Varthur Santhosh: ಈಗಾಗಲೇ ಬಿಗ್ ಬಾಸ್ ಗೆದ್ದಿದ್ದೇನೆ ಎಂದು ಖುಷಿಯಲ್ಲೇ ದೊಡ್ಮನೆಯಿಂದ ಹೊರ ಬಂದ ಹಳ್ಳಿಕಾರ್ ಒಡೆಯ
ಬಿಗ್ ಬಾಸ್ ಕನ್ನಡ ಸೀಸನ್ ಹತ್ತರ ನಾಲ್ಕನೇ ರನ್ನರ್ ಅಪ್ ಆಗಿ ಹಳ್ಳಿಕಾರ್ ಒಡೆಯ ವರ್ತೂರ್ ಸಂತೋಷ್ ಮನೆಯಿಂದ ಹೊರ ಬಂದಿದ್ದಾರೆ. ಬಿಗ್ ಬಾಸ್ ಸ್ಪರ್ಧಿಯಾಗಿದ್ದ, ಫಿನಾಲೆಗೆ ಕೆಲವೇ ದಿನಗಳು ಇರುವಾಗ ಎಲಿಮಿನೇಟ್ ಆಗಿದ್ದ ನಮ್ರತಾ ಗೌಡ ಮನೆಯೊಳಗೆ ಬಂದು ಫೈನಲಿಸ್ಟ್‌ಗಳಲ್ಲಿ ಒಬ್ಬರಾಗಿದ್ದ ವರ್ತೂರು ಸಂತೋಷ್ ಅವರನ್ನು ಹೊರಗೆ ಕರೆದುಕೊಂಡು ಹೋಗಿದ್ದಾರೆ.
ಬಿಗ್ ಬಾಸ್ ಮನೆಗೆ ಬಂದ ನಮ್ರತಾ ಗೌಡ ಫೈನಲಿಸ್ಟ್‌ಗಳನ್ನು ತಮ್ಮ ಡ್ಯಾನ್ಸ್ ಮೂಲಕ ಮನರಂಜನೆ ನೀಡಿ ಸಕತ್ ಚಮಕ್ ನೀಡುತ್ತಾ ನಾಲ್ಕನೇ ರನ್ನರ್ ಅಪ್ ಯಾರು ಎಂಬುದನ್ನು ಹೇಳಿದ್ದಾರೆ. ಮೊದಲಿಗೆ ಕಾರ್ತಿಕ್ ಅವರನ್ನು ಫೂಲ್ ಮಾಡಿದ ಅವರು, ಬಳಿಕ ಸಂಗೀತಾ ಶೃಂಗೇರಿ ಅವರನ್ನು ಫೂಲ್ ಮಾಡಿದ್ದರು. ಬಳಿಕ ವರ್ತೂರ್ ಅವರನ್ನು ಮನೆಯಿಂದ ಕರೆದುಕೊಂಡು ಬಂದಿದ್ದಾರೆ.

ಜೈ ಹಳ್ಳಿಕಾರ್ ಎಂದು ವರ್ತೂರ್ ಅವರನ್ನು ಬೀಳ್ಕೊಟ್ಟ ಫೈನಲಿಸ್ಟ್‌ಗಳು!
ನಮ್ರತಾ ಅವರು ವರ್ತೂರು ಸಂತೋಷ್ ಅವರನ್ನು ಎಲಿಮಿನೇಟ್ ಎಂದು ಹೇಳಿದ್ದಕ್ಕೆ ಅವರೇನು ಬೇಸರಪಟ್ಟುಕೊಂಡಿಲ್ಲ. ಇಷ್ಟು ದೂರ ಬಂದಿದ್ದಕ್ಕೆ ಖುಷಿ ಇದೆ ಎನ್ನುತ್ತಲೇ ಖುಷಿಯಿಂದ ಬಿಗ್ ಬಾಸ್ ನಿರ್ಧಾರವನ್ನು ಸ್ವಾಗತಿಸಿದ್ದಾರೆ. ನಾನು ಈಗಾಗಲೇ ಬಿಗ್ ಬಾಸ್ ಗೆದ್ದಿದ್ದೇನೆ. ಇಷ್ಟು ದಿನಗಳ ಕಾಲ ಮನೆಯಲ್ಲಿದ್ದು, ಜನರ ಪ್ರೀತಿ ಗಳಿಸಿದ್ದೇನೆ ಫೈನಲ್ ವರೆಗೂ ಬಂದಿದ್ದೇನೆ. ಇನ್ನೇನು ಬೇಕು ಎಂದು ಖುಷಿಯಿಂದ ಹೊರ ಬಂದಿದ್ದಾರೆ.
ಇನ್ನು, ವರ್ತೂರ್ ಸಂತೋಷ್ ದೊಡ್ಮನೆಯಲ್ಲಿ 112 ದಿನಗಳನ್ನು ಕಳೆದಿದ್ದಾರೆ. ಪ್ರತಿ ಬಾರಿ ಹಳ್ಳಿಕಾರ್‌ಗೆ ಜೈ ಎನ್ನುತ್ತಿದ್ದ ಅವರನ್ನು ಫೈನಲಿಸ್ಟ್‌ಗಳು ಕೂಡ 'ಜೈ ಹಳ್ಳಿಕಾರ್' ಎನ್ನುತ್ತಲೇ ಹೊರಗೆ ಕಳುಹಿಸಿದ್ದಾರೆ. ನಾನು ಮೈನ್ ಗೇಟ್ ಇಂದಾನೇ ಹೊರಗೆ ಹೋಗಬೇಕು ಎಂದು ಮನವಿ ಮಾಡಿಕೊಂಡಿದ್ದ ಅವರನ್ನು ಮನೆಯ ಸ್ಪರ್ಧಿಗಳು ಗೇಟ್ ವರೆಗೂ ಕರೆದುಕೊಂಡು ಬಂದು ಬಿಟ್ಟಿದ್ದಾರೆ. ಸಂಗೀತಾ ಅವರು ವರ್ತೂರ್ ಅವರ ಕಿವಿ ಹಿಂಡಿ ಪ್ರೀತಿಯಿಂದ ಕಳುಹಿಸಿದ್ದಾರೆ.

