ಬಿಗ್ ಬಾಸ್ ಮನೆಗೆ 'ಈ ವ್ಯಕ್ತಿ' ಹೋಗಲೇಬೇಕು ಅಂತಿದ್ದಾರೆ ವೀಕ್ಷಕರು!
Recommended Video
ಬಿಗ್ ಬಾಸ್ ಕನ್ನಡ 7ನೇ ಆವೃತ್ತಿ ಅಕ್ಟೋಬರ್ ಎರಡನೇ ವಾರಾಂತ್ಯದಲ್ಲಿ ಪ್ರಾರಂಭವಾಗುವ ಸಾಧ್ಯತೆ ಇದೆ. ಈ ಸೀಸನ್ ನಲ್ಲಿ ಸೆಲೆಬ್ರಿಟಿಗಳು ಮಾತ್ರ ಬಿಗ್ ಮನೆ ಪ್ರವೇಶ ಮಾಡಲಿದ್ದಾರೆ ಎನ್ನುವುದು ಪಕ್ಕಾ ಆಗಿದೆ. ದೊಡ್ಮನೆಗೆ ಯಾರೆಲ್ಲಾ ಹೋಗಲಿದ್ದಾರೆ ಎಂಬ ಪಟ್ಟಿಯೂ ಬಹುತೇಕ ಪಕ್ಕಾ ಆಗಿದೆ.
ಅದರಲ್ಲಿ ಕೆಲವರು ಹೆಸರು ಕೂಡ ಬಹಿರಂಗವಾಗಿದೆ. ಪ್ರತಿ ವರ್ಷದಂತೆ ಈ ಸಲವೂ ಕೆಲವು ಸೆಲೆಬ್ರಿಟಿಗಳ ಹೆಸರು ಚಾಲ್ತಿಯಲ್ಲಿದೆ. ಇನ್ನು ಫಿಲ್ಮಿಬೀಟ್ ಕನ್ನಡ ಓದುಗರಿಗೂ ಈ ಬಗ್ಗೆ ಪ್ರಶ್ನೆಯೊಂದನ್ನ ಕೇಳಲಾಗಿತ್ತು. ''ಬಿಗ್ ಬಾಸ್ ನಲ್ಲಿ ಈ ಸಲ ಯಾರನ್ನು ನೋಡಲು ಇಷ್ಟಪಡ್ತೀರಾ...?
ಅದಕ್ಕೆ ನೂರಾರು ಕಾಮೆಂಟ್ ಗಳು ಬಂದಿದ್ದು, ಅದರಲ್ಲಿ ಈ ಒಬ್ಬ ವ್ಯಕ್ತಿಯ ಹೆಸರು ಸಾಮಾನ್ಯವಾಗಿದೆ. ಈ ವ್ಯಕ್ತಿಯನ್ನ ಬಿಗ್ ಮನೆಯೊಳಗೆ ನೋಡಲೇಬೇಕು ಎನ್ನುತ್ತಿದ್ದಾರೆ ವೀಕ್ಷಕರು. ಹಾಗಿದ್ರೆ, ಯಾರದು? ಅವರನ್ನ ಬಿಟ್ಟರೇ ಬೇರೆ ಯಾರನ್ನು ನೋಡಲು ವೀಕ್ಷಕರು ಇಷ್ಟಪಡುತ್ತಿದ್ದಾರೆ? ಮುಂದೆ ಓದಿ....

ಕುರಿ ಪ್ರತಾಪ್ ಇರಲೇಬೇಕಂತೆ
ಹಾಸ್ಯ ನಟ ಕುರಿ ಪ್ರತಾಪ್ ಅವರು ಏಳನೇ ಆವೃತ್ತಿಯ ಬಿಗ್ ಬಾಸ್ ಮನೆಯಲ್ಲಿ ಇರಲೇಬೇಕು ಎಂದು ಅನೇಕರು ಬೇಡಿಕೆ ಇಟ್ಟಿದ್ದಾರೆ. ಕಳೆದ ಮೂರ್ನಾಲ್ಕು ಸೀಸನ್ ನಿಂದಲೂ ಕುರಿ ಪ್ರತಾಪ್ ಬರಲಿ ಎಂದು ವೀಕ್ಷಕರು ಆಸೆ ಪಡುತ್ತಿದ್ದಾರೆ. ಈ ಆವೃತ್ತಿಯಲ್ಲಿ ಹೆಚ್ಚು ಬೇಡಿಕೆ ಹೊಂದಿರುವ ಏಕೈಕ ನಟ ಅಂದ್ರೆ ಅದು ಕುರಿ ಪ್ರತಾಪ್.

