ಬೆಟ್ಟದ ಹೂ: ಹೂವಿಗೆ ಬೇಕಾಗಿರುವ ಗುರುತನ್ನು ಕೊಡುತ್ತಾನಾ ರಾಹುಲ್..?
ಯಾವ ಸತ್ಯ ಯಾರಿಗೂ ತಿಳಿಯಬಾರದೆಂದು ಎದೆಯಲ್ಲಿ ಅವುಚಿಕೊಂಡು ಜೀವನ ಸಾಗಿಸುತ್ತಿದ್ದರೋ ಆ ಸತ್ಯ ಬಯಲಾಗುವ ಸಮಯ ಬಂದಾಗಿದೆ. ಅತ್ತ ಕಡೆ ರಾಹುಲ್ ಮತ್ತು ಹೂವಿ ತಮ್ಮಿಬ್ಬರ ಮದುವೆಯ ಗುಟ್ಟನ್ನು ಭದ್ರವಾಗಿ ಮೂಟೆ ಕಟ್ಟಿ, ಮನೆಯಲ್ಲಿ ಕೆಲಸದವಳಂತೆ ಇದ್ದರು. ಇತ್ತ ಗೌರ, ಹೂವಿಯ ನಿಜವಾದ ಅಪ್ಪಯ್ಯ ಯಾರು ಎಂಬುದನ್ನು ಹೇಳದೆ ಎದೆಯೊಳಗೆ ಬೆಂಕಿಯ ಚೆಂಡನ್ನೇ ಕಟ್ಟಿಕೊಂಡು ಜೀವನ ಸಾಗಿಸುತ್ತಿದ್ದಳು. ಆದರೆ ತಾಳ್ಮೆಗೂ ಒಂದು ಕಟ್ಟೆ ಇರುತ್ತದೆ ಅಲ್ಲವಾ. ಆ ತಾಳ್ಮೆಯ ಕಟ್ಟೆ ಒಡೆಯುವ ಸಮಯ ಬಂದಾಗಿದೆ.
ತಪ್ಪು ಮಾಡಿದವರ ಮನದಲ್ಲಿ ಪಶ್ಚತ್ತಾಪ ಮುಗಿದು, ಕ್ಷಮೆ ಕೇಳಲೇಬೇಕೆಂಬ ಹಂತಕ್ಕೆ ಬಂದು ನಿಂತಿದೆ. ಅದೇ ಕಾರಣಕ್ಕೆ ಅತ್ತ ಕಡೆ ಮಾವ ಗೌತಮ್ ಮುಂಬೈ ನಲ್ಲಿ ಕೆಲಸವಿದೆ ಅಂತೇಳಿ ಚನ್ನವಲ್ಸೆಗೆ ಬಂದಿದ್ದಾನೆ. ಇತ್ತ ಕಡೆ ಅಳಿಯ ರಾಹುಲ್ ಚೆನ್ನೈಗೆ ಹೋಗುತ್ತೇನೆಂದು ಚನ್ನವಲ್ಸೆಗೆ ಬಂದಿದ್ದಾನೆ. ಇಬ್ಬರ ಗುರಿ ಒಂದೇ ಮಾಡಿದ ಮೋಸಕ್ಕೆ ಕ್ಷಮೆಯಾಚಿಸಬೇಕು. ಆದ ಅನ್ಯಾಯವನ್ನು ಸರಿಪಡಿಸಬೇಕು.

