'ಅಂತರಪಟ'ದ ಕಾರ್ತಿಕ್ ಮಹೇಶ್ ನಟಿಸಿದ ಮೊದಲ ಸಿನಿಮಾಗೆ ರಾಷ್ಟ್ರಪ್ರಶಸ್ತಿ.. ಯಾವುದು ಆ ಸಿನಿಮಾ?
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಹೊಚ್ಚ ಹೊಸ ಧಾರಾವಾಹಿ 'ಅಂತರಪಟ'ದಲ್ಲಿ ನಾಯಕಿ ಆರಾಧನಾಳ ಗೆಳೆಯ ರವಿ ಪಾತ್ರವನ್ನು ನಿರ್ವಹಿಸುತ್ತಿದ್ದ ನಟ ಕಾರ್ತಿಕ್ ಮಹೇಶ್ ಅಂತೂ ಎಲ್ಲರಿಗೂ ಚಿರಪರಿಚಿತ ನಟ.
ಏಕೆಂದರೆ, ಇವರು ಕಿರುತೆರೆಗೆ ಹೊಸಬರೇನಲ್ಲ. ಈಗಾಗಲೇ 'ಅಕ್ಕ', 'ಮಹಾಕಾಳಿ', 'ದೇವಯಾನಿ', 'ಇಂತಿ ನಿಮ್ಮ ಆಶಾ', 'ಪುಟ್ಟಕ್ಕನ ಮಕ್ಕಳು' ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ಕಾಣಿಸಿಕೊಂಡಿದ್ದ ಕಾರ್ತಿಕ್ ನಟನೆಯನ್ನು ಇಷ್ಟಪಡದವರಿಲ್ಲ.

ರಾಷ್ಟ್ರಪ್ರಶಸ್ತಿ ವಿಜೇತ ನಟ
ಈಗ ವಿಷಯ ಏನಪ್ಪ ಅಂದರೆ, ಇಷ್ಟೆಲ್ಲಾ ಹೆಸರುವಾಸಿಯಾಗಿರುವ ಇವರಿಗೆ ನಟನೆಗಾಗಿ ರಾಷ್ಟ್ರ ಪ್ರಶಸ್ತಿಯೂ ದೊರೆತಿದೆ. ಆದರೆ ಹೆಚ್ಚಿನವರಿಗೆ ಇವರು ರಾಷ್ಟ್ರಪ್ರಶಸ್ತಿ ವಿಜೇತ ನಟ ಎನ್ನುವುದು ತಿಳಿದಿಲ್ಲ. ಹಾಗಾದರೆ ಕಾರ್ತಿಕ್ ಅವರ ನಟನಾ ಜೀವನವನ್ನು ಸ್ವಲ್ಪ ನೋಡೋಣ ಬನ್ನಿ.
ಕಲರ್ಸ್ ಕನ್ನಡದಲ್ಲಿ ಇತ್ತೀಚೆಗೆ ಬಿಡುಗಡೆಯಾದ ಸೀರಿಯಲ್ 'ಅಂತರಪಟ'ದಲ್ಲಿ ನಾಯಕಿ ಆರಾಧನಾಳನ್ನು ಪ್ರೀತಿಸುತ್ತಿರುವ, ಆಕೆಯ ಕನಸನ್ನು ಈಡೇರಿಸಲು ತನ್ನ ಆಸ್ತಿಯನ್ನೇ ಒತ್ತೆ ಇಡುವ ಸ್ನೇಹಿತ ರವಿಯ ಪಾತ್ರವನ್ನು ಕಾರ್ತಿಕ್ ನಿಭಾಯಿಸುತ್ತಿದ್ದಾರೆ.

