'ಕೆ.ಜಿ.ಎಫ್ 2' ಸಿನಿಮಾದಲ್ಲಿ ಪೊಲೀಸ್ ಅಧಿಕಾರಿಯಾಗಿ ನಟಿಸಿದ್ದ ನಟ ಈಗ ಕಿರುತೆರೆಯಲ್ಲಿ ಬ್ಯುಸಿ; ಯಾರಿವರು?
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿಗಳ ಪೈಕಿ 'ಶ್ರೀರಸ್ತು ಶುಭಮಸ್ತು' ಧಾರಾವಾಹಿಯೂ ಒಂದು. 'ಶ್ರೀರಸ್ತು ಶುಭಮಸ್ತು' ಧಾರಾವಾಹಿಯು ವಿಭಿನ್ನ ಕಥಾ ಹಂದರ ಮಾತ್ರವಲ್ಲ, ಪಾತ್ರವರ್ಗದ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆಯುತ್ತಿದೆ. ಈ ಧಾರಾವಾಹಿಯಲ್ಲಿ ಅವಿನಾಶ್ ಆಗಿ ಅಭಿನಯಿಸುತ್ತಿರುವ ಹ್ಯಾಂಡ್ ಸಮ್ ಹುಡುಗನ ಹೆಸರು ಅರ್ಫತ್ ಶರೀಫ್.
ಬ್ಯುಸಿನೆಸ್ ಮ್ಯಾನ್ ಅವಿನಾಶ್ ಆಗಿ ಕಿರುತೆರೆಯಲ್ಲಿ ಮೋಡಿ ಮಾಡುತ್ತಿರುವ ಅರ್ಫತ್ ಶರೀಫ್ ತನ್ನ ನಟನೆಯ ಮೂಲಕ ಗುರುತಿಸಿಕೊಂಡಿರುವ ಹುಡುಗ. ಪಕ್ಕಾ ಫ್ಯಾಮಿಲಿಮ್ಯಾನ್ ಆಗಿರುವ ಅವಿನಾಶ್‌ಗೆ ಮಡದಿ ಪೂರ್ಣಿಯ ಮೇಲೆ ವಿಪರೀತ ಪ್ರೀತಿ. ಆಕೆಯೇ ಇವನ ಜೀವ. ತನ್ನ ತಾಯಿಯ ಸಾವಿಗೆ ತಂದೆ ಮಾಧವನೇ ಕಾರಣ ಎಂದು ನಂಬಿದ್ದ ಅವಿನಾಶ್‌ಗೆ ಮಾಧವನನ್ನು ಕಂಡರೆ ವಿಪರೀತ ಕೋಪವಿತ್ತು.

ಮಾಧವನನ್ನು ಮದುವೆಯಾದ ತುಳಸಿಯನ್ನು ಕೂಡಾ ಕಂಡರೆ ಈತನಿಗೆ ಆಗುತ್ತಿರಲಿಲ್ಲ. ಆದರೆ ಈಗ ವಾಸ್ತವದ ಅರಿವಾಗಿದೆ. ಮಾಧವ ಹಾಗೂ ತುಳಸಿಯನ್ನು ಈತ ಅಪ್ಪ ಅಮ್ಮ ಎಂದು ಒಪ್ಪಿಕೊಂಡಾಗಿದೆ. ಮನೆಯ ಹಿರಿಮಗ ಆಗಿರುವ ಅವಿನಾಶ್ ತಮ್ಮ ಅಭಿಯನ್ನು ತುಂಬಾ ಪ್ರೀತಿಸುತ್ತಾನೆ. ಚಿಕ್ಕಪ್ಪ, ಚಿಕ್ಕಮ್ಮ, ತಂಗಿ ವಿಧಿಯ ಜೊತೆಗೆ ತುಳಸಿಯ ಮಗ ಸಮರ್ಥ್‌ನನ್ನು ಕೂಡಾ ಈತ ಪ್ರೀತಿಸುತ್ತಾನೆ. ಒಟ್ಟಿನಲ್ಲಿ ಮುದ್ದಾದ ನಟನೆಯ ಮೂಲಕ ಕಿರುತೆರೆಯಲ್ಲಿ ಬ್ಯುಸಿಯಾಗಿರುವ ಅರ್ಫತ್ ಅವರಿಗೆ ಇದು ಎರಡನೇ ಧಾರಾವಾಹಿ ಕೂಡ ಹೌದು.
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ನನ್ನರಸಿ ರಾಧೆ' ಧಾರಾವಾಹಿಯ ಮೂಲಕ ಕಿರುತೆರೆಗೆ ಕಾಲಿಟ್ಟಿದ್ದರು ಅರ್ಫತ್ ಶರೀಫ್. 'ನನ್ನರಸಿ ರಾಧೆ' ಧಾರಾವಾಹಿಯಲ್ಲಿ ನಾಯಕಿ ಇಂಚರಾಳ ಮಾವನ ಮಗ ಆಗಿ ಕಾಣಿಸಿಕೊಂಡಿದ್ದ ಅರ್ಫತ್ ಶರೀಫ್ ಖಳನಾಯಕರಾಗಿ ತೆರೆಯ ಮೇಲೆ ಮೋಡಿ ಮಾಡಿದ್ದರು. ಮೊದಲ ಧಾರಾವಾಹಿಯಲ್ಲಿಯೇ ವಿಲನ್ ಆಗಿ ಅಬ್ಬರಿಸಿದ ಅರ್ಫತ್ ಶರೀಫ್ ಈಗಾಗಲೇ ಸ್ಯಾಂಡಲ್‌ವುಡ್‌ನಲ್ಲಿ ಮಿಂಚಿದ ಪ್ರತಿಭೆ.

