ಮುಂದಿನ ವರ್ಷದ ಆರಂಭದಲ್ಲಿ ಮದುವೆಯಾಗಲಿದೆ ಬಿಗ್ ಬಾಸ್‌ನ ಈ ಜೋಡಿ
''ಬಿಗ್ ಬಾಸ್'' ಎಂಬ ಸಂತೆ ಅಂದರೆ ಅದು ಕೇವಲ ರಂಪ-ರಾಮಾಯಣಕ್ಕೆ ಮಾತ್ರ ಸೀಮಿತ ಎನ್ನುವ ಅಭಿಪ್ರಾಯ ಸದ್ಯ ಸಾರ್ವತ್ರಿಕ ವಲಯದಲ್ಲಿ ಮನೆ ಮಾಡಿದೆ. ಯಾಕೆಂದರೆ .. ಪ್ರತಿ ವರ್ಷ ಈ ಮನೆಯಲ್ಲಿ ಚಿತ್ರ- ವಿಚಿತ್ರ ವ್ಯಕ್ತಿಗಳನ್ನೆಲ್ಲಾ ಕರೆದುಕೊಂಡು ಬಿಡುವ ಪದ್ಧತಿಯನ್ನು ರೂಢಿಸಿಕೊಳ್ಳಲಾಗಿದೆ. ಇದು ಕೇವಲ ಒಂದು ಭಾಷೆಯ ಕಥೆ ಅಲ್ಲ. ಬದಲಿಗೆ ಎಲ್ಲಾ ಭಾಷೆಯ ''ಬಿಗ್ ಬಾಸ್'' ಮನೆಯ ವಾತಾವರಣ ಬಹುತೇಕ ಒಂದೇ ಇರುತ್ತೆ.
ಆದರೆ ಇದರ ನಡುವೆ ಅಲ್ಲಲ್ಲಿ ಈ ಬಿಗ್ ಬಾಸ್ ಮನೆ ಪ್ರೇಮ ಪ್ರಕರಣಕ್ಕೆ ಕೂಡ ಸಾಕ್ಷಿಯಾಗುತ್ತೆ. ಇದಕ್ಕೆ ಕೈ ಗನ್ನಡಿ ಎಂಬಂತೆ ಆರಂಭದಲ್ಲಿ ಕೇವಲ ಸ್ಫರ್ಧಿಗಳಾಗಿ ಬಂದ ಹಲವರು ಆ ನಂತರ ಮನೆಯಲ್ಲಿ ಪ್ರೀತಿಯ ಬಲೆಯಲ್ಲಿ ಈ ಹಿಂದೆ ಸಿಲುಕಿದ್ದಾರೆ.

ಆ ಪೈಕಿ ಕೆಲವರು ಮನೆಯಾಚೆ ಬಂದ ನಂತರ ಬ್ರೇಕಪ್ ಮಾಡಿಕೊಂಡು ದೂರವಾದರೆ ಇನ್ನೂ ಕೆಲವರು ಮದುವೆಯನ್ನು ಕೂಡ ಆಗಿದ್ದಾರೆ. ಉದಾಹರಣೆಗೆ ಕನ್ನಡದಲ್ಲಿ ಚಂದನ್ ಶೆಟ್ಟಿ- ನಿವೇದಿತಾ ಗೌಡ. ತೆಲುಗಿನಲ್ಲಿ ಪಾವನಿ ರೆಡ್ಡಿ ಮತ್ತು ಆಮಿರ್. ಹಿಂದಿಯಲ್ಲಿ ಪ್ರಿನ್ಸ್ ನರುಲಾ ಮತ್ತು ಯುವಿಕಾ ಚೌಧರಿ.
ಹೀಗೆ ಹಲವು ಪ್ರೇಮ ಕಥೆಗೆ ಸಾಕ್ಷಿಯಾದ ಈ ''ಬಿಗ್ ಬಾಸ್'' ಮನೆ ಈ ಬಾರಿ ಕೂಡ ಮತ್ತೊಂದು ಲವ್ ಸ್ಟೋರಿಗೆ ಸಾಕ್ಷಿಯಾಗಿದೆ. ಆ ಲವ್ ಸ್ಟೋರಿ ಬೇರೆ ಯಾರದ್ದು ಅಲ್ಲ ಬದಲಿಗೆ ಆವೇಜ್ ದರ್ಬಾರ್ ಮತ್ತು ನಗ್ಮಾ ಮಿರಜಕರ್ ಅವರದ್ದು.