ಪೋಷಕ ಪಾತ್ರದ ಮೂಲಕ ಗಮನ ಸೆಳೆದ ಕಾರ್ತಿಕ್
ಹೀರೊನ ನಂತರದ ಪಾತ್ರ ಇವರದ್ದಾದರೂ ಕೂಡ ಅದೆಷ್ಟೋ ವೀಕ್ಷಕರು ಧಾರಾವಾಹಿಯನ್ನು ನೋಡಿದ ನಂತರ ರವಿ ಅವರನ್ನೇ ನಾಯಕನನ್ನಾಗಿ ಮಾಡಿ, ರವಿ ಮತ್ತು ಆರಾಧನಾಳನ್ನು ಬೇರೆ ಮಾಡಬೇಡಿ ಅಂತೆಲ್ಲಾ ಹೇಳುತ್ತಿದ್ದಾರೆ. ಕಾರ್ತಿಕ್ ಅವರ ನಟನೆಗೂ ರವಿ ಪಾತ್ರದ ಕ್ಯಾರೆಕ್ಟರ್‌ಗೂ ಸರಿಯಾಗಿ ಹೊಂದಿಕೊಂಡು ಬಿಟ್ಟಿದೆ. ಅವರಿಬ್ಬರ ಪ್ರೀತಿ ಮುರಿಯುವ ಹಾಗೆ ಮಾಡಬೇಡಿ ಎಂದೆಲ್ಲಾ ಜನ ಕೇಳುತ್ತಿರುವಾಗ ಅವರು ಆ ಪಾತ್ರವನ್ನು ಇಷ್ಟಪಟ್ಟಿರುವ ರೀತಿಯನ್ನು ನಾವು ಅರ್ಥೈಸಿಕೊಳ್ಳಬಹುದು. ಈಗಾಗಲೇ ಹಲವು ಸೀರಿಯಲ್‌ಗಳಲ್ಲಿ ನಟಿಸಿ ಅನುಭವವಿರುವ ಕಾರ್ತಿಕ್‌ಗೆ ನಟಿಸಿದ ಮೊದಲ ಸಿನಿಮಾವೇ ರಾಷ್ಟ್ರಪ್ರಶಸ್ತಿಯನ್ನು ತಂದು ಕೊಟ್ಟಿದೆ.
ನಟನೆಗೆ ಮುನ್ನುಡಿ ಬರೆದಿದ್ದು ಮಾಡೆಲಿಂಗ್
ಮೂಲತಃ ಮೈಸೂರಿನವರಾದ ನಟ, ಮಹಾರಾಜ ಕಾಲೇಜಿನಲ್ಲಿ ಬಿಎಸ್‌ಸಿ ಮುಗಿಸಿದವರು. ಮಾಡೆಲಿಂಗ್ ಮೂಲಕ ವೃತ್ತಿ ಜೀವನ ಆರಂಭಿಸಿದ ಕಾರ್ತಿಕ್‌ಗೆ, ಬಾಲ್ಯದಿಂದಲೂ ನಟನೆ ಮಾಡುವ ಕನಸಿತ್ತಂತೆ. ನಟನಾಗುವ ಕನಸು ಹೊತ್ತಿದ್ದ ಇವರು ಬೆಂಗಳೂರಿಗೆ ಬಂದು, ಸೀರಿಯಲ್‌ಗಳಿಗೆ ಆಡಿಶನ್‌ಗಳನ್ನು ಕೊಟ್ಟು ಕೊನೆಗೆ ಖುಷಿ ಸೀರಿಯಲ್ ಮೂಲಕ ಇವರು ನಟನಾರಂಗಕ್ಕಿಳಿದರು.
'ಖುಷಿ' ಸೀರಿಯಲ್‌ನಲ್ಲಿ ನಟಿಸುತ್ತಿರುವ ಸಂದರ್ಭದಲ್ಲಿ ಸುನೀಲ್ ಪುರಾಣಿಕ್ ಕಾರ್ತಿಕ್ ಅವರ ತಂದೆಯ ಪಾತ್ರವನ್ನು ನಿರ್ವಹಿಸಿದ್ದರು. ಸುನೀಲ್ ಪುರಾಣಿಕ್ ಪುತ್ರ ಸಾಗರ್ ಪುರಾಣಿಕ್ ಆ ಬಳಿಕ ತಮ್ಮ ನಿರ್ದೇಶನದ 'ಡೊಳ್ಳು' ಚಿತ್ರಕ್ಕೆ ಕಾರ್ತಿಕ್‌ರನ್ನು ನಾಯಕರನ್ನಾಗಿ ಆಯ್ಕೆ ಮಾಡಿಕೊಂಡರು.
ಚಿತ್ರರಂಗದಲ್ಲಿ ಅವರ ಚೊಚ್ಚಲ ಅಭಿನಯದ 'ಡೊಳ್ಳು' ಸಿನಿಮಾಗೆ ರಾಷ್ಟ್ರ ಪ್ರಶಸ್ತಿ ದೊರೆತದ್ದು ನಟನ ಸಂತಸವನ್ನು, ಆಸಕ್ತಿಯನ್ನು ಇನ್ನಷ್ಟು ಹೆಚ್ಚಿಸಿತು. ಅಲ್ಲದೆ 'ಡೊಳ್ಳು' ಚಿತ್ರಕ್ಕಾಗಿ ಸ್ವತಃ ತಾವೇ ಡೊಳ್ಳು ಬಡಿಯುವುದನ್ನು ಕೂಡ ಕಾರ್ತಿಕ್ ಕರಗತ ಮಾಡಿಕೊಂಡಿದ್ದರು. ಹೀಗೆ ಸಿನಿಮಾಗಳಲ್ಲಿ, ಧಾರಾವಾಹಿಗಳಲ್ಲಿ ಕಾಣಿಸಿಕೊಂಡಿರುವ ಕಾರ್ತಿಕ್ ಮಹೇಶ್ ರಾಜಿ ಸೀರಿಯಲ್ ನಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು.


Click it and Unblock the Notifications











