BBK10: ಗೇಮ್ ಸ್ಟಾರ್ಟ್: ವಿನಯ್ ಅನ್ನೋ ಆನೆಯನ್ನು ಪಳಗಿಸಲು ಮಾವುತನಾಗಿ ಮನೆಯಲ್ಲೇ ಉಳಿದ ವರ್ತೂರ್ ಸಂತೋಷ್!
ಬಿಗ್‌ಬಾಸ್ ಕನ್ನಡ ಸೀನನ್ 10 ಈಗಾಗಲೇ 6ನೇ ವಾರಕ್ಕೆ ಕಾಲಿಟ್ಟಿದೆ. ಕಳೆದ ವಾರ ವರ್ತೂರು ಸಂತೋಷ್ ವೀಕ್ಷಕರಿಗೆ ಶಾಕ್ ಕೊಟ್ಟಿದ್ದರು. ಮನೆಯಲ್ಲಿ ಇರೋಕೆ ಆಗುತ್ತಿಲ್ಲ. ನಾನು ಆಟ ಬಿಟ್ಟು ಹೊರಡುತ್ತೇನೆ ಎಂದು ಪಟ್ಟು ಹಿಡಿದಿದ್ದರು. ಆದರೆ ಸುದೀಪ್ ಇದಕ್ಕೆ ಒಪ್ಪಲಿಲ್ಲ. ಕೊನೆಗೆ ಸಂತೋಷ್ ತಾಯಿನೇ ಮನೆಯೊಳಗೆ ಎಂಟ್ರಿ ಕೊಟ್ಟಿದ್ದರು.
ಕಳೆದ ಎರಡು ಮೂರು ದಿನಗಳಿಂದ ಬಿಗ್‌ಬಾಸ್ ಮನೆಯಲ್ಲಿ ವರ್ತೂರು ಸಂತೋಷ್ ಇರ್ತಾರಾ? ಇಲ್ವಾ? ಎನ್ನುವ ಬಗ್ಗೆ ಭಾರೀ ಚರ್ಚೆ ನಡೀತು. 34 ಲಕ್ಷ ವೋಟ್ ಪಡೆದ ಸಂತೋಷ್ ಮನೆಯಿಂದ ಹೊರಬರಲು ಬಿಗ್‌ಬಾಸ್ ಕೂಡ ಒಪ್ಪಲಿಲ್ಲ. ಇನ್ನುಳಿದ ಸ್ಪರ್ಧಿಗಳು ಅವರ ಮನವೊಲಿಸುವ ಪ್ರಯತ್ನ ಮಾಡಿದ್ದರು. ಆದರೆ ಸಂತೋಷ್ ಮಾತ್ರ ಯಾವುದಕ್ಕೂ ಒಪ್ಪಲಿಲ್ಲ. ಭಾನುವಾರ ಸುದೀಪ್ ಯಾರು ಎಲಿಮಿನೇಷನ್ ಎಂದು ಹೇಳುವ ಮುನ್ನ ಸೇಫ್ ಆಗಿದ್ದ ಸಂತೋಷ್ ಮನೆ ಬಿಟ್ಟು ಹೊರ ಬರುವುದಾಗಿ ಹೇಳಿ ಶಾಕ್ ಕೊಟ್ಟಿದ್ದರು.

