'ಭಾಗ್ಯಲಕ್ಷ್ಮಿ' ಧಾರಾವಾಹಿಯ ಈ ನಟಿ ಪದ್ಮಜಾ ರಾವ್ ಮೊದಲ ಸೀರಿಯಲ್ ಯಾವುದು ಗೊತ್ತೇ?
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿಗಳ ಪೈಕಿ 'ಭಾಗ್ಯಲಕ್ಷ್ಮಿ' ಧಾರಾವಾಹಿಯೂ ಒಂದು. 'ಭಾಗ್ಯಲಕ್ಷ್ಮಿ' ಧಾರಾವಾಹಿಯಲ್ಲಿ ನಾಯಕ ತಾಂಡವ್ ಅಮ್ಮ ಕುಸುಮಾ ಆಗಿ ಅಭಿನಯಿಸುತ್ತಿರುವ ಪದ್ಮಜಾ ರಾವ್ ತಮ್ಮ ನಟನೆಯ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆಯುತ್ತಿದ್ದಾರೆ. ಖಡಕ್ ಅತ್ತೆ, ಅಮ್ಮನಾಗಿ ತೆರೆ ಮೇಲೆ ಮೋಡಿ ಮಾಡುತ್ತಿರುವ ಪದ್ಮಜಾ ರಾವ್ ನಟನೆಯ ಮೂಲಕ ಮನ ಸೆಳೆದಿದ್ದಾರೆ ಎಂದರೆ ಇತ್ತೀಚೆಗಷ್ಟೇ ನಡೆದ ಅನುಬಂಧ ಅವಾರ್ಡ್ಸ್‌ನಲ್ಲಿ ಅವರು ಮನೆ ಮೆಚ್ಚಿದ ಅತ್ತೆ ಪ್ರಶಸ್ತಿ ಪಡೆದುಕೊಂಡಿದ್ದು ಸಾಕ್ಷಿ.
ಅಂದ ಹಾಗೇ ವೈಶಾಲಿ ಕಾಸರವಳ್ಳಿ ನಿರ್ದೇಶನದ 'ಮೂಡಲಮನೆ' ಧಾರಾವಾಹಿಯಲ್ಲಿ ಶಕ್ಕು ಅಕ್ಕನಾಗಿ ನಟಿಸುವ ಮೂಲಕ ನಟನೆಯ ನಂಟು ಬೆಳೆಸಿಕೊಂಡ ಪದ್ಮಜಾ ರಾವ್ ಮೊದಲ ಧಾರಾವಾಹಿಯಲ್ಲಿಯೇ ವೀಕ್ಷಕರ ಮನ ಸೆಳೆದಿದ್ದರು. ನಂತರ 'ಪ್ರೀತಿ ಇಲ್ಲದ ಮೇಲೆ' ಧಾರಾವಾಹಿಯಲ್ಲಿ ಬಣ್ಣ ಹಚ್ಚಿರುವ ಪದ್ಮಜಾ ರಾವ್ ಅನಂತನಾಗ್, ಯಶ್ ಅವರೊಂದಿಗೆ ತೆರೆ ಹಂಚಿಕೊಂಡಿದ್ದಾರೆ.

ಕ್ರೇಜಿಸ್ಟಾರ್ ರವಿಚಂದ್ರನ್ ಅವರ 'ಹಠವಾದಿ' ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟ ಪದ್ಮಜಾ ರಾವ್ ನಂತರ ನಟಿಸಿದ್ದು 'ಮುಂಗಾರುಮಳೆ' ಸಿನಿಮಾದಲ್ಲಿ. ಆ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಜನಪ್ರಿಯತೆ ಗಿಟ್ಟಿಸಿಕೊಂಡಿರುವ ಇವರು 'ಗಾಳಿಪಟ', 'ಪಂಚರಂಗಿ', 'ವರದನಾಯಕ', 'ಬಚ್ಚನ್', 'ಬಹಾದ್ದೂರ್' ಸೇರಿದಂತೆ ಕಳೆದ ವರ್ಷ ಬಿಡುಗಡೆಗೊಂಡ 'ಅಂಬುಜಾ' ಸಿನಿಮಾ ಹೀಗೆ ನೂರಕ್ಕೂ ಹೆಚ್ಚಿನ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.
'ಬೆಂಕಿಯಲ್ಲಿ ಅರಳಿದ ಹೂವು' ಧಾರಾವಾಹಿಯಲ್ಲಿ ಅಭಿನಯಿಸಿರುವ ಈಕೆ 'ಸಮ ರೇಖೆಗಳು', 'ಶಿಖರ' ಧಾರಾವಾಹಿಗಳಲ್ಲಿ ಬಣ್ಣ ಹಚ್ಚಿದ್ದರು. ಇನ್ನು 'ಅರಮನೆ ಗಿಳಿ' ಧಾರಾವಾಹಿಗಳಲ್ಲಿ ಬಣ್ಣ ಹಚ್ಚಿರುವ ಪದ್ಮಜಾ ರಾವ್ ಕಾಮಾಕ್ಷಿ, ಮೀನಾಕ್ಷಿ ಎನ್ನುವ ದ್ವಿಪಾತ್ರದಲ್ಲಿ ನಟಿಸಿ ಕಿರುತೆರೆ ವೀಕ್ಷಕರ ಮನ ಸೆಳೆದಿದ್ದರು. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಜೊತೆ ಜೊತೆಯಲಿ' ಹಾಗೂ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಹೂವಿ' ಧಾರಾವಾಹಿಯಲ್ಲಿಯೂ ಪದ್ಮಜಾ ರಾವ್ ಅಭಿನಯಿಸಿದ್ದರು.

