ಅಂದು ದರ್ಶನ್.. ಇಂದು ರಕ್ಷಕ್; ಹೆಣ್ಣು ದೇವತೆ ಬಗ್ಗೆ ಅಪಹಾಸ್ಯ ಮಾಡಿ ಟ್ರೋಲ್!
ರಕ್ಷಕ್ ಬುಲೆಟ್ ಅಂದ್ರೆ ಮಾತು.. ಮಾತು ಅಂದ್ರೆ ರಕ್ಷಕ್ ಬುಲೆಟ್. ತಮ್ಮ ಮಾತಿನ ದಾಟಿಯಿಂದಾನೇ ಸಿಕ್ಕಾಪಟ್ಟೆ ಫೇಮಸ್ ಆದವರು ರಕ್ಷಕ್ ಬುಲೆಟ್. ಕೆಲವೊಮ್ಮೆ ಆ ಮಾತುಗಳಿಂದಾನೇ ಟ್ರೋಲ್ ಕೂಡ ಆಗಿದ್ದಾರೆ. ಈಗಲೂ ತಮ್ಮದೇ ಆದ ಡೈಲಾಗ್ ನಿಂದ ಬರೀ ಟ್ರೋಲ್ ಅಲ್ಲ ಹಲವರ ಭಾವನೆಗಳಿಗೂ ಧಕ್ಕೆ ತಂದಿದ್ದಾರೆ. ವಿಡಿಯೋ ವೈರಲ್ ಆದಾಗಿನಿಂದ ಕ್ರಮಕ್ಕೆ ಒತ್ತಾಯಿಸುತ್ತಿದ್ದಾರೆ.
ಜೀ ಕನ್ನಡದ ಭರ್ಜರಿ ಬ್ಯಾಚುಲರ್-2 ಶೋ ನಡೆಸುತ್ತಾ ಇದೆ. ಇದರಲ್ಲಿ ರಕ್ಷಕ್ ಬುಲೆಟ್ ಕೂಡ ಸ್ಪರ್ಧಿ. ರಕ್ಷಕ್‌ಗೆ ರಮೋಲಾ ಜೋಡಿಯಾಗಿದ್ದಾರೆ. ವಾರ ವಾರವೂ ವಿಭಿನ್ನ ಕಂಟೆಂಟ್ ಅನ್ನ ನೀಡಲಾಗುತ್ತದೆ. ಕಳೆದ ವಾರ ಸಿನಿಮಾದ ಸೀನ್‌ಗಳನ್ನು ರೀ-ಕ್ರಿಯೇಟ್ ಮಾಡುವ ಟಾಸ್ಕ್ ಇತ್ತು. ಅಲ್ಲಿ ರಕ್ಷಕ್ ಬುಲೆಟ್ ಯಡವಟ್ಟು ಮಾಡಿದ್ದಾರೆ. ಈಗ ಆ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಬುಲ್ ಬುಲ್ ಡೈಲಾಗ್
ರಕ್ಷಕ್ ಹಾಗೂ ರಮೋಲಾ ಜೋಡಿಗೆ 'ಬುಲ್ ಬುಲ್' ಸಿನಿಮಾದ ದೃಶ್ಯವನ್ನ ರೀ-ಕ್ರಿಯೇಟ್ ಮಾಡಲು ಟಾಸ್ಕ್ ನೀಡಲಾಗಿತ್ತು. ಅದರಂತೆ ಫಾರಿನ್‌ನಲ್ಲಿ ದರ್ಶನ್, ರಚಿತಾ ರಾಮ್‌ರನ್ನು ಒಲಿಸಿಕೊಳ್ಳಲು ಹೇಳಿದ ಡೈಲಾಗ್ ಅನ್ನು ರಕ್ಷಕ್ ಅಚ್ಚುಕಟ್ಟಾಗಿ ಹೇಳಿದ್ದರು. ಆದರೆ ಆ ಸಿನಿಮಾದಲ್ಲಿ ಇಲ್ಲದೆ ಇರುವ ಡೈಲಾಗ್ ಇಂದು ವೇದಿಕೆ ಮೇಲೆ ಕ್ರಿಯೇಟ್ ಆಗಿತ್ತು. ಇದೇ ಈಗ ವಿವಾದಕ್ಕೆ ಕಾರಣವಾಗಿದೆ.
