For Quick Alerts
  ALLOW NOTIFICATIONS  
  For Daily Alerts

  'ಮಾಲ್ಗುಡಿ ಡೇಸ್' ಕನ್ನಡ ಡಬ್ಬಿಂಗ್‌‌ಗೆ ಒಕ್ಕೊರಲ ಆಗ್ರಹ

  By Rajendra
  |
  ಶಂಕರ್ ನಾಗ್ ಅವರ ಮಾಲ್ಗುಡಿ ಡೇಸ್ ಧಾರಾವಾಹಿ ಶನಿವಾರ (ಜೂ.16)ದಿಂದ ಜನಶ್ರೀ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ. ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 9.30ಕ್ಕೆ ಈ ಧಾರಾವಾಹಿ ಪ್ರಸಾರವಾಗಲಿದೆ. ಕನ್ನಡ ಸಬ್ ಟೈಟಲ್‌ನಲ್ಲಿ ಈ ಧಾರಾವಾಹಿ ಪ್ರಸಾರವಾಗುತ್ತಿರುವುದು ವಿಶೇಷ.

  ಆದರೆ ಈ ಅದ್ಭುತ ಧಾರಾವಾಹಿಯನ್ನು ಕನ್ನಡಕ್ಕೆ ಡಬ್ ಮಾಡಿ ಕನ್ನಡೀಕರಿಸಬೇಕೆಂದು ಬಸವಾಸಿ ಬಳಗ ಆಗ್ರಹಿಸಿದೆ. ಅವರು ಜನಶ್ರೀ ಸುದ್ದಿ ವಾಹಿನಿ ಮುಖ್ಯಸ್ಥ ಅನಂತ್ ಚಿನಿವಾರ್ ಅವರನ್ನು ಭೇಟಿ ಮಾಡಿ ಬನವಾಸಿ ಬಳಗದ ಸದಸ್ಯರಾದ ಅಮರನಾಥ್ ಶಿವಶಂಕರ್, ಚೇತನ್, ಆನಂದ ಗುರು, ವಿವೇಕ್ ಶಂಕರ್ ಸೇರಿದಂತೆ ಹಲವರು ಮನವಿ ಪತ್ರ ಸಲ್ಲಿಸಿದರು.

  ಅನಂತ್ ಚಿನಿವಾರ್ ಅವರು ಮಾತನಾಡುತ್ತಾ, "ಬನವಾಸಿ ಬಳಗದ ಮನವಿಯನ್ನು ಟಿವಿ ಅಸೋಸಿಯೇಷನ್ ಹಾಗೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ತಿಳಿಸುತ್ತೇವೆ" ಎಂಬ ಭರವಸೆ ನೀಡಿದ್ದಾರೆ. ಬನವಾಸಿ ಬಳಗ ಸಲ್ಲಿಸಿದ ಮನವಿ ಪತ್ರದ ಸಾರಾಂಶ ಹೀಗಿದೆ.

  "ಶಂಕರ್‌ನಾಗ್‌ರವರ "ಮಾಲ್ಗುಡಿ ಡೇಸ್" ಎನ್ನುವ ಧಾರಾವಾಹಿಯು ಕನ್ನಡದಲ್ಲಿಯೇ ಪ್ರಸಾರವಾಗಬೇಕೆಂದೂ, ಇದು ಕನ್ನಡದಲ್ಲಿಯೇ ಮನರಂಜನೆಯನ್ನು ಪಡೆದುಕೊಳ್ಳುವ ಕನ್ನಡಿಗರ ಮೂಲಭೂತ ಹಕ್ಕನ್ನು ಎತ್ತಿಹಿಡಿಯುತ್ತಿರುವ ಕ್ರಮವಾಗಿದ್ದು, ಪರಭಾಷೆಯಲ್ಲಿ ತಯಾರಾಗುವ ಒಳ್ಳೆಯ ಕಾರ್ಯಕ್ರಮಗಳನ್ನು ಇತರೆ ಭಾರತೀಯ ಪ್ರಜೆಗಳಂತೆಯೇ, ನಮ್ಮ ತಾಯ್ನುಡಿಯಲ್ಲೇ ನೋಡುವ ಅವಕಾಶ ಮಾಡಿಕೊಡಬೇಕೆಂದೂ ಕೋರುತ್ತಾ "ಮಾಲ್ಗುಡಿ ಡೇಸ್" ಕನ್ನಡದಲ್ಲೇ ಬರಬೇಕೆಂದು ಮನವಿ ನೀಡಲಾಯಿತು.

