ತಾಳ್ಮೆಯಿಂದ ಕಾದಿದ್ದಕ್ಕೆ ಬಹಳ ಅರ್ಥಪೂರ್ಣವಾದ ತಾಳಿ ಕೊರಳಿಗೆ ಬಿದ್ದಿದೆ- ಆಂಕರ್ ಅನುಶ್ರೀ
ಗೆಳೆಯ ರೋಷನ್ ಜೊತೆ ನಟಿ, ನಿರೂಪಣೆ ಅನುಶ್ರೀ ಆಗಸ್ಟ್ 28ರಂದು ಹೊಸ ಬಾಳಿಗೆ ಕಾಲಿಟ್ಟಿದ್ದರು. ಬಹಳ ಅದ್ಧೂರಿಯಾಗಿ ಇಬ್ಬರ ಮದುವೆ ನೆರವೇರಿತ್ತು. ಸಾಕಷ್ಟು ಸಿನಿಮಾ ತಾರೆಯರು ಕಲ್ಯಾಣೋತ್ಸವದಲ್ಲಿ ಭಾಗಿ ಆಗಿ ಶುಭ ಕೋರಿದ್ದರು. ಅನುಶ್ರೀ ಮತ್ತೆ ನಿರೂಪಣೆ ಕಾಯಕಕ್ಕೆ ಮರಳಿದ್ದಾರೆ. ಜೀ ಕನ್ನಡ ಮಹಾನಟಿ ವೇದಿಕೆಯಲ್ಲಿ ಸಂಭ್ರಮಾಚರಣೆ ಜೋರಾಗಿದೆ.
ಸಪ್ತಪದಿ ತುಳಿದು ದಾಂಪತ್ಯ ಜೀವನಕ್ಕೆ ಕಾಲಿಟ್ಟ ಅನುಶ್ರೀ ಅವರಿಗೆ ಜೀ ಕನ್ನಡ ತವರು ಮನೆಯ ಪ್ರೀತಿ ನೀಡಿದೆ. ಅದಕ್ಕೆ ಸಂಬಂಧಿಸಿದ ಪ್ರೋಮೊ ಈಗ ಬಿಡುಗಡೆಯಾಗಿದೆ. ವೀಕೆಂಡ್ ಈ ಎಪಿಸೋಡ್ ಪ್ರಸಾರವಾಗಲಿದೆ. ಇತ್ತೀಚೆಗೆ ಜೀ ಕನ್ನಡ ಸಿಬ್ಬಂದಿಗೆ ಶೋಗಳ ಸ್ಪರ್ಧಿಗಳಿಗೆ, ತೀರ್ಪುಗಾರರಿಗೆ ಅನುಶ್ರೀ ಮದುವೆ ಊಟ ಕೂಡ ಹಾಕಿಸಿದ್ದರು.

ಅನುಶ್ರೀ ಮಹಾನಟಿ ವೇದಿಕೆಗೆ ಎಂಟ್ರಿ ಆಗುತ್ತಿದ್ದರೆ ಎಲ್ಲರೂ ಮುದುವೆಯ ಶುಭಾಶಯ ಕೋರಿದ್ದಾರೆ. ರಮೇಶ್ ಅರವಿಂದ್, ತಾರಾ, ತರುಣ್ ಸುಧೀರ್, ಪ್ರೇಮಾ, ಶರಣ್, ನಿಶ್ವಿಕಾ ನಾಯ್ಡು ಎಲ್ಲರೂ ಸಾಥ್ ಕೊಟ್ಟಿದ್ದಾರೆ. ತಾಳಿದವನು ಬಾಳಿಯಾನು ಎನ್ನುವಂತೆ ತಾಳ್ಮೆಯಿಂದ ಕಾದಿದ್ದಕ್ಕೆ ಬಹಳ ಅರ್ಥಪೂರ್ಣವಾದ ತಾಳಿ ಕೊರಳಿಗೆ ಬಿದ್ದಿದೆ ಎಂದು ಅನುಶ್ರೀ ಹೇಳಿದ್ದಾರೆ.
ನಮ್ಮ ಮನೆಯ ಮಗಳಿಗೆ ತವರು ಮನೆ ಮಡಿಲು ತುಂಬಿಸಬೇಕು ಎಂದು ತಾರಾ ಮಡಿಲು ತುಂಬಿಸುವ ಶಾಸ್ತ್ರ ಮಾಡಿದ್ದಾರೆ. ನನಗೆ ಜೀವನ ಕೊಟ್ಟಿದ್ದು ಜೀ ಕನ್ನಡ, ಆ ಜೀವನಕ್ಕೆ ಅರ್ಥ ಕೊಟ್ಟಿದ್ದು ರೋಷನ್ ಎಂದು ಅನುಶ್ರೀ ಹೇಳಿರುವುದು ಪ್ರೋಮೊದಲ್ಲಿ ಹೈಲೆಟ್ ಆಗಿದೆ. ಅಭಿಮಾನಿಗಳು ಲೈಕ್ಸ್, ಕಾಮೆಂಟ್ಸ್ ಮೂಲಕ ಪ್ರೋಮೊ ಮೆಚ್ಚಿಕೊಳ್ಳುತ್ತಿದ್ದಾರೆ.
