ಬಿಗ್‌ಬಾಸ್ ಶೋನಲ್ಲಿ ಬಡೆಕ್ಕಿಲ ಪ್ರದೀಪ್ ಧ್ವನಿ ಕೇಳಲು ಎಷ್ಟು ಜನ ಕಾಯ್ತಿದ್ದೀರಾ?
ಬಿಗ್‌ಬಾಸ್ ಕನ್ನಡ ಸೀಸನ್- 12ಕ್ಕೆ ದಿನಗಣನೆ ಶುರುವಾಗಿದೆ. ಕಿಚ್ಚ ಸುದೀಪ್ ಮತ್ತೆ ನಿರೂಪಣೆ ಮಾಡಲಿದ್ದು ಈಗಾಗಲೇ ಪ್ರೋಮೊ ಸಹ ರಿಲೀಸ್ ಆಗಿದೆ. ಬಿಗ್‌ಬಾಸ್ ಅಂದಾಕ್ಷಣ ಖಡಕ್ ವಾಯ್ಸ್ ಕೇಳಿ ಬರುತ್ತದೆ. ಒಬ್ಬರದ್ದಲ್ಲ ಇಬ್ಬರ ವಾಯ್ಸ್ ಪದೇ ಪದೇ ಬಂದು ಕಾಡುತ್ತದೆ. ಒಂದು ನರೇಟರ್ ವಾಯ್ಸ್.. ಮತ್ತೊಂದು ಕಮಾಂಡಿಂಗ್ ವಾಯ್ಸ್.
ಈ ಎರಡು ವಾಯ್ಸ್ ಇಲ್ಲದೇ ಬಿಗ್ ಬಾಸ್ ಅನ್ನು ಊಹಿಸಿಕೊಳ್ಳುವುದು ಕಷ್ಟ. ಹಲವು ವರ್ಷಗಳಿಂದ ಶೋಗೆ ನರೇಟರ್ ವಾಯ್ಸ್ ಕೊಡುತ್ತಿರುವವರು ಬಡೆಕ್ಕಿಲ ಪ್ರದೀಪ್. ಸಾಕಷ್ಟು ಜನ ಇವ್ರೇ ಬಿಗ್‌ಬಾಸ್ ಧ್ವನಿ ಅಂತ ಅಂದುಕೊಂಡಿದ್ದಾರೆ. ಅದರಲ್ಲಿ ಅರ್ಧ ಸತ್ಯ, ಇನ್ನರ್ಧ ಸುಳ್ಳಿದೆ. ಮೊದಲೇ ಹೇಳಿದ್ದಂತೆ ನರೇಟರ್ ವಾಯ್ಸ್ ಮಾತ್ರ ಪ್ರದೀಪ್ ಅವರದ್ದಾಗಿರುತ್ತದೆ.

"ದಿನ 1.. ಬೆಳಗ್ಗೆ 8 ಗಂಟೆ" ಅಥವಾ "ಈಗ ರಾತ್ರಿ 9 ಗಂಟೆ.. ಹೀಗೆ ಬರುವ ವಾಯ್ಸ್ ಅನ್ನು ಬಡೆಕ್ಕಿಲ ಪ್ರದೀಪ್ ಅವರದ್ದಾಗಿರುತ್ತದೆ. "ಇದು ಬಿಗ್ ಬಾಸ್" ಎಂದು ಮಾತನಾಡುವವರು ಬೇರೆಯವರು. ಬರೀ ಬಿಗ್‌ಬಾಸ್ ಮಾತ್ರವಲ್ಲ ಕಲರ್ಸ್ ಕನ್ನಡ ವಾಹಿನಿಯ ಬಹುತೇಕ ಹಾರ್ಯಕ್ರಮಗಳಿಗೆ ವಾಯ್ಸ್ ಓವರ್ ಆರ್ಟಿಸ್ಟ್ ಆಗಿ ಪ್ರದೀಪ್ ಕೆಲಸ ಮಾಡುತ್ತಿದ್ದಾರೆ. ಪ್ರೋಮೋಗಳ ಹಿನ್ನೆಲೆಯಲ್ಲಿ ಕೇಳಿಬರುವುದು ಇದೇ ಕಂಚಿನ ಕಂಠ ಧ್ವನಿ.
