ಬಾಲನಟಿ ಶ್ರೀತಾಗೆ ವಂಚಿಸಿದ್ರಂತೆ 'ಒಗ್ಗರಣೆ ಡಬ್ಬಿ' ಮುರಳಿ
ಸಿನಿಮಾಗಳಲ್ಲಿ ಅಭಿನಯಿಸಿದ ನಂತರ ಸಂಭಾವನೆ ನೀಡಲು ಸತಾಯಿಸುತ್ತಾರೆ, ಸಂಭಾವನೆಯೇ ನೀಡಲ್ಲ ಅನ್ನೋ ಆರೋಪಗಳು ಆಗಾಗ ಕೇಳಿಬರುತ್ತಲೇ ಇರುತ್ತವೆ. ಇದೀಗ, ಧಾರಾವಾಹಿಯಲ್ಲೂ ಸಂಭಾವನೆ ನೀಡಿಲ್ಲ ಎಂಬ ಆರೋಪವನ್ನ 'ಅಂಜಲಿ' ಧಾರಾವಾಹಿಯ ನಟಿ ಮಾಡುತ್ತಿದ್ದಾರೆ.
ಧಾರಾವಾಹಿಗಳು ಎಷ್ಟು ಚೆನ್ನಾಗಿ ಫೇಮಸ್ ಆದರೂ ಕಲಾವಿದರು ಮಾತ್ರ ಸಂಭಾವನೆಗಾಗಿ ಪರದಾಡುವ ಪರಿಸ್ಥಿತಿ ಇನ್ನೂ ಕೂಡ ಇಂಡಸ್ಟ್ರಿಯಲ್ಲಿದೆ ಅನ್ನೋದನ್ನ ಬಾಲ ಕಲಾವಿದೆ ಶ್ರೀತಾ ಅವರ ತಾಯಿ ಬಹಿರಂಗಪಡಿಸಿದ್ದಾರೆ.
'ಅಂಜಲಿ' ಧಾರಾವಾಹಿ ಮೂಲಕ ಮನೆ ಮಾತಾಗಿದ್ದ ನಟಿ ಶ್ರೀತಾ ಅವರಿಂದ ಧಾರಾವಾಹಿಯಲ್ಲಿ ಕೆಲಸ ಮಾಡಿಸಿಕೊಂಡು ಒಂದು ರೂಪಾಯಿ ನೀಡದೆ ಮೋಸ ಮಾಡಿರೋ ಬಗ್ಗೆ ಶ್ರೀತಾ ತಾಯಿ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ. ಹಾಗಾದ್ರೆ ಪುಟ್ಟ ಹುಡುಗಿ ಶ್ರೀತಾ ರಿಗೆ ಸಂಭಾವನೆ ನೀಡದೆ ವಂಚಿಸಿರುವುದು ಯಾರು? ಯಾವ ಧಾರಾವಾಹಿಯಲ್ಲಿ ನಟಿಸುವಾಗ ಈ ಘಟನೆ ನಡೆದಿದೆ ಅನ್ನೋದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಅಂಜಲಿ ಧಾರಾವಾಹಿಯ 'ಮುದ್ದುಗುಮ್ಮ' ಶ್ರೀತಾ
ಜೀ ವಾಹಿನಿಯಲ್ಲಿ 'ಮುದ್ದುಗುಮ್ಮು ಅಂಜಲಿ' ಎಂಬ ಧಾರಾವಾಹಿ ಈ ಹಿಂದೆ ಪ್ರಸಾರವಾಗುತ್ತಿತ್ತು. ಧಾರಾವಾಹಿಯ ಮುಖ್ಯಪಾತ್ರಧಾರಿಯಾಗಿ ಬಾಲ ನಟಿ ಶ್ರೀತಾ ಅಭಿನಯಿಸುತ್ತಿದ್ದರು. ವಯಸ್ಸು ಚಿಕ್ಕದೇ ಇದ್ದರೂ ಅಭಿನಯದಲ್ಲಿ ಮಾತ್ರ ಎಲ್ಲರನ್ನ ಮೆಚ್ಚಿಸುವ ಜಾಣೆ ಈಕೆ. ಧಾರಾವಾಹಿ ನೋಡಿ ಜನ ಮೆಚ್ಚಿದಷ್ಟೇ ಅಭಿನಯಕ್ಕೆ ಮಾತ್ರ ಸಂಭಾವನೆ ಸಿಕ್ಕಿಲ್ಲ.