ಕುರಿ ಪ್ರತಾಪ್ ಹೋಗೋದು ಪಕ್ಕಾ!
ಫಿಲ್ಮಿಬೀಟ್ ಕನ್ನಡಕ್ಕೆ ಸಿಕ್ಕಿರುವ ಮಾಹಿತಿಗಳ ಪ್ರಕಾರ, ಕುರಿ ಪ್ರತಾಪ್ ಅವರು ಬಿಗ್ ಬಾಸ್ ಮನೆಗೆ ಹೋಗುವುದು ಬಹುತೇಕ ಖಚಿತವಾಗಿದೆಯಂತೆ. ಕಲರ್ಸ್ ವಾಹಿನಿಯ ಮಜಾ ಟಾಕೀಸ್ ನಲ್ಲಿ ಖಾಯಂ ಸದಸ್ಯನಾಗಿರುವ ಕುರಿ, ಅದೇ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್ ಬಾಸ್ ಗೆ ಹೋಗಲು ಒಪ್ಪಿಗೆ ನೀಡಿದ್ದಾರಂತೆ. ಈ ಕಡೆ ಮಜಾ ಟಾಕೀಸ್ ಕೂಡ ಮುಗಿದಿರುವುದು ಇದಕ್ಕೆ ಪುಷ್ಠಿ ನೀಡಿದೆ.

ಹನುಮಂತನಿಗೂ ಬೇಡಿಕೆ ಇದೆ
ಸರಿಗಮಪ ಖ್ಯಾತಿಯ ಹನುಮಂತನಿಗೂ ಬಿಗ್ ಬಾಸ್ ವೀಕ್ಷಕರಿಂದ ಬೇಡಿಕೆ ಇದೆ. ಸದ್ಯ ಡಿಕೆಡಿ ಡ್ಯಾನ್ಸ್ ಶೋನಲ್ಲಿ ಮೋಡಿ ಮಾಡುತ್ತಿರುವ ಹನುಮಂತ ಈ ಸಲ ಬಿಗ್ ಬಾಸ್ ಮನೆಗೆ ಬರಲಿ ಎಂದು ವೀಕ್ಷಕರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಈ ಆವೃತ್ತಿಯ ಸ್ಪರ್ಧಿಗಳ ಪೈಕಿ ಹನುಮಂತನ ಹೆಸರು ಕೂಡ ಚಾಲ್ತಿಯಲ್ಲಿದೆ.

ಉಳಿದವರನ್ನ ಗಂಭೀರವಾಗಿ ಪರಿಗಣಿಸಿಲ್ಲ
ಕುರಿ ಪ್ರತಾಪ್ ಮತ್ತು ಹನುಮಂತನ ಹೆಸರು ಸದ್ದು ಮಾಡುತ್ತಿರುವಷ್ಟು, ಉಳಿದವರು ಯಾರೂ ಸದ್ದು ಮಾಡ್ತಿಲ್ಲ. ಮಂಡ್ಯ ರಮೇಶ್, ಉದಯ ಮ್ಯೂಸಿಕ್ ಹೇಮಲತಾ, ಟಿಕ್ ಟಾಕ್ ಸ್ಟಾರ್ಸ್ ಹೆಸರುಗಳು ಫಿಲ್ಮಿಬೀಟ್ ಪೇಜ್ ನಲ್ಲಿ ಚರ್ಚೆಯಾಗಿವೆ.

ಸರ್ಪ್ರೈಸ್ ಹೆಚ್ಚಿದೆ
ಪತ್ರಕರ್ತ ರವಿಬೆಳಗೆರೆ, ನಟಿ ಪಾರೂಲ್ ಯಾದವ್, ರಾಗಿಣಿ, ಶರ್ಮಿಳಾ ಮಾಂಡ್ರೆ ಹೆಸರುಗಳು ಕೂಡ ಚರ್ಚೆಯಾದವು. ಆದರೆ, ಇವರು ಬಿಗ್ ಬಾಸ್ ಮನೆಗೆ ಹೋಗಲ್ಲ ಎಂದು ಖಚಿತಪಡಿಸಿದ್ದಾರೆ. ಹಾಗಾಗಿ, ಯಾರೆಲ್ಲ ದೊಡ್ಮನೆ ಪ್ರವೇಶ ಮಾಡಬಹುದು ಎಂಬ ಸರ್ಪ್ರೈಸ್ ಹೆಚ್ಚಿದೆ.


Click it and Unblock the Notifications