ನನ್ನ ನಿಶ್ಚಿತಾರ್ಥ ಆಯ್ತು, ಆದರೆ ನನಗೆ ಹೋಗೋಕೆ ಆಗಲಿಲ್ಲ ; ಮದುವೆ ವದಂತಿಗೆ ಅನುಪಮಾ ಗೌಡ ಖಡಕ್ ಉತ್ತರ
ಹಿಂದೆ ಒಂದು ಕಾಲ ಇತ್ತು. ಆ ಕಾಲದಲ್ಲಿ ಜನ ಸಾಮಾನ್ಯರು ಯಾವುದಾದರು ಒಂದು ಸುದ್ದಿಯನ್ನು ಟಿವಿ ಮತ್ತು ನ್ಯೂಸ್ ಪೇಪರ್‌ಗಳನ್ನು ನೋಡಿದ ನಂತರ ನಂಬುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ಅಂಗೈಯಲ್ಲಿರುವ ಮೊಬೈಲ್‌ನಲ್ಲಿಯೇ ಎಲ್ಲ ಸುದ್ದಿ ಕೆಲವೇ ಸೆಕೆಂಡ್‌ನಲ್ಲಿ ತಲುಪಿ ಬಿಡುತ್ತಾವೆ.
ಇನ್ನೂ ಸಾಮಾಜಿಕ ಜಾಲತಾಣವಂತೂ ಎಲ್ಲ ಮಾಧ್ಯಮಗಳನ್ನು ಸೈಡ್ ಗೆ ತಳ್ಳಿ ತನ್ನ ಕಂಬಂಧ ಬಾಹುಗಳಿಂದ ಜನರನ್ನು ಆಕ್ರಮಿಸಿಕೊಂಡಿದೆ. ಆದರೆ, ಈ ಸೋಶಿಯಲ್ ಮೀಡಿಯಾದಲ್ಲಿ ಬಿತ್ತರವಾಗುವ ಸುದ್ದಿಗಳಲ್ಲಿ ಸತ್ಯ ಯಾವುದು ಸುಳ್ಳು ಯಾವುದು ಎನ್ನುವುದನ್ನು ಅರಿಯುವಷ್ಟರಲ್ಲಿ ಆ ಸುಳ್ಳು ಸುದ್ದಿ ಎಲ್ಲಿಂದ ಎಲ್ಲೆಲ್ಲಿಗೋ ತಲುಪಿ ಮತ್ಯಾವುದೋ ಪ್ರಮಾದವನ್ನು ಸೃಷ್ಟಿಸಿರುತ್ತೆ. ಉದಾಹರಣೆಗೆ ಅನುಪಮಾ ಗೌಡ ಅವರ ವಿಚಾರವನ್ನೇ ತೆಗೆದುಕೊಳ್ಳಿ.

ಹೌದು ನಾಯಕಿಯಾಗಿ ನಿರೂಪಕಿಯಾಗಿ ಹೆಸರು ಮಾಡಿರುವ ಅನುಪಮಾ ಗೌಡ ಮೊನ್ನೆ ಮೊನ್ನೆಯಷ್ಟೇ ತಮ್ಮ 35ನೇ ಹುಟ್ಟುಹಬ್ಬವನ್ನ ಆಚರಿಸಿಕೊಂಡಿದ್ದಾರೆ. ಇನ್ನೂ ಸೆಲೆಬ್ರೆಟಿಗಳ ಬರ್ತ್‌ಡೇ ಅಂದ ಮೇಲೆ ಅವರ ಅತ್ಯಾಪ್ತರು ಸೋಶಿಯಲ್ ಮೀಡಿಯಾ ಮೂಲಕ ಶುಭ ಕೋರುತ್ತಾರೆ. ನೆನಪುಗಳನ್ನು ಹಂಚಿಕೊಳ್ಳುತ್ತಾರೆ.
ಅನುಪಮಾ ವಿಚಾರದಲ್ಲಿ ಕೂಡ ಇದೇ ಆಗಿತ್ತು. ಅನುಪಮಾ ಗೌಡ ಅವರ ಆಪ್ತ ಮಿತ್ರ ರಾಘವ್ ಇಬ್ಬರ ಫೋಟೊಗಳನ್ನು ಹಂಚಿಕೊಂಡು ವಿಶೇಷವಾಗಿ ಅನುಪಮಾ ಅವರಿಗೆ ಹುಟ್ಟುಹಬ್ಬದ ಶುಭಾಶಯವನ್ನು ಹೇಳಿದ್ದರು.
ಇಷ್ಟೇ ಸಾಕಿತ್ತು. ಫೋಟೊದಲ್ಲಿ ಇವರ ಆತ್ಮೀಯತೆ ಕಂಡು ಅನುಪಮಾ ಗೌಡ ಸದ್ದಿಲ್ಲದೇ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎನ್ನುವ ಸುದ್ದಿಯನ್ನು ಕೆಲವರು ಹಬ್ಬಿಸಿದರು. ಇನ್ನೇನು ಕೆಲವೇ ದಿನಗಳಲ್ಲಿ ಮದುವೆಯಾಗಲಿದ್ದಾರೆ ಎಂದು ಕೂಡ ಚರ್ಚೆ ಮಾಡಲು ಶುರು ಮಾಡಿದರು. ಸದ್ಯ ಇದಕ್ಕೆ ಅನುಪಮಾ ಗೌಡ ಉತ್ತರ ನೀಡಿದ್ದಾರೆ. ವ್ಯಂಗ್ಯವಾಡಿದ್ದಾರೆ.
ಈ ಕುರಿತು ಮಾತನಾಡಿರುವ ಅನುಪಮಾ ಗೌಡ, ಸಾಮಾನ್ಯವಾಗಿ ನಾನು ಪ್ರತಿಕ್ರಿಯಿಸುವುದಿಲ್ಲ, ಆದರೆ..ಎರಡು ದಿನದಿಂದ ನನಗೆ ಹಲವರು ಶುಭ ಕೋರುತ್ತಿದ್ದಾರೆ. ಶೂಟಿಂಗ್ ಹೋದರೆ ಅಲ್ಲಿಯೂ ವಿಶ್ ಮಾಡ್ತಿದ್ದಾರೆ. ಕಾರಣವೇನು ಎಂದು ವಿಚಾರಿಸಿದಾಗ ನನಗೆ ಗೊತ್ತಿಲ್ಲದೇ ನನ್ನ ನಿಶ್ಚಿತಾರ್ಥ ಸಮಾರಂಭ ನಡೆದಿದೆ ಎನ್ನುವ ವಿಚಾರ ಗೊತ್ತಾಯ್ತು ಎಂದು ಹೇಳಿದ್ಧಾರೆ. ದುರಾದೃಷ್ಟಕರವಾಗಿ ನಮ್ಮ ನಿಶ್ಚಿತಾರ್ಥ ಸಮಾರಂಭದಲ್ಲಿ ನಾವೇ ಭಾಗಿಯಾಗಲು ಸಾಧ್ಯವಾಗಲಿಲ್ಲ ಎಂದು ಹೇಳಿದ್ದಾರೆ. ನಮಗೆ ಯಾರೂ ಮಾಹಿತಿಯೇ ನೀಡಿರಲಿಲ್ಲ. ಒಂದಷ್ಟು ಪೇಜ್ನವರು ಈ ರೀತಿ ಸುದ್ದಿ ಹಬ್ಬಿಸುತ್ತಿದ್ದಾರೆ ಎಂದಿದ್ದಾರೆ.

