ರಮ್ಯಾ ಸಾಧನೆ ಏನು ಗೊತ್ತಾ? ಕೊಂಚ ಇಂಗ್ಲೀಷ್ ಜಾಸ್ತಿ ಆಯ್ತು ಅಷ್ಟೇ.. ರಮ್ಯಾ ಪರ ನಿಂತ ಅಪ್ಪು ಫ್ಯಾನ್ಸ್
ವೀಕೆಂಡ್ ವಿತ್ ರಮೇಶ್ ಸೀಸನ್-5 ಅದ್ಧೂರಿಯಾಗಿ ಶುರುವಾಗಿದೆ. ಮೊದಲ ಎಪಿಸೋಡ್‌ನಲ್ಲಿ ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ ಅತಿಥಿಯಾಗಿ ಆಗಮಿಸಿದ್ದರು. ಅವರ ಬಾಲ್ಯ, ಊಟಿಯಲ್ಲಿ ಓದಿದ್ದು, ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದು, ಈ ಹಾದಿಯಲ್ಲಿ ಅವರರಿಗೆ ಸಹಾಯ ಮಾಡಿದವರ ಪರಿಚಯವಾಗಿದೆ. ಆದರೆ ಶೋನಲ್ಲಿ ರಮ್ಯಾ ಹೆಚ್ಚು ಇಂಗ್ಲೀಷ್ ಮಾತನಾಡಿದರು ಎನ್ನುವ ಕಾರಣಕ್ಕೆ ಸಖತ್ ಟ್ರೋಲ್ ಆಗ್ತಿದ್ದಾರೆ.
ಇದು ಕನ್ನಡ ಕಾರ್ಯಕ್ರಮನಾ ಅಥವಾ ಇಂಗ್ಲೀಷ್ ಕಾರ್ಯಕ್ರಮನಾ ಎಂದು ಕೇಳುತ್ತಿದ್ದಾರೆ. ನೆಟ್ಟಿಗರು ಮನಸೋ ಇಚ್ಛೆ ಟ್ರೋಲ್ ಮಾಡುತ್ತಿದ್ದಾರೆ. ಇವರಿಗಿಂತ ಅವರನ್ನು ಕರೆಸಬಹುದಿತ್ತು. ರಮ್ಯಾ ಅವರಿಗೆ ಇಂಗ್ಲೀಷ್ ಬರುತ್ತೆ ಅಂತ ಗೊತ್ತು. ಹಾಗಂತ ಇಂಗ್ಲೀಷ್‌ನಲ್ಲೇ ಮಾತನಾಡಿದರೆ ಹೇಗೆ? ಇತ್ತೀಚೆಗೆ ಜೀ ಕನ್ನಡ ವಾಹಿನಿ ಮುಖ್ಯಸ್ಯ ರಾಘವೇಂದ್ರ ಹುಣಸೂರು ಯೂಟ್ಯೂಬರ್ ಡಾ. ಬ್ರೋನ ಶೋಗೆ ಕರೆಸೋಕೆ ಆಗೊಲ್ಲ ಎಂದಿದ್ದರು. ಪ್ರಶ್ನೆ ಕೇಳಿದ ಪತ್ರಕರ್ತನನ್ನು ಉದ್ದೇಶಿಸಿ ಡಾ. ಬ್ರೋ ಯಾರು ಅಂತ ನಿಮಗೆ ಗೊತ್ತು ನನಗೆ ಗೊತ್ತು ನಿಮ್ಮ ಅಜ್ಜಿ, ಅಮ್ಮನಿಗೆ ಗೊತ್ತಿಲ್ಲ ಎಂದಿದ್ದರು.

ರಮ್ಯಾ ಭಾಗವಹಿಸಿದ ಎಪಿಸೋಡ್ ನೋಡಿದ ಮೇಲೆ ರಾಘವೇಂದ್ರ ಹುಣಸೂರು ಹೇಳಿಕೆಯ ಹಿನ್ನೆಲೆಯಲ್ಲಿ "ನಮ್ಮ ಅಮ್ಮ, ಅಜ್ಜಿಗೆ ಇಂಗ್ಲೀಷ್ ಬರಲ್ಲ. ಯಾವಾಗ ಶೋ ಕನ್ನಡಕ್ಕೆ ಡಬ್ ಮಾಡಿ ಪ್ರಸಾರ ಮಾಡುತ್ತೀರಾ ಹೇಳಿ" ಅಂತೆಲ್ಲಾ ಕೇಳುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಇದೇ ವಿಚಾರ ಹೆಚ್ಚು ಸದ್ದು ಮಾಡ್ತಿದೆ. ಆದರೆ ಅಭಿಮಾನಿಗಳು ನಟಿ ರಮ್ಯಾ ಬೆಂಬಲಕ್ಕೆ ನಿಂತಿದ್ದಾರೆ. ಅಪ್ಪು ಅಭಿಮಾನಿಗಳು ಕೂಡ ರಮ್ಯಾ ಅವರ ಸಾಧನೆ ನೋಡಿ ಸುಖಾ ಸುಮ್ಮನೆ ಟ್ರೋಲ್ ಮಾಡಬೇಡಿ ಎಂದು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಿದ್ದಾರೆ.
ಅಪ್ಪು ಡೈನಾಸ್ಟಿ ಟ್ವಿಟರ್ ಪೇಜ್‌ನಲ್ಲಿ "ಕನ್ನಡ ಚಿತ್ರರಂಗಕ್ಕೆ ರಮ್ಯಾ ಅವರ ಕೊಡುಗೆ ಏನು, ಸಾಧನೆ ಏನು ಸ್ಯಾಂಡಲ್‌ವುಡ್ ಕ್ವೀನ್ ಆಗಿ ಬೆಳೆದಿದ್ದು ಹೇಗೆ ಅನ್ನೋದ್ರು ಬಗ್ಗೆ ಯಾವನು ಮಾತಾಡ್ತಿಲ್ಲ, ನಮ್ ಅಜ್ಜಿಗೆ ಅರ್ಥ ಆಗ್ಲಿಲ್ಲ, ನಮ್ ಅಮ್ಮಗೆ ಅರ್ಥ ಆಗ್ಲಿಲ್ಲ ಅಂತ ಡೈಲಾಗ್ ಹೊಡಿತ್ತಿದ್ದೀರಾ ಇಂಗ್ಲೀಷ್ ಸ್ವಲ್ಪ ಜಾಸ್ತಿ ಬಳಸಿದ್ದಾರೆ. ಅದು ಒಂದರಿಂದಲೇ ಎಲ್ಲವನ್ನು ಅಳಿಯೋಕೆ ಆಗಲ್ಲ" ಎಂದು ಬರೆದುಕೊಂಡಿದ್ದಾರೆ.

