BBK13: ಈ ಬಾರಿ ಬಿಗ್‌ಬಾಸ್ ಮನೆಗೆ ಕಾಮನ್‌ಮ್ಯಾನ್‌ಗೂ ಅವಕಾಶ; ಆಡಿಷನ್ ಪ್ರಕ್ರಿಯೆ ಹೇಗೆ, ಇಲ್ಲಿದೆ ಮಾಹಿತಿ
ಮೊನ್ನೆ ಮೊನ್ನೆ ಬಿಗ್‌ಬಾಸ್ ಕನ್ನಡ ಸೀಸನ್ 12 ಮುಕ್ತಾಯವಾದಂತೆ ಭಾಸವಾಗ್ತಿದೆ. ಅಷ್ಟರಲ್ಲೇ ಸೀಸನ್ 13 ಆರಂಭಕ್ಕೆ ವೇದಿಕೆ ಸಿದ್ಧವಾಗ್ತಿದೆ. ಈ ಬಾರಿ ಕಾಮನ್‌ಮ್ಯಾನ್‌ಗೂ ಅವಕಾಶ ನೀಡುವುದಾಗಿ ಮೊದಲ ಪ್ರೋಮೊದಲ್ಲೇ ಘೋಷಣೆ ಮಾಡಿದ್ದಾರೆ. ಬಿಗ್‌ಬಾಸ್ ಕನ್ನಡ ಶೋನಲ್ಲಿ ಕಾಮನ್‌ಮ್ಯಾನ್‌ಗೆ ಅವಕಾಶ ಕೊಡುವುದು ಇದೇ ಮೊದಲಲ್ಲ. ಈ ಹಿಂದೆ ಕೂಡ ಅಂತಹ ಪ್ರಯತ್ನ ನಡೆದಿತ್ತು.
ಸಾಮಾನ್ಯವಾಗಿ ಬಿಗ್‌ಬಾಸ್ ಮನೆಗೆ ಸೆಲೆಬ್ರೆಟಿಗಳನ್ನು ಕಳುಹಿಸುತ್ತಾರೆ. ಅದರಲ್ಲೂ ಸಿನಿಮಾ, ಕಿರುತೆರೆ ನಟ, ನಟಿಯರ ಸಂಖ್ಯೆಯೇ ಹೆಚ್ಚು. ಆದರೆ ಇತ್ತೀಚೆಗೆ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ಸ್ ಹೆಚ್ಚಾಗಿ ಅವಕಾಶ ಪಡೆದುಕೊಳ್ತಿದ್ದಾರೆ. ಬೇರೆ ಬೇರೆ ಕ್ಷೇತ್ರಗಳಲ್ಲಿ ಗುರ್ತಿಸಿಕೊಂಡವರು ಹೋಗ್ತಾರೆ. ಒಟ್ಟಾರೆ ಅಲ್ಪ ಸ್ವಲ್ಪ ಜನಪ್ರಿಯತೆ ಇರುವವರೇ ಮನೆಯೊಳಗೆ ಹೋಗಿ 100 ದಿನಗಳ ಆಟ ಆಡುತ್ತಾರೆ. ಈ ಬಾರಿ ಆಟ ಬದಲಾಗ್ತಿದೆ.