ಬಿಗ್‌ಬಾಸ್ ಹೊಸ ಸೀಸನ್ ಶುರುವಾಗುತ್ತಿದೆ. ಮತ್ತೆ ದೊಡ್ಮನೆಯಲ್ಲಿ ಬಡೆಕ್ಕಿಲ ಪ್ರದೀಪ್ ವಾಯ್ಸ್ ಕೇಳುವ ಸಮಯ ಬರ್ತಿದೆ. ಇಂತಹ ಸಮಯದಲ್ಲಿ ಅವರು ಫಿಲ್ಮಿಬೀಟ್ ಕನ್ನಡ ಜೊತೆ ಮಾತನಾಡಿದ್ದಾರೆ. ತಮ್ಮ ಜರ್ನಿ ಬಗ್ಗೆ ಒಂದಷ್ಟು ಸಂಗತಿಗಳನ್ನು ಬಿಚ್ಚಿಟ್ಟಿದ್ದಾರೆ. ಮಂಗಳೂರು ಬಳಿಯ ಬಡೆಕ್ಕಿಲ ಮೂಲದ ಪ್ರದೀಪ್ ಇವತ್ತಿಗೂ ಅಲ್ಲಿಂದಲೇ ತಮ್ಮ ಕೆಲಸ ಮಾಡುತ್ತಿದ್ದಾರೆ. ಕಳೆದ 15 ವರ್ಷಗಳಿಂದ ಮೈಕ್ ಜೊತೆಗೆ ಸುತ್ತಾಡುತ್ತಿದ್ದಾರೆ. ಯಾವುದೇ ಸಮಯದಲ್ಲಿ ಏನೇ ವಾಯ್ಸ್ ಕೊಡಬೇಕು ಅಂದ್ರು ರೆಕಾರ್ಡ್ ಮಾಡಿ ಕಳಿಸ್ತಾರೆ.
"ನಾನು ಮೊದಲು ಸಾಕಷ್ಟು ಸಂಸ್ಥೆಗಳಲ್ಲಿ ಕೆಲಸ ಮಾಡಿದೆ. ಬಳಿಕ ಮತ್ತೆ ಊರಿಗೆ ಹೋದ ಬಳಿಕ ವಾಯ್ಸ್ ಓವರ್ ಆರ್ಟಿಸ್ಟ್ ಆಗಿಯೇ ಬ್ಯುಸಿಯಾಗಿದ್ದೀನಿ. ಬಿಗ್‌ಬಾಸ್ ವರ್ಷಕ್ಕೊಮ್ಮೆ ಬರುವಂಥದ್ದು, ಇನ್ನುಳಿದಂತೆ ಪ್ರತಿದಿನ ಏಳೆಂಟು ಪ್ರೋಮೊ ಸ್ಕ್ರಿಪ್ಟ್ ಇರುತ್ತೆ. ಎಲ್ಲದಕ್ಕೂ ವಾಯ್ಸ್ ರೆಕಾರ್ಡ್ ಮಾಡಿ ಕಳಿಸ್ತೀನಿ. ನಾನು ಎಲ್ಲೇ ಹೋದರೂ ಮೈಕ್ ಮಾತ್ರ ಮರೆಯುವುದಿಲ್ಲ" ಎಂದು ಪ್ರದೀಪ್ ನಕ್ಕಿದ್ದಾರೆ.
