ಧಾರಾವಾಹಿಗಳಲ್ಲಿ ಸೀಮಂತದ ಸಂಭ್ರಮ: ಗರ್ಭಿಣಿಯರ ಹೊಟ್ಟೆ ಕಾಣುತ್ತಿಲ್ಲವೇಕೆ ಎನ್ನುತ್ತಿದ್ದಾರೆ ವೀಕ್ಷಕರು
ಕೆಲವೊಮ್ಮೆ ಎಲ್ಲಾ ಧಾರಾವಾಹಿಗಳಲ್ಲೂ ಒಂದೇ ಸೀಸನ್‌ಗಳು ಶುರುವಾಗಿ ಬಿಡುತ್ತವೆ. ಒಂದು ಧಾರಾವಾಹಿಯಲ್ಲಿ ಮದುವೆಯ ಸುದ್ದಿ ಕೇಳುತ್ತಿದ್ದಂತೆ ಮತ್ತೊಂದು ಸೀರಿಯಲ್‌ನಲ್ಲೂ ಮದುವೆ ತಯಾರಿಗಳು ನಡೆಯುತ್ತಿರುತ್ತವೆ.
ಹಾಗೆಯೇ ಹಬ್ಬದ ಸೀಸನ್‌ನಲ್ಲಂತೂ ಎಲ್ಲಾ ಧಾರಾವಾಹಿಯಲ್ಲೂ ಹಬ್ಬವೋ ಹಬ್ಬ. ಈಗ ವ್ಯಾಲೆಂಟೈನ್ಸ್ ಡೇ ಕೂಡ ಒಂದು ಧಾರಾವಾಹಿಗಿಂತಲೂ ಮತ್ತೊಂದರಲ್ಲಿ ಹೆಚ್ಚು ಅದ್ಧೂರಿಯಾಗಿಯೇ ಇರುತ್ತದೆ.
ಇದೀಗ ಒಂದೇ ವಾಹಿನಿಯಲ್ಲಿ ಮೂಡಿ ಬರುತ್ತಿರುವ ಎರಡು ಧಾರಾವಾಯಲ್ಲಿ ಒಂದೇ ಸಂದರ್ಭ ಎದುರಾಗಿದೆ. ಅದರ ಜೊತೆಗೆ ಪ್ರೇಕ್ಷಕರಲ್ಲೂ ಒಂದೇ ಪ್ರಶ್ನೆ ಎದ್ದಿದೆ.

ಖುಷಿ ಕೊಟ್ಟಿದ್ದ ಆರತಿ ಸಿಹಿ ಸುದ್ದಿ
ಟಾಪ್ ಒಂದನೇ ಸ್ಥಾನದಲ್ಲಿ ಹಲವು ಸಮಯದಿಂದ ಇರುವ ಧಾರಾವಾಹಿ ಎಂದರೆ ಅದು 'ಗಟ್ಟಿಮೇಳ'. ಈ ಧಾರಾವಾಹಿಯಲ್ಲಿ ಇಷ್ಟು ದಿನ ತಾಯಿಗಾಗಿ ಹುಡುಕಾಟ ನಡೆಯುತ್ತಿತ್ತು. ಆದರೆ, ಡುಪ್ಲಿಕೇಟ್ ತಾಯಿ ಬಂದ ಕಾರಣ ಮನೆಯವರೆಲ್ಲರೂ ಬೇಸರಗೊಂಡಿದ್ದರು. ಅದರ ಜೊತೆಗೆ ವೇದಾಂತ್ ಕಿಡ್ನ್ಯಾಪ್, ಧ್ರುವನಿಗೆ ಆಕ್ಸಿಡೆಂಟ್, ತೇಜಸ್ ಜೊತೆ ಅದಿತಿ ಎಂಗೇಜ್‌ಮೆಂಟ್ ಸೇರಿದಂತೆ ಹಲವು ದುಃಖದ ಪರಿಸ್ಥಿತಿ ಈ ಧಾರಾವಾಹಿ ಕಥೆಯಲ್ಲಿ ಎದುರಾಗಿತ್ತು. ಆದರೆ ಖುಷಿಯ ಸಂಗತಿ ಎಂದರೆ, ಆರತಿ ಗರ್ಭಿಣಿ ಆಗಿರುವುದು.

ಅನುಗೆ ಕಷ್ಟದ ಮೇಲೆ ಕಷ್ಟ
'ಜೊತೆ ಜೊತೆಯಲಿ' ಧಾರಾವಾಹಿಯ ಕಥೆಯನ್ನು ಕೂಡ ಪ್ರೇಕ್ಷಕರು ಇಷ್ಟಪಟ್ಟಿದ್ದಾರೆ. ಆದರೆ, ಇತ್ತೀಚೆಗೆ ಈ ಧಾರಾವಾಹಿಯಲ್ಲಿ ಟ್ವಿಸ್ಟ್‌ಗಳು ಹೆಚ್ಚಾಗಿದ್ದು, ನಾಯಕಿ ಅನು ಸಿರಿಮನೆ ಕಷ್ಟಗಳಿಗೆ ಪ್ರೇಕ್ಷಕರು ಮರುಗಿದ್ದಾರೆ. ಪ್ರೀತಿಸಿ ತಂದೆಯ ವಯಸ್ಸಿನ ಆರ್ಯನನ್ನು ಮದುವೆಯಾದ ಅನು ಕಷ್ಟದ ಮೇಲೆ ಕಷ್ಟಗಳನ್ನು ಅನುಭವಿಸಿದ್ದಾಳೆ. ರಾಜನಂದಿನಿ ಕಥೆಯನ್ನು ಕೆದಕಿದ ಅನುಗೆ
ಮುಂದೆ ನಡೆದಿದ್ದೆಲ್ಲವೂ ನೋವಿನ ಸಂಗತಿಗಳೇ. ಆರ್ಯನನ್ನು ಕಳೆದುಕೊಂಡು ನರಳಿದ ಅನು ಈಗ ಕೊಂಚ ಸುಖವಾಗಿದ್ದಾಳೆ.

