Exclusive: "ಯಾರ್‍ಯಾರ ಲೆಕ್ಕಾಚಾರ ಏನಿದೆ ಗೊತ್ತಿಲ್ಲ. ಕಲಾವಿದರನ್ನು ಬದಲಿಸಲೂ ಸಿದ್ಧ": ಆರೂರು ಜಗದೀಶ್
ಕನ್ನಡದ ಜನಪ್ರಿಯ ಕಿರಿತೆರೆ ಧಾರಾವಾಹಿ 'ಜೊತೆ ಜೊತೆಯಲಿ' ಶೀಘ್ರದಲ್ಲೇ ಮುಗಿಯುತ್ತೆ ಎನ್ನುವ ಗುಸುಗುಸು ಶುರುವಾಗಿದೆ. 45 ವರ್ಷದ ವ್ಯಕ್ತಿ ಆರ್ಯವರ್ಧನ್ ಹಾಗೂ 20ರ ಅನು ಸಿರಿಮನೆ ಪ್ರೀತಿ, ಮದುವೆ ಕಥೆ ಕನ್ನಡ ಕಿರಿತೆರೆ ವೀಕ್ಷಕರ ಮನಗೆದ್ದಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಅಷ್ಟಾಗಿ ರುಚಿಸುತ್ತಿಲ್ಲ. ಇದೆಲ್ಲದರ ನಡುವೆ ಕಥೆ ಮುಗಿಯುತ್ತೆ ಎನ್ನುವ ಮಾತುಗಳು ಕೇಳಿಬರ್ತಿದೆ.
4 ವರ್ಷಗಳ ಹಿಂದೆ ಶುರುವಾದ ಈ ಮೆಗಾ ಧಾರಾವಾಹಿ ಯಶಸ್ವಿಯಾಗಿ 900ಕ್ಕೂ ಅಧಿಕ ಸಂಚಿಕೆಗಳಲ್ಲಿ ಪ್ರಸಾರವಾಗಿದೆ. ನಟ ಅನಿರುದ್ಧ್‌ಗೆ ಈ ಧಾರಾವಾಗಿ ದೊಡ್ಡ ಬ್ರೇಕ್ ಕೊಟ್ಟಿದ್ದು ಸುಳ್ಳಲ್ಲ. ಧಾರಾವಾಹಿಯ ಒನ್‌ಲೈನ್ ಸ್ಟೋರಿ ಮರಾಠಿ ಧಾರಾವಾಹಿಯಿಂದ ಪ್ರೇರಿತಗೊಂಡಿದ್ದರು ಕನ್ನಡದಲ್ಲಿ ಕಥೆಯನ್ನು ಬೇರೆ ಬೇರೆ ಆಯಾಮಗಳಲ್ಲಿ ತೆಗೆದುಕೊಂಡು ಬರಲಾಗುತ್ತಿದೆ. ಕಳೆದ ವರ್ಷ ನಟ ಅನಿರುದ್ಧ್ ಧಾರಾವಾಹಿಯಿಂದ ಹೊರ ನಡೆದಿದ್ದರು. ಅವರ ನಂತರ ಆರ್ಯವರ್ಧನ್ ಪಾತ್ರವನ್ನು ಹರೀಶ್ ರಾಜ್ ನಿಭಾಯಿಸುತ್ತಿದ್ದಾರೆ.