ಕಾಲೇಜು ದಿನಗಳಲ್ಲೇ ಪ್ರದೀಪ್ ಕೆಲಸ ಮಾಡಲು ಶುರು ಮಾಡಿದ್ದರು. ಬರವಣಿಗೆ ರೂಢಿಸಿಕೊಂಡಿದ್ದರು. ನ್ಯೂಸ್ ಚಾನಲ್‌ಗಳಲ್ಲಿ, ಎಫ್‌ಎಂ, ದಿನಪತ್ರಿಕೆಗಳಲ್ಲಿ ಕೆಲಸ ಮಾಡಿದ್ದಾರೆ. "ನನಗೆ ಒಂದೇ ಕೆಲಸ ಮಾಡುವುದು ಬೋರ್. ಏನಾದರೂ ಹೊಸತ್ತನ್ನು ಮಾಡುವ ತುಡಿತ. ಹೊಸ ಪ್ರಯೋಗ ಮಾಡುವ ಆಸೆ. ಕಾಲೇಜು ದಿನಗಳಲ್ಲೇ ಪಾರ್ಟ್ ಟೈಮ್ ಕೆಲಸ ಮಾಡಲು ಆರಂಭಿಸಿದೆ, ಪತ್ರಿಕೆಗಳಿಗೆ ಆರ್ಟಿಕಲ್ ಬರೆಯುತ್ತಿದ್ದೆ. ಕೇಬಲ್ ಚಾನಲ್‌ಗಳಲ್ಲಿ ಕೆಲಸ ಮಾಡ್ತಿದ್ದೆ. ಹೀಗೆ ಮಾಡ್ತಾ ಮಾಡ್ತಾ ಅದರಿಂದ ಸಿಕ್ಕ ಅನುಭವ ನನ್ನ ವೃತ್ತಿಗೆ ಸಹಕಾರಿಯಾಯಿತು. ಐದಾರು ಭಾಷೆ ವಾಯ್ಸ್ ಕೊಡುತ್ತೇನೆ. ಕನ್ನಡ, ಇಂಗ್ಲೀಷ್ ವಾಯ್ಸ್ ಕೊಡುವುದು ಹೆಚ್ಚು. ಕಿರುತೆರೆ ಕಾರ್ಯಕ್ರಮ, ಜಾಹೀರಾತು, ಜಿಂಗಲ್ಸ್‌ಗೆ ವಾಯ್ಸ್ ಕೊಡ್ತೀನಿ" ಎಂದಿದ್ದಾರೆ.

ಆರಂಭದ ದಿನಗಳಲ್ಲಿ ಮೆಟ್ರೋ ಸ್ಟೇಷನ್ ಬಗ್ಗೆ ಮಾಹಿತಿ ಕೊಡುವ ವಾಯ್ಸ್ ಓವರ್ ಕೂಡ ಕೊಟ್ಟಿದ್ದೆ ಎಂದು ಬಡೆಕ್ಕಿಲ ಪ್ರದೀಪ್ ನೆನಪು ಮಾಡಿಕೊಂಡಿದ್ದಾರೆ. "ಮೆಟ್ರೋ ಬಂದ ಆರಂಭದಲ್ಲಿ ಕನ್ನಡದಲ್ಲಿ ಅಪರ್ಣ ಮೇಡಂ ವಾಯ್ಸ್ ಕೊಟ್ಟಿದ್ರು, ಇಂಗ್ಲೀಷ್ ನನ್ನ ವಾಯ್ಸ್ ಇತ್ತು. ಕೆಲ ಸ್ಟೇಷನ್‌ಗಳ ಹೆಸರು ಬದಲಾದಂತೆ ಬೇರೆಯವರಿಂದ ವಾಯ್ಸ್ ಕೊಡ್ತಿದ್ದಾರೆ. ಮೆಟ್ರೋ ಬಂದ ಹೊಸತರಲ್ಲಿ ನನ್ನ ವಾಯ್ಸ್ ಬಳಸಿಕೊಂಡಿದ್ರು. ಇವತ್ತಿಗೂ ಕೇಳಿದ್ರೆ ಮಾಡ್ತೀನಿ. ನಾನು ಹುಡುಕಿಕೊಂಡು ಹೋಗಿದ್ದಲ್ಲ, ಆ ಅವಕಾಶ ನನ್ನನ್ನು ಅರಸಿ ಬಂದಿದ್ದು" ಎಂದಿದ್ದಾರೆ.
