ಸ್ವಿಮಿಂಗ್‌ಪೂಲ್‌ನಲ್ಲಿ 'ಬಿಗ್ ಬಾಸ್' ಜೋಡಿಯ ಸರಸ-ಸಲ್ಲಾಪ ; ವಿಡಿಯೋ ವೈರಲ್ - ಜನಾಕ್ರೋಶ
ಹಿಂದೆ ಒಂದು ಕಾಲ ಇತ್ತು. ಆ ಕಾಲದಲ್ಲಿ ಚಿತ್ರರಂಗದ ಧ್ರುವತಾರೆಯರ ವೈಯಕ್ತಿಕ ಬದುಕು ತುಂಬಾನೇ ಖಾಸಗಿಯಾಗಿರುತ್ತಿತ್ತು. ಕೇವಲ ಚಿತ್ರ ಬಿಡುಗಡೆ ಸಂದರ್ಭದಲ್ಲಿ ಪತ್ರಿಕೆಯಲ್ಲಿ ಇವರ ಸಂದರ್ಶನ ಬರುತ್ತಿತ್ತು. ಟಿವಿ ಮೂಲಕ ಜನರಿಗೆ ತಮ್ಮ ನೆಚ್ಚಿನ ನಾಯಕ-ನಾಯಕಿಯ ದರ್ಶನವಾಗುತ್ತಿತ್ತು.
ಆದರೆ ಈಗ ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ತಮ್ಮ ನೆಚ್ಚಿನ ಸ್ಟಾರ್ ಗಳ ಚಿತ್ರಕ್ಕಿಂತ ಅವರ ಖಾಸಗಿ ಬದುಕಿನ ಕುರಿತು ಕುತೂಹಲ ಇನ್ನೂ ಹೆಚ್ಚಾಗಿದೆ. ಇದಕ್ಕೆ ಪೂರಕವಾಗಿ ಬೆಳ್ಳಿತೆರೆ-ಕಿರುತೆರೆ ಎನ್ನುವ ಭೇದ ಭಾವ ಇಲ್ಲದೆ ಹಲವು ಕಲಾವಿದರ ಮನಸ್ಥಿತಿ ಕೂಡ ಬದಲಾಗಿದೆ. ಮುಖಕ್ಕೆ ಮೇಕಪ್ ಮಾಡ್ಕೊಂಡು ಆಕ್ಟಿಂಗ್ ಮಾಡುವ ಬದಲು ಹಲವರು ಈಗ ಯೂಟ್ಯೂಬರ್ ಗಳಾಗಿದ್ದಾರೆ. ತಮ್ಮ ತಮ್ಮ ಯೂಟ್ಯೂಬ್ ಚಾನೆಲ್‌ಗಳನ್ನು ಹೊಂದಿದ್ದಾರೆ.

ಇನ್ನು ಜನಸಾಮಾನ್ಯರಂತೆ ಇವರಿಗೂ ಕೂಡ ಲೈಕ್, ಕಾಮೆಂಟ್, ಶೇರ್ ಮತ್ತು ಸಬ್‌ಸ್ಕ್ರಿಪ್ಷನ್ ಹುಚ್ಚಿದೆ. ಈ ಹುಚ್ಚಿನಲ್ಲಿ ತಮ್ಮ ಖಾಸಗಿ ಬದುಕನ್ನೂ ಕೂಡ ಮನರಂಜನೆಯ ಸರಕು ಎಂದುಕೊಂಡ ಇವರು ಬೆಳಗ್ಗೆ ಎದ್ದ ಕ್ಷಣದಿಂದ ರಾತ್ರಿ ಮಲಗುವ ತನಕದ ತಮ್ಮ ದಿನಚರಿಯನ್ನು ವ್ಲಾಗ್ ಮೂಲಕ ಹಂಚಿಕೊಳ್ಳುತ್ತಿದ್ದಾರೆ. ಸದ್ಯ ಇಂತಹದ್ದೇ ಒಂದು ವಿಡಿಯೋವನ್ನು ಕರಣ್ ಕುಂದ್ರಾ ಮತ್ತು ತೇಜಸ್ವಿ ಪ್ರಕಾಶ್ ಹಂಚಿಕೊಂಡಿದ್ದು ಜನಸಾಮಾನ್ಯರನ್ನು ಈ ವಿಡಿಯೋ ಕೆರಳಿಸಿದೆ.