ಇತ್ತೀಚೆಗೆ ಕತೆಯನ್ನು ಸುಖಾಸುಮ್ಮನೆ ಎಳೆಯಲಾಗುತ್ತಿದೆ. ಹೊಸ ಧಾರಾವಾಹಿಗಳ ಭರಾಟೆ ನಡುವೆ ಮೊದಲಿನ ಕ್ರೇಜ್ ಕಳೆದುಕೊಂಡಿದೆ. ಕೆಲ ವರ್ಷಗಳ ಹಿಂದೆ ಟಿಆರ್‌ಪಿಯಲ್ಲಿ ಮೊದಲ ಸ್ಥಾನದಲ್ಲಿ ಇದ್ದ ಧಾರಾವಾಹಿ ಈಗ ಕೆಳಗೆ ಬಿದ್ದಿದೆ. ಇದೆಲ್ಲದರ ನಡುವೆ ಧಾರಾವಾಹಿ ಮುಗಿಸುವ ಬಗ್ಗೆ ಗುಸುಗುಸು ಶುರುವಾಗಿದೆ. ಈ ಬಗ್ಗೆ ಧಾರಾವಾಹಿಯ ನಿರ್ಮಾಪಕ, ನಿರ್ದೇಶಕ ಆರೂರು ಜಗದೀಶ್ ಫಿಲ್ಮಿಬೀಟ್‌ಗೆ ಮಾಹಿತಿ ನೀಡಿದ್ದಾರೆ.
"ಯಾರು ಯಾವ ರೀತಿಯ ಸ್ಟೇಟ್‌ಮೆಂಟ್ ಕೊಟ್ಟಿದ್ದಾರೆ ಎನ್ನುವುದು ಗೊತ್ತಿಲ್ಲ. ಸದ್ಯ ಎಲ್ಲವೂ ಚರ್ಚೆಯ ಹಂತದಲ್ಲಿದೆ. ಕಥೆ ಮುಂದುವರೆಸೋದಾ? ಬೇಡ್ವಾ? ಡೇಟ್ಸ್ ಕ್ಲಾಶ್ ಆಗ್ತಿದೆ ಎನ್ನುವ ಬಗ್ಗೆ ಮಾತುಕತೆ ನಡೀತಿದೆ. ಆದರೆ ಈವರೆಗೆ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಚಾನಲ್ ತೀರ್ಮಾನವೇ ಅಂತಿಮ. ನಿರ್ಮಾಪಕರು, ಕಲಾವಿದರದ್ದು ಏನು ಇಲ್ಲ"

"ಧಾರಾವಾಹಿ ಮುಗಿಸುತ್ತಾರೆ ಅನ್ನುವುದೆಲ್ಲಾ ಬರೀ ಗಾಸಿಪ್. ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ನನಗೂ ಸಿಕ್ಕಿಲ್ಲ. ನಾಳೆಯ ಎಪಿಸೋಡ್ ಇವತ್ತು ಶೂಟ್ ಮಾಡುತ್ತೇವೆ. ಹಾಗಾಗಿ ಕಥೆ ನಿಲ್ಲಿಸುವ ಬಗ್ಗೆ ನಮಗೆ ಗೊತ್ತಿಲ್ಲ. ಎಲ್ಲರ ಡೇಟ್ಸ್ ಸರಿಯಾಗಿ ಸಿಕ್ಕಿದ್ದರೆ ಧಾರಾವಾಹಿಯನ್ನು ಇನ್ನಷ್ಟು ಚೆನ್ನಾಗಿ ಮಾಡಿಕೊಂಡು ಹೋಗಬಹುದಿತ್ತು. ಮೆಗಾ ಸೀರಿಯಲ್‌ಗಳಲ್ಲಿ ಎಲ್ಲರನ್ನು ಒಟ್ಟುಗೂಡಿಸಿಕೊಂಡು ಚಿತ್ರೀಕರಣ ಮಾಡಿಕೊಂಡು ಹೋಗುವುದು ಕಷ್ಟ. ಅದರಲ್ಲೂ ಜನಪ್ರಿಯ ಧಾರಾವಾಹಿಗಳಲ್ಲಿ ಮತ್ತಷ್ಟು ಕಷ್ಟ"