ಆರಂಭದಲ್ಲಿ ಎಲ್ಲಾ ರಿಯಾಲಿಟಿ ಶೋಗಳ ರೀತಿ ಬಿಗ್‌ಬಾಸ್ ಎಂದು ಪ್ರದೀಪ್ ಅಂದುಕೊಂಡಿದ್ದರಂತೆ. ಬಳಿಕ ಶೋಗೆ ಸಿಕ್ಕ ಯಶಸ್ಸಿನ ಬಗ್ಗೆ ಮೆಚ್ಚಿ ಮಾತನಾಡುತ್ತಾರೆ. "ಹಿಂದಿಯಲ್ಲಿ ಗೆದ್ದ ಬಳಿಕ ಪ್ರಾದೇಶಿಕ ಭಾಷೆ ಅಂತ ಮೊದಲಿಗೆ ಬಂದಿದ್ದು ನಮ್ಮ ಕನ್ನಡದಲ್ಲಿ. ಶೋ ಸಕ್ಸಸ್ ಅನ್ನು ನಂಬುವುದಕ್ಕೆ ಆಗಲ್ಲ. ಅಷ್ಟರಮಟ್ಟಿಗೆ ಜನರನ್ನು ತಲುಪಿದೆ. ಕೆಲವ್ರು ಬಿಗ್‌ಬಾಸ್ ಶೋ ಸ್ಕ್ರಿಪ್ಟೆಡ್ ಅಂದುಕೊಂಡಿದ್ದಾರೆ. ನನ್ನನ್ನು ಇದೇ ಪ್ರಶ್ನೆ ಕೇಳ್ತಾರೆ. ಆದರೆ ಸ್ಕ್ರಿಪ್ಟೆಡ್ ಅಲ್ಲ. ವಿಭಿನ್ನ ವ್ಯಕ್ತಿತ್ವದ ಜನ ಒಂದ್ಕಡೆ ಇದ್ದಾಗ ಭಿನ್ನ ವಿಭಿನ್ನ ಸನ್ನಿವೇಶಗಳು ಎದುರಾಗುತ್ತೆ. ಅದಕ್ಕೆ ತಕ್ಕಂತೆ ಎಲ್ಲರೂ ಪ್ರತಿಕ್ರಿಯಿಸುತ್ತಾರೆ. ಅದು ಜನರಿಗೆ ಚೆನ್ನಾಗಿ ಕನೆಕ್ಟ್ ಆಗುತ್ತೆ. ಬಿಗ್‌ಬಾಸ್ ನರೇಟರ್ ವಾಯ್ಸ್ ಕೂಡ ನಾನು ಮನೆಯಿಂದಲೇ ರೆಕಾರ್ಡ್ ಮಾಡಿ ಕೊಡ್ತೀನಿ" ಎಂದಿದ್ದಾರೆ.
ಸುದೀಪ್ ಸರ್ ನನ್ನ ವಾಯ್ಸ್ ಬಗ್ಗೆ ಮೆಚ್ಚಿ ಮಾತನಾಡಿರುವುದನ್ನು ಇಂದಿಗೂ ಮರೆಯೋಕೆ ಸಾಧ್ಯವಿಲ್ಲ. ನಾನು ಎಲ್ಲೇ ಹೋದರು ಜನ ಗುರ್ತಿಸ್ತಾರೆ. ಅದಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. "ನನಗಿಂತ ಅದ್ಭುತ ಪ್ರತಿಭೆಗಳಿದ್ದಾರೆ. ನಾನು ಅದ್ಭುತ ಎಂದುಕೊಂಡಿಲ್ಲ. ಆದರೂ ಅವರೆಲ್ಲರ ನಡುವೆ ನನಗೆ ಪ್ರೀತಿ ಕೊಟ್ಟು ಜನ ಬೆಳೆಸಿದ್ದಾರೆ. ಇವತ್ತಿಗೂ ಜನ ನನ್ನನ್ನು ಗುರ್ತಿಸುತ್ತಾರೆ. ಅದನ್ನು ಮರೆಯೋಕೆ ಸಾಧ್ಯವಿಲ್ಲ, ಅದು ನನ್ನ ಭಾಗ್ಯ. ಇದೆಲ್ಲಾ ದೇವರ ಕೃಪೆ. ಜನರ ಪ್ರೀತಿಗೆ ನಾನು ಆಭಾರಿ" ಎಂದು ಪ್ರದೀಪ್ ವಿವರಿಸಿದ್ದಾರೆ.