ಹೌದು, ಕರಣ್ ಕುಂದ್ರಾ ಮತ್ತು ತೇಜಸ್ವಿ ಪ್ರಕಾಶ್.. ಹಿಂದಿ ಕಿರುತೆರೆಯ ಖ್ಯಾತ ಸ್ಟಾರ್ಸ್ ''ಕಿತನಿ ಮೊಹಬ್ಬತ್ ಹೈ' ' ಧಾರಾವಾಹಿಯ ಮೂಲಕ 2009ರಲ್ಲಿ ಕಿರುತೆರೆಯನ್ನು ಪ್ರವೇಶ ಮಾಡಿದ ಕರಣ್ ಕುಂದ್ರಾ ಆ ನಂತರ ''ಯೇ ಕಹಾನ್ ಆ ಗಯೇ ಹಮ್''..''ದಿಲ್ ಹೀ ತೋ ಹೈ''.. ''ಯೇ ರಿಶ್ತಾ ಕ್ಯಾ ಕೆಹ್ಲಾತಾ ಹೈ''.. ಧಾರಾವಾಹಿಗಳ ಮೂಲಕ ಜನ ಮನ ಗೆದ್ದರು. ''MTV ರೋಡೀಸ್''..''ಲವ್ ಸ್ಕೂಲ್''..''ಟೆಂಪ್ಟೇಶನ್ ಐಲ್ಯಾಂಡ್ ಇಂಡಿಯಾ''.. ಅಂತಹ ಶೋಗಳಿಗೆ ನಿರೂಪಕನಾಗಿ ಕೆಲಸ ಮಾಡಿದರು.
ಇನ್ನು ತೇಜಸ್ವಿ ಪ್ರಕಾಶ್ ಅವರಿಗೆ ''ಸ್ವರಾಗಿಣಿ'' ಬೇಕಿದ್ದ ಬ್ರೇಕ್ ನೀಡಿತು. ''ಪೆಹ್ರೆದಾರ್ ಪಿಯಾ ಕಿ''..''ರಿಶ್ತಾ ಲಿಖೇಂಗೆ ಹಮ್ ನಯಾ''.. ಧಾರಾವಾಹಿಯಲ್ಲಿ ಕಾಣಿಸಿಕೊಂಡ ತೇಜಸ್ವಿ ಪ್ರಕಾಶ್ ಅವರ ಬದುಕನ್ನು ''ನಾಗಿನ್ 6'' ಧಾರಾವಾಹಿ ಸಂಪೂರ್ಣ ಬದಲಿಸಿತು. ''ಖತ್ರೋನ್ ಕೆ ಖಿಲಾಡಿ 10'' ರಲ್ಲಿ ಕೂಡ ಕಾಣಿಸಿಕೊಂಡಿದ್ದರು ತೇಜಸ್ವಿ ಪ್ರಕಾಶ್.
ಇಂಥಾ ಕರಣ್ ಕುಂದ್ರಾ ಮತ್ತು ತೇಜಸ್ವಿ ಪ್ರಕಾಶ್ 2021ರಲ್ಲಿ ''ಬಿಗ್ ಬಾಸ್'' ಮನೆಗೆ ಹೋಗಿದ್ದರು. ಇದೇ ಸಮಯದಲ್ಲಿ ಇಬ್ಬರು ನಡುವೆ ಪ್ರೇಮಾಂಕುರವಾಗಿತ್ತು.''ಬಿಗ್ ಬಾಸ್''ನ ಈ 15ನೇ ಸೀಸನ್‌ನಲ್ಲಿ ತೇಜಸ್ವಿ ಪ್ರಕಾಶ್ ಟ್ರೋಫಿ ಮುಡಿಗೇರಿಸಿಕೊಂಡರೆ ಕರಣ್ ಕುಂದ್ರಾ ರನ್ನರ್ ಅಪ್ ಆಗಿ ಹೊರ ಹೊಮ್ಮಿದರು.