ಕನ್ನಡ ಸಿನಿಮಾ ರಂಗದಲ್ಲಿ ಹೊಸ ಭಾಷ್ಯವನ್ನೇ ಬರೆದ ಸಿನಿಮಾಗಳ ಪೈಕಿ 'ಕೆ.ಜಿ.ಎಫ್' ಕೂಡಾ ಒಂದು. ರಾಕಿಂಗ್ ಸ್ಟಾರ್ ಯಶ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ 'ಕೆ.ಜಿ.ಎಫ್ ಚಾಪ್ಟರ್ 2ರಲ್ಲಿ ಪೊಲೀಸ್ ಅಧಿಕಾರಿಯಾಗಿ ಇವರು ಕಾಣಿಸಿಕೊಂಡಿದ್ದರು. ಆ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಕಮಾಲ್ ಮಾಡಿದ್ದರು ಅರ್ಫತ್ ಶರೀಫ್. ಇದರ ಜೊತೆಗೆ ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರವನ್ನೊಳಗೊಂಡ 'ಕಥಾಲೇಖನ' ಸಿನಿಮಾದಲ್ಲಿಯೂ ಇವರು ಅಭಿನಯಿಸಿದ್ದರು.
ಕಿರುತೆರೆ, ಹಿರಿತೆರೆಯಲ್ಲಿಯೂ ಗುರುತಿಸಿಕೊಂಡಿರುವ ಅರ್ಫತ್ ಶರೀಫ್ ಕಿರುಚಿತ್ರದಲ್ಲಿಯೂ ನಟಿಸಿರುವ ಪ್ರತಿಭೆ. 'ಚಾರ್ಕೋಲ್' ಎನ್ನುವ ಕಿರುಚಿತ್ರದಲ್ಲಿ ಬಣ್ಣ ಹಚ್ಚಿರುವ ಇವರು ಮಾಡೆಲಿಂಗ್ ಜಗತ್ತಿನಲ್ಲಿಯೂ ಸಣ್ಣ ಮಟ್ಟಿಗೆ ಸದ್ದು ಮಾಡಿದ್ದಾರೆ. ಜೊತೆಗೆ ಒಂದಷ್ಟು ಜಾಹೀರಾತುಗಳಲ್ಲಿಯೂ ರೂಪದರ್ಶಿಯಾಗಿ ಇವರು ಮಿಂಚಿದ್ದಾರೆ. ಟೊಯೋಟಾ, ಪೈಂಟ್, ಟಿವಿಎಸ್ ಹೀಗೆ ಕೆಲವೊಂದು ಜಾಹೀರಾತುಗಳಲ್ಲಿ ಅರ್ಫತ್ ಶರೀಫ್ ಕಾಣಿಸಿಕೊಂಡಿದ್ದಾರೆ.


Click it and Unblock the Notifications











