Anupama Gowda: ವೀಕೆಂಡ್‌ನಲ್ಲಿ ಸುವರ್ಣ ಸೂಪರ್‌ಸ್ಟಾರ್.. ಭರಪೂರ ಮನರಂಜನೆ ನೀಡಲು ರೆಡಿ!
'ಅಕ್ಕ' ಧಾರಾವಾಹಿಯಲ್ಲಿ ಭೂಮಿಕಾ ಮತ್ತು ದೇವಿಕಾ ಎನ್ನುವ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ಕರುನಾಡಿನಾದ್ಯಂತ ಮನೆ ಮಾತಾಗಿರುವ ಅನುಪಮಾ ಗೌಡ ನಿರೂಪಕಿಯಾಗಿಯೂ ಮನ ಸೆಳೆದಾಕೆ. 'ಮಜಾ ಭಾರತ','ಕನ್ನಡ ಕೋಗಿಲೆ', 'ರಾಜ ರಾಣಿ', 'ನನ್ನಮ್ಮ ಸೂಪರ್ ಸ್ಟಾರ್' ಅಂತಹ ರಿಯಾಲಿಟಿ ಶೋಗಳ ನಿರೂಪಕಿಯಾಗಿ ಕಿರುತೆರೆ ಜಗತ್ತಿನಲ್ಲಿ ಮೋಡಿ ಮಾಡಿದ್ದಾರೆ. ಈಗ ಅನುಪಮಾ ಗೌಡ ಈಗ ಮತ್ತೊಮ್ಮೆ ತಮ್ಮ ಮಾತಿನ ಮೂಲಕ ವೀಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಹೌದು, ಸ್ಟಾರ್ ಸುವರ್ಣ ವಾಹಿನಿಯಲ್ಲಿ ಮೂಡಿಬರುತ್ತಿರುವ 'ಸುವರ್ಣ ಸೂಪರ್ ಸ್ಟಾರ್' ರಿಯಾಲಿಟಿ ಶೋನ ನಿರೂಪಕಿಯಾಗಿ ವೀಕ್ಷಕರನ್ನು ರಂಜಿಸುತ್ತಿದ್ದಾರೆ ಅನುಪಮಾ ಗೌಡ. ಅಂದ ಹಾಗೇ ಸುವರ್ಣ ಸೂಪರ್‌ಸ್ಟಾರ್ ಕಾರ್ಯಕ್ರಮ ವಾರದ ಏಳು ದಿನಗಳು ಪ್ರಸಾರವಾಗುತ್ತಿದ್ದು ವಾರಾಂತ್ಯದ ಸಂಚಿಕೆಗಳ ನಿರೂಪಣೆಯನ್ನು ಅನುಪಮಾ ಗೌಡ ಮಾಡುತ್ತಿದ್ದಾರೆ.