ಬೇರೆ ಭಾಷೆಯ ಬಿಗ್‌ಬಾಸ್ ಶೋಗಳಲ್ಲಿ ಕೂಡ ಕಾಮನ್‌ಮ್ಯಾನ್‌ಗೆ ಅವಕಾಶ ನೀಡಲಾಗಿತ್ತು. ಬಿಗ್‌ಬಾಸ್ ಕನ್ನಡ ಸೀಸನ್ 13ರ ಹೊಸ ಪ್ರೋಮೊ ಬಂದಿದೆ. ದೊಡ್ಮನೆ ಒಳಗೆ ಹೋಗಲು ಬಯಸುವ ಕಾಮನ್‌ಮ್ಯಾನ್‌ಗಳಿಗೆ ಟಾಸ್ಕ್ ನೀಡಲಾಗಿದೆ. ಇದಕ್ಕೂ ಮುನ್ನ 2017ರಲ್ಲಿ ನಡೆದಿದ್ದ 5ನೇ ಸೀಸನ್‌ನಲ್ಲಿ ಕಾಮನ್‌ಮ್ಯಾನ್‌ಗೆ ಅವಕಾಶ ನೀಡಲಾಗಿತ್ತು. ಮೂಲತಃ ಸೇಲ್ಸ್‌ಮನ್ ದಿವಾಕರ್ ಫಿನಾಲೆವರೆಗೂ ಹೋಗಿ ಗಮನ ಸೆಳೆದಿದ್ದರು. ಅಂತಿಮವಾಗಿ ರನ್ನರ್ ಅಪ್ ಆಗಿ ಸುದ್ದಿ ಆಗಿದ್ದರು. ಬಳಿಕ 'ರೇಸ್' ಎಂಬ ಕನ್ನಡ ಸಿನಿಮಾದಲ್ಲಿ ಕೂಡ ದಿವಾಕರ್ ನಟಿಸಿದ್ದರು.
ಕೈ ತಟ್ಟಿ ಹುರಿದುಂಬಿಸಿದ್ದು ಸಾಕು, ತೊಡೆ ತಟ್ಟಿ ಅಖಾಡಕ್ಕೆ ಇಳಿಯೋಕೆ ರೆಡಿ ತಾನೆ? ಎಂದು ಕ್ಯಾಪ್ಷನ್ ಕೊಟ್ಟು ಬಿಗ್‌ಬಾಸ್ 13 ಹೊಸ ಪ್ರೋಮೊ ರಿಲೀಸ್ ಮಾಡಿದ್ದಾರೆ. ಅವಕಾಶ ಸಿಗದೇ ಇರುವ ಆಸೆಗಳಿಗೆ ಅರ್ಥನೇ ಇರೋದಿಲ್ಲ. ಈ ಬಾರಿ ನಿಮ್ಮಂಥ ಸಾಮಾನ್ಯರ ಆಸೆಗಳಿಗೆ ರೆಕ್ಕೆ ಕಟ್ಟುವ ಅವಕಾಶ ನೀಡುತ್ತಿದ್ದಾರೆ ಬಿಗ್‌ಬಾಸ್. ಕೈತಟ್ಟಿ ಪ್ರೋತ್ಸಾಹ ನೀಡಿದ್ದು ಸಾಕು. ತೊಡೆ ತಟ್ಟಿ ಅಖಾಡಕ್ಕೆ ಇಳಿಯಲು ಸಿದ್ಧರಾಗಿದ್ದೀರಾ? ನಿಮಗೆ ಬಿಗ್‌ಬಾಸ್ ಮನೆಗೆ ಸ್ವಾಗತ. ನೀವ್ಯಾಕೆ ಬಿಗ್‌ಬಾಸ್ ಮನೆಯಲ್ಲಿರಬೇಕು ಎನ್ನುವುದನ್ನು 3 ನಿಮಿಷ ವಿಡಿಯೋ ಮಾಡಿ, ನಿಮ್ಮ ವಿವರಣೆಯೊಂದಿಗೆ colorskannada.jiostar.comನಲ್ಲಿ ಅಪ್‌ಲ್ಲೋಡ್ ಮಾಡಿ ಬಿಗ್‌ಬಾಸ್ ಆಡಿಷನ್ಸ್‌ನಲ್ಲಿ ಭಾಗವಹಿಸಿ ಎಂದು ಮಾಹಿತಿ ನೀಡಿದ್ದಾರೆ.
ಬಿಗ್ ಬಾಸ್ ಆಡಿಷನ್ ಪ್ರಕ್ರಿಯೆ ಬಗ್ಗೆ ಕೂಡ ವೀಡಿಯೋ ಮಾಡಿ ಮಾಹಿತಿ ನೀಡಲಾಗಿದೆ. colorskannada.jiostar.com ಅಲ್ಲಿ ಲಾಗಿನ್ ಆಗಿ ಆಡಿಷನ್ ಅವಕಾಶ ಪಡೆಯಲು ಏನೆಲ್ಲಾ ಮಾಡಬೇಕು ಎಂದು ವಿವರಿಸಲಾಗಿದೆ.