ದುಡಿಸಿಕೊಂಡು ಹಣ ನೀಡದ ನಿರ್ಮಾಪಕ
'ಅಂಜಲಿ' ಧಾರಾವಾಹಿನಲ್ಲಿ ಶ್ರೀತಾ ಅಭಿನಯಿಸಿರುವುದಕ್ಕೆ ಹಣ ನೀಡಿಲ್ಲ ಎಂದು ಶ್ರೀತಾ ತಾಯಿ ಶಿಲ್ಪ ಆರೋಪ ಮಾಡಿದ್ದಾರೆ. ''ಎಷ್ಟೇ ಕಷ್ಟ ಬಂದರೂ ಚಿತ್ರೀಕರಣದಲ್ಲಿ ಭಾಗಿ ಆಗಿದ್ದೇವು, 45 ಸಾವಿರದ ತನಕ ನೀಡಬೇಕಿದ್ದ ಬಾಕಿ ಸಂಭಾವನೆಯಲ್ಲಿ ಒಂದು ರೂಪಾಯಿ ನೀಡಿಲ್ಲ ನಿರ್ಮಾಪಕರಾದ ಮುರಳಿ'' ಎಂದು ತಮ್ಮ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.

ನಿರ್ಮಾಪಕ ಮುರಳಿ ಬಗ್ಗೆ
ನಿರ್ಮಾಪಕ ಮುರಳಿ 'ಜೀ ಕನ್ನಡ' ವಾಹಿನಿಯಲ್ಲಿ 'ಒಗ್ಗರಣೆ ಡಬ್ಬಿ' ಕಾರ್ಯಕ್ರಮವನ್ನ ನಿರೂಪಣೆ ಮಾಡೋದರ ಜೊತೆಗೆ ನಿರ್ಮಾಣವನ್ನೂ ಮಾಡುತ್ತಿದ್ದರು. ಇದೇ ಮುರಳಿ ಅವರು 'ಅಂಜಲಿ' ಧಾರಾವಾಹಿಯನ್ನ ನಿರ್ಮಾಣ ಮಾಡಿದ್ದರು.

ಖುಷಿಯಲ್ಲಿ ದುಃಖದ ದಿನದ ನೆನಪು
ಸದ್ಯ, ಶ್ರೀತಾ 'ಜೀ ವಾಹಿನಿ'ಯಲ್ಲಿ ಬರುವ 'ಮಹಾದೇವಿ' ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದಾರೆ. ಈ ಧಾರಾವಾಹಿಯನ್ನ ನಟಿ, ನಿರ್ಮಾಪಕಿ ಶೃತಿ ನಾಯ್ಡು ನಿರ್ಮಾಣ ಮಾಡುತ್ತಿದ್ದಾರೆ. ಅಭಿನಯಿಸುವುದಕ್ಕೆ ಶುರು ಮಾಡಿ ಎರಡೇ ತಿಂಗಳಲ್ಲಿ ಧಾರಾವಾಹಿ ತಂಡದಿಂದ ಉತ್ತಮ ನಟಿ ಎಂದು ಪ್ರಶಂಸೆ ಪಡೆಯೋದು ಅಲ್ಲದೆ ಪ್ರೀತಿಯ ಪತ್ರವನ್ನೂ ಪಡೆದುಕೊಂಡಿದ್ದಾಳೆ 'ಮುದ್ದು ಗುಮ್ಮ ಅಂಜಲಿ'. ಒಳ್ಳೆ ಪ್ರತಿಕ್ರಿಯೆ ಹಾಗೂ ಪ್ರೀತಿ ಸಿಕ್ಕಾಗ ಖುಷಿಯಲ್ಲಿ ಶ್ರೀತಾ ತಾಯಿ ಶಿಲ್ಪಾ ಹಳೆ ದಿನಗಳನ್ನ ನೆನಪಿಸಿಕೊಂಡಿದ್ದಾರೆ.


Click it and Unblock the Notifications











