'ಜೋಡಿ ನಂ. 1' ಮೂಲಕ ನಿರೂಪಣೆಗೆ ರೀ ಎಂಟ್ರಿ ಕೊಟ್ಟ 'ಶ್ವೇತಾ ಚೆಂಗಪ್ಪ'!
ನಟಿ, ನಿರೂಪಕಿ ಆಗಿರುವ ಶ್ವೇತಾ ಚೆಂಗಪ್ಪ ಕಿರುತೆರೆಯಲ್ಲಿ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ್ದಾರೆ. ಮಗುವಾದ ಮೇಲೆ ಕಿರುತೆರೆಯಿಂದ ಬ್ರೇಕ್ ಪಡೆದಿದ್ದ ಶ್ವೇತಾ ಚೆಂಗಪ್ಪ ಇದೀಗ ಮತ್ತೆ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದಾರೆ. ಜೀ ಕನ್ನಡದ 'ಜೋಡಿ ನಂ.1' ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದಾರೆ.
'ಸುಮತಿ'ಯಾಗಿ ತೆರೆ ಮೇಲೆ ಬಂದವರು ಶ್ವೇತಾ ಚೆಂಗಪ್ಪ. 'ಕಾದಂಬರಿ' ಧಾರಾವಾಹಿ ಮೂಲಕ ಜನಪ್ರಿಯತೆಯನ್ನು ಗಳಿಸಿದರು. 'ಅರುಂಧತಿ' ಧಾರಾವಾಹಿಯ ಮೂಲಕ ಮನೆ ಮಾತಾದರು. ಶ್ವೇತಾ ಚೆಂಗಪ್ಪ ಬಿಗ್ ಬಾಸ್‌ನಲ್ಲಿಯೂ ಭಾಗವಹಿಸಿದ್ದರು. ತಮ್ಮದೇ ರೀತಿಯಲ್ಲಿ ಶ್ವೇತಾ ಚೆಂಗಪ್ಪ ಅಭಿಮಾನಿಗಳನ್ನು ಗಳಿಸಿದ್ದಾರೆ.
ಇನ್ನು ನಿರೂಪಕಿಯಾಗಿಯೂ ಸೈ ಎನಿಸಿಕೊಂಡಿದ್ದಾರೆ. 'ಯಾರಿಗುಂಟು ಯಾರಿಗಿಲ್ಲ' ರಿಯಾಲಿಟಿ ಶೊ ನಿರೂಪಣೆ ಮಾಡಿದ್ದಾರೆ. ಕಿರುತೆರೆಗೆ ಮಾತ್ರ ಸೀಮಿತವಾಗಿರದ ಶ್ವೇತಾ ಚೆಂಗಪ್ಪ, ಸಿನಿಮಾಗಳಲ್ಲೂ ನಟಿಸಿದ್ದಾರೆ. ದೊಡ್ಡ ದೊಡ್ಡ ಸ್ಟಾರ್ ನಟರ ಜೊತೆಗೆ ತೆರೆ ಹಂಚಿಕೊಂಡಿದ್ದು, ಅಕ್ಕ, ತಂಗಿ, ಸ್ನೇಹಿತೆ ಪಾತ್ರಗಳಲ್ಲಿ ನಟಿಸಿದ್ದಾರೆ.
ಶ್ವೇತಾ ಕಿರುತೆರೆ ಪಯಣ!
ಎಸ್. ನಾರಾಯಣ್ ನಿರ್ದೇಶನದ 'ಸುಮತಿ' ಧಾರಾವಾಹಿಯಲ್ಲಿ ಉದಯ ಟಿವಿಯಲ್ಲಿ ಮೊದಲ ಬಾರಿಗೆ ಬಣ್ಣ ಹಚ್ಚಿದರು. ಬಳಿಕ 2006ರಲ್ಲಿ 'ಕಾದಂಬರಿ' ಧಾರಾವಾಹಿಯಲ್ಲಿ ಕಾಣಿಸಿಕೊಂಡರು. ನಂತರ ಪ್ರಾರಂಭವಾದ 'ಸುಕನ್ಯ' ಧಾರಾವಾಹಿಯಲ್ಲಿ ಮಿಂಚಿದರು. 'ಅರುಂಧತಿ' ಧಾರಾವಾಹಿ ಮೂಲಕ ಮನೆ ಮನದ ಮಗಳಾದರು. ಶ್ವೇತಾ ಚೆಂಗಪ್ಪ ಅವರ ನಟನೆಗೆ ಜನ ಸೋತಿದ್ದರು. ಅವರ ಪಾತ್ರವನ್ನು ತಮ್ಮ ಮಗಳಂತೆಯೇ ಕಾಣುತ್ತಿದ್ದರು.
ನಿರೂಪಣೆಯನ್ನು ಆರಿಸಿಕೊಂಡ ಚೆಂಗಪ್ಪ!
