Mansi Joshi: ಪರಭಾಷೆಯಲ್ಲೂ ಮಿಂಚುತ್ತಿರುವ ಈ ನಟಿ ಒಳ್ಳೆಯ ಡ್ಯಾನ್ಸರ್ ಅನ್ನೋದು ಹಲವರಿಗೆ ಗೊತ್ತೇ ಇಲ್ಲ!
ನಟನೆ ಎಂದಾಗ ಪಾಸಿಟಿವ್ ಹಾಗೂ ನೆಗೆಟಿವ್ ಎರಡು ರೀತಿಯ ಪಾತ್ರಗಳು ಇದ್ದೇ ಇರುತ್ತವೆ. ಅದರಲ್ಲೂ ಕಿರುತೆರೆ ಧಾರಾವಾಹಿಗಳು ಎಂದಾಗ ನೆಗೆಟಿವ್ ರೋಲ್‌ಗೆ ಹೆಚ್ಚಿನ ಪ್ರಾಮುಖ್ಯತೆ ಇರುತ್ತದೆ ಎಂಬುದು ಎಷ್ಟೋ ಜನರ ಅಭಿಪ್ರಾಯ. ಒಮ್ಮೆ ನೆಗೆಟಿವ್ ರೋಲ್‌ನಲ್ಲಿ ಕಾಣಿಸಿಕೊಂಡರೆ ಮತ್ತೆ ಅದಾದ ಮೇಲೆ ಎಲ್ಲರೂ ನೆಗೆಟಿವ್ ರೋಲ್‌ಗಳನ್ನೇ ಕೊಡುತ್ತಾ ಹೋಗುತ್ತಾರೆ. ಆದರೆ ಕೆಲವು ನಟರು ನೆಗೆಟಿವ್ ಹಾಗೂ ಪಾಸಿಟಿವ್ ಎರಡೂ ರೋಲ್‌ಗಳಲ್ಲಿ ಕಾಣಿಸಿಕೊಂಡಿರುವುದು ಉಂಟು. ಅಂತಹ ನಟರ ಅಭಿನಯ ಅದೆಷ್ಟು ಚೆನ್ನಾಗಿರುತ್ತದೆ ಎಂದರೆ ಪಾಸಿಟಿವ್ ಹಾಗೂ ನೆಗೆಟಿವ್ ಎರಡೂ ಪಾತ್ರಗಳು ಅವರಿಗೆ ಹೊಂದುವಂತೆ ಅಭಿನಯಿಸುವ ಸಾಮರ್ಥ್ಯ ಅವರಿಗೆ ಇರುತ್ತದೆ.
ಯಾಕೆ ಹೇಳ್ತಿದ್ದೀವಿ ಅಂತ ಯೋಚಿಸುತ್ತಿದ್ದೀರಾ..? ಈ ರೀತಿ ಕೇವಲ ಒಂದೇ ರೀತಿಯ ಪಾತ್ರಕ್ಕೆ ಬ್ರಾಂಡ್ ಆಗದೇ ಪಾಸಿಟಿವ್ ಹಾಗೂ ನೆಗೆಟಿವ್ ರೋಲ್‌ಗಳನ್ನು ನಿಭಾಯಿಸಿ ಸೈ ಎನಿಸಿಕೊಂಡಿರುವ ನಟಿ ಬೇರಾರು ಅಲ್ಲ, ಅದು 'ಪಾರು' ಧಾರವಾಹಿಯ ಅನುಷ್ಕಾ ಪಾತ್ರಧಾರಿ ಮಾನ್ಸಿ ಜೋಶಿ.
ಹೌದು, ಅರಸನಕೋಟೆ ಅಖಿಲಾಂಡೇಶ್ವರಿ ಕುಟುಂಬವನ್ನು ಸರ್ವನಾಶ ಮಾಡಲೆಂದು ಪಣತೊಟ್ಟಿರುವ ಅರುಂಧತಿ ಮಗಳು ಅನುಷ್ಕಾ ಆಗಿ ನಟಿಸಿದ್ದರು ಮಾನ್ಸಿ ಜೋಷಿ. ಸೇಡು ತೀರಿಸಿಕೊಳ್ಳಲು ಬಂದ ಅನುಷ್ಕಾ ಒಂದು ವರ್ಷದ ಮೊದಲು ಗುಂಡೇಟಿಗೆ ಬಲಿಯಾಗಿದ್ದು, ಆಕೆ ಸತ್ತು ಹೋಗಿದ್ದಾಳೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಈಗ ವರ್ಷಗಳ ನಂತರ ಅನುಷ್ಕಾ ಮತ್ತೆ ಬಂದಿದ್ದು ಸೇಡು ತೀರಿಸಿಕೊಳ್ಳಲು ತಯಾರಾಗಿದ್ದಾಳೆ. ಈಗಾಗಲೇ ನರ್ಸ್ ಆಗಿ ಹೊಸ ಅವತಾರದ ಮೂಲಕ ಅರಸನಕೋಟೆಗೆ ದುಷ್ಟೆಯಾಗಿ ಎಂಟ್ರಿಯಾಗಿದ್ದು, ಮುಂದಿನ ದಿನಗಳಲ್ಲಿ ಯಾವ ರೀತಿಯಾಗಿ ಸೇಡು ತೀರಿಸಿಕೊಳ್ಳಲಿದ್ದಾಳೆ ಅನ್ನೋ ಕುತೂಹಲವಿದೆ.