ಹೌದು, ಆವೇಜ್ ದರ್ಬಾರ್ ಮತ್ತು ನಗ್ಮಾ ಮಿರ್ಜಕರ್.. ಈ ಬಾರಿ ಹಿಂದಿ ''ಬಿಗ್ ಬಾಸ್''ನ ಸ್ಫರ್ಧಿಗಳು. ಆವೇಜ್ ನೃತ್ಯ ನಿರ್ದೇಶಕರಾಗಿ ಹೆಸರು ಮಾಡಿದ್ದು ನಗ್ಮಾ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಆಗಿ ಕ್ರಿಯೇಟರ್ ಆಗಿ ಗುರುತಿಸಿಕೊಂಡಿದ್ದಾರೆ.38 ಲಕ್ಷ ಜನ ಈ ಜೋಡಿಯನ್ನು ಸೋಶಿಯಲ್ ಮೀಡಿಯಾದಲ್ಲಿ ಹಿಂಬಾಲಿಸುತ್ತಿದ್ದಾರೆ.
ಇಂಥಾ ಆವೇಜ್ ಮತ್ತು ನಗ್ಮಾ ಈ ಬಾರಿ ಬಿಗ್ ಬಾಸ್ ಮನೆಗೆ ಬಂದಿದ್ದರು. ಅದಾಗಲೇ ಹತ್ತು ಹಲವು ಹಾಡುಗಳಿಗೆ ಜೊತೆಯಾಗಿ ಹೆಜ್ಜೆ ಹಾಕಿರುವ ಇಬ್ಬರ ನಡುವೆ ಈ ಮೊದಲೇ ಪ್ರೇಮಾಂಕುರವಾಗಿತ್ತು. ಆದರೆ ಈ ವಿಷಯ ಕೆಲವರಿಗೆ ಮಾತ್ರ ಗೊತ್ತಿತ್ತು. ಇಡೀ ಭಾರತಕ್ಕೆ ಇವರ ಪ್ರೇಮಕಥೆಯ ಪರಿಚಯವಾಗಿದ್ದು ಈ ''ಬಿಗ್ ಬಾಸ್'' ಮೂಲಕವೇ.

ಹೀಗೆ ಇವರ ಲವ್ ಸ್ಟೋರಿ ಹೊರ ಬಂದ ನಂತರ ಹಲವರಿಗೆ ಇವರ ಮದುವೆಯ ಚಿಂತೆ ಕಾಡುತ್ತಿದೆ. ಯಾಕೆಂದರೆ..ನಗ್ಮಾ ಅವರನ್ನು ಪ್ರೀತಿಸುವ ಮುನ್ನ ಆವೇಜ್ MTV Splitsvilla X5' ಖ್ಯಾತಿಯ ಶುಭಿ ಜೋಶಿ ಅವರ ಜೊತೆ ಸಂಬಂಧದಲ್ಲಿದ್ದರು. ಆದರೆ ಈ ಸಂಬಂಧ ಮುರಿದು ಬಿತ್ತು. ಈ ಹಿನ್ನೆಲೆ ಇತ್ತೀಚಿಗಷ್ಟೇ ''Filmygyan''ಗೆ ನೀಡಿದ ಸಂದರ್ಶನದಲ್ಲಿ ಆವೇಜ್ ವಿರುದ್ಧ ಶುಭಿ ಹಲವು ಆರೋಪ ಮಾಡಿದ್ದರು.
ಶುಭಿ ಆರೋಪ ಮಾಡಿದ ಬೆನ್ನಲ್ಲೇ ನಗ್ಮಾ ಜೊತೆ ಆವೇಜ್ ಚೆಲ್ಲಾಟ ಆಡುತ್ತಿದ್ದಾರಾ..? ಮೋಸ ಮಾಡುತ್ತಿದ್ದಾರಾ..? ಎಂಬೆಲ್ಲಾ ಪ್ರಶ್ನೆಗಳು ಇವರಿಬ್ಬರ ಅಭಿಮಾನಿಗಳಲ್ಲಿ ಹುಟ್ಟಿಕೊಂಡಿದ್ದವು. ಸೋಶಿಯಲ್ ಮೀಡಿಯಾದಲ್ಲಿ ಈ ಕುರಿತು ಚರ್ಚೆ ಕೂಡ ನಡೆಯಿತು.
ಈ ಎಲ್ಲಾ ಕಾರಣಗಳಿಂದ ಮನೆ ಒಳಗೆ ಹೋದಷ್ಟೇ ಸ್ಪೀಡ್‌ನಲ್ಲಿ ಹೊರಗಡೆ ಕೂಡ ಬಂದಿರುವ ನಗ್ಮಾ ಅವರಿಗೆ ಸಂದರ್ಶನಗಳಲ್ಲಿ ನಿಮ್ಮ ಇಬ್ಬರ ಮದುವೆ ಯಾವಾಗ ಎನ್ನುವ ಪ್ರಶ್ನೆಯೇ ಸದ್ಯ ಎದುರಾಗುತ್ತಿದೆ. ಆವೇಜ್ ವಿರುದ್ದ ಶುಭಿ ಮಾಡಿದ ಆರೋಪದ ಕುರಿತು ಕೂಡ ಪ್ರಶ್ನೆಗಳನ್ನು ಕೂಡ ಕೇಳಲಾಗುತ್ತಿದೆ. ಈ ಎಲ್ಲಾ ಪ್ರಶ್ನೆಗಳಿಗೆ ನಗ್ಮಾ ಈಗ ಉತ್ತರ ನೀಡಿದ್ದಾರೆ.