  ಡಬ್ಬಿಂಗ್ ಮೇಲೆ ಭಾರತದ, ಕರ್ನಾಟಕದ ಯಾವುದೇ ಕಾನೂನೂ ನಿಷೇಧ ಹೇರಿಲ್ಲ. ಡಬ್ಬಿಂಗ್ ಮೇಲೆ ಯಾವುದೇ ಕಾನೂನಾತ್ಮಕ ನಿಷೇಧ ಇಲ್ಲ ಎಂದು ಚಿತ್ರರಂಗದ, ಕಿರುತೆರೆಯ ಹಲವಾರು ಹಿರಿಯರೂ ಕೂಡ ಇತ್ತೀಚೆಗಿನ ಡಬ್ಬಿಂಗ್ ಕುರಿತ ಚರ್ಚೆಗಳಲ್ಲಿ ಹೇಳಿಕೆ ನೀಡಿದ್ದಾರೆ. ಹೀಗಿರುವಾಗ ಕನ್ನಡದ ಸೊಗಡಿನ ಇಂತಹ ಅಪರೂಪದ ಕಾರ್ಯಕ್ರಮವನ್ನು ಕನ್ನಡದಲ್ಲೇ ಡಬ್ ಮಾಡಿ ಪ್ರಸಾರ ಮಾಡಲು ಮುಂದಾಗಬೇಕೆಂದು ಜನಶ್ರೀ ವಾಹಿನಿಯವರಿಗೆ ಮನವಿ ಮಾಡಲಾಯಿತು.

  ಹೆಮ್ಮೆಯ ಕನ್ನಡಿಗ, ಆಟೋರಾಜ ಶಂಕರನಾಗ್ ಅವರಿಗೆ ರಾಷ್ಟ್ರಮಟ್ಟದಲ್ಲಿ ಜನಪ್ರಿಯತೆ ತಂದುಕೊಟ್ಟ ಧಾರವಾಹಿ ಇದು. ಆರ್ ಕೆ ನಾರಾಯಣ್ ಅವರ ಕಥೆಯನ್ನು ಆಧರಿಸಿ ಶಂಕರನಾಗ್ ಈ ಧಾರವಾಹಿಯನ್ನು ನಿರ್ದೇಶನ ಮಾಡಿದ್ದರು. 1990ರಲ್ಲಿ ಅನಾರೋಗ್ಯದ ಕಾರಣ ಚೆನ್ನೈಗೆ ಸ್ಥಳಾಂತರಗೊಳ್ಳುವ ಮೊದಲು ಆರ್ ಕೆ ನಾರಾಯಣ್ ಅವರು ಮೈಸೂರಿನ ಯಾದವಗಿರಿ ಬಡಾವಣೆಯ ಮನೆಯಲ್ಲಿ ಎರಡು ದಶಕಗಳ ಕಾಲ ಜೀವಿಸಿದ್ದರು.

  1986 ರಲ್ಲಿ ಇದು ದೂರದರ್ಶನದಲ್ಲಿ ಇದು ಮೊದಲಬಾರಿಗೆ ಪ್ರಸಾರವಾಗಿತ್ತು. ಕರ್ನಾಟಕದ ಆಗುಂಬೆಯಲ್ಲಿ ಈ ಧಾರವಾಹಿಯನ್ನು ಚಿತ್ರೀಕರಣ ಮಾಡಲಾಗಿತ್ತು. ಅನಂತನಾಗ್, ಲೋಕನಾಥ್, ರಮೇಶ್ ಭಟ್, ವೈಶಾಲಿ ಕಾಸರವಳ್ಳಿ, ಮನದೀಪ್ ರಾಯ್, ಮಾಸ್ಟರ್ ಮಂಜುನಾಥ್, ಗಿರೀಶ್ ಕಾರ್ನಾಡ್ ಮುಂತಾದವರು ಈ ಧಾರಾವಾಹಿಯಲ್ಲಿ ಅಭಿನಯಿಸಿದ್ದಾರೆ. (ಒನ್‌ಇಂಡಿಯಾ ಕನ್ನಡ)

  English summary
  Pro Kannada organisation Banavasi Balaga demands for dubbed version of Shankar Nag directed Serial Malgudi Days. This serial will be air from 16th June Saturday on Janasri news channel on every Saturday and Sunday with Kannada sub titles.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X