ಹುಲಿಯನ ಮನಸ್ಸಿನ ಭಾವನೆಯೇ ಬೇರೆಯಾಗಿತ್ತು
ಹುಲಿಯ, ಗೌರನನ್ನು ತುಂಬಾ ಪ್ರೀತಿಸುತ್ತಿದ್ದ ಎಂಬುದು ಹುಲಿಯನ ನಡವಳಿಕೆಯಲ್ಲಿಯೇ ತಿಳಿಯಬಹುದು. ಹೂವಿಯನ್ನು ಸ್ವಂತ ಕೂಸಿನಂತೆಯೇ ಸಾಕಿದ್ದಾನೆ. ಅಷ್ಟೇ ಯಾಕೆ ಸುತ್ತ ಹತ್ತಳ್ಳಿಯಲ್ಲಿ ಹುಇವಿಯ ಅಪ್ಪಯ್ಯ ಇದೇ ಹುಲಿಯಾ ಎಂದೇ ಭಾವಿಸಿದ್ದಾರೆ. ಗೌರ ಕೂಡ ಅದು ಸತ್ಯವಲ್ಲ ಎಂದು ಹೇಳುವುದಕ್ಕೆ ಹೋಗಲಿಲ್ಲ. ಆದರೆ ತನ್ನೊಡಲೊಳಗೆ ಅದುಮಿಟ್ಟುಕೊಂಡಿದ್ದಳು. ಹುಲಿಯನಿಗೆ ಪ್ಯಾಟೆ ಹೈದ ಗೌತಮ್ ಸಿಗಲಿ, ಅವನನ್ನು ಸಾಯಿಸಿದ ಮೇಲೆಯೇ ನೆಮ್ಮದಿ ಎನ್ನುತ್ತಿದ್ದ. ಅದಕ್ಕೆ ತಕ್ಕನಾಗಿ ಸಿಕ್ಕಿ ಬಿದ್ದಾಗ, ಇನ್ನೇನು ಗುಂಡು ಹಾರಿಸಬೇಕು ಅಷ್ಟರಲ್ಲಿ ಗೌರ ಬಂದು, ಹುಲಿಯನ ಕಪಾಳಕ್ಕೆ ಬಾರಿಸಿದಳು. ಹೂವಿ ತಂದೆ ಇವರೇ ಎಂದಾಗ ಹುಲಿಯನಿಗೆ ಆ ಕಾರಾಳ ಸತ್ಯವನ್ನು ಅರಗಿಸಿಕೊಳ್ಳಲು ಆಗಲಿಲ್ಲ. ಈಗಲೂ ನೀ ಬಯಸಿದರೆ ಹೂವಿಯ ತಂದೆಯಾಗ್ತೀನಿ ಅಂತಾನೆ ತನ್ನ ಮನದ ಆಸೆ ಹೇಳಿದ.

ರಾಹುಲ್‌ಗೆ ಹುಲಿಯನ ಬಗ್ಗೆ ಹೆಮ್ಮೆ
ಗೌರ ಮತ್ತು ಹೂವಿಯನ್ನು ಸ್ವಂತದವರಂತೆ ಹುಲಿಯಾ ನೋಡಿಕೊಂಡಿದ್ದಾನೆ. ಈಗಲೂ ನಾನು ಹಾಗೆಯೇ ನೋಡಿಕೊಳ್ಳುತ್ತೇನೆ ಎಂದು ಹೇಳುತ್ತಿದ್ದಾನೆ. ಆದರೆ ಗೌರನಿಗೆ ಗೌತಮ್ ಮೇಲೆಯೇ ಇನ್ನು ಆಸೆ ಇದೆ. ಇದನ್ನು ತಿಳಿದ ಹುಲಿಯಾ ಗೌರನ ಭಾವನೆಗಳಿಗೆ ಬೆಲೆ ಕೊಟ್ಟು ಅಲ್ಲಿಂದ ಹೊರಟೆ ಬಿಟ್ಟ. ಮಧ್ಯದಲ್ಲಿ ಹೂವಿ ಸಿಕ್ಕಾಗ, ಕಣ್ಣಲ್ಲಿ ನೀರು ತುಂಬಿತ್ತು. ಅಷ್ಟು ಗಟ್ಟಿ ಮನಸ್ಸಿವ ಹುಲಿಯ ಭಾವನೆಗೆ ಒಳಗಾಗಿದ್ದನ್ನು ಕಂಡು ಹೂವಿಯೇ ಕಂಗಲಾಗಿದ್ದಳು. ಇತ್ತ ಕಡೆ ರಾಹುಲ್‌ಗೆ ಹುಲಿಯನ ಮೇಲಿದ್ದ ಭಾವನೆ ಹೆಚ್ಚಾಗಿತ್ತು. ಗೌರವ ಮನದಲ್ಲಿಯೇ ಜಾಸ್ತಿಯಾಗಿತ್ತು.

