BBK10: ವಿನಯ್- ಪ್ರತಾಪ್ ಮೇಲೆ ಮನೆಮಂದಿ ಗರಂ: ನಮ್ರತಾ, ಸಂತು, ಸಿರಿ ನೇರ ಮಾತಿಗೆ ಪ್ರತಾಪ್ ಮತ್ತೆ ಕಣ್ಣೀರು
ಬಿಗ್‌ಬಾಸ್ ಕನ್ನಡ ಸೀಸನ್ 10 ಶೋ 3ನೇ ವಾರಕ್ಕೆ ಕಾಲಿಟ್ಟಿದೆ. ಈಗಾಗಲೇ ಮನೆಯಿಂದ ಸ್ನೇಕ್ ಶ್ಯಾಮ್ ಹಾಗೂ ಗೌರೀಶ್ ಅಕ್ಕಿ ಹೊರಬಂದಿದ್ದಾರೆ. ಇನ್ನು ಹುಲಿ ಉಗುರು ಹೊಂದಿರುವ ಆರೋಪದಲ್ಲಿ ವರ್ತೂರು ಸಂತೋಷ್ ನ್ಯಾಯಾಂಗ ಬಂಧನದಲ್ಲಿದ್ದಾರೆ. ಇದೆಲ್ಲದರ ನಡುವೆ ಬಿಗ್‌ಬಾಸ್ ಆಟ ಮುಂದುವರೆದಿದೆ.
16ನೇ ದಿನದ ಬಿಗ್‌ಬಾಸ್ ಪ್ರೋಮೊ ರಿಲೀಸ್ ಆಗಿದೆ. ಡ್ರೋನ್ ಪ್ರತಾಪ್ ಹಾಗೂ ವಿನಯ್ ಇಬ್ಬರನ್ನು ಎದುರಿಗೆ ಕೂರಿಸಿ ಉಳಿದ ಮನೆ ಮಂದಿ ಕೆಂಡಾಮಂಡಲವಾಗಿದ್ದಾರೆ. ಅವರಿಬ್ಬರ ಬಗ್ಗೆ ತಮ್ಮ ತಮ್ಮ ಅಭಿಪ್ರಾಯವನ್ನು ನೇರವಾಗಿ ಹೇಳುತ್ತಿದ್ದಾರೆ. ವಿಜಯ್ ತಿರುಗೇಟು ಕೊಟ್ಟರೆ ಡ್ರೋನ್ ಪ್ರತಾಪ್ ಮಾತ್ರ ಎಲ್ಲರ ಮಾತುಗಳನ್ನು ಕೇಳಿ ಭಾವುಕರಾಗಿದ್ದಾರೆ. ಉತ್ತರಿಸಲಾಗದೇ ಕಣ್ಣೀರಾಗಿದ್ದಾರೆ. ವೀಕ್ಷಕರು ಪದೇ ಪದೆ ಪ್ರತಾಪ್ ಅಳುವುದು ಯಾಕೆ? ಸಿಂಪಥಿ ಗಿಟ್ಟಿಸೋದಕ್ಕಾ? ಎಂದು ಕೇಳುತ್ತಿದ್ದಾರೆ.

ಮನೆ ಮಂದಿಗೆ ಬಿಗ್‌ಬಾಸ್ ಹೊಸ ಟಾಸ್ಕ್ ಕೊಟ್ಟಂತೆ ಕಾಣುತ್ತಿದೆ. ಇಬ್ಬರನ್ನು ಎದುರಿಗೆ ಕೂರಿಸಿ ಅವರ ಸರಿ ತಪ್ಪುಗಳ ಬಗ್ಗೆ ಚರ್ಚೆ ಮಾಡಲು ಹೇಳಿದಂತೆ ಕಾಣ್ತಿದೆ. ವಿನಯ್ ಬಳಿ ತನಿಷಾ ಗ್ರೂಪಿಸಂ ಬಗ್ಗೆ ಮಾತನಾಡಿದ್ದಾರೆ. ಆದರೆ ನಾವು ಯಾವುದೇ ಗ್ರೂಪ್ ಮಾಡಿಲ್ಲ ಎಂದು ವಿಜಯ್ ಉತ್ತರಿಸಿದ್ದಾರೆ.
ಡ್ರೋನ್ ಪ್ರತಾಪ್‌ನ ನೋಡಿ ನಮ್ರತಾ ಗೌಡ, 2ನೇ ವಾರದಿಂದ ನೀವು ಬೇರೆ ಕ್ಯಾರೆಕ್ಟರ್‌ಗೆ ಶಿಫ್ಟ್ ಆಗಿಬಿಟ್ರಿ, ಅದು ಎಷ್ಟು ಸರಿ ಎಂದಿದ್ದಾರೆ. ಹಿಂದೆ ಮಾತನಾಡೋದನ್ನು ಮುಂದೆ ಬಂದು ಯಾಕೆ ಕೇಳಲ್ಲ ಎಂದು ಸಿರಿ ಪ್ರಶ್ನಿಸಿದ್ದಾರೆ. ನಾಮಿನೇಷನ್ ಆದ ತಕ್ಷಣ ನನ್ನನ್ನು ಟಾರ್ಗೆಟ್ ಮಾಡಿದ್ರು ಅಂತ ಯಾಕೆ ಅಂದುಕೊಳ್ಳುತ್ತೀರಾ ಎಂದು ತುಕಾಲಿ ಸಂತು ಕೇಳಿದ್ದಾರೆ. ಮನೆಮಂದಿಗೆ ಮಾತುಗಳಿಗೆ ಪ್ರತಾಪ್ ಕಣ್ಣಾಲಿಗಳಲ್ಲಿ ನೀರು ತುಂಬಿಕೊಂಡಿದೆ.
