'ಜೊತೆ ಜೊತೆಯಲ್ಲಿ' ಧಾರಾವಾಹಿಯಲ್ಲಿ 'ನಿನ್ನಿಂದಲೇ' ನಾಯಕಿ: ಎರಿಕಾ ಎಂಟ್ರಿ ಬಗ್ಗೆ ನಿರ್ದೇಶಕರು ಹೇಳಿದ್ದೇನು?
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟನೆಯ ನಿನ್ನಿಂದಲೇ ಸಿನಿಮಾ ಮೂಲಕ ಚಂದನವನಕ್ಕೆ ಕಾಲಿಟ್ಟ ನಟಿ ಎರಿಕಾ ಫರ್ನಾಂಡಿಸ್ ಇದೀಗ ಕನ್ನಡ ಕಿರುತೆರೆಗೆ ಎಂಟ್ರಿ ಕೊಡಲಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ಹೌದು, ಎರಿಕಾ ಕನ್ನಡದ ಪ್ರಸಿದ್ಧ ಧಾರಾವಾಹಿಗಳಲ್ಲಿ ಒಂದಾಗಿರುವ ಜೊತೆ ಜೊತೆಯಲ್ಲಿ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.
ಈ ಧಾರಾವಾಹಿಯಲ್ಲಿ ಎರಿಕಾ ರಾಜನಂದಿನಿ ಎನ್ನುವ ಪಾತ್ರದಲ್ಲಿ ನಟಿಸಲಿದ್ದಾರೆ ಎನ್ನುವ ಸುದ್ದಿ ಕೇಳಿಬರುತ್ತಿದೆ. ರಾಜನಂದಿನಿ ಧಾರಾವಾಹಿಯ ನಾಯಕ ಆರ್ಯವರ್ಧನ್ ಮೊದಲ ಪತ್ನಿಯ ಪಾತ್ರ. ಆರ್ಯವರ್ಧನ್ ಪತ್ನಿಯಾಗಿ ಎರಿಕಾ ಕನ್ನಡ ಕಿರುತೆರೆ ಪ್ರೇಕ್ಷಕರ ಮುಂದೆ ಬರಲಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿದೆ.
ಆದರೆ ಈ ಬಗ್ಗೆ ನಿರ್ದೇಶಕ ಆರೂರು ಜಗದೀಶ್ ಟೈಮ್ಸ್ ಆಫ್ ಇಂಡಿಯಾಗೆ ಪ್ರತಿಕ್ರಿಯೆ ನೀಡಿದ್ದು, 'ನಟಿ ಎರಿಕಾ ಫರ್ನಾಂಡಿಸ್ ನಟಿಸುತ್ತಿದ್ದಾರೆ ಎನ್ನುವುದು ವದಂತಿ ಅಷ್ಟೆ. ರಾಜನಂದಿನಿ ಪಾತ್ರಕ್ಕೆ ನಾಯಕಿಯನ್ನು ಇನ್ನೂ ಆಯ್ಕೆ ಮಾಡಿಲ್ಲ. ಒಂದು ಅಥವಾ ಎರಡು ತಿಂಗಳಲ್ಲಿ ಈ ಪಾತ್ರ ತೆರೆಮೇಲೆ ಬರಲಿದೆ. ಕಥೆಗೆ ಪ್ರಮುಖ ತಿರುವು ನೀಡುವ ಪಾತ್ರವಿದು. ಸದ್ಯ ಈ ಪಾತ್ರಕ್ಕೆ ಮೂವರು ನಟಿಯರನ್ನು ಆಯ್ಕೆ ಮಾಡಿದ್ದೀವಿ. ಇದರಲ್ಲಿ ಒಬ್ಬರನ್ನು ಫೈನಲ್ ಮಾಡುತ್ತೇವೆ' ಎಂದು ಹೇಳಿದ್ದಾರೆ.

ಎರಿಕಾ ಅವರನ್ನು ಆರ್ಯವರ್ಧನ್ ಜೊತೆ ಜೊತೆ ಜೊತೆಯಲ್ಲಿ ಧಾರಾವಾಹಿಯಲ್ಲಿ ನೋಡಬಹುದು ಎಂದುಕೊಂಡಿದ್ದ ಅಭಿಮಾನಿಗಳಿಗೆ ಇದು ನಿರೀಸೆ ಮೂಡಿಸಿದೆ.
ಎರಿಕಾ ಬರಲ್ಲ ಎಂದಮೇಲೆ ರಾಜನಂದಿನಿ ಪಾತ್ರದಲ್ಲಿ ಯಾರು ಕಾಣಿಸಿಕೊಳ್ಳಲಿದ್ದಾರೆ ಎನ್ನುವುದು ಸದ್ಯದ ಕುತೂಹಲ.
ಆರ್ಯವರ್ಧನ್ ಮತ್ತು ರಾಜನಂದಿನಿ ಪಾತ್ರಗಳು ರೆಟ್ರೋ ಶೈಲಿಯಲ್ಲಿ ಇರಲಿದ್ದು, ಈಗಾಗಲೇ ಫೋಟೋಶೂಟ್ ಗೆ ಸಿದ್ಧತೆ ನಡೆಯುತ್ತಿದೆ ಎನ್ನಲಾಗುತ್ತಿದೆ. ರಾಜನಂದಿನಿ ಎಂಟ್ರಿಯಿಂದ ಧಾರಾವಾಹಿಯಲ್ಲಿ ದೊಡ್ಡ ತಿರುವು ಪಡೆದುಕೊಳ್ಳಲಿದೆ. ಕನ್ನಡ ಕಿರುತೆರೆಯಲ್ಲಿ ಹೆಚ್ಚು ಜನಪ್ರಿಯತೆ ಪಡೆದ ಧಾರಾವಾಹಿ ಜೊತೆ ಜೊತೆಯಲ್ಲಿ, ರಾಜನಂದಿನಿ ಎಂಟ್ರಿಯಿಂದ ಮತ್ತಷ್ಟು ರೋಚಕವಾಗಿರುವುದರಲ್ಲಿ ಯಾವುದೇ ಅನುಮಾನವಿಲ್ಲ.
ಇನ್ನು ನಟಿ ಎರಿಕಾ ಫರ್ನಾಂಡಿಸ್ ಕನ್ನಡ ಸಿನಿಮಾಗಳ ಜೊತೆಗೆ ತಮಿಳು ಮತ್ತು ತೆಲುಗಿನಲ್ಲೂ ಮಿಂಚಿದ್ದಾರೆ. ಸಿನಿಮಾ ಬಳಿಕ ಎರಿಕಾ ಹಿಂದಿ ಕಿರುತೆರೆಯಲ್ಲಿ ಬ್ಯುಸಿಯಾಗಿದ್ದರು. ಹಿಂದಿಯಲ್ಲಿ ಎರಿಕಾ ಎರಡು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. 2020ರಲ್ಲಿ ಹಿಂದಿ ಧಾರಾವಾಹಿ ಪ್ರಸಾರ ಮುಕ್ತಾಯವಾಗಿದೆ. ಬಳಿಕ ಎರಿಕಾ ಯಾವ ಸಿನಿಮಾದಲ್ಲಿ ನಟಿಸಲಿದ್ದಾರೆ ಎನ್ನುವುದು ಕುತೂಹಲ ಮೂಡಿಸಿದೆ.


Click it and Unblock the Notifications