ಕನ್ನಡಪರ ಹೋರಾಟಗಾರರ ಕ್ಷಮೆ ಕೇಳಿದ ನಿರೂಪಕ ನಿರಂಜನ್ ದೇಶಪಾಂಡೆ
ನಟ, ನಿರೂಪಕ ನಿರಂಜನ್ ದೇಶಪಾಂಡೆ ಕನ್ನಡ ಹೋರಾಟಗಾರರ ಕ್ಷಮೆ ಕೇಳಿದ್ದಾರೆ. ಇರಲಾರದೇ ಇರುವೆ ಬಿಟ್ಟುಕೊಂಡೆ ಎನ್ನುವಂತೆ ಏನೋ ಮಾತನಾಡಲು ಹೋಗಿ ತಪ್ಪಾಯಿತು. ಕ್ಷಮಿಸಿ ಎಂದು ಇನ್‌ಸ್ಟಾಗ್ರಾಮ್ ಲೈವ್ ಬಂದು ಮಾತನಾಡಿದ್ದಾರೆ. ಇತ್ತೀಚೆಗೆ ಕನ್ನಡಪರ ಹೋರಾಟಗಾರರ ಅರ್ಹತೆ ಬಗ್ಗೆ ನಿರಂಜನ್ ದೇಶಪಾಂಡೆ ಲಘುವಾಗಿ ಮಾತನಾಡಿದ್ದರು.
ಶುಕ್ರವಾರ(ಏಪ್ರಿಲ್ 12)ಮೈಸೂರಿನಲ್ಲಿ ಚಾಮುಂಡಿ ತಾಯಿ ದರ್ಶನ ಪಡೆಯುವ ಮುನ್ನ ನಿರಂಜನ್ ಇನ್‌ಸ್ಟಾ ಲೈವ್ ಬಂದಿದ್ದಾರೆ. ನನ್ನ ಹೇಳಿಕೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಸಾಕಷ್ಟು ಜನ ನನ್ನ ಮಾತಿಗೆ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಈಗಷ್ಟೇ ಮಂಡ್ಯದ ಕನ್ನಡ ಹೋರಾಟಗಾರಾದ ಲೋಕೇಶ್ ಅವರೊಟ್ಟಿಗೆ ಮಾತನಾಡಿದೆ. ಅವರು ನಾನು ಆಡಿದ ಮಾತು ಎಷ್ಟು ತಪ್ಪು ಎಂದು ತಿಳಿ ಹೇಳಿದರು. ನನಗೆ ರೂಪೇಶ್ ರಾಜಣ್ಣ ಸೇರಿದಂತೆ ಹಲವು ಕನ್ನಡಪರ ಹೋರಾಟಗಾರರು ಗೊತ್ತು. ಅವರೊಟ್ಟಿಗೆ ಒಳ್ಳೆ ಒಡನಾಟವಿದೆ. ನಾನು ಆ ರೀತಿ ಮಾತನಾಡಬಾರದಿತ್ತು ಎಂದಿದ್ದಾರೆ.
ನಿರೂಪಕ ನಿರಂಜನ್ ದೇಶಪಾಂಡೆ ರಿಯಾಲಿಟಿ ಶೋಗಳ ಮೂಲಕ ಮಾತಿನ ಮಲ್ಲ ಅಂತಲೇ ಫೇಮಸ್ ಆಗಿದ್ದಾರೆ. ಕನ್ನಡ ಕಿರುತೆರೆಯಲ್ಲಿ ಕೆಲವು ರಿಯಾಲಿಟಿ ಶೋಗಳಲ್ಲಿ ನಿರೂಪಕರಾಗಿ ಕಾಣಿಸಿಕೊಂಡಿದ್ದಾರೆ. ಇದೇ ವೇಳೆ ವಿವಾದವನ್ನು ಮೈ ಮೇಲೆ ಎಳೆದುಕೊಂಡಿದ್ದಾರೆ.

ಇತ್ತೀಚೆಗೆ ನಿರಂಜನ್ ದೇಶಪಾಂಡೆ ಸಂದರ್ಶನವೊಂದರಲ್ಲಿ ಮಾತನಾಡುತ್ತಾ "ಕನ್ನಡ ಹೋರಾಟಗಾರರು ಮಾತೆತ್ತಿದರೆ ಸಾಕು ಹೋರಾಟ ಎಂದು ಬಂದುಬಿಡ್ತಾರೆ. ಕೆಲವರು ಕನ್ನಡ ಚೆನ್ನಾಗಿ ತಿಳಿದು ಮಾತನಾಡುತ್ತಾರೆ. ಒಳ್ಳೆ ರೀತಿಯಲ್ಲಿ ಹೋರಾಟಗಳನ್ನು ಮಾಡುತ್ತಾರೆ. ಇನ್ನು ಕೆಲವರು ಹೋರಾಟಕ್ಕೆ ಬರ್ತಾರೆ, ಅವರಿಗೆ ಕನ್ನಡ ಸರಿಯಾಗಿ ಮಾತನಾಡಲು ಬರಲ್ಲ. ಕೆಲವರಿಗೆ ಉಗ್ರ ಹೋರಾಟ ಎಂದು ಸರಿಯಾಗಿ ಹೇಳೋಕೆ ಬರಲ್ಲ, ಹೋರಾಟ ಮಾಡುವ ಮುನ್ನ ಕನ್ನಡದ ಬಗ್ಗೆ ಜ್ಞಾನ ತುಂಬಿಕೊಳ್ಳಿ" ಎಂದಿದ್ದರು.
ನಿರಂಜನ್ ಹೇಳಿಕೆಗೆ ಸಾಕಷ್ಟು ಜನ ಬೇಸರ ವ್ಯಕ್ತಪಡಿಸಿದ್ದರು. ಕನ್ನಡದ ಬಗ್ಗೆ ಅಭಿಮಾನ, ಪ್ರೀತಿ ಇರಬೇಕು. ಕನ್ನಡ ಹೋರಾಟ ಮಾಡಲು ಭಾಷೆಯಲ್ಲಿ ಪಾಂಡಿತ್ಯ ಸಾಧಿಸಬೇಕಿಲ್ಲ. ಅಭಿಮಾನ ಇರುವ ಪ್ರತಿಯೊಬ್ಬರು ಕೂಡ ಕನ್ನಡ ಹೋರಾಟಗಾರರೇ ಎಂದು ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತವಾಗಿತ್ತು.