'ಅಭಿ' ಸಿನಿಮಾ ಮೂಲಕ ಚಿತ್ರರಂಗಕ್ಕೆ ಬಂದ ನಟಿ ರಮ್ಯಾ, ಮುಂದೆ 30ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಚಿತ್ರರಂಗದಲ್ಲಿ ಸಿಕ್ಕ ಜನಪ್ರಿಯತೆ ಬಳಸಿಕೊಂಡು ಮುಂದೆ ರಾಜಕೀಯರಂಗಕ್ಕೂ ಧುಮುಕಿದರು. ಮಂಡ್ಯ ಸಂಸದೆಯಾಗಿ ಗೆದ್ದು ಕೆಲವು ತಿಂಗಳು ಸೇವೆ ಸಲ್ಲಿಸಿದರು. ಮಂಡ್ಯದಲ್ಲಿ ಮತ್ತೆ ಸೋತು ದೆಹಲಿ ಸೇರಿಕೊಂಡಿದ್ದರು. ಕಾಂಗ್ರೆಸ್ ಸೋಶಿಯಲ್ ಮೀಡಿಯಾ ಮುಖ್ಯಸ್ಥೆಯಾಗಿ ಕೆಲ ದಿನ ಕೆಲಸ ಮಾಡಿದರು. ಇದೀಗ ಎಲ್ಲವನ್ನು ಬಿಟ್ಟು ಮತ್ತೆ ಚಿತ್ರರಂಗಕ್ಕೆ ವಾಪಸ್ ಆಗಿದ್ದಾರೆ.
ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಹೀನಾಯವಾಗಿ ಸೋಲುಂಡ ಬಳಿಕ ರಮ್ಯಾ ಸೈಲೆಂಟ್ ಆಗಿದ್ದರು. ಆಕೆ ಮತ್ತೆ ಚಿತ್ರರಂಗಕ್ಕೆ ಬರೋಲ್ಲ ಅಂತಲೇ ಎಲ್ಲರು ಅಂದುಕೊಂಡಿದ್ದರು. ಆದರೆ ಅಭಿಮಾನಿಗಳು ಮಾತ್ರ ನೆಚ್ಚಿನ ನಟಿಯನ್ನು ತೆರೆಮೇಲೆ ನೋಡಲು ಕಾಯುತ್ತಿದ್ದರು. ಇತ್ತೀಚೆಗಷ್ಟೆ 'ಆಪಲ್ ಬಾಕ್ಸ್' ಹೆಸರಿನಲ್ಲಿ ಸಿನಿಮಾ ನಿರ್ಮಾಣ ಸಂಸ್ಥೆ ಹುಟ್ಟುಹಾಕಿ ಚಿತ್ರರಂಗಕ್ಕೆ ಕಂಬ್ಯಾಕ್ ಮಾಡಿದ್ದಾರೆ. ಇನ್ನು ಕೆಆರ್‌ಜಿ ಸ್ಟುಡಿಯೋಸ್ ಸಂಸ್ಥೆ ನಿರ್ಮಾಣದ 'ಉತ್ತರಕಾಂಡ' ಚಿತ್ರದಲ್ಲಿ ಧನಂಜಯ ಜೋಡಿಯಾಗಿ ನಟಿಸುತ್ತಿದ್ದಾರೆ.
ಒಟ್ನಲ್ಲಿ ವೀಕೆಂಡ್ ವಿತ್ ರಮೇಶ್ ಸೀಸನ್ ಮತ್ತೆ ಶುರುವಾಗುತ್ತಿದೆ ಎಂದಾಗ ವೀಕ್ಷಕರ ನಿರೀಕ್ಷೆ ಹೆಚ್ಚಾಗಿತ್ತು. ಕಾರ್ಯಕ್ರಮದ ಮೊದಲ ಅತಿಥಿ ರಮ್ಯಾ ಎಂದಾಗ ನಿರೀಕ್ಷೆ ದುಪ್ಪಟ್ಟಾಗಿತ್ತು. ಆದರೆ ಆಕೆ ಅತಿಯಾಗಿ ಇಂಗ್ಲೀಷ್‌ನಲ್ಲಿ ಮಾತನಾಡಿದ್ದು ಬಹುತೇಕರಿಗೆ ಇಷ್ಟವಾಗಲಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಆ ಬಗ್ಗೆ ತಮ್ಮ ಬೇಸರ ವ್ಯಕ್ತಪಡಿಸುತ್ತಿದ್ದಾರೆ.


Click it and Unblock the Notifications