"ಮೆಗಾ ಧಾರಾವಾಹಿಗಳಲ್ಲಿ ಕಥೆ ಮುಗೀತು ಅಂತ ಹೇಳೊಕೆ ಆಗುವುದಿಲ್ಲ. ಮುಂದಕ್ಕೆ ಎಳೆದುಕೊಂಡು ಹೋಗಬಹುದು. ಆದರೆ ಅಂತಿಮ ನಿರ್ಧಾರ ಚಾನಲ್‌ನವರು ತೆಗೆದುಕೊಳ್ಳಬೇಕು. ಅವರ ಲೆಕ್ಕಾಚಾರ ಏನಿದೆ ಗೊತ್ತಿಲ್ಲ. ನಾನು ಎಲ್ಲವನ್ನು ಅವರಿಗೆ ಬಿಟ್ಟಿದ್ದೇನೆ. ಚಾನಲ್‌ನವರು ನಿಲ್ಲಿಸಿದರೆ ನಿಲ್ಲಿಸಲಿ, ಮುಂದುವರೆಸಿಕೊಂಡು ಹೋದರೆ ಹೋಗಲಿ. ಬೇರೆ ಯಾವುದೇ ಸಮಸ್ಯೆ ಇಲ್ಲ. ಚಾನಲ್‌ನವರು ಕಲಾವಿದರನ್ನು ಬದಲಿಸಿ ಕತೆ ಮುದುವರೆಸಿ ಎಂದರೆ ಅದಕ್ಕೂ ಸಿದ್ಧ" ಎಂದಿದ್ದಾರೆ.
ಒಟ್ನಲ್ಲಿ ಜನಪ್ರಿಯ ಧಾರಾವಾಹಿ 'ಜೊತೆ ಜೊತೆಯಲಿ' ಮುಂದುವರೆಯುತ್ತೋ ಇಲ್ಲವೋ ಎನ್ನುವುದು ಶೀಘ್ರದಲ್ಲೇ ಗೊತ್ತಾಗಲಿದೆ. ಕೆಲವರು ಈ ಧಾರಾವಾಹಿಯನ್ನು ಇವತ್ತಿಗೂ ಬಹಳ ಮೆಚ್ಚಿಕೊಂಡಿದ್ದಾರೆ. ಮತ್ತೆ ಕೆಲವರು ನಿಧಾನವಾಗಿ ಆಸಕ್ತಿ ಕಳೆದುಕೊಳ್ಳುತ್ತಿದ್ದಾರೆ. ಈ ಧಾರಾವಾಹಿ ಕಲಾವಿದರು, ತಂತ್ರಜ್ಞರು ಎಲ್ಲರಿಗೂ ನೇಮು ಫೇಮು ತಂದುಕೊಟ್ಟಿದ್ದು ಸುಳ್ಳಲ್ಲ. ನಟಿ ಮೇಘಾ ಶೆಟ್ಟಿ ಕೂಡ ಇದೇ ಧಾರಾವಾಹಿಯಿಂದ ಜನಮನ ಗೆದ್ದರು. ಇದೀಗ ಸಿನಿಮಾಗಳಲ್ಲೂ ನಟಿಸ್ತಿದ್ದಾರೆ.
ಆರ್ಯವರ್ಧನ್, ಅನು ಸಿರಿಮನೆ, ಶಾರದಾ ದೇವಿ, ಝೇಂಡೆ, ಸುಬ್ಬು, ಪುಷ್ಪಾ, ರಾಜ ನಂದಿನಿ ಹೀಗೆ ಕಥೆಯ ಪ್ರತಿಯೊಂದು ಪಾತ್ರವೂ ಕಿರುತೆರೆ ಪ್ರೇಮಿಗಳ ಮನಸ್ಸಿನಲ್ಲಿ ಉಳಿದುಬಿಟ್ಟಿದೆ. ಅಷ್ಟರಮಟ್ಟಿಗೆ ಈ ಧಾರಾವಾಹಿ ಜನಪ್ರಿಯವಾಗಿರೋದು ಸುಳ್ಳಲ್ಲ.


Click it and Unblock the Notifications











