ಬಿಗ್ ಬಾಸ್‌ನಲ್ಲಿ ಬಾತ್‌ರೂಂ ಗಲಾಟೆ, ಕೆರಳಿ ಕೆಂಡವಾಗಿ ಗ್ಲಾಸ್ ಒಡೆದು ಹಾಕಿದ ಚಂದ್ರಪ್ರಭಾ
''ಬಿಗ್ ಬಾಸ್'' ಅಂದರೆ ರಂಪ-ರಾಮಾಯಣಕ್ಕೆ ಮತ್ತೊಂದು ಹೆಸರು. ಮನೆ ಶಾಂತವಾಗಿದ್ದರೆ ಈ ಮನೆಯತ್ತ ಯಾರು ತಲೆ ಹಾಕಿ ಮಲಗಲ್ಲ. ಅಶಾಂತಿಯೇ ಈ ಮನೆಯ ಲಕ್ಷಣ. ಇದು ಮನೆಯೊಳಗೆ ಹೋಗುವ ಸ್ಫರ್ಧಿಗಳಿಗೆ ಚೆನ್ನಾಗಿಯೇ ಗೊತ್ತು. ಕಾರ್ಯಕ್ರಮದ ಆಯೋಜಕರಿಗೆ ಕೂಡ ಗೊತ್ತು. ಈ ಹಿನ್ನೆಲೆ. ಪ್ರತಿ ವರ್ಷ ಚಿತ್ರ-ವಿಚಿತ್ರ ಆಸಾಮಿಗಳನ್ನೇ ಮೊದಲು ಟಾರ್ಗೆಟ್ ಮಾಡಲಾಗುತ್ತೆ. ವಿವಾದಾತ್ಮಕ ವ್ಯಕ್ತಿಗಳನ್ನು... ವಿಚಿತ್ರ ವ್ಯಕ್ತಿಗಳನ್ನು ಹುಡುಕಿ ಮನೆಯೊಳಗೆ ಕಳುಹಿಸಲಾಗುತ್ತೆ.
ಈ ಬಾರಿಯ ಕಾರ್ಯಕ್ರಮ ಕೂಡ ಇದರಿಂದ ಹೊರತಾಗಿಲ್ಲ. ಆದರೆ.. ಹಿಂದಿನ ಸೀಸನ್‌ಗಳಿಗೆ ಹೋಲಿಸಿದರೆ ಈ ಬಾರಿ ಮನೆಯಲ್ಲಿ ''ಕಿರಿಕ್ ಪಾರ್ಟಿ''ಗಳ ಸಂಖ್ಯೆ ಕಡಿಮೆ ಇದೆ. ಹೀಗಾಗಿಯೇ ಮನೆಯಲ್ಲಿ ಇಲ್ಲಿಯವರೆಗೆ ವಾಗ್ಯುದ್ದ ಮಾತ್ರ ನಡೆಯುತ್ತಿತ್ತು. ನೋಡುಗರಿಗೆ ಯಾಕೋ ಈ ಬಾರಿ ''ಬಿಗ್ ಬಾಸ್'' ಸಪ್ಪೆಯಾಗಿದೆಯಲ್ಲಾ ಎನ್ನುವ ಭಾವನೆ ಕೂಡ ಬರುತ್ತಿತ್ತು.

ಆದರೆ.. ಮೊನ್ನೆಯ ದಿವಸ ಕಾರ್ಯಕ್ರಮಕ್ಕೆ ಒಂದು ದಿನದ ವಿರಾಮ ಸಿಕ್ಕಿತ್ತಲ್ಲ. ಅಲ್ಲಿಂದ ಈ ಕಾರ್ಯಕ್ರಮದ ದಿಕ್ಕು ಈಗ ಬದಲಾದಂತೆ ಇದೆ. ಇದಕ್ಕೆ ಕೈಗನ್ನಡಿ ಎಂಬಂತೆ ಸದ್ಯ ''ಬಿಗ್ ಬಾಸ್'' ಮನೆಯೊಳಗೆ ವಾತಾವರಣ ಕಾವೇರಿದೆ. ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗಿದೆ.
ಹೌದು, ಎಲ್ಲರಿಗೆ ಗೊತ್ತಿರುವಂತೆ ಈ ಬಾರಿ ''ಬಿಗ್ ಬಾಸ್'' ಮನೆಯನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ಒಂದು ಒಂಟಿ ಮತ್ತೊಂದು ಜಂಟಿ. ಆದರೆ ಈಗ ಮನೆಯ ಒಳಗಡೆ ಹೋಗುವಾಗ ಜನುಮ ಜನುಮದ ಅನುಬಂಧ ಎನ್ನುವಂತೆ ನಗು ನಗುತ್ತಾ ಹೋಗಿದ್ದ ಜಂಟಿಗಳಲ್ಲಿ ಭಿನ್ನಾಭಿಪ್ರಾಯದ ಅಲೆ ಎದ್ದಿದೆ. ಯಾಕೆಂದರೆ ಎಲ್ಲಿಯೇ ಹೋದರು ಇಬ್ಬರು ಜೊತೆಯಲ್ಲಿ ಹೋಗಬೇಕು. ಈ ಹಿನ್ನೆಲೆ ಅಸಹನೆ ಅಸಮಾಧಾನ ಜಂಟಿಗಳಲ್ಲಿ ತಾರಕಕ್ಕೇರುತ್ತಿದೆ. ಇದಕ್ಕೆ ಕೈಗನ್ನಡಿ ಎಂಬಂತೆ ಸದ್ಯ ಚಂದ್ರಪ್ರಭ ಮತ್ತು ಡಾಗ್ ಸತೀಶ್ ನಡುವೆ ಬಾತ್‌ರೂಂ ಗಲಾಟೆ ನಡೆದಿದೆ. ಈ ಸಮಯದಲ್ಲಿ ಬೇರೆ ಸ್ಫರ್ಧಿಗಳು ಕೂಡ ಇವರ ಇಬ್ಬರ ಸಮರದಲ್ಲಿ ಮಧ್ಯ ಪ್ರವೇಶಿಸಿದ್ದಾರೆ.

