಡ್ಯಾನ್ಸ್ ಡ್ಯಾನ್ದ್ ಜ್ಯೂನಿಯರ್ಸ್‌ನ ನಿರೂಪಣೆ ಮಾಡಿದರು.
ಮುಂದೆ ಮಗ ಜಿಯಾನ್ ಲಾಲನೆ ಪಾಲನೆಗಾಗಿ ಕಿರುತೆರೆಯಿಂದ ಮೂರು ವರ್ಷಗಳ ಕಾಲ ಬ್ರೇಕ್ ತೆಗೆದುಕೊಂಡಿದ್ದ ಈಕೆ 'ಜೋಡಿ ನಂ 1' ಸೀಸನ್ 1 ರ ನಿರೂಪಕಿಯಾಗಿ ಕಿರುತೆರೆಗೆ ಮರಳಿದರು. ಮುಂದೆ 'ಸೂಪರ್ ಕ್ವೀನ್', 'ಛೋಟಾ ಚಾಂಪಿಯನ್ ಶೋ'ಗಳ ನಿರೂಪಣೆ ಮಾಡಿದ್ದ ಈಕೆ ಇದೀಗ 'ಜೋಡಿ ನಂ 1' ಸೀಸನ್ 2ರ ನಿರೂಪಣೆ ಮಾಡುತ್ತಿದ್ದಾರೆ.


Click it and Unblock the Notifications











