ಸ್ನೇಹಾ ಪಾತ್ರವನ್ನು ಕೊಂದಿದ್ದೇಕೆ? ಮತ್ತೊಬ್ಬರನ್ನು ಯಾಕೆ ಆಯ್ಕೆ ಮಾಡಲಿಲ್ಲ?
ಕನ್ನಡ ಕಿರುತೆರೆ ವಾಹಿನಿಯಲ್ಲಿ ಹಲವು ಜನಪ್ರಿಯ ಧಾರಾವಾಹಿಗಳು ಪ್ರಸಾರವಾಗುತ್ತಿವೆ. ಅದರಲ್ಲಿ ಜೀ ಕನ್ನಡದಲ್ಲಿ ಬರುವ 'ಪುಟ್ಟಕ್ಕನ ಮಕ್ಕಳು' ವೀಕ್ಷಕರ ಫೇವರಿಟ್. ಟಿಆರ್‌ಪಿ ವಿಚಾರದಲ್ಲೂ ವರ್ಷಗಳ ಕಾಲ ಈ ಧಾರಾವಾಹಿ ಮೊದಲ ಸ್ಥಾನದಲ್ಲಿತ್ತು.
ಪುಟ್ಟಕ್ಕ ಆಗಿ ಹಿರಿಯ ನಟಿ ಉಮಾಶ್ರೀ ನಟನೆ ಮೋಡಿ ಮಾಡುತ್ತದೆ. ಪುಟ್ಟಕ್ಕನಿಗೆ ಸ್ನೇಹಾ, ಸಹನಾ ಹಾಗೂ ಸುಮಾ ಎಂಬ ಮೂವರು ಹೆಣ್ಣು ಮಕ್ಕಳು. ಗಂಡ ಬಿಟ್ಟು ಹೋದಮೇಲೆ ಮೆಸ್ ನಡೆಸಿ ಮಕ್ಕಳನ್ನು ಸಾಕಿ ಸಲಹಿದವಳು ಪುಟ್ಟಕ್ಕ. ಇಬ್ಬರು ಸಹನಾ, ಸ್ನೇಹಾಗೆ ಮದುವೆ ಕೂಡ ಆಗಿದೆ.

ಸ್ನೇಹಾ ಪಾತ್ರದಲ್ಲಿ ಸಂಜನಾ ಬುರ್ಲಿ ನಟಿಸುತ್ತಿದ್ದರು. ಕಂಠಿ ಹಾಗೂ ಸ್ನೇಹಾ ಜೋಡಿ ವೀಕ್ಷಕರ ಮನಗೆದ್ದಿತ್ತು. ಆದರೆ ಇತ್ತೀಚೆಗೆ ದಿಢೀರನ್ ಸ್ನೇಹಾ ಪಾತ್ರಕ್ಕೆ ಬ್ರೇಕ್ ಹಾಕಲಾಗಿತ್ತು. ಅಪಘಾತದಲ್ಲಿ ಆಕೆಯ ಸತ್ತಂತೆ ತೋರಿಸಿ ಪಾತ್ರವನ್ನು ಮೊಟಕುಗೊಳಿಸಲಾಗಿತ್ತು.
ಜಿಲ್ಲಾಧಿಕಾರಿಯಾಗಿದ್ದ ಸ್ನೇಹಾ
ಚಿಕ್ಕಂದಿನಿಂದಲೂ ಸ್ನೇಹಾಗೆ ತಾನು ಜಿಲ್ಲಾಧಿಕಾರಿಯಾಗಬೇಕು ಎನ್ನುವ ಆಸೆ ಇರುತ್ತದೆ. ಅದರಂತೆ ಆಕೆ ತನ್ನ ಕನಸು ಈಡೇರಿಸಿಕೊಂಡಿದ್ದಳು. ಜಿಲ್ಲಾಧಿಕಾರಿಯಾದ ಬಳಿಕ ಸಂಕಷ್ಟಕ್ಕೆ ಸಿಲುಕಿದ್ದ ಅತ್ತೆ ಬಂಗಾರಮ್ಮನನ್ನು ರಕ್ಷಿಸಿದ್ದಳು. ಆದರೆ ಬಂಗಾರಮ್ಮ ಸಹೋದರಿ ಸಿಂಗಾರಮ್ಮ ಕುತಂತ್ರದಿಂದ ಆಕೆಯನ್ನು ಸಾಯಿಸಿದ್ದಳು. ಅಪಘಾತದಲ್ಲಿ ಸ್ನೇಹಾ ಸತ್ತಂತೆ ಬಿಂಬಿಸಿದ್ದಳು.