ಬಚ್ಚಲು ಮನೆಗೆ ಹೋದರೆ ಹೊರ ಬರಲು ಡಾಗ್ ಸತೀಶ್ ಅವರಿಗೆ ಗಂಟೆಗಳೇ ಬೇಕಾಗುತ್ತೆ. ಹೀಗಾಗಿ ಅನಿವಾರ್ಯವಾಗಿ ಕಾಯುತ್ತಾ ಕುಂತ ಚಂದ್ರಪ್ರಭ ಮೊದಲಿಗೆ ಸತೀಶ್ ಅಣ್ಣ ಬೇಗ ಬನ್ನಿ ಎಂದು ಮನವಿ ಮಾಡಿಕೊಂಡಿದ್ದಾರೆ. ಆದರೆ ಈ ಮನವಿಗೆ ಮನ್ನಣೆ ಸಿಕ್ಕಿಲ್ಲ. ಹೀಗಾಗಿ ಕಾದು ಕಾದು ತಮ್ಮ ತಾಳ್ಮೆಯನ್ನು ಕಳೆದುಕೊಂಡ ಚಂದ್ರಪ್ರಭಾ ಎದ್ದು ಹೋಗಿದ್ದಾರೆ. ನನ್ನ ಕೈಯಲ್ಲಿ 2 ಗಂಟೆ ಕಾಯೋಕೆ ಆಗಲ್ಲ. ನೀರು ಕುಡಿಯುವುದಕ್ಕೂ ಆಗ್ತಾ ಇಲ್ಲ ಎಂದು ಸಿಟ್ಟು ಹೊರ ಹಾಕಿದ್ದಾರೆ. ಬೆಳಗ್ಗೆಯಿಂದ ಅಲ್ಲೇ ಕೂತಿದ್ದೇನೆ. ನೀರು ಕುಡಿಯುವುದು ಬೇಡ್ವಾ..? ಎಂದು ಪ್ರಶ್ನೆ ಮಾಡಿದ್ದಾರೆ.
ಇದೇ ಸಮಯದಲ್ಲಿ ಡಾಗ್ ಸತೀಶ್ ಕೂಡ ಬಂದಿದ್ದು ನನ್ನದೇನಿದೆ ಅದು ಆಗೋವರೆಗೆ ನಾನು ಹೊರಗಡೆ ಬರಲ್ಲ ಕಾಯಬೇಕು ಎಂದು ಹೇಳಿದ್ದಾರೆ. ಆಗ ಈ ವಿಚಾರದಲ್ಲಿ ಧನುಷ್ ಮಧ್ಯ ಪ್ರವೇಶ ಮಾಡಿದ್ದು ಡಾಗ್ ಸತೀಶ್ ವಿರುದ್ದ ಕಿಡಿ ಕಾರಿದ್ದಾರೆ. ಏಕವಚನದಲ್ಲಿ ಮಾತನಾಡಿದ್ದಾರೆ. ಕೈ ಕೈ ಮಿಲಾಯಿಸೋ ಹಂತಕ್ಕೆ ಇಬ್ಬರು ಹೋಗಿದ್ದಾರೆ. ಮತ್ತೊಂದು ಕಡೆ ಕೆರಳಿ ಕೆಂಡವಾದ ಚಂದ್ರಪ್ರಭ ನೀರು ಕುಡಿಯುವ ಗ್ಲಾಸ್ ಒಡೆದು ಹಾಕಿದ್ದಾರೆ.
ಸದ್ಯ ಕಲರ್ಸ್ ವಾಹಿನಿ ಹಂಚಿಕೊಂಡ ಈ ಪ್ರೋಮೋಗೆ ನಾನಾ ಬಗೆಯ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಎಂದಿನಂತೆ ಬಿಗ್ ಬಾಸ್ ನಲ್ಲಿ ಜಗಳಗಳು ಆರಂಭವಾಗಲಿವೆ ಎಂದು ಹಲವರು ಹೇಳಿದ್ದರೆ ಮತ್ತೂ ಕೆಲವರು ಜಂಟಿ ತೆಗೆದರೆ ಒಳ್ಳೆ ಮನೋರಂಜನೆ ಬರುತ್ತೆ ನೋಡೋರಿಗೆ ಖುಷಿಯಾಗುತ್ತೆ ಇಲ್ಲಾಂದ್ರೆ ಬರೀ ಜಗಳಾನೇ ನೋಡಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಗಿಲ್ಲಿಯ ಆಟಕ್ಕೆ ಹಲವರು ಚಪ್ಪಾಳೆಯನ್ನು ಕೂಡ ತಟ್ಟಿದ್ದಾರೆ.


Click it and Unblock the Notifications











