ಬಿಗ್‌ಬಾಸ್ ವಿನ್ನರ್ ಹನುಮಂತ ಲಮಾಣಿಗೆ ನಿರೂಪಕಿ ಅನುಶ್ರೀ ಭರ್ಜರಿ ಉಡುಗೊರೆ
ಎಲ್ಲೆಲ್ಲೂ ಈಗ ಹನುಮಂತ ಬಗ್ಗೆಯೇ ಚರ್ಚೆ ನಡೀತಿದೆ. ಬಿಗ್‌ಬಾಸ್ ಕನ್ನಡ ಸೀಸನ್ 11ಕ್ಕೆ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟಿದ್ದ ಹನುಮಂತ ಗೆಲುವಿನ ನಗೆ ಬೀರಿದ್ದಾರೆ. ಇನ್ನುಳಿದ 15 ಜನ ಸ್ಪರ್ಧಿಗಳನ್ನು ಹಿಂದಿಕ್ಕಿ ಟ್ರೋಫಿ ಎತ್ತಿ ಹಿಡಿದಿದ್ದಾರೆ. 50 ಲಕ್ಷ ರೂಪಾಯಿ ನಗದು ಬಹುಮಾನ ಕೂಡ ಅವರಿಗೆ ಸಿಕ್ಕಿದೆ.
ಬಿಗ್‌ಬಾಸ್ ಮನೆಗೆ ಎಂಟ್ರಿ ಕೊಡುವುದಕ್ಕು ಮುನ್ನ ಕೂಡ ಹನುಮಂತ ಲಮಾಣಿ ಬಗ್ಗೆ ಕನ್ನಡ ವೀಕ್ಷಕರಿಗೆ ಪರಿಚಯ ಇತ್ತು. ಕಾರಣ ಜೀ ಕನ್ನಡ ರಿಯಾಲಿಟಿ ಶೋಗಳಲ್ಲಿ ಹನುಮಂತ ಭಾಗವಹಿಸಿದ್ದರು. ಮುಖ್ಯವಾಗಿ ಸರಿಗಮಪ ಸೀಸನ್ 15ರಲ್ಲಿ ಭಾಗವಹಿಸಿ ರನ್ನರ್ ಅಪ್ ಆಗಿದ್ದರು. ಆ ಶೋವನ್ನು ಅನುಶ್ರೀ ನಿರೂಪಣೆ ಮಾಡಿದ್ದರು. ಹಾಗಾಗಿ ಇಬ್ಬರ ನಡುವೆ ಉತ್ತಮ ಒಡನಾಟ ಇದೆ.

ಹನುಮಂತ ಎಲ್ಲರನ್ನು ಅಕ್ಕ, ಅಣ್ಣ ಎಂದೇ ಕರೆಯುತ್ತಾರೆ. ಇನ್ನು ಅನುಶ್ರೀ ನೆಚ್ಚಿನ ಅಕ್ಕ. ಅನುಶ್ರೀ ಪ್ರತಿವಾರ ಸರಿಗಮಪ ಶೋನಲ್ಲಿ ಚಿಲ್ಲೂರ ಬಡ್ನಿ ಹೈದನನ್ನು ಹುರಿದುಂಬಿಸುತ್ತಿದ್ದರು. ವೇದಿಕೆ ಮೇಲೆ ಮಾತ್ರವಲ್ಲ, ವೇದಿಕೆ ಹೊರಗೆ ಕೂಡ ಆಗಾಗ್ಗೆ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದರು. 'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್' ಶೋ ವೇಳೆ ಕೂಡ ಇಬ್ಬರು ಮತ್ತೆ ಗಮನ ಸೆಳೆದಿದ್ದರು.
ಅನುಶ್ರೀ ಹಾಗೂ ಹನುಮಂತ ರೀಲ್ಸ್ ವೀಡಿಯೋಗಳು ವೈರಲ್ ಆಗುತ್ತು. ಸದ್ಯ ಹನುಮಂತ ಕಲರ್ಸ್ ಕನ್ನಡ ವಾಹಿನಿಯ ಬಿಗ್‌ಬಾಸ್ ಶೋ ವಿಜೇತರಾಗಿದ್ದಾರೆ. ಅಂದಹಾಗೆ ಹನುಮಂತನಿಗೆ ಅನುಶ್ರೀ ಉಡುಗೊರೆ ಕೊಟ್ಟಿದ್ದಾರೆ ಎನ್ನಲಾಗ್ತಿದೆ. ಆದರೆ ಆಕೆ ಉಡುಗೊರೆ ಕೊಟ್ಟಿರುವುದು ಈಗ ಅಲ್ಲ. ಬಹಳ ಹಿಂದೆ ಪಲ್ಸರ್ ಬೈಕ್ ಅನ್ನು ಉಡುಗೊರೆಯಾಗಿ ಕೊಟ್ಟಿದ್ದರು. ಆದರೆ ಇದನ್ನು ಆಕೆ ಒಪ್ಪಿಕೊಂಡಿರಲಿಲ್ಲ. ವೇದಿಕೆಯೊಂದರಲ್ಲಿ ಕೇಳಿದಾಗ ಗೊತ್ತಿಲ್ಲ ಎಂದಿದ್ದರು.