ಬೆಂಗಳೂರಿನ ಕಗ್ಗಲಿಪುರ ಬಳಿಯಿರುವ ಖಾಸಗಿ ರೆಸಾರ್ಟ್‌ನಲ್ಲಿ ಅನುಶ್ರೀ ಹಾಗೂ ರೋಷನ್ ಮದುವೆ ಸಮಾರಂಭ ನಡೆದಿತ್ತು. ಬಹಳ ದಿನಗಳಿಂದ ಅನುಶ್ರೀ ಮದುವೆ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಗುಲ್ಲಾಗಿತ್ತು. ಆದರೆ ಕೊನೆಗೆ ಹೆಚ್ಚು ಪ್ರಚಾರ ಇಲ್ಲದೇ ಐಟಿ ಕಂಪನಿ ಉದ್ಯೋಗಿ ರೋಷನ್ ಅವರನ್ನು ಕೈಹಿಡಿದರು. 3 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ಜೋಡಿ ಪೋಷಕರ ಒಪ್ಪಿಗೆ ಪಡೆದು ಮದುವೆ ಆಗಿದ್ದರು.
ಹಳದಿ ಶಾಸ್ತ್ರ, ಮಾಂಗಲ್ಯಧಾರಣೆ, ರಿಸೆಪ್ಷನ್ ಅಂತೆಲ್ಲಾ ಮದುವೆ ಸಂಭ್ರಮ ಕಳೆಗಟ್ಟಿತ್ತು. ಶಿವರಾಜ್‌ಕುಮಾರ್- ಗತಾ ದಂಪತಿ, ನಾದಬ್ರಹ್ಮ ಹಂಸಲೇಖ, ವಿಜಯ್ ರಾಘವೇಂದ್ರ, ತಾರಾ, ರಚಿತಾ ರಾಮ್ ಸೇರಿ ಹಲವರು ಈ ಮದುವೆ ಸಮಾರಂಭಕ್ಕೆ ಸಾಕ್ಷಿಯಾಗಿ ಜೋಡಿಗೆ ಶುಭ ಹಾರೈಸಿದ್ದರು. ಅಭಿಮಾನಿಗಳಿಗೆ ಸಮಾರಂಭಕ್ಕೆ ಆಮಂತ್ರಣ ಇರಲಿಲ್ಲ.
ಅನುಶ್ರೀ ಹಾಗೂ ರೋಷನ್ ಇಬ್ಬರೂ ಕೂಡ ಪುನೀತ್ ರಾಜ್‌ಕುಮಾರ್ ಅಭಿಮಾನಿಗಳು. ಮದುವೆ ಮಂಟಪದಲ್ಲು ಜೋಡಿ ಅಪ್ಪುನ ಮರೆಯಲಿಲ್ಲ. 'ಪುನೀತ ಪರ್ವ' ಕಾರ್ಯಕ್ರಮವನ್ನು ಅನುಶ್ರೀ ನಿರೂಪಣೆ ಮಾಡಿದ್ದರು. ಈ ಕಾರ್ಯಕ್ರಮದ ಸಮಯದಲ್ಲೇ ರೋಷನ್ ಪರಿಚಯವಾಗಿತ್ತು. ಬಳಿಕ ಅದು ಸ್ನೇಹಕ್ಕೆ ತಿರುಗಿ ಇಬ್ಬರೂ ಪ್ರೀತಿಸಲು ಆರಂಭಿಸಿದ್ದರು. ಒಂದರ್ಥದಲ್ಲಿ ನಮ್ಮಿಬ್ಬರನ್ನು ಅಪ್ಪು ಸರ್ ಒಂದು ಮಾಡಿದರು ಎಂದು ಅನುಶ್ರೀ ಹೇಳಿದ್ದರು.
ಮದುವೆಯಾದ ಒಂದೇ ವಾರಕ್ಕೆ ಮತ್ತೆ ತಮ್ಮ ನಿರೂಪಣೆ ಕೆಲಸಕ್ಕೆ ಅನುಶ್ರೀ ಹಾಜರಾಗಿದ್ದಾರೆ. ಮಂಗಳೂರಿನ 'ನಮ್ಮ ಟಿವಿ' ವಾಹಿನಿಯಲ್ಲಿ ಅನುಶ್ರೀ ಮೊದಲಿಗೆ ವೃತ್ತಿ ಜೀವನ ಆರಂಭಿಸಿದ್ದರು. ಬಳಿಕ ಜೀ ಕನ್ನಡ ಕಾಮಿಡಿ ಕಿಲಾಡಿಗಳು ಶೋ ನಿರೂಪಣೆ ಅವಕಾಶ ಸಿಕ್ಕಿತ್ತು. ಬಳಿಕ ಹಿಂತಿರುಗಿ ನೋಡಲಿಲ್ಲ. ಸಿನಿಮಾ ಕಾರ್ಯಕ್ರಮ ಮಾತ್ರವಲ್ಲದೇ ಸಾಕಷ್ಟು ಸಾರ್ವಜನಿಕ ಕಾರ್ಯಕ್ರಮಗಳನ್ನು ನಿರೂಪಣೆ ಮಾಡಿ ಆಕೆ ಗಮನ ಸೆಳೆದಿದ್ದಾರೆ.


Click it and Unblock the Notifications











