Bigg Boss Kannada: ಬಿಗ್ ಬಾಸ್ ಮನೆಯೊಳಗೆ ನಮ್ಮನ್ನು ನಾವು ಕಂಡುಕೊಳ್ಳಲು ಸಾಧ್ಯ ಎಂದ ಮಾಜಿ ಸ್ಪರ್ಧಿ ಶೈನ್ ಶೆಟ್ಟಿ
ನಿನ್ನೆಯಷ್ಟೇ ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 10 ತೆರೆ ಕಂಡಿದೆ. ಈಗಾಗಲೇ ಈ ಸುದ್ದಿ ಬಹಳ ವೈರಲ್ ಆಗಿದ್ದು, ಬಿಗ್ ಬಾಸ್ ಪ್ರಿಯರೂ ಆತುರದಿಂದ ಕಾಯುತ್ತಿರುವ ಸಮಯ ಬಂದಾಗಿದೆ. ಈಗಾಗಲೇ ಸೀಸನ್ 10 ರ ಸ್ಪರ್ಧಿಗಳ ಜೊತೆಗೆ ವೈಟಿಂಗ್ ಲಿಸ್ಟ್‌ನಲ್ಲಿದ್ದ ಏಳು ಜನರು ದೊಡ್ಮನೆಯೊಳಗೆ ಕಾಲಿಟ್ಟಿದ್ದು ಆ ಏಳು ಜನರಲ್ಲಿ ಯಾರು ಉಳಿಯಲಿದ್ದಾರೆ ಎಂಬುದು ಒಂದು ವಾರದಲ್ಲಿ ತಿಳಿಯಲಿದೆ.
ಈ ನಿಟ್ಟಿನಲ್ಲಿ ಬಿಗ್ ಬಾಸ್ ಸೀಸನ್ 7ರ ವಿನ್ನರ್ ಶೈನ್ ಶೆಟ್ಟಿ ತಮ್ಮ ಜರ್ನಿ ನೆನೆಸಿಕೊಂಡಿದ್ದಾರೆ. ಜೊತೆಗೆ ಒಂದಷ್ಟು ಸಲಹೆಗಳನ್ನು ಹೊಸ ಸ್ಪರ್ಧಿಗಳಿಗೆ ನೀಡಿದ್ದಾರೆ.
ಹೌದು, ಕಿರುತೆರೆ ಜೊತೆಗೆ ಹಿರಿತೆರೆಯಲ್ಲೂ ಸದ್ದು ಮಾಡುತ್ತಿರುವ ಶೈನ್ ಶೆಟ್ಟಿ ಇದೀಗ ಬಿಗ್ ಬಾಸ್ ಬಗ್ಗೆ ಮಾತನಾಡಿದ್ದಾರೆ. ಬಿಗ್ ಬಾಸ್‌ನಲ್ಲಿಯೇ ನಿಮಗೆ ನಿಜವಾದ ನಿಮ್ಮನ್ನು ಕಂಡುಕೊಳ್ಳಲು ಸಾಧ್ಯ ಎಂದಿದ್ದಾರೆ ಶೈನ್ ಶೆಟ್ಟಿ.