ಈ ಕುರಿತು ''ಪಿಂಕ್‌ವಿಲ್ಲಾ''ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ನಗ್ಮಾ ನನ್ನ ಮತ್ತು ಆವೇಜ್ ಸಂಬಂಧ ತುಂಬಾ ಭಾವನಾತ್ಮಕವಾದದ್ದು ಮತ್ತು ಗಟ್ಟಿಯಾದದ್ದು. ನಾವು ನಮ್ಮ ಸಂಬಂಧದ ಕುರಿತು ತುಂಬಾ ಗಂಭೀರವಾಗಿದ್ದೇವೆ ಎಂದು ಹೇಳಿದ್ದಾರೆ. ಅವರ ಮೇಲೆ ಬೇರೊಬ್ಬರು ಮಾಡಿರುವ ಆರೋಪದ ಬಗ್ಗೆ ನಾನು ಮಾತನಾಡಲು ಬಯಸುವುದಿಲ್ಲ ಆದರೆ ''ಬಿಗ್ ಬಾಸ್''ಗೆ ಬರುವ ಮುನ್ನವೇ ನಾವು ಮದುವೆಯಾಗಲು ನಿರ್ಧಾರ ಮಾಡಿದ್ದೇವು ಎಂದು ಹೇಳಿದ್ದಾರೆ. ಸದ್ಯ ಅವನು ಮನೆಯಲ್ಲಿದ್ದಾನೆ. ಈ ಕಾರಣಕ್ಕೆ ಅವನಿಗೆ ಬೆಂಬಲವನ್ನು ಸೂಚಿಸುವುದರತ್ತ ಮಾತ್ರ ನಾನು ಗಮನ ಕೊಡುತ್ತಿದ್ದೇನೆ ಉಳಿದ ವಿಚಾರಗಳಿಗೆ ನಾನು ಸದ್ಯ ಪ್ರಾಮುಖ್ಯತೆ ಕೊಡುತ್ತಿಲ್ಲ. ಅದರ ಅವಶ್ಯಕತೆ ಇಲ್ಲ ಎಂದು ನನಗೆ ಅನ್ಸುತ್ತಿದೆ ಎಂದು ಹೇಳಿದ್ದಾರೆ.

ಇನ್ನೂ ಎಲ್ಲವೂ ಅಂದುಕೊಂಡತೆ ಆದರೆ ಈ ಡಿಸೆಂಬರ್‌ನಲ್ಲಿ ನಮ್ಮ ಮದುವೆ ನಡೆಯಬೇಕಿತ್ತು. ಆದರೆ.. ಅಷ್ಟರಲ್ಲಿ ''ಬಿಗ್ ಬಾಸ್''ನಿಂದ ನಮಗೆ ಕರೆ ಬಂತು. ಸದ್ಯ ಆವೇಜ್ ಹೊರಗಡೆ ಬರುವುದು ಬೇಡ. ಅವನು ಕಪ್ ಗೆದ್ದು ಬರಲಿ ಎನ್ನುವುದು ನನ್ನ ಆಶಯ ಎಂದು ಹೇಳಿರುವ ನಗ್ಮಾ ''ಬಿಗ್ ಬಾಸ್'' ಮುಗಿದ ನಂತರವಷ್ಟೇ ನಮ್ಮ ಮದುವೆ. ಬಹುಶಃ ಮುಂದಿನ ವರ್ಷದ ಮೊದಲ ಆರು ತಿಂಗಳಿನಲ್ಲಿ ನಾವು ಮದುವೆಯಾಗಬಹುದು ಎಂದು ಹೇಳಿದ್ದಾರೆ. ಆತನಿಗೋಸ್ಕರ ನಾನು ಕಾಯುತ್ತೇನೆ ಎಂದು ಕೂಡ ಹೇಳಿದ್ದಾರೆ.
ಅಂದ್ಹಾಗೇ ''ಬಿಗ್ ಬಾಸ್'' ಮನೆಯಲ್ಲಿರುವ ಆವೇಜ್‌ಗೆ ಈಗ 32ರ ಹರೆಯ. ಮತ್ತೊಂದೆಡೆ ಆವೇಜ್ ಅವರನ್ನು ಮದುವೆಯಾಗುತ್ತಿರುವ ನಗ್ಮಾ ಅವರಿಗೀಗ 33 ವರ್ಷ. ವಯಸ್ಸಿನಲ್ಲಿ ಆವೇಜ್‌ಗಿಂತ ಒಂದು ವರ್ಷ ದೊಡ್ಡವರು ನಗ್ಮಾ ಮಿರ್ಜಕರ್.


Click it and Unblock the Notifications