ಸ್ನೇಹಾ ಇಲ್ಲದ್ದಕ್ಕೆ ವೀಕ್ಷಕರ ಬೇಸರ
ಇದ್ದಕ್ಕಿದಂತೆ ಸ್ನೇಹಾ ಪಾತ್ರವನ್ನು ದುರಂತ ಅಂತ್ಯ ಕಾಣುವಂತೆ ಮಾಡಿದ್ದು ವೀಕ್ಷಕರಿಗೆ ಇಷ್ಟವಾಗಲಿಲ್ಲ. ಸಂಜನಾ ಬುರ್ಲಿ ಚೆನ್ನಾಗಿ ನಟಿಸುತ್ತಿದ್ದರು. ಪುಟ್ಟಕ್ಕನ ಮಕ್ಕಳು ಧಾರಾವಾಹಿಗೆ ಆ ಪಾತ್ರ ಬಹಳ ಮುಖ್ಯವಾಗಿತ್ತು. ಅದನ್ನು ಕೊಂದಿದ್ದು ತಪ್ಪು ಎಂದು ಬೇಸರ ಹೊರ ಹಾಕಿದ್ದರು. ಆದರೆ ಸಂಜನಾ ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ಹೋಗಲು ಮುಂದಾಗಿದ್ದಾರೆ. ಹಾಗಾಗಿ ಆ ಪಾತ್ರವನ್ನು ಮುಗಿಸಲು ಈ ರೀತಿ ತೋರಿಸಲಾಯಿತು ಎನ್ನುವುದು ಈಗ ಬಹಿರಂಗವಾಗಿದೆ.
ಆರೂರು ಜಗದೀಶ್ ಪ್ರತಿಕ್ರಿಯೆ
ಸ್ನೇಹಾ ಪಾತ್ರದಲ್ಲಿ ನಟಿಸಿ ಹೊರಬರುತ್ತಿರುವ ಬಗ್ಗೆ ಸಂಜನಾ ಈಗಾಗಲೇ ಪೋಸ್ಟ್ ಮಾಡಿ ಮಾಹಿತಿ ನೀಡಿದ್ದಾರೆ. ಆದರೆ ಇದೇ ವಿಚಾರದ ಬಗ್ಗೆ 'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯ ಪ್ರಧಾನ ನಿರ್ದೇಶಕ ಆರೂರು ಜಗದೀಶ್ ಈಗ ಪ್ರತಿಕ್ರಿಯಿಸಿದ್ದಾರೆ. ಪಂಚಮಿ ಟಾಕ್ಸ್ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಮಾತನಾಡಿದ್ದಾರೆ. ನಾವು ಸಂಜನಾ ಅವರನ್ನು ಒಪ್ಪಿಸಲು ಪ್ರಯತ್ನಿಸಿದೆವು. ಆಕೆ ಒಪ್ಪಲಿಲ್ಲ, ವಿದ್ಯಾಭ್ಯಾಸ ಕಾರಣಕ್ಕೆ ಧಾರಾವಾಹಿಯಿಂದ ಹೊರ ಬಂದರು ಎಂದಿದ್ದಾರೆ.
ಬೇರೆ ಕಲಾವಿದರು ಸಿಗಲಿಲ್ಲವೇ?
ಸಾಮಾನ್ಯವಾಗಿ ಧಾರಾವಾಹಿಗಳಲ್ಲಿ ಕೆಲವೊಮ್ಮೆ ಪಾತ್ರಧಾರಿಗಳು ಬದಲಾಗುತ್ತಾರೆ. ಅಂದರೆ ಒಂದು ಪಾತ್ರವನ್ನು ನಟಿಸುತ್ತಿದ್ದ ಕಲಾವಿದರು ಹೊರಬಂದಾಗ ಆ ಪಾತ್ರಕ್ಕೆ ಬೇರೊಬ್ಬರನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಸ್ನೇಹಾ ಪಾತ್ರವನ್ನು ಸಂಜನಾ ಬದಲು ಬೇರೊಬ್ಬ ನಟಿ ಮಾಡಬಹುದಿತ್ತಲ್ಲ. ಅದಕ್ಕಾಗಿ ಪಾತ್ರವನ್ನೇ ಕೊಂದಿದ್ಯಾಕೆ? ಎಂದು ಕೆಲವರು ಕೇಳಿದ್ದರು. ಈ ಬಗ್ಗೆ ಜಗದೀಶ್ ಉತ್ತರಿಸಿದ್ದಾರೆ.
ಹೋಲಿಕೆ ಬೇಡ
ಯಾವುದೇ ಪಾತ್ರ ಸತ್ತು ಹೊಸ ಪಾತ್ರ ಬಂದರೆ ವೀಕ್ಷಕರು ನೋಡುತ್ತಾರೆ. ಹೊಸದಾಗಿ ಪಾತ್ರವನ್ನು ಒಪ್ಪಿಕೊಳ್ಳುತ್ತಾರೆ. ಆದರೆ ಪಾತ್ರಧಾರಿಯನ್ನು ಬದಲಿಸಿದರೆ ಸಹಜವಾಗಿಯೇ ಹೋಲಿಕೆ ಮಾಡಲು ಆರಂಭಿಸುತ್ತಾರೆ. ಸ್ನೇಹಾ ಪಾತ್ರದಲ್ಲಿ ಸಂಜನಾ ಚೆನ್ನಾಗಿ ನಟಿಸ್ತಿದ್ಲು, ಹೊಸ ನಟಿ ಚೆನ್ನಾಗಿಲ್ಲ, ಚೆನ್ನಾಗಿ ನಟಿಸ್ತಿಲ್ಲ, ಕಂಠಿಗೆ ಜೋಡಿ ಸರಿಯಾಗಲಿಲ್ಲ ಎನ್ನುವ ಚರ್ಚೆ ನಡೆಯುತ್ತದೆ. ಇದು ಎಲ್ಲರಿಗೂ ಬೇಸರ. ವೀಕ್ಷಕರನ್ನು ಒಪ್ಪಿಸುವುದಕ್ಕೆ ನಾಲ್ಕೈದು ತಿಂಗಳು ಬೇಕು. ಹೀಗೆ ಕಲಾವಿದರನ್ನು ಬದಲಿಸಿದ್ದಾಗ ದೊಡ್ಡದಾಗಿ ಸಕ್ಸಸ್ ಆಗಲಿಲ್ಲ. ಹಾಗಾಗಿ ಆ ರಿಸ್ಕ್ ಬೇಡ ಎಂದು ಈ ನಿರ್ಧಾರಕ್ಕೆ ಬಂದೆವು ಎಂದ ಜಗದೀಶ್ ತಿಳಿಸಿದ್ದಾರೆ.


Click it and Unblock the Notifications