ದಿಢೀರನೇ ವರ್ತೂರು ಸಂತೋಷ್ ಯಾಕೆ ಮನೆಬಿಟ್ಟು ಹೊರಬರಲು ನಿರ್ಧರಿಸಿದ್ದೇನೆ ಎನ್ನುವುದಕ್ಕೆ ಕಾರಣ ಕೊಟ್ಟಿದ್ದರು. ಕಣ್ಣೀರು ಹಾಕಿದ್ದರು. ಯಾರ ಮಾತನ್ನು ಕೇಳಲು ಸಿದ್ಧರಿರಲಿಲ್ಲ. ಆದರೆ ಅಭಿಮಾನಿಗಳು ಕೂಡ ಸಂತೋಷ್ ಪರ ನಿಂತಿದ್ದರು. ಚೆನ್ನಾಗಿ ಆಡುತ್ತಿರುವವರು ಇಂತಹ ನಿರ್ಧಾರ ಕೈಗೊಳ್ಳುವುದು ಸರಿಯಲ್ಲ ಎಂದಿದ್ದರು. ವರ್ತೂರು ಸಂತೋಷ್ ಬಿಗ್‌ಬಾಸ್ ನಿಯಮ ಮೀರಿ ಮನೆಯಿಂದ ಹೊರ ಬರುತ್ತಾರಾ? ಇದರ ಪರಿಣಾಮ ಏನಾಗುತ್ತೆ? ದಂಡ ಏನು? ಹೀಗೆ ಸಾಕಷ್ಟು ವಿಚಾರಗಳು ಚರ್ಚೆ ಬಂದಿತ್ತು.
ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಬಿಗ್‌ಬಾಸ್ ಸ್ಪರ್ಧಿಗಳಿಗೆ ಸರ್‌ಪ್ರೈಸ್ ನೀಡಿತ್ತು. ಎಲ್ಲರಿಗೂ ಮನೆಯಿಂದ ಮಾಡಿದ ಹಬ್ಬದ ಊಟ ಬಂದಿತ್ತು. ವರ್ತೂರು ಸಂತೋಷ್ ಮನವೊಲಿಸಲು ಅವರ ತಾಯಿಯೇ ಮನೆಯೊಳಗೆ ಹೋಗಿದ್ದರು. "ನನ್ನ ಕೈಯಲ್ಲಿ ಆಗಲ್ಲ, ನಾನು ಬಿಗ್ ಬಾಸ್ ಮನೆಯಿಂದ ಹೊರಗೆ ಬರಲೇಬೇಕು ಎಂದು ವರ್ತೂರ್ ಸಂತೋಷ್ ಎಂದು ತಾಯಿ ಬಳಿ ಸಂತೋಷ್ ಕಣ್ಣೀರು ಹಾಕಿದ್ದಾರೆ. "ನಿನ್ನ ಹಿಂದೆ ಜನರು ಇದ್ದಾರೆ ಅವರಿಗೆ ನೀನು ಬೆಲೆ ಕೊಡಬೇಕು" ಎಂದು ತಾಯಿ ಧೈರ್ಯ ತುಂಬಿದ್ದರು. ಹೆಜ್ಜೆ ಇಟ್ಟಿದ್ದೀಯಾ ಇದೊಂದು ಆಟ ಜಯಿಸಿ ಬಾ, ರಾಜ ಮಹಾರಾಜನಂತೆ ಆಗ್ತಿಯಾ?ಎಂದು ಮನವಿ ಮಾಡಿದ್ದರು.
ತಾಯಿಯ ಮಾತಿನಂತೆ ಮನೆಯಲ್ಲೇ ಉಳಿಯಲು ವರ್ತೂರು ಸಂತೋಷ್ ನಿರ್ಧರಿಸಿದ್ದಾರೆ. ಈಗ ಗೇಮ್ ಶುರು ಎಂದಿದ್ದಾರೆ. ಆ ಪ್ರೋಮೊ ಈಗಾಗಲೇ ವೈರಲ್ ಆಗಿದೆ. ಹೊಸ ಪ್ರೋಮೊದಲ್ಲಿ ವಿನಯ್ ಗೌಡಗೆ ವರ್ತೂರು ಸಂತೋಷ್ ಟಾಂಗ್ ಕೊಟ್ಟಿರುವುದನ್ನು ನೋಡಬಹುದು.