ಚಾಮುಂಡೇಶ್ವರಿ ಬಗ್ಗೆ ಅಪಹಾಸ್ಯ
ಈ ರೀತಿಯ ಸ್ಕಿಟ್‌ಗಳಿಗೆ ಅಂತಾನೇ ಡೈರೆಕ್ಟರ್ಸ್ ಇರ್ತಾರೆ. ಬರೆಯುವಾಗ ತಾಯಿ ಚಾಮುಂಡೇಶ್ವರಿಯನ್ನು ಜಸ್ಟ್ ಒನ್ ಕಂಟೆಂಟ್ ಆಗಿ ತೆಗೆದುಕೊಂಡು ಬಿಟ್ಟರಾ..? ಎಂಬ ಪ್ರಶ್ನೆ ಈಗ ಭಕ್ತರಿಗೆ ಕಾಡುವುದಕ್ಕೆ ಶುರುವಾಗಿದೆ. ಯಾಕಂದ್ರೆ ರಕ್ಷಕ್ ಹೇಳುವ ಡೈಲಾಗ್‌ನಲ್ಲಿ, 'ನಾವೂ ಮಂಡ್ಯದವರೆ ಕಂಡ್ರಿ. ನಿಮ್ಮನ್ನ ನೋಡ್ತಾ ಇದ್ದಂತೆ ಅಂದುಕೊಂಡೆ, ತಾಯಿ ಚಾಮುಂಡೇಶ್ವರಿಯೇ ಬೆಟ್ಟದಿಂದ ಇಳಿದು, ಸೀರೆ, ಒಡವೆಗಳನ್ನೆಲ್ಲ ಬಿಚ್ಚಿಟ್ಟು, ಜೀನ್ಸ್, ಟೀ ಶರ್ಟ್ ಹಾಕಿ, ಸ್ವಿಟ್ಜರ್ಲೆಂಡ್‌ನಲ್ಲಿ ಟ್ರಿಪ್ ಹೊಡೀತಾ ಇದಾರೆ ಅಂತ' ಅನ್ನೋ ಡೈಲಾಗ್ ಹೊಡೆದಿದ್ದಾರೆ.
ರಕ್ಷಕ್ ಬಗ್ಗೆ ಬೇಸರ
ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಸಿದ್ದು ಎನ್ನುವವರು ಟ್ವಿಟ್ಟರ್ ಮೂಲಕ ಸಂಬಂಧಪಟ್ಟವರಿಗೆ ಟ್ಯಾಗ್ ಮಾಡಿದ್ದಾರೆ. ಮೈಸೂರಿನ ಪೊಲೀಸ್ ಕಮಿಷನರ್‌ಗೆ ಟ್ಯಾಗ್ ಮಾಡಿ, ಪೌರಾಣಿಕ ಹಿನ್ನೆಲೆ ಇರುವ 51 ಶಕ್ತಿ ಪೀಠಗಳಲ್ಲಿ ಒಂದಾದ ಕೋಟ್ಯಾಂತರ ಭಕ್ತರ ಆರಾಧ್ಯ ತಾಯಿ ಚಾಮುಂಡೇಶ್ವರಿಯ ಕುರಿತು ಅತಿ ಕೆಟ್ಟ ರೀತಿಯಲ್ಲಿ ಮಾತನಾಡಿ ನಮ್ಮೆಲ್ಲರ ಭಾವನೆಗೆ ಧಕ್ಕೆ ಉಂಟು ಮಾಡಿರುವ ಕಿರುತೆರೆ ವಾಹಿನಿ ಎಂದು ವಿಡಿಯೋದಲ್ಲಿ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಕಾರ್ಯಕ್ರಮದ ನಿರ್ದೇಶಕರು, ಆಯೋಜಕರು ಇದನ್ನೆಲ್ಲಾ ಗಮನಿಸುವುದಿಲ್ಲವೇ? ಟಿಆರ್‌ಪಿಗಾಗಿ ಏನು ಬೇಕಾದರೂ ಹಾಕ್ತಾರಾ? ಎಂದು ಬೇಸರ ಹೊರ ಹಾಕುತ್ತಿದ್ದಾರೆ.
ದರ್ಶನ್ ಕೂಡ ಟ್ರೋಲ್
ಈ ಹಿಂದೆ ಕೂಡ ಹೆಣ್ಣು ದೇವರ ವಿಚಾರದಲ್ಲಿ ನಟ ದರ್ಶನ್ ಸಾಕಷ್ಟು ವಿರೋಧ, ಟೀಕೆಗಳನ್ನ ಎದುರಿಸಿದ್ದರು. ಸಂದರ್ಶನವೊಂದರಲ್ಲಿ ಮಾತನಾಡುತ್ತಾ ಅದೃಷ್ಟ ದೇವತೆಯನ್ನ ಬೆತ್ತಲೆ ಮಾಡಿ, ರೂಮಿನಲ್ಲಿ ಕೂಡಿ ಹಾಕಬೇಕು. ಎಲ್ಲಿಯೂ ಹೋಗದಂತೆ ಲಾಕ್ ಮಾಡಬೇಕು ಎಂದು ಹೇಳಿದ್ದರು. ಆ ಮಾತು ಸಿಕ್ಕಾಪಟ್ಟೆ ವಿರೋಧಕ್ಕೆ ಗುರಿಯಾಗಿತ್ತು. ಜನರ ಧಾರ್ಮಿಕ ಭಾವನೆಗೆ ಧಕ್ಕೆ ತರುವುದು ಸರಿಯಲ್ಲ. ನಂಬಿಕೆಗೆ ಧಕ್ಕೆ ಬರುವಂತ ಮಾತುಗಳನ್ನ ದೊಡ್ಡ ಸ್ಥಾನದಲ್ಲಿರೋ ನಟರು ಆಡಿದರೆ ಹೇಗೆ ಎಂಬ ಪ್ರಶ್ನೆ ಎದುರಾಗಿತ್ತು. ಸಿಕ್ಕಾಪಟ್ಟೆ ವೈರಲ್ ಕೂಡ ಆಗಿತ್ತು. ಈಗ ರಕ್ಷಕ್ ಬುಲೆಟ್ ಕೂಡ ಇಂಥದ್ದೇ ಎಡವಟ್ಟು ಮಾಡಿದ್ದಾರೆ.


Click it and Unblock the Notifications