ಹೂವಿ ಬಿಟ್ಟು ಬೆಂಗಳೂರಿಗೆ ಹೊರಡುತ್ತಾನಾ ರಾಹುಲ್?
ರಾಹುಲ್ ಮನೆಯವರಿಗೆ ಹೇಳದೆಯೇ ಚನ್ನವಲ್ಸೆಗೆ ಬಂದಿದ್ದಾನೆ. ಚೆನ್ನೈಗೆ ಕೆಲಸದ ಮೇಲೆ ಹೋಗುತ್ತೇನೆಂದು ಹೇಳಿದ್ದ. ಆದರೆ ಅದು ವೈಯಕ್ತಿಕ ಕೆಲಸ ಎಂಬುದು ಮನೆಯವರಿಗೆಲ್ಲಾ ಸತ್ಯ ಗೊತ್ತಾಗಿದೆ. ಮಾಲಿನಿ ಕೋಪ ಮಾಡಿಕೊಂಡು ತವರು ಮನೆಗೆ ಹೋಗಿ ಕುಳಿತಿದ್ದಾಳೆ. ಇದರಿಂದ ಮನೆ ಮಂದಿಯೆಲ್ಲಾ ಗಾಬರಿಯಾಗಿದ್ದಾರೆ. ಆದರೆ ರಾಹುಲ್‌ಗೆ ಇದರ ಯಾವ ಪರಿವೆಯೂ ಇಲ್ಲ. ಬೆಂಗಳೂರಿಗೆ ಬೇಗ ಹೋಗಬೇಕಾದ ಅನಿವಾರ್ಯತೆ ಇದೆ. ಆದರೆ ಹೂವಿ ಜೊತೆ ತುಂಬಾ ಅಟ್ಯಾಚ್ ಆಗಿದ್ದಾನೆ. ಹೂವಿಯನ್ನು ಬಿಟ್ಟು ಹೋಗುವುದಕ್ಕೆ ಬಹಳ ಕಷ್ಟವಾಗುತ್ತಿದೆ. ಅದನ್ನೇ ರಾಹುಲ್ ಗೋಗರೆದು ಹೇಳುತ್ತಿದ್ದಾನೆ. ನೀನು ಬೆಂಗಳೂರಿಗೆ ಬಂದು ಬಿಡು ಅಂತಿದ್ದಾನೆ
ರಾಹುಲ್‌ನಿಂದ ಹೂವಿಯ ಗುರುತು ಸಾಧ್ಯವಾ?
ಹೂವಿ ವಟ ವಟ ಅಂತ ಮಾತನಾಡಿದರೂ, ಎಲ್ಲರ ಜೊತೆ ನಗು ನಗುತ್ತಾ ಇದ್ದರೂ ಮನಸ್ಸಿನೊಳಗೆ ನೋವು ತುಂಬಿದೆ. ಯಾರಾದರೂ ವೈಯಕ್ತಿಕ ವಿಚಾರವನ್ನು ಕೆದಕಿದರೆ ಆ ದುಃಖ ಉಮ್ಮಳಿಸಿ ಬರುತ್ತದೆ. ಈಗ ರಾಹುಲ್ ಕೇಳಿದ ಪ್ರಶ್ನೆಗೆ ಅವಳಿಗೆ ದುಃಖವೊಂದೇ ಬಂದಿದ್ದು. ಬೆಂಗಳೂರಿಗೆ ನನ್ನ ಜೊತೆಯೇ ಬಂದು ಬಿಡು ಎಂದಾಗ ಹೂವಿಗೆ ಅಂತ ಯಾವ ಗುರುತು ಇಲ್ಲ. ಹೂವಿ ಮುಂದೆ ಅಪ್ಪನ ಹೆಸರು ಇಲ್ಲ ಗಂಡನ ಹೆಸರು ಇಲ್ಲ ಎಂಬ ನೋವು ತೋಡಿಕೊಂಡಿದ್ದಾಳೆ.


Click it and Unblock the Notifications