ಮನೆಯಲ್ಲಿರುವವರ ದೃಷ್ಟಿಕೋನದಲ್ಲಿ ಯಾರು ಯಾವ ಸ್ಥಾನದಲ್ಲಿ ಇದ್ದಾರೆ ಎಂದು ಹೇಳುವಂತೆ ಬಿಗ್‌ಬಾಸ್ ಹೇಳಿದ್ದಾರೆ. ಅದಕ್ಕೆ ಪ್ರತಿಯೊಬ್ಬರು ತಮ್ಮ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಕಾರ್ತಿಕ್ ಗುಲಾಮ, ಇನ್ನೊಬ್ಬರ ಸಹಾಯ ಇಲ್ಲದೇ ಮುಂದು ಹೋಗಲು ಸಾಧ್ಯವಿಲ್ಲ ಎಂದು ನೀತು ಹೇಳಿದ್ದಾರೆ. ಮೈಕಲ್, ಐಶಾನಿ, ನಮ್ರತಾ ನಮ್ಮ ಪ್ರಕಾರ ವಿನಯ್ ರಾಜ ಎಂದು ಹೇಳಿದ್ದಾರೆ.
ಎಲ್ಲರೂ ತಮ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ ನಂತರ ಬೆಡ್ ರೂಮ್‌ನಲ್ಲಿ ಮತ್ತೆ ಸ್ಪರ್ಧಿಗಳ ನಡುವೆ ಚರ್ಚೆ ನಡೆದಿದೆ. ವಿನಯ್ ತನಗೆ ತಾನೇ ಆನೆ ಎಂದುಕೊಂಡು ಇಲ್ಲಿ ಎಲ್ಲರಿಗಿಂತ ತಾನೇ ಗ್ರೇಟ್ ಎಂದುಕೊಂಡಿದ್ದಾನೆ. ಯಾಕೆ ಯಾರು ಇಲ್ಲ, ನಾವು ಮಾವುತ ಆಗಿಬಿಡೋಣ ಎಂದು ಪ್ರತಾಪ್ ಹಾಗೂ ಇನ್ನಿತರರ ಬಳಿ ಹೇಳಿಕೊಂಡಿದ್ದಾರೆ. ಮತ್ತೊಂದು ಕಡೆ ಚಾಲೆಂಜ್ ಈಸ್ ಆನ್ ಎಂದು ವಿನಯ್ ಹೇಳಿರೋದನ್ನು ಪ್ರೋಮೊದಲ್ಲಿ ಸೇರಿಸಲಾಗಿದೆ. ಇತ್ತೀಚೆಗೆ ಕೊಂಚ ಮಂಕಾಗಿದ್ದ ವಿನಯ್ ಮತ್ತೆ ಆಟ ಆಡೋಕೆ ಮುಂದಾಗಿರುವಂತೆ ಕಾಣ್ತಿದೆ.
"ಆನೆಯನ್ನು ಪಳಗಿಸೋಕೆ ಮಾವುತ ರೆಡಿ" ಎಂದು ಬರೆದು ಕಲರ್ಸ್ ಕನ್ನಡ ವಾಹಿನಿ ಪ್ರೋಮೊ ರಿಲೀಸ್ ಮಾಡಿದೆ. ಸದ್ಯ ಹೊಸ ಪ್ರೋಮೊ ಸಖತ್ ಸದ್ದು ಮಾಡ್ತಿದೆ. ಅಭಿಮಾನಿಗಳು ಸಂತೋಷ್ ಬೆಂಬಲಿಸಿ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಕೆಲವರು ವರ್ತೂರು ಸಂತೋಷ್ ಮನೆಬಿಟ್ಟು ಹೋಗುತ್ತೇನೆ ಎಂದು ಹೇಳಿದ್ದಲ್ಲ ಸುಳ್ಳು, ಬರೀ ಡ್ರಾಮಾ ಎಂದು ಹೇಳುತ್ತಿದ್ದಾರೆ.


Click it and Unblock the Notifications