ವಿಡಿಯೋ: 'ಮಗಳು ಜಾನಕಿ' ಹಾಡನ್ನ ಮುದ್ದಾಗಿ ಹಾಡಿರುವ ಮುದ್ದು ಪುಟಾಣಿ
ಕಿರುತೆರೆ ಲೋಕದ ಮಾಂತ್ರಿಕ ಟಿ.ಎನ್.ಸೀತಾರಾಮ್ ನಿರ್ದೇಶನದ ಧಾರಾವಾಹಿಗಳು ಎಷ್ಟು ಜನಪ್ರಿಯವೋ... ಆ ಧಾರಾವಾಹಿಗಳ ಶೀರ್ಷಿಕೆ ಗೀತೆ ಕೂಡ ಅಷ್ಟೇ ಜನಮನ ಗೆದ್ದಿವೆ.
'ಮಾಯಾಮೃಗ' ಸೀರಿಯಲ್ ನಿಂದ ಹಿಡಿದು 'ಮಹಾ ಪರ್ವ'ದವರೆಗೂ ಟಿ.ಎನ್.ಸೀತಾರಾಮ್ ನಿರ್ದೇಶನದ ಎಲ್ಲಾ ಧಾರಾವಾಹಿಗಳ ಟೈಟಲ್ ಹಾಡುಗಳು ಈಗಲೂ ವೀಕ್ಷಕರ ಬಾಯಲ್ಲಿವೆ. ಅದಕ್ಕೆ ಕಾರಣ, ಹಾಡಿನ ಅರ್ಥಗರ್ಭಿತ ಸಾಹಿತ್ಯ ಹಾಗೂ ಸುಮಧುರ ಸಂಗೀತ.
ಸದ್ಯ ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ಮಗಳು ಜಾನಕಿ' ಧಾರಾವಾಹಿಯ ಶೀರ್ಷಿಕೆ ಗೀತೆ ಕೂಡ ವೀಕ್ಷಕರ ಮನಸ್ಸು ಮುಟ್ಟಿದೆ.

''ಊರ ಸೇರಬಹುದೇ ನೀನು ದಾರಿ ಮುಗಿಯದೇ...
ಹೊನ್ನು ದೊರೆಯಬಹುದೇ ಹೇಳು ಮಣ್ಣು ಬಗೆಯದೇ...
ಬಾಳ ದಾರಿಯಲ್ಲಿ ಇರುಳು ಕವಿದ ಹೊತ್ತಲಿ...
ಪ್ರೀತಿ ಕಣ್ಣು ತೆರೆದ ದೀಪ, ಮಗಳು ಜಾನಕಿ...''
ಎಂದು ಶುರುವಾಗುವ 'ಮಗಳು ಜಾನಕಿ' ಗೀತೆಯ ಸಾಲುಗಳು ವೀಕ್ಷಕರ ಕಿವಿಯಲ್ಲಿ ಸದಾ ಗುಯ್ ಗುಟ್ಟುತ್ತಿದೆ. ಪ್ರವೀಣ್.ಡಿ.ರಾವ್ ಸಂಗೀತ ಸಂಯೋಜನೆ ಹೊಂದಿರುವ, ಎಚ್.ಎಸ್.ವೆಂಕಟೇಶ್ ಮೂರ್ತಿ ಸಾಹಿತ್ಯ ಇರುವ 'ಮಗಳು ಜಾನಕಿ' ಹಾಡು ವೀಕ್ಷಕರಿಗೆ ಎಷ್ಟು ಹತ್ತಿರವಾಗಿದೆ ಎನ್ನುವುದಕ್ಕೆ ಸಾಕ್ಷಿ ಈ ವಿಡಿಯೋ...
'ಮಗಳು ಜಾನಕಿ' ಹಾಡಿನ ಒಂದೂ ಸಾಲು ಬಿಡದಂತೆ, ಬೇಬಿ ದೀಕ್ಷಾ ಮುದ್ದಾಗಿ ಹಾಡಿರುವ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಈ ವಿಡಿಯೋನ ನೋಡಿ ಸಂತಸ ಪಟ್ಟ ಟಿ.ಎನ್.ಸೀತಾರಾಮ್, ''ಆ ಮಗು ನೋಡಿ.. ಒಂದು ಸಾಲು, ಒಂದು ಪದ ಕೂಡ ಬಿಡದೆ ಇಡೀ ಹಾಡನ್ನು ಎಷ್ಟು ಮುದ್ದಾಗಿ ಹಾಡಿದೆ. ಮುದ್ದು ಥ್ಯಾಂಕ್ಸ್ ಪುಟ್ಟು..'' ಎಂದು ಪ್ರತಿಕ್ರಿಯೆ ನೀಡಿದ್ದಾರೆ.
'ಮಗಳು ಜಾನಕಿ' ಧಾರಾವಾಹಿ ಆರಂಭ ಆಗಿ ಇನ್ನೂ ಒಂದು ತಿಂಗಳು ಕಳೆದಿದೆ ಅಷ್ಟೇ. ಅಷ್ಟು ಬೇಗ ವೀಕ್ಷಕರ ಮನಸ್ಸನ್ನು ಗೆಲ್ಲುವಲ್ಲಿ 'ಮಗಳು ಜಾನಕಿ' ಯಶಸ್ವಿ ಆಗಿದ್ದಾಳೆ.


Click it and Unblock the Notifications