ಹೀಗೆ ''ಬಿಗ್ ಬಾಸ್'' ಮನೆಯಿಂದ ಹೊರ ಬಂದ ಇಬ್ಬರು ಗ್ರಹಸ್ಥಾಶ್ರಮಕ್ಕೆ ಕಾಲಿಡಲು ಮುಂದಾಗಿದ್ದರು. ಆದರೆ.. ತೇಜಸ್ವಿ ಅವರ ತಾಯಿ ಜೊತೆಯಲ್ಲಿ ಇಬ್ಬರು ಇನ್ನೂ ಕೆಲ ದಿನ ಕಾಲ ಕಳೆಯುವಂತೆ ಸಲಹೆ ನೀಡಿದರು. ಪರಸ್ಪರ ಅರ್ಥಮಾಡಿಕೊಳ್ಳಲು ಸಮಯಾವಕಾಶ ತೆಗೆದುಕೊಳ್ಳಿ ಎಂದು ಹೇಳಿದರು. ಒಂದು ವರ್ಷ ಜೊತೆಯಲ್ಲಿ ಓಡಾಡಿ ಆಮೇಲೆ ಮದುವೆ ಯೋಚನೆ ಮಾಡೋಣ ಎಂದು ಹೇಳಿದರು.
ತೇಜಸ್ವಿ ಪ್ರಕಾಶ್ ಅವರ ತಾಯಿಯ ಈ ಸಲಹೆಯ ಮೇರೆಗೆ ಕಳೆದ 5 ವರ್ಷಗಳಿಂದ ಪ್ರೇಮದ ಅಮಲನ್ನೇರಿಸಿಕೊಂಡು ಓಡಾಡುತ್ತಿರುವ ಕರಣ್ ಕುಂದ್ರಾ ಮತ್ತು ತೇಜಸ್ವಿನಿ ಪ್ರಕಾಶ್, ಸದ್ಯ ಸದ್ದು ಗದ್ದಲ ಇಲ್ಲದೇ ಸೈಲೆಂಟಾಗಿ ಮದುವೆಯಾಗಿದ್ದಾರೆ ಎನ್ನುವ ಅನುಮಾನ ಹಲವರಲ್ಲಿದೆ. ಈ ಅನುಮಾನವನ್ನು ಇಬ್ಬರು ಇನ್ನೂ ದೂರ ಮಾಡಿಲ್ಲವಾದರೂ ಸದ್ಯ ಇವರ ತೀರಾ ಖಾಸಗಿಯಾಗಿರಬೇಕಿದ್ದ ವಿಡಿಯೋ ವೈರಲ್ ಆಗಿದೆ. ಜನಾಕ್ರೋಶಕ್ಕೆ ಗುರಿಯಾಗಿದೆ.