"ನನ್ನ ಕಂಠ ದೇವರು ಕೊಟ್ಟಿದ್ದು. ನಾನು ಮಾಡಿಕೊಂಡಿದ್ದು ಏನೂ ಇಲ್ಲ. ಆದರೆ ಅಭ್ಯಾಸದಿಂದ ಒಂದು ಮಟ್ಟಿಗೆ ರೂಢಿಸಿಕೊಳ್ಳಬಹುದು. ಪ್ರತಿ ಸ್ಕ್ರಿಪ್ಟ್ ಹೊಸದಾಗಿರುತ್ತದೆ. ಅದರಿಂದ ಕಲಿಯುವುದು ಇರುತ್ತದೆ. ಆಹಾರ ಕ್ರಮ, ವ್ಯಾಯಾಮ ಅಂತ ನಾನೇನು ಮಾಡಲ್ಲ. ಬೇರೆಯವರು ಮಾಡ್ತಾರೆ ಅನ್ನಿಸುತ್ತೆ ಗೊತ್ತಿಲ್ಲ. ನಾನು ಅಲೋಶಿಯಸ್ ಕಾಲೇಜು ವಿದ್ಯಾರ್ಥಿ. ನಾನು ಕನ್ನಡ ಮಾಧ್ಯಮ ವಿದ್ಯಾರ್ಥಿ. ಆದರೆ ಆ ಕಾಲೇಜಿಗೆ ಸೇರಿದ್ದು ಇಂಗ್ಲೀಷ್ ಕಲಿಯಲು ಹೆಚ್ಚು ಸಹಕಾರಿ ಆಯಿತು. ನನಗೆ ಇಂಗ್ಲೀಷ್ ಮೇಲೆ ಹಿಡಿತ ಸಾಧಿಸಲು ಅದು ಸಹಕಾರಿಯಾಯಿತು. ಇಂಗ್ಲೀಷ್ ಕಾರ್ಯಕ್ರಮಗಳಲ್ಲಿ ಧೈರ್ಯವಾಗಿ ಮಾತನಾಡಲು ವರದಾನವಾಯಿತು" ಎಂದು ಪ್ರದೀಪ್ ತಿಳಿಸಿದ್ದಾರೆ.
ಬಿಗ್‌ಬಾಸ್ ಸೀಸನ್ 12 ಶೋಗಾಗಿ ನಾನು ಕಾಯುತ್ತಿದ್ದೀನಿ. 12 ವರ್ಷಗಳಿಂದ ನಾನು ಕಲರ್ಸ್ ಕನ್ನಡ ಭಾಗವಾಗಿದ್ದೀನಿ. ಎಲ್ಲಾ ಶೋಗಳ ಬಗ್ಗೆ ಆಸಕ್ತಿ ಇದೆ. ಬಿಗ್‌ಬಾಸ್ ಎಂದಾಗ ಕೊಂಚ ಹೆಚ್ಚೇ ಕುತೂಹಲ ಇರುತ್ತೆ. ಪ್ರತಿ ಸೀಸನ್ ಹೊಸತನ್ನು ಹೊತ್ತು ತರುತ್ತದೆ. ಸುದೀಪ್ ಸರ್ ನಿರೂಪಣೆ ಮಾಡುವುದು ನಮಗೂ ಖುಷಿ. ಅಷ್ಟು ಚೆನ್ನಾಗಿ ಅವರು ಕಾರ್ಯಕ್ರಮ ನಡೆಸಿಕೊಡ್ತಾರೆ. ಹಾಗಾಗಿ ಸಹಜವಾಗಿಯೇ ಬಿಗ್‌ಬಾಸ್ ಅಂದ್ರೆ ನಾನು ಕಾಯ್ತಿರ್ತೀನಿ ಎಂದು ಪ್ರದೀಪ್ ಹೇಳಿದ್ದಾರೆ.


Click it and Unblock the Notifications