ನಟನೆಗಷ್ಟೇ ಸೀಮಿತವಾಗಿರದ ಶ್ವೇತಾ ಚೆಂಗಪ್ಪ ನಿರೂಪಣೆಗೂ ಇಳಿದರು. ಜೀ ಕನ್ನಡದಲ್ಲಿ ಮೂಡಿ ಬಂದ 'ಯಾರಿಗುಂಟು ಯಾರಿಗಿಲ್ಲಾ' ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಪ್ರೇಕ್ಷಕರ ಮೆಚ್ಚಿನ ಆಂಕರ್ ಆದರು. ಬಳಿಕ ಕುಣಿಯೋಣ ಬಾರಾ ರಿಯಾಲಿಟಿ ಶೋ ನಡೆಸಿಕೊಟ್ಟರು. ಸ್ಟಾರ್ ಸುವರ್ಣದಲ್ಲಿ ಮೂಡಿ ಬಂದ 'ಡ್ಯಾನ್ಸ್ ಡ್ಯಾನ್ಸ್ ಜ್ಯೂನಿಯರ್ಸ್' ರಿಯಾಲಿಟಿ ಶೋಗೂ ಇವರೇ ಆಂಕರ್. ಇಷ್ಟೇ ಅಲ್ಲದೇ, ಡ್ಯಾನ್ಸಿಂಗ್ ಸ್ಟಾರ್, ಸೂಪರ್ ಮಿನಿಟ್, ಡಿ ಡ್ಯಾನ್ಸ್ ಸೇರಿದಂತೆ ಹಲವು ರಿಯಾಲಿಟಿ ಶೋಗಳನ್ನೂ ನಿರೂಪಣೆ ಮಾಡಿದರು.
ಸಿನಿಮಾಗಳಲ್ಲಿ ಶ್ವೇತಾ ಮಿಂಚು!
ಇನ್ನು ಶ್ವೇತಾ ಚೆಂಗಪ್ಪ ಸಿನಿಮಾ ಹಾಗೂ ರಿಯಾಲಿಟಿ ಶೋಗಳಲ್ಲೂ ಕಾಣಿಸಿಕೊಂಡು ತಮ್ಮ ಅಭಿಮಾನಿಗಳ ಬಳಗವನ್ನು ಹೆಚ್ಚಿಸಿಕೊಂಡರು. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ತಂಗಿಗಾಗಿ' ಚಿತ್ರದ ಮೂಲಕ ಸಿನಿಲೋಕಕ್ಕೆ ಬಂದರು. ಇದರಲ್ಲಿ ದರ್ಶನ್ ತಂಗಿ ಪಾತ್ರದಲ್ಲಿ ಅಭಿನಯಿಸಿದರು. ಬಳಿಕ ಸಾಹಸಸಿಂಹ ವಿಷ್ಣುವರ್ಧನ್ ನಟನೆಯ 'ವರ್ಷ' ಸಿನಿಮಾದಲ್ಲೂ ತಂಗಿ ಪಾತ್ರದಲ್ಲಿ ಕಾಣಿಸಿಕೊಂಡರು. ಇನ್ನು 'ಕೃಷ್ಣನ್ ಮ್ಯಾರೇಜ್ ಸ್ಟೋರಿ', 'ಗನ್' ಸೇರಿದಂತೆ ಕೆಲ ಚಿತ್ರಗಳಲ್ಲಿ ನಟಿಸಿದ್ದಾರೆ.
ಶ್ವೇತಾ ಚೆಂಗಪ್ಪ ಕಮ್‌ಬ್ಯಾಕ್!
ಇದೀಗ ಮತ್ತೆ ನಿರೂಪಣೆ ಮಾಡಲು ಶ್ವೇತಾ ಚೆಂಗಪ್ಪ ಬಂದಿದ್ದಾರೆ. ಜೀ ಕನ್ನಡದಲ್ಲಿ ದಂಪತಿಗಳಿಗಾಗಿ 'ಜೋಡಿ ನಂ.1' ರಿಯಾಲಿಟಿ ಶೋ ಅದ್ಧೂರಿಯಾಗಿ ಪ್ರಾರಂಭವಾಗಿದೆ. ಈ ಕಾರ್ಯಕ್ರಮವನ್ನು ಅನುಶ್ರೀ ಹಾಗೂ ಅರ್ಜುನ್ ಜನ್ಯ ನಡೆಸಿಕೊಡುತ್ತಾರೆ ಎಂದು ಎಲ್ಲರೂ ಊಹಿಸಿದ್ದರು. ಆದರೆ, ಇವರಿಬ್ಬರು ವಿಶೇಷ ಅತಿಥಿಗಳಾಗಿ ಕಾಣಿಸಿಕೊಂಡಿದ್ದಾರೆ. ಇನ್ನು ಈ ಕಾರ್ಯಕ್ರಮವನ್ನು ಶ್ವೇತಾ ಚೆಂಗಪ್ಪ ನಿರೂಪಣೆ ಮಾಡುತ್ತಿದ್ದಾರೆ.


Click it and Unblock the Notifications