ಪ್ರತಿಬಾರಿ ಬಿಗ್‌ಬಾಸ್ ಶೋ ಬಂದಾಗಲೂ ಕಾಮನ್‌ಮ್ಯಾನ್‌ಗೆ ಅವಕಾಶ ಕೊಡಿ ಎನ್ನುವ ಕೂಗು ಕೇಳಿ ಬರುತ್ತದೆ. ಈ ಬಾರಿ ಅಂತಹ ಅವಕಾಶ ಸಿಕ್ಕಿದೆ. ನಿಮ್ಮ ಅದೃಷ್ಟ ಪರೀಕ್ಷೆ ಮಾಡಿಕೊಳ್ಳುವ ಸಮಯ ಬಂದಿದೆ. ಈ ಪ್ರಕ್ರಿಯೆ ಮೂಲಕ ನಿಮ್ಮ ಕನಸು ನನಸಾಗಿಸಿಕೊಳ್ಳಿ.
ಪ್ರತಿವರ್ಷ ಸೆಪ್ಟೆಂಬರ್ ಅಥವಾ ನವೆಂಬರ್‌ನಲ್ಲಿ ಬಿಗ್‌ಬಾಸ್ ಕನ್ನಡ ಸೀಸನ್ ಶುರುವಾಗ್ತಿತ್ತು. ಆದರೆ ಈ ಬಾರಿ ಕೊಂಚ ಬೇಗ ಮನೆ ಮನೆಗೆ ಕಿಚ್ಚನ ಎಂಟ್ರಿ ಆಗಲಿದೆ. ಆಗಸ್ಟ್ ವೇಳೆಗೆ ಸೀಸನ್ 13 ಆರಂಭವಾಗುವ ನಿರೀಕ್ಷೆಯಿದೆ. ಮತ್ತೆ ಸುದೀಪ್ ಕಾರ್ಯಕ್ರಮ ನಿರೂಪಣೆ ಮಾಡಲಿದ್ದಾರೆ. ಕಾಮನ್‌ಮ್ಯಾನ್ ಜೊತೆಗೆ ಸೆಲೆಬ್ರೆಟಿಗಳು ಯಾರೆಲ್ಲಾ ಹೋಗಬಹುದು ಎನ್ನುವ ಲೆಕ್ಕಾಚಾರ ಕೂಡ ಶುರುವಾಗಿದೆ.
ಕಳೆದ ಸೀಸನ್‌ನಲ್ಲಿ ಗಿಲ್ಲಿ ನಟ ವೀಕ್ಷಕರ ಮನಗೆದ್ದಿದ್ದರು. ದಾಖಲೆ ಮಟ್ಟದಲ್ಲಿ ವೋಟ್ ಗಿಟ್ಟಿಸಿ ಎಲ್ಲರ ಹುಬ್ಬೇರಿಸಿದ್ದರು. ಕಿರುತೆರೆ ಕಾರ್ಯಕ್ರಮಗಳಲ್ಲಿ ಕಾಮಿಡಿ ಮಾಡುತ್ತಾ ನಗಿಸುತ್ತಿದ್ದ ಗಿಲ್ಲಿ ದೊಡ್ಮನೆ ಒಳಗೆ ಜಾದೂ ಮಾಡಿದ್ದರು. ದೊಡ್ಡ ಅಭಿಮಾನಿ ಬಳಗ ಸೃಷ್ಟಿಸಿಕೊಂಡುಬಿಟ್ಟರು. ಈ ಬಾರಿ ಯಾರು ಬಿಗ್‌ಬಾಸ್ ಟ್ರೋಫಿ ಎತ್ತಿ ಹಿಡಿಯುತ್ತಾರೆ ಕಾದು ನೋಡಬೇಕಿದೆ.


Click it and Unblock the Notifications