ಸದ್ಯ ನಿರಂಜನ್ ದೇಶಪಾಂಡೆ ಲೈವ್ ಬಂದು "ನಾನು ಮಾತಿನ ಭರದಲ್ಲಿ ಏನೋ ಅಂದುಬಿಟ್ಟಿದ್ದೆ. ಕೆಲವ್ರು ಕನ್ನಡದ ಬಗ್ಗ ಚೆನ್ನಾಗಿ ತಿಳಿದು ಮಾತನಾಡುತ್ತಾರೆ. ಹೋರಾಟ ಮಾಡುತ್ತಾರೆ. ಇನ್ನು ಕೆಲವ್ರು ಕನ್ನಡದ ಬಗ್ಗೆ ತಿಳಿದುಕೊಳ್ಳದೇ ಮಾತನಾಡ್ತಾರೆ ಎಂದಿದ್ದೆ. ಕನ್ನಡ ಉಚ್ಛಾರಣೆ ಬಗ್ಗೆ ಗಮನ ಹರಿಸಬೇಕು ಎಂದು ಹೇಳುವಾಗ ಆ ರೀತಿ ಮಾತನಾಡಿದೆ. ನನಗೆ ಕನ್ನಡ ಅಂದ್ರೆ ಉಸಿರು, ತಾಯಿ. ಹಾಗಾಗಿ ಮಾತನಾಡುವಾಗ ತಪ್ಪಾಯಿತು ಕ್ಷಮಿಸಿ" ಎಂದಿದ್ದಾರೆ.
ಲೋಕೇಶ್ ಎನ್ನುವ ಹೋರಾಟಗಾರರು ನನ್ನ ಜೊತೆ ಈ ಬಗ್ಗೆ ಮಾತನಾಡಿದರು. "ನಾವು ಊಟ ನಿದ್ದೆ ಬಿಟ್ಟು ಹೋರಾಟ ಮಾಡುತ್ತೇವೆ. ಅಂತಹ ಸಮಯದಲ್ಲಿ ವ್ಯಾಕರಣ ಅದು ಇದು ಎಂದು ಕೇಳ್ತೀರಾ. ಹೋರಾಟ ಮುಖ್ಯನಾ? ಅಥವಾ ಹೋರಾಟ ಮಾಡುವವರಿಗೆ ಎಲ್ಲಾ ಗೊತ್ತಾ ಎಂದು ಕೇಳುವುದು ಎಷ್ಟು ಸರಿ. ಹಳ್ಳಿಯಿಂದ ಬಂದವರಿಗೆ ಅಷ್ಟೇನು ಜ್ಞಾನ ಇರಲ್ಲ. ಆದರೆ ಅಭಿಮಾನ ಮುಖ್ಯ ಅಲ್ವಾ? ಎಂದು ತಿಳಿ ಹೇಳಿದರು. ನನಗೂ ಅವರೇಳಿದ್ದು ಸರಿ ಎನಿಸಿತು" ಎಂದಿದ್ದಾರೆ.
"ನನ್ನ ಮಾತಿನಿಂದ ಸಾಕಷ್ಟು ಜನ ಕನ್ನಡ ಹೋರಾಟಗಾರಿಗೆ ಬೇಸವಾಯಿತು ಎನ್ನುವುದು ಗೊತ್ತಾಯಿತು. ಅದನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳಬೇಕಿತ್ತು. ಆ ಮಾತು ಹೇಳಬಾರದಿತ್ತು. ಹಾಗಾಗಿ ನನಗೂ ಬೇಸರವಾಯಿತು. ನನ್ನನ್ನು ಕೆಟ್ಟ ಪದಗಳಿಂದ ಬೈಯುತ್ತಿದ್ದಾರೆ. ಆದರೂ ನನಗೆ ಬೇಸರವಿಲ್ಲ. ಬೈದರೂ ಬೇಸರವಿಲ್ಲ. ನನ್ನ ತಾಯಿ, ಅಕ್ಕನ ಹೆಸರು ತಂದು ಬೈಯ್ಬೇಡಿ ಎನ್ನುವುದು ನನ್ನ ಮನವಿ ಅಷ್ಟೆ" ಎಂದಿದ್ದಾರೆ.
ಸಿನಿಮಾಗಳಲ್ಲಿ ಕೆಲ ಸಣ್ಣ ಪುಟ್ಟ ಪಾತ್ರಗಳಲ್ಲಿ ನಟಿಸಿರುವ ನಿರಂಜನ್ ದೇಶಪಾಂಡೆ ಸಾಕಷ್ಟು ಕಿರುತೆರೆ ಕಾರ್ಯಕ್ರಮ ನಿರೂಪಣೆ ಮಾಡಿದ್ದಾರೆ. ಸದ್ಯ 'ಗಿಚ್ಚಿ ಗಿಲಿಗಿಲಿ' ಸೀಸನ್-3ರ ನಿರೂಪಕರಾಗಿ ವೀಕ್ಷಕರನ್ನು ರಂಜಿಸುತ್ತಿದ್ದಾರೆ.


Click it and Unblock the Notifications