ಹೊರಗಡೆ ಡ್ರೋನ್ ತಂತ್ರಜ್ಞಾನದ ಬಗ್ಗೆ ತಮ್ಮ ಮೇಲೆ ಆರೋಪಗಳು ಬಂದಾಗ ಎಲ್ಲದಕ್ಕೂ ಉತ್ತರ ಕೊಡುತ್ತಿದ್ದ ಪ್ರತಾಪ್ ಬಿಗ್‌ಬಾಸ್ ಮನೆಯಲ್ಲಿ ಯಾಕೆ ಅಳುತ್ತಾರೆ. ಎಲ್ಲದಕ್ಕೂ ಅಳು ಒಂದೇ ಉತ್ತರ ಅಲ್ಲ. ಅತ್ತು ಸಿಂಪಥಿ ಗಿಟ್ಟಿಸಿಕೊಳ್ಳುವುದು ಬೇಕಿಲ್ಲ ಎಂದು ವೀಕ್ಷಕರು ಕಾಮೆಂಟ್ ಮಾಡುತ್ತಿದ್ದಾರೆ.
ಇದಕ್ಕೂ ಮುನ್ನ ರಿಲೀಸ್ ಆಗಿದ್ದ ಪ್ರೋಮೊದಲ್ಲಿ ನಟಿ ತಾರಾ ಬಿಗ್‌ಬಾಸ್ ಮನೆಗೆ ಅತಿಥಿಯಾಗಿ ಹೋಗಿರುವುದನ್ನು ನೋಡಬಹುದು. ದಸರಾ ಹಬ್ಬದ ಸಡಗರದಲ್ಲಿ ಹಿರಿಯ ನಟಿ ದೊಡ್ಮನೆ ಒಳಗೆ ಹೋಗಿ ಕೆಲವೊತ್ತು ಸ್ಪರ್ಧಿಗಳ ಜೊತೆ ಕಾಲ ಕಳೆದು ಬಂದಿದ್ದಾರೆ. ನಟಿ ತಾರಾ ಎದುರು ಮನೆ ಮಂದಿ ಡ್ಯಾನ್ಸ್, ತಮಾಷೆ ಮಾಡಿ ಖುಷಿಪಟ್ಟಿದ್ದಾರೆ. ತಾರಾ ಕೂಡ ಎಲ್ಲರೊಟ್ಟಿಗೆ ಒಂದಾಗಿ ಮನೆಗೆ ಕಳೆ ತಂದಿದ್ದಾರೆ.
ಮತ್ತೊಂದು ಕಡೆ ಸಸ್ಯ ಪರಪ್ಪನ ಅಗ್ರಹಾರದ ಜೈಲಿನಲ್ಲಿ ಇರುವ ವರ್ತೂರು ಸಂತೋಷ್ ಮತ್ತೆ ಬಿಗ್‌ಬಾಸ್ ಮನೆ ಪ್ರವೇಶಿಸುತ್ತಾರಾ? ಇಲ್ವಾ? ಎನ್ನುವ ಚರ್ಚೆ ನಡೀತಿದೆ. ಬಿಗ್‌ಬಾಸ್ ನಿಯಮದ ಪ್ರಕಾರ ಒಮ್ಮೆ ಮನೆಯಿಂದ ಹೊರ ಬಂದವರು ಮತ್ತೆ ಹೋಗುವಂತಿಲ್ಲ ಎನ್ನಲಾಗುತ್ತದೆ. ಆದರೆ ಈ ರೀತಿ ಬಿಗ್‌ಬಾಸ್ ಮನೆಯೊಳಗೆ ಇದ್ದ ಸ್ಪರ್ಧಿಯನ್ನು ಪೊಲೀಸರು ವಶಕ್ಕೆ ಪಡೆದಿರುವ ಘಟನೆ ಇದೇ ಮೊದಲು. ಹಾಗಾಗಿ ಈ ವಿಚಾರದಲ್ಲಿ ಶೋ ಆಯೋಜಕರು ಯಾವ ನಿರ್ಧಾರ ಕೈಗೊಳ್ಳುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.
ಸಂತೋಷ್ ಕುತ್ತಿಗೆಯಲ್ಲಿ ಧರಿಸಿದ್ದ ಸರದಲ್ಲಿದ್ದ ಹುಲಿ ಉಗುರು ಇದ್ದ ಕಾರಣಕ್ಕೆ ಬಂಧನವಾಗಿದೆ. ವನ್ಯಜೀವಿ ಸಂರಕ್ಷಣಾ ಕಾಯ್ದೆ-1972ರ ಅಡಿಯಲ್ಲಿ ವರ್ತೂರು ಸಂತೋಷ್ ಅವರನ್ನು ಅಧಿಕಾರಿಗಳು ವಶಕ್ಕೆ ಪಡೆದು ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದ್ದರು. ವಿಚಾರಣೆ ಬಳಿಕ ನ್ಯಾಯಧೀಶರು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಸಂತೋಷ್ ಅವರನ್ನು ಒಪ್ಪಿಸಿದ್ದಾರೆ. ವಕೀಲರ ಮೂಲಕ ಜಾಮೀನು ಪಡೆಯಲು ಸಂತೋಷ್ ಅರ್ಜಿ ಸಲ್ಲಿಸಿದ್ದಾರೆ.


Click it and Unblock the Notifications