ಜನರು ನನ್ನನ್ನು ಪರದೆಯಲ್ಲಿ ನಾನಲ್ಲದ ಯಾವುದೋ ಪಾತ್ರವನ್ನು ಮಾಡುವುದಷ್ಟನ್ನೇ ವೀಕ್ಷಕರು ನೋಡುತ್ತಾರೆ. ನನ್ನ ನಿಜ ಸ್ವಭಾವ, ಗುಣ, ಮಾತುಗಾರಿಕೆಯ ಪರಿಚಯವಾದದ್ದು ಬಿಗ್ ಬಾಸ್ ಮನೆಯಲ್ಲಿಯೇ. ಬಹುಶ: ನನಗೂ ನನ್ನ ಪರಿಚಯವಾದದ್ದು ಹೆಚ್ಚುಕಮ್ಮಿ ಅಲ್ಲಿಯೇ ಇರಬೇಕು. ಒಟ್ಟಿನಲ್ಲಿ ಹೇಳುವುದಾದರೆ ಗೆಲುವನ್ನು ಪ್ರತ್ಯೇಕವಾಗಿಟ್ಟು ನಮ್ಮನ್ನು ನಾವು ಕಂಡುಕೊಳ್ಳುವ ಒಂದೊಳ್ಳೆ ವೇದಿಕೆ ಬಿಗ್ ಬಾಸ್ ಎಂಬುದು ಮಾಜಿ ಬಿಗ್ ಬಾಸ್ ಸ್ಪರ್ಧಿ ಶೈನ್ ಶೆಟ್ಟಿ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
ನಮ್ಮ ಬಿಗ್ ಬಾಸ್ ಅಂದರೆ ಸೀಸನ್ 7 ಅದ್ಭುತವಾದ ಸೀಸನ್ ಎಂದು ಬಹಳಷ್ಟು ಜನರಿಂದ ತಿಳಿದು ಶೈನ್ ಶೆಟ್ಟಿಗಂತೂ ಬಹಳ ಖುಷಿಯಾಗಿತ್ತಂತೆ. ಪ್ರತಿ ಸ್ಪರ್ಧೆಯೂ ತನ್ನ ವಿಶೇಷತೆಯಿಂದ ಇಡೀ ಸೀಸನ್ ಅನ್ನು ಚಂದಗಾಣಿಸಿಕೊಡಬೇಕು. ಈ ಹೊಸ ಸೀಸನ್‌ಗೆ ಬರಲಿರುವ ಎಲ್ಲಾ ಸ್ಪರ್ಧೆಗಳ ಬಗ್ಗೆ ಎಲ್ಲರಂತೆ ಅವರೂ ಕೂಡಾ ಕೌತುಕರಾಗಿದ್ದಾರಂತೆ. ಎಲ್ಲರಿಗೂ ಬಿಗ್ ಬಾಸ್ ಒಳ್ಳೆಯ ನೆನಪು ಹಾಗೂ ಜೀವನ ಪಾಠಗಳನ್ನು ಕಲಿಸಲಿ ಎಂಬುದು ಶೈನ್ ಶೆಟ್ಟಿ ಹಾರೈಕೆ.

ಅಂದ ಹಾಗೇ ಬಿಗ್ ಬಾಸ್ ಸೀಸನ್ 7 ರ ವಿನ್ನರ್ ಆಗಿ ಹೊರಹೊಮ್ಮಿರುವ ಶೈನ್ ಶೆಟ್ಟಿ ನಂತರ ಕಿರುತೆರೆಯಲ್ಲಿ ಕಾಣಿಸಿಕೊಳ್ಳಲೇ ಇಲ್ಲ. 'ರುದ್ರಪ್ರಯಾಗ', 'ಪ್ರಾಯಶಃ' ಸಿನಿಮಾದಲ್ಲಿ ನಟಿಸಿರುವ ಇವರು 'ವಿಜಯಾನಂದ' ಸಿನಿಮಾದಲ್ಲಿ ನೆಗೆಟಿವ್ ರೋಲ್‌ನಲ್ಲಿ ಕಾಣಿಸಿಕೊಂಡಿದ್ದರು. ಪವರ್ ಸ್ಟಾರ್ ಪುನೀತ್ ಅಭಿನಯದ 'ಜೇಮ್ಸ್' ಸಿನಿಮಾದಲ್ಲಿ ಐಎಎಸ್ ಅಧಿಕಾರಿಯಾಗಿಯೂ ಶೈನ್ ಶೆಟ್ಟಿ ಕಾಣಿಸಿಕೊಂಡಿದ್ದರು.
ಮುಂದೆ ಸ್ಯಾಂಡಲ್ ವುಡ್ ನಲ್ಲಿ ಸಾಕಷ್ಟು ಜನಪ್ರಿಯತೆ ಗಳಿಸಿರುವ 'ಕಾಂತಾರ' ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ನಟಿಸಿರುವ ಶೈನ್ ಶೆಟ್ಟಿ ಇತ್ತೀಚೆಗೆ ತೆರೆ ಕಂಡ 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಸಿನಿಮಾದಲ್ಲಿಯೂ ಅತಿಥಿ ಪಾತ್ರಕ್ಕೆ ಜೀವ ತುಂಬಿದ್ದಾರೆ. ಇದರ ಜೊತೆಗೆ 'ಜಸ್ಟ್ ಮ್ಯಾರೀಡ್' ಸಿನಿಮಾದಲ್ಲಿಯೂ ಇವರು ನಾಯಕನಾಗಿ ನಟಿಸಲಿದ್ದು ಅಂಕಿತಾ ಅಮರ್ ಇವರಿಗೆ ನಾಯಕಿಯಾಗಿ ನಟಿಸಲಿದ್ದಾರೆ.


Click it and Unblock the Notifications