ವರ್ತೂರ್ ಸಂತೋಷ್‌ಗೆ ಸಿಕ್ತು ಎರಡು ಲಕ್ಷ!
ಇಂತಹ ಕಾರ್ಯಕ್ರಮದಲ್ಲಿ ಫೈನಲ್‌ವರೆಗೂ ಬಂದು ಈ ಸ್ಟೇಜ್‌ನಲ್ಲಿ ಇಲ್ಲಿವರೆಗೂ ಬಂದಿರೋದು ನನಗೆ ಖುಷಿಯಿದೆ ಎಂದಿದ್ದಾರೆ. ಜೊತೆಗೆ ನ್ಯಾಷನಲ್ ಲೆವೆಲ್‌ನಲ್ಲಿ ಹಳ್ಳಿಕಾರ್ ತಳಿಗಳ ಬಗ್ಗೆ ಸಮಾವೇಶ ನಡೆಸುವುದಾಗಿಯೂ ಅದಕ್ಕೆ ಕಿಚ್ಚ ಸುದೀಪ್ ಅವರು ಅತಿಥಿ ಆಗಿ ಬರಬೇಕು ಎಂದು ಕೇಳಿದ್ದಾರೆ. ಇದಕ್ಕೆ ಕಿಚ್ಚ ಸುದೀಪ್ ಕೂಡ ಸಕರಾತ್ಮಕವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ಇನ್ನು, ಫೈನಲ್‌ಗೆ ಬಂದಿದ್ದ ರೈತ ವರ್ತೂರ್ ಸಂತೋಷ್ ಅವರಿಗೆ ಬಹುಮಾನವಾಗಿ ಎರಡು ಲಕ್ಷ ಹಣ ನೀಡಲಾಗಿದೆ. ವೇದಿಕೆಯಲ್ಲಿ ವರ್ತೂರು ಸಂತೋಷ್ ಮತ್ತು ತುಕಾಲಿ ಸಂತೋಷ್ ಬಾಂಧವ್ಯ ಕಂಡು ಕಿಚ್ಚ ಸುದೀಪ್ ಕೂಡ ಆಶ್ಚರ್ಯ ಪಟ್ಟಿದ್ದಾರೆ. ಟ್ರೋಫಿ ಗೆಲ್ಲದೇ ವರ್ತೂರ್ ಬಂದಿದ್ದಕ್ಕೆ ತುಕಾಲಿ ಸಂತೋಷ್ ಕಣ್ಣೀರು ಹಾಕಿದ್ದಾರೆ. ಜೊತೆಗೆ ವೇದಿಕೆ ಮೇಲೆ ಕುಳಿತು ಇಬ್ಬರು ಹರಟೆ ಹೊಡೆದಿದ್ದಾರೆ.
ಸದ್ಯ ಬಿಗ್ ಬಾಸ್ ಮನೆಯಲ್ಲಿ ವರ್ತೂರ್ ಸಂತೋಷ್ ನಾಲ್ಕನೇ ರನ್ನರ್ ಅಪ್ ಆಗಿ ಹೊರಗೆ ಬಂದಿದ್ದು, ವಿನಯ್ ಗೌಡ, ಕಾರ್ತಿಕ್ ಗೌಡ, ಸಂಗೀತಾ ಶೃಂಗೇರಿ, ಡ್ರೋನ್ ಪ್ರತಾಪ್ ಮನೆಯೊಳಗೆ ಇದ್ದಾರೆ. ಈ ನಾಲ್ವರಲ್ಲಿ ಯಾರು ಟ್ರೋಫಿ ಕೈಯಲ್ಲಿ ಹಿಡಿಯಲಿದ್ದಾರೆ ಎಂಬುದು ಕೆಲವೇ ಕ್ಷಣಗಳಲ್ಲಿ ತಿಳಿಯಲಿದೆ.


Click it and Unblock the Notifications