ಅನುಶ್ರೀ ಮದುವೆಯಾಯ್ತು, ಈಗ ಅನುಪಮಾ ಎಂಗೇಜ್‌ಮೆಂಟ್ ಆಗಿದೆ ಅಂತ ಪೋಸ್ಟ್ ಮಾಡುತ್ತಿದ್ದಾರೆ ಎಂದು ಹೇಳಿರುವ ಅನುಪಮಾ, ಇದು ಎಐ ಕಾಲ ಈ ಕಾಲದಲ್ಲಿ ಕೊನೆ ಪಕ್ಷ ಒಂದೊಳ್ಳೆಯ ಫೋಟೊವನ್ನಾದರೂ ಕ್ರಿಯೇಟ್ ಮಾಡಿ, ರಿಂಗ್ ಹಾಕೋ ತರಹ ಫೋಟೋವನ್ನ ಎಡಿಟ್ ಮಾಡಿ, ನಮಗೆ ಕಂಗ್ರ್ಯಾಜುಲೇಷನ್ಸ್ ಅಂತ ವಿಷಸ್ ಕಳಿಸಿದ್ರೆ ನಮಗೆ ಇನ್ನೂ ಖುಷಿಯಾಗುತ್ತಿತ್ತು ಎಂದು ಹೇಳಿದ್ಧಾರೆ. ಈ ಮೂಲಕ ಸುಳ್ಳು ಸುದ್ದಿಯನ್ನು ಹಬ್ಬಿಸಿದವರಿಗೆ ಅನುಪಮಾ ಗೌಡ ಮಾತಿನಲ್ಲೇ ತಿವಿದಿದ್ದಾರೆ.
ಮುಂದುವರೆದು ಈಗಷ್ಟೇ ಎಂಗೇಜ್‌ಮೆಂಟ್ ಆಗಿದೆ. ಕೂಡಲೇ ಮದುವೆ ಮಾಡಿಸೋದಕ್ಕೆ ಹೋಗಬೇಡಿ ಎಂದು ಹೇಳಿರುವ ಅನುಪಮಾ ಗೌಡ ಜನರಿಗೆ ಅನುಮಾನ ಬರುತ್ತೆ. ಈಗಾಗಲೇ ಬಂದಿರುವ ಲೈಕ್ಸ್ ಕಮೆಂಟ್‌ಗಳೆಲ್ಲಾ ವೇಸ್ಟ್ ಆಗುತ್ತೆ ಎಂದು ಹೇಳಿದ್ದಾರೆ. ಒಂದೆರಡು ತಿಂಗಳು ಬಿಟ್ಟು ಪೋಸ್ಟ್ ಮಾಡಿ. ಮತ್ತೆ ನಿಮಗೆ ಒಳ್ಳೆಯ ಟ್ರಾಕ್ಷನ್ ಸಿಗುತ್ತೆ. ಜನ ಎಲ್ಲಾ ನೋಡ್ತಾರೆ ಎಂದು ಹೇಳಿರುವ ಅನುಪಮಾ ಗೌಡ
ಟ್ರೆಡಿಷನಲ್ ಔಟ್‌ಫಿಟ್ ಎಲ್ಲಾ ಹಾಕಿ, ಮದುವೆ ಪೋಸ್ಟ್‌ನ ಕ್ರಿಯೇಟ್ ಮಾಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ಸಾಧ್ಯವಾದರೆ, ನನ್ನ ಮತ್ತು ರಾಘವ್‌ನ ಮದುವೆಗೆ ಕರೀರಿ. ಖಂಡಿತವಾಗಿಯೂ ನಾವು ಕೂಡ ಬರ್ತೀವಿ ಎಂದು ವ್ಯಂಗ್ಯವಾಡಿದ್ದಾರೆ.


Click it and Unblock the Notifications