ಇದೀಗ ಕುಸುಮಾ ಆಗಿ ಬ್ಯುಸಿಯಾಗಿರುವ ಪದ್ಮಜಾ ರಾವ್ ಅವರಿಗೆ ಆರಂಭದಲ್ಲಿ ಈ ಪಾತ್ರದಲ್ಲಿ ನಟಿಸಲು ಕಷ್ಟವಾಗಿತ್ತು. ಯಾಕೆಂದರೆ ಇದೇ ಮೊದಲ ಬಾರಿಗೆ ಪದ್ಮಜಾ ಅವರು ಇಂತಹ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇಷ್ಟು ದಿನಗಳ ಕಾಲ ಮುಗ್ಧ ಮನಸ್ಸಿನ ಅಮ್ಮನಾಗಿ, ಸಾಧು ಸ್ವಭಾವದ ಗೃಹಿಣಿಯಾಗಿ ತೆರೆಯಲ್ಲಿ ಕಾಣಿಸಿಕೊಂಡಿರುವ ಪದ್ಮಜಾ ರಾವ್ ಇದೇ ಮೊದಲ ಬಾರಿಗೆ ಖಡಕ್ ಮಹಿಳೆಯಾಗಿ ಮೋಡಿ ಮಾಡುತ್ತಿದ್ದಾರೆ.
ಅಂದ ಹಾಗೇ ಪದ್ಮಜಾ ರಾವ್ ಅವರು ಇಲ್ಲಿಯ ತನಕ ಕುಸುಮಾ ಪಾತ್ರದ ರೀತಿಯ ಯಾರೊಬ್ಬರನ್ನು ಕೂಡಾ ತನ್ನ ಜೀವನದಲ್ಲಿ ಭೇಟಿ ಮಾಡಿರಲಿಲ್ಲ. ಹಾಗಾಗಿ ಆರಂಭದ ದಿನಗಳಲ್ಲಿ ಆ ಪಾತ್ರಕ್ಕೆ ಜೀವ ತುಂಬಲು ಸಹಜವಾಗಿ ಅವರಿಗೆ ಕಷ್ಟವಾಗಿತ್ತು. ಆದರೆ ಕ್ರಮೇಣ ಯಶಸ್ವಿಯಾಗಿ ನಟಿಸುತ್ತಿರುವ ಈಕೆ ಇಂದು ಕುಸುಮಾ ಆಗಿ ಕಿರುತೆರೆ ವೀಕ್ಷಕರ ಫೇವರಿಟ್ ಆಗಿ ಬಿಟ್ಟಿದ್ದಾರೆ.
ಕಿರುತೆರೆ, ಹಿರಿತೆರೆ ಹೊರತಾಗಿ ಕಿರುಚಿತ್ರಗಳಲ್ಲಿ ನಟಿಸಿರುವ ಹೆಗ್ಗಳಿಕೆ ಇವರದು. ಕನ್ನಡದ 'ಚಾಕಲೇಟ್' ಎನ್ನುವ ಕಿರುಚಿತ್ರದಲ್ಲಿ ನಟಿಸಿರುವ ಈಕೆ ಇಂಗ್ಲಿಷ್‌ನ 'ಮೀಟೂ', 'ಊಫಿ' ಕಿರುಚಿತ್ರದಲ್ಲಿ ಅಭಿನಯಿಸಿದ್ದಾರೆ. ಇನ್ನು ಕಲ್ಕಿ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಪದ್ದೂಸ್ ಕಿಚನ್ ಹ್ಯಾಂಡಲ್ ಮಾಡುತ್ತಿದ್ದ ಈ ನಟಿ 'ಸವಾಲಿಗೆ ಸೈ' , 'ತುತ್ತಾಮುತ್ತಾ' ಹಾಗೂ 'ಕ್ರೇಜಿ ಕುಟುಂಬ' ಶೋಗಳಲ್ಲಿ ಭಾಗವಹಿಸಿದ್ದಾರೆ.


Click it and Unblock the Notifications