ಬೆನ್ನಿಗಂಟಿದಂತಿದೆ ಗರ್ಭಿಣಿಯರ ಹೊಟ್ಟೆ
ಆದರೆ, ಅನು ಸಿರಿಮನೆ ಗರ್ಭಿಣಿ ಆಗಿರುವ ಸತ್ಯ ಈಗ ಎಲ್ಲರಿಗೂ ಗೊತ್ತಾಗಿದೆ. ಗರ್ಭಿಣಿ ಎಂದು ತಿಳಿದಾಗಿನಿಂದಲೂ ಅನು ಪಟ್ಟಿದ್ದೆಲ್ಲವೂ ಕಷ್ಟಗಳೇ. ಅನು ಗರ್ಭಿಣಿ ಎಂದು ಧಾರಾವಾಹಿಯಲ್ಲಿ ತಿಳಿಯಲು ಶುರುವಾಗಿದ್ದು ಜೂನ್ ತಿಂಗಳಲ್ಲಿ ಅಂದರೆ, ಈಗ 9 ತಿಂಗಳಾಗಿರಬೇಕು. ಧಾರಾವಾಹಿಗಳು ಎಂದ ಮೇಲೆ ಒಂದೊಂದು ದಿನ ಎರಡು ಮೂರು ಸಂಚಿಕೆಗಳಲ್ಲಿ ತೋರಿಸಲಾಗುತ್ತೆ. ಆದರೆ, ಅನು ಗರ್ಭಿಣಿ ಎಂದು ಧಾರಾವಾಹಿಯಲ್ಲಿ ಪದೇ ಪದೇ ಹೇಳುತ್ತಿದ್ದರೂ ಇದುವರೆಗೂ ಆಕೆಯ ಹೊಟ್ಟೆ ಬೆನ್ನಿಗೆ ಅಂಟಿಕೊಂಡೇ ಇದೆ. ಇತ್ತ 'ಗಟ್ಟಿಮೇಳ' ಧಾರಾವಾಹಿಯದ್ದೂ ಅದೇ ಕಥೆಯಾಗಿದೆ. ಆರತಿ ಗರ್ಭಿಣಿ ಎಂದು ಹೇಳಿದ್ದು ಜುಲೈ ತಿಂಗಳಿನಲ್ಲಿ ಈಗ ಆಕೆಗೆ ಏಳು ತಿಂಗಳು ಎಂದು ಹೇಳಲಾಗಿದೆ. ಆದರೆ, ಹೊಟ್ಟೆ ಮಾತ್ರ ಕಾಣುತ್ತಿಲ್ಲ ಎನ್ನುತ್ತಿದ್ದಾರೆ ಪ್ರೇಕ್ಷಕರು.

ಪ್ರೇಕ್ಷಕರಲ್ಲಿ ಕಾಡುತ್ತಿದೆ ಒಂದು ಪ್ರಶ್ನೆ
ಅಷ್ಟೇ ಅಲ್ಲದೇ, ಹೊಟ್ಟೆಯೇ ಕಾಣದ ಅನು ಹಾಗೂ ಆರತಿಗೆ ಸೀಮಂತ ನಡೆಸುವ ಧಾರಾವಾಹಿ ತಂಡಗಳು ಮುಂದಾಗಿವೆ. ಇದಕ್ಕಾಗಿ 'ಗಟ್ಟಿಮೇಳ' ಧಾರಾವಾಹಿಯಲ್ಲಿ ಯಾರನ್ನು ಕರೆಯಬೇಕು. ಹೇಗೆ ಸೀಮಂತ ಮಾಡಬೇಕು ಯಾವ ಥೀಮ್ ಇದ್ದರೆ ಚೆಂದ. ತೊಟ್ಟಿಲು ಯಾವುದು ತರಬೇಕು. ಎಂಬ ಎಲ್ಲಾ ಚರ್ಚೆಗಳು ನಡೆಯುತ್ತಿವೆ. ಇದನ್ನೆಲ್ಲಾ ನೋಡುತ್ತಿರುವ ಪ್ರೇಕ್ಷಕರಿಗೆ ಆಶ್ಚರ್ಯ ಉಂಟಾಗಿದೆ. ಇಷ್ಟು ತಿಂಗಳಾದರೂ ಇವರಿಬ್ಬರ ಹೊಟ್ಟೆ ಮುಂದೆ ಬಂದಿಲ್ಲ. ಅದಾಗಲೇ ಸೀಮಂತ ಮಾಡುತ್ತಿದ್ದಾರಲ್ಲ ಎಂದು ಕೇಳುತ್ತಿದ್ದಾರೆ. ಪ್ರೇಕ್ಷಕರ ಈ ಪ್ರಶ್ನೆಗಳಿಗೆಲ್ಲಾ ಧಾರಾವಾಹಿ ತಂಡವೇ ಉತ್ತರ ಕೊಡಬೇಕಿದೆ.


Click it and Unblock the Notifications