ಹೌದು, ಕರಣ್ ಕುಂದ್ರಾ ಮತ್ತು ತೇಜಸ್ವಿ ಪ್ರಕಾಶ್ ಸದ್ಯ ಮಾರಿಷಸ್‌ನಲ್ಲಿದ್ದಾರೆ. ವ್ಲಾಗ್ ಮಾಡುವ ಮೂಲಕ ತಮ್ಮ ಅಭಿಮಾನಿಗಳಿಗೂ ಮಾರಿಷಸ್‌ನ ದರ್ಶನ ಮಾಡಿಸುತ್ತಿದ್ದಾರೆ. ಹೀಗೆ ಹಂಚಿಕೊಳ್ಳಲಾದ ಒಂದು ವಿಡಿಯೋದಲ್ಲಿ ಈ ಜೋಡಿ ಸ್ವಿಮಿಂಗ್ ಪೂಲ್‌ಗೆ ಇಳಿದಿದೆ. ವಿಡಿಯೋ ಮಾಡಿದೆ. ಕ್ಯಾಮರಾ ಫ್ರೇಮ್‌ನಲ್ಲಿ ಇಬ್ಬರ ಮೈಮೇಲೆ ಬಟ್ಟೆಯಿಲ್ಲದಂತೆ ಕಂಡು ಬಂದಿದ್ದು, ತೀರಾ ಆಪ್ತವಾಗಿ ಕ್ಯಾಮರಾ ಮುಂದೆ ಈ ಜೋಡಿ ಕಾಣಿಸಿಕೊಂಡಿದೆ.
ಬದಲಿಗೆ ನಾವು ಇಬ್ಬರೂ ಕೂದಲಿಗೆ ಎಣ್ಣೆ ಹಚ್ಚಿ ಒಂದು ಗಂಟೆಯಾಗಿದೆ. ನಾವು ನಮ್ಮ ಪೂಲ್‌ನಲ್ಲಿದ್ದೇವೆ, ಏಕೆಂದರೆ ಎಣ್ಣೆ ಹಚ್ಚಿ ಈಗಾಗಲೇ ಒಂದು ಗಂಟೆಯಾಗಿದೆ. ಅರ್ಧ ಗಂಟೆಯ ಕಾಲ ಫೇಸ್ ಪ್ಯಾಕ್ ಮತ್ತು ಒಂದು ಗಂಟೆ ಕಾಲ ಹೇರ್ ಆಯಿಲ್ ಹಚ್ಚಿಯಾಗಿದೆ. ಈಗ ಸ್ನಾನ ಮಾಡುವ ಸಮಯ, ಇದರ ನಂತರ ನಾವು ನಮ್ಮ ಕ್ಯಾಂಡಲ್ ಲೈಟ್ ಡಿನ್ನರ್‌ಗೆ ಹೋಗುತ್ತೇವೆ ಎಂದು ತೇಜಸ್ವಿ ಪ್ರಕಾಶ್ ಹೇಳಿದ್ದಾರೆ. ರೊಮ್ಯಾಂಟಿಕ್ ಮೂಡಿನಲ್ಲಿ ಕರಣ್ ಕುಂದ್ರಾ ಹಿಂದೆ ನಿಂತಿರುವುದನ್ನು ಕಾಣಬಹುದು.
ಸದ್ಯ ಈ ವಿಡಿಯೋ ವೈರಲ್ ಆಗಿದ್ದು ಹಲವರು ಇಬ್ಬರ ವಿರುದ್ಧ ಆಕ್ರೋಶವನ್ನು ಹೊರ ಹಾಕುತ್ತಿದ್ದಾರೆ. ಕೆಲವರಂತೂ ಇದು ನಾಚಿಕೆಗೇಡು ಎಂದಿದ್ದಾರೆ. ನಿಮಗೆ ಕನಿಷ್ಠ ಖಾಸಗಿತನದ ಅರಿವಿಲ್ಲವೇ? ಕೆಲವು ಕ್ಷಣಗಳನ್ನು ಕ್ಯಾಮರಾದಿಂದ ದೂರ ಇಡಬೇಕು ಎಂದು ಬುದ್ಧಿವಾದ ಹೇಳಿದ್ದಾರೆ.
ಲೈಕ್ಸ್ ಮತ್ತು ವ್ಯೂವ್ಸ್‌ಗೆ ಇಷ್ಟೊಂದು ಕೆಳ ಹಂತಕ್ಕೆ ಇಳಿಯಬಾರದಿತ್ತು ಎಂದು ತಮ್ಮ ಮನದ ಬೇಸರವನ್ನು ಹೊರ ಹಾಕುತ್ತಿದ್ಧಾರೆ.


Click it and Unblock the Notifications