ಕಪ್ಪು ಬಣ್ಣದ ಪಲ್ಸರ್ 150 ಬೈಕ್ ಅನ್ನು ಹನುಮಂತನಿಗೆ ಅನುಶ್ರೀ ಕೊಟ್ಟಿದ್ದಾರೆ. ಅದನ್ನು ಹೇಳಿಕೊಳ್ಳುವುದು ಬೇಡ ಎಂದು ಆಕೆ ನಿರ್ಧರಿಸಿದಂತಿದೆ. ಅಂದಹಾಗೆ ಆ ಬೈಕ್ ಮೇಲೆ ಅನುಶ್ರೀ ಫೋಟೊ ಕೂಡ ಇದೆ. ಇತ್ತೀಚೆಗೆ ಯೂಟ್ಯೂಬರ್ ಒಬ್ಬರು ಹನುಮಂತ ಲಮಾಣಿ ಮನೆಗೆ ಭೇಟಿ ನೀಡಿ ಹೋಮ್ ಟೂರ್ ವೀಡಿಯೋ ಮಾಡಿದ್ದರು. ಅದರಲ್ಲಿ ಕೂಡ ಆ ಬೈಕ್ ಅನ್ನು ತೋರಿಸಿದ್ದಾರೆ. ಹನುಮಂತ ಬಿಗ್‌ಬಾಸ್ ಮನೆಯಲ್ಲಿ ಇರುವುದರಿಂದ ಬೈಕ್ ಮನೆ ಮುಂದೆ ನಿಂತಿದೆ. ಬೇರೆ ಯಾರು ಬಳಸುತ್ತಿಲ್ಲ ಎಂದು ಹೇಳಲಾಗಿತ್ತು.
ಬಿಗ್‌ಬಾಸ್ ಸೀಸನ್ 7ಕ್ಕೆ ಹನುಮಂತ ಸ್ಪರ್ಧಿಯಾಗಿ ಹೋಗುತ್ತಾನೆ ಎಂದು ಗುಲ್ಲಾಗಿತ್ತು. ಆತ ದೊಡ್ಮನೆ ಒಳಗೆ ಹೋಗಬೇಕು ಎಂದು ಅಭಿಮಾನಿಗಳು ಬಯಸಿದ್ದರು. ಆದರೆ ಅದು ನಿಜವಾಗಿರಲಿಲ್ಲ. ಆ ಬಳಿಕ ಕೂಡ ಹೋಗ್ತಾರಾ? ಎಂದು ಕೆಲವರು ಕಾದು ಕೂತಿದ್ದರು. ಆದರೆ ಸಾಧ್ಯವಾಗಿರಲಿಲ್ಲ. ಸೀಸನ್ 11 ಸಂಭಾವ್ಯ ಸ್ಪರ್ಧಿಗಳ ಪಟ್ಟಿಯಲ್ಲಿ ಆತನ ಹೆಸರು ಇರಲಿಲ್ಲ. ಆತ ಬಿಗ್‌ಬಾಸ್ ಮನೆಗೆ ಹೋಗಲ್ಲ ಬಿಡಿ ಎಂದೇ ಎಲ್ಲರೂ ಸುಮ್ಮನಾಗಿಬಿಟ್ಟಿದ್ದರು.
ಲಾಯರ್ ಜಗದೀಶ್ ಹಾಗೂ ರಂಜಿತ್ ಶಿಕ್ಷೆ ಅನುಭವಿಸಿ 30 ದಿನಕ್ಕೆ ಬಿಗ್‌ಬಾಸ್ ಮನೆ ತೊರೆದಿದ್ದರು. ಆಗ ದಿಢೀರನೆ ಹನುಮಂತ ವೈಲ್ಡ್ ಕಾರ್ಡ್ ಎಂಟ್ರಿ ಪಡೆದಿದ್ದ. ಒಂದೆರಡು ವಾರ ಮನೆಯೊಳಗೆ ಇದ್ದರೆ ಹೆಚ್ಚು ಎಂದೇ ಕೆಲವರು ಭಾವಿಸಿದ್ದರು. ಆದರೆ ಬಹಳ ಬೇಗ ದೊಡ್ಮನೆ ಆಟದ ಕಲಿತ ಹನುಮಂತ ಎಲ್ಲರ ನಿರೀಕ್ಷೆ ಹುಸಿಮಾಡಿ ಮೊದಲ ಫೈನಲಿಸ್ಟ್ ಆಗಿಬಿಟ್ಟಿದ್ದ. ವೈಲ್ಡ್ ಕಾರ್ಡ್ ಎಂಟ್ರಿ ಪಡೆದವರು ಗೆಲ್ಲುವುದು ಅನುಮಾನ ಎಂದು ಕೆಲವರು ಭಾವಿಸಿದ್ದರು. ಆದರೆ ಅದನ್ನು ಸುಳ್ಳಾಗಿಸಿ ಗೆದ್ದಿ ಬೀಗಿದ್ದಾನೆ. 50 ಲಕ್ಷ ನಗದು ಬಹುಮಾನ ಗೆದ್ದಿದ್ದಾನೆ.


Click it and Unblock the Notifications