ಬಾಲನಟಿಯಾಗಿ ನಟನೆಗೆ ಎಂಟ್ರಿ
ಕಿರುತೆರೆ ಜೊತೆಗೆ ಹಿರಿತೆರೆಯಲ್ಲಿಯೂ ಮೋಡಿ ಮಾಡಿರುವ ಅನುಪಮಾ ಗೌಡ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದ್ದು ಬಾಲನಟಿಯಾಗಿ. 'ಲಂಕೇಶ್ ಪತ್ರಿಕೆ' ಸಿನಿಮಾದಲ್ಲಿ ಬಾಲನಟಿಯಾಗಿ ಅಭಿನಯಿಸುವ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಆ ಬಳಿಕ ಅನುಪಮಾ ಗೌಡ ಕಿರುತೆರೆಗೆ ಕಾಲಿಟ್ಟಿದ್ದು ರಿಯಾಲಿಟಿ ಶೋಗೆ. ಇಲ್ಲಿಂದ ಅನುಪಮಾ ವೃತ್ತಿ ಬದುಕಿಗೆ ಹೊಸ ದಾರಿ ಸಿಕ್ಕಿತ್ತು.
ರಿಯಾಲಿಟಿ ಶೋ ಮೂಲಕ ಎಂಟ್ರಿ
'ಹಳ್ಳಿ ದುನಿಯಾ' ರಿಯಾಲಿಟಿ ಶೋ ಮೂಲಕ ಕಿರುತೆರೆಗೆ ಕಾಲಿಟ್ಟ ಅನುಪಮಾ ಗೌಡ 'ಚಿ.ಸೌ.ಸಾವಿತ್ರಿ' ಧಾರಾವಾಹಿಯ ಮೂಲಕ ನಟನಾ ಜಗತ್ತಿಗೆ ಪಾದಾರ್ಪಣೆ ಮಾಡಿದರು. ಮುಂದೆ 'ಅಕ್ಕ' ಧಾರಾವಾಹಿಯಲ್ಲಿ ದ್ವಿಪಾತ್ರದಲ್ಲಿ ನಟಿಸಿದ ಆಕೆ ಇಂದಿಗೂ ಅದೇ ಪಾತ್ರದ ಮೂಲಕ ಕಿರುತೆರೆ ಅಂಗಳದಲ್ಲಿ ಫೇಮಸ್ಸು! ಹೀಗಾಗಿ ಕರ್ನಾಟಕದ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್‌ನಲ್ಲೂ ಭಾಗವಹಿಸುವ ಅವಕಾಶ ಸಿಕ್ಕಿತ್ತು.

ಬಿಗ್ ಬಾಸ್ ಸ್ಪರ್ಧಿಯಾಗಿ ಫೇಮಸ್ಸು
ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ 'ಬಿಗ್ ಬಾಸ್ ಸೀಸನ್ 5'ರ ಸ್ಪರ್ಧಿಯಾಗಿ ದೊಡ್ಮನೆಗೆ ಕಾಲಿಟ್ಟಿದ್ದ ಅನುಪಮಾ ಗೌಡ ಬರೋಬ್ಬರಿ 98 ದಿನಗಳ ಕಾಲ ವೀಕ್ಷಕರನ್ನು ರಂಜಿಸುವಲ್ಲಿ ಯಶಸ್ವಿಯಾದರು. ಇದರ ಜೊತೆಗೆ ಕಳೆದ ವರ್ಷ ನಡೆದ 'ಬಿಗ್ ಬಾಸ್ ಸೀಸನ್ 9'ರಲ್ಲಿ ಕಾಣಿಸಿಕೊಳ್ಳುವ ಅವಕಾಶ ಪಡೆದುಕೊಂಡಿರುವ ಆಕೆ 84 ದಿನಗಳ ಕಾಲ ದೊಡ್ಮನೆಯಲ್ಲಿದ್ದರು.
ಸಿನಿಮಾದಲ್ಲಿಯೂ ಮೋಡಿ
'ಆ ಕರಾಳ ರಾತ್ರಿ' ಸಿನಿಮಾದಲ್ಲಿ ಮಲ್ಲಿಕಾ ಆಗಿ ನಟಿಸಿ ಸೈ ಎನಿಸಿಕೊಂಡಿರುವ ಅನುಪಮಾ ಗೌಡ ಕಿರುತೆರೆ ನಟ ಜಯರಾಂ ಕಾರ್ತಿಕ್ ಅವರಿಗೆ ಜೋಡಿಯಾಗಿ ಕಾಣಿಸಿಕೊಂಡಿದ್ದರು. ಮುಂದೆ 'ತ್ರಯಬಕಂ' ಸಿನಿಮಾದಲ್ಲಿ ಬಣ್ಣ ಹಚ್ಚಿರುವ ಅನುಪಮಾ ಗೌಡ 'ಬೆಂಕಿಯಲ್ಲಿ ಅರಳಿದ ಹೂವು' ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.


Click it and Unblock the Notifications