ಧಾರಾವಾಹಿಗೆ ಎಂಟ್ರಿ ಕೊಟ್ಟಿದ್ದೇಗೆ?
ಕನ್ನಡದ ಜೊತೆಗೆ ಪರಭಾಷೆಯ ಕಿರುತೆರೆಯಲ್ಲಿ ಮಿಂಚಿರುವ ಮಾನ್ಸಿ ಜೋಶಿ ಅವರಿಗೆ ಚಿಕ್ಕಂದಿನಿಂದಲೂ ನೃತ್ಯ ಅಚ್ಚುಮೆಚ್ಚಿನ ಹವ್ಯಾಸ. ಶಾಸ್ತ್ರೋಕ್ತವಾಗಿ ಭರತನಾಟ್ಯ ಕಲಿತಿರುವ ಮಾನ್ಸಿ ಜೋಶಿ ನಂತರ ಹಲವಾರು ವೇದಿಕೆಗಳಲ್ಲಿ ನೃತ್ಯ ಪ್ರದರ್ಶನ ನೀಡಿದ್ದರು. ಆದರೆ ಅದೇ ನೃತ್ಯ ಆಕೆಯ ಬದುಕನ್ನು ಬದಲಿಸುತ್ತದೆ ಎಂದು ಆಕೆ ಅಂದುಕೊಂಡಿರಲಿಲ್ಲ. ನಟಿಯಾಗಲು ಮೂಲ ಕಾರಣ ನೃತ್ಯ ಭರತನಾಟ್ಯ ಅಂದಮೇಲೆ ಅದರಲ್ಲಿ ನವರಸಗಳನ್ನು ಲೀಲಾಜಾಲವಾಗಿ ವ್ಯಕ್ತಪಡಿಸುವ ಅದ್ಭುತ ಸ್ಕಿಲ್ ಇರಲೇಬೇಕು. ಹೀಗಿರುವಾಗ ಮಾನ್ಸಿಯವರು ಆದಾಗಲೇ ಭರತನಾಟ್ಯವನ್ನು ಕರಗತ ಮಾಡಿಕೊಂಡಿದ್ದರಿಂದ ಆಕೆಯಲ್ಲಿದ್ದ ಆತ್ಮವಿಶ್ವಾಸ ಆಕೆಗೆ ನಟನೆ ಕಡೆ ಮುಖ ಮಾಡುವಂತೆ ಪ್ರೋತ್ಸಾಹಿಸಿತು. ಇದೇ ಆಲೋಚನೆಯನ್ನು ಗಟ್ಟಿಯಿಟ್ಟುಕೊಂಡ ನಟಿ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಬಿಳಿ ಹೆಂಡ್ತಿ ಎಂಬ ಧಾರಾವಾಹಿಯಲ್ಲಿ ರಮ್ಯಾ ಎಂಬ ಪಾತ್ರದ ಮೂಲಕ ಕಿರುತೆರೆಗೆ ಕಾಲಿಟ್ಟರು.

ಮೊದಲ ಧಾರಾವಾಹಿಯಲ್ಲಿಯೇ ಖಳನಾಯಕಿ
ಮೊದಲ ಧಾರಾವಾಹಿಯಲ್ಲೇ ಖಳನಾಯಕಿ ಆಗಿ ಕಾಣಿಸಿಕೊಂಡ ಈಕೆ ಮುಂದೆ 'ರಾಧಾ ರಮಣ' ಎಂಬ ಧಾರವಾಹಿಯಲ್ಲಿ ನಾಯಕನ ತಂಗಿಯಾಗಿ ನಟಿಸಿದರು. ಇದು ಪಾಸಿಟಿವ್ ಪಾತ್ರವಾಗಿತ್ತು. ಹಾಗಾಗಿ ಏಕಕಾಲದಲ್ಲಿ ನೆಗೆಟಿವ್ ಹಾಗೂ ಪಾಸಿಟಿವ್ ಪಾತ್ರಗಳನ್ನು ನಿಭಾಯಿಸಿರುವ ಹೆಗ್ಗಳಿಕೆಗೂ ಈಕೆ ಪಾತ್ರರಾಗಿದ್ದರು.

ಅನುಷ್ಕಾ ಪಾತ್ರದಲ್ಲಿ ಫೇಮಸ್ಸು!
ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ನಾಯಕಿ' ಎಂಬ ಧಾರಾವಾಹಿಯಲ್ಲಿಯೂ ಖಳನಾಯಕಿಯಾಗಿ ಅಭಿನಯಿಸಿದ್ದ ಈಕೆ ಸೌಜನ್ಯ ಎಂಬ ಪಾತ್ರಕ್ಕೆ ಅದ್ಭುತವಾಗಿ ಜೀವ ತುಂಬಿ ತಮ್ಮ ಅಭಿನಯ ಸಾಮರ್ಥ್ಯವನ್ನು ತೋರಿಸಿದರು. ದಿಲೀಪ್ ರಾಜ್ ಅವರ ನಿರ್ದೇಶನದಲ್ಲಿ ಅದ್ಭುತವಾಗಿ ಮೂಡಿ ಬರುತ್ತಿರುವ 'ಪಾರು' ಧಾರಾವಾಹಿಯಲ್ಲಿ ಅನುಷ್ಕಾ ಎಂಬ ಖಳನಾಯಕಿ ಪಾತ್ರಕ್ಕೆ ಜೀವ ತುಂಬಿದ್ದ ಮಾನ್ಸಿ ಜೋಶಿ ಜೀ ಕುಟುಂಬ ಅವಾರ್ಡ್ಸ್ ನಲ್ಲಿ ಬೆಸ್ಟ್ ವಿಲನ್ ಅವಾರ್ಡ್ ಅನ್ನು ತಮ್ಮ ಮುಡಿಗೇರಿಸಿಕೊಂಡಿದ್ದರು.

ಕೊನೆಯದಾಗಿ ನಟಿಸಿದ್ದು ಜಿಲ್ಲಾಧಿಕಾರಿಯಾಗಿ!
'ಪಾರು' ಧಾರಾವಾಹಿಯಲ್ಲಿ ಒಂದು ವರ್ಷದ ಹಿಂದೆ ಅನುಷ್ಕಾ ಪಾತ್ರ ಮುಕ್ತಾಯಗೊಳಿಸಿದ ನಂತರ ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಅಣ್ಣ ತಂಗಿ' ಧಾರಾವಾಹಿಯಲ್ಲಿ ಜಿಲ್ಲಾಧಿಕಾರಿ ಪಾತ್ರಕ್ಕೆ ಜೀವ ತುಂಬಿದ್ದರು. ತದ ನಂತರ ಕಾರಣಾಂತರಗಳಿಂದ ಆ ಪಾತ್ರದಿಂದ ಹೊರಬಂದ ಮಾನ್ಸಿ ಜೋಶಿ ಪರಭಾಷೆಯ ಕಿರುತೆರೆಯಲ್ಲಿ ಬ್ಯುಸಿಯಾಗಿದ್ದಾರೆ.


Click it and Unblock the Notifications











