ಕೈಯಲ್ಲಿ ತಂಬೂರಿ ಹಿಡಿದು ಕಣ್ಮನ ಸೆಳೆದ ತನ್ವಿ ರಾವ್; ಭಾಗ್ಯಲಕ್ಷ್ಮಿ ನಟಿಯ ಸಾಧನೆಯೇನು?
ಆಕೃತಿ ಧಾರಾವಾಹಿ ಮೂಲಕ ಕಿರುತೆರೆಗೆ ಬಂದ ನಟಿ ತನ್ವಿ ರಾವ್ 'ರಂಗ್ ಬಿ ರಂಗ್' ಚಿತ್ರಕ್ಕೆ ಬಣ್ಣ ಹಚ್ಚಿದರು. 'ರಾಧೆ ಶ್ಯಾಮ' ಧಾರಾವಾಹಿಯಲ್ಲಿ ನಟಿಸಿ ತಮಿಳಿನ ಜಮೀಲ ಎಂಬ ಸೀರಿಯಲ್‌ನಲ್ಲಿ ನಾಯಕಿ ಆಗಿ ಕಾಣಿಸಿಕೊಂಡಿದ್ದರು.
ಸದ್ಯ 'ಭಾಗ್ಯಲಕ್ಷ್ಮೀ' ಧಾರಾವಾಹಿ ಮೂಲಕ ವೀಕ್ಷಕರಿಗೆ ಚಿರಪರಿಚಿತರಾಗಿರುವ ತನ್ವಿ ರಾವ್ ಬಾಲಿವುಡ್ ಸಿನಿಮಾದಲ್ಲಿ ಮಾಧುರಿ ದೀಕ್ಷಿತ್ ನಟನೆಯ 'ಗುಲಾಬ್ ಗ್ಯಾಂಗ್' ಸಿನಿಮಾದಲ್ಲಿಯೂ ನಟಿಸಿದ್ದರು.

ಬಾಲಿವುಡ್‌ನ ಗುಲ್ಮೊಹರ್ ಎಂಬ ಸಿನಿಮಾದಲ್ಲೀ ನಟಿಸಿರುವ ತನ್ವಿ ರಾವ್ ಅವರ ಸಾಧನೆ ಒಂದೆರಡಲ್ಲ. ಅವರು ಮಾಡಿರುವ ಸಾಧನೆಗಳು ಹಾಗೂ ಇತರೆ ಮಾಹಿತಿಯನ್ನು ಇಲ್ಲಿ ತಿಳಿಯುವುದರ ಜೊತೆ ಹೊಸ ಫೋಟೊಗಳನ್ನು ಹಂಚಿಕೊಂಡಿದ್ದಾರೆ. ಅದು ಹೇಗಿದೆ? ನೆಟ್ಟಿಗರು ಏನಂತಾರೆ ಅನ್ನೋದನ್ನು ನೋಡೋಣ.
ದೂರದರ್ಶನದ ಮೂಲಕ ಪಯಣ ಆರಂಭ
ದೆಹಲಿ ದೂರದರ್ಶನದ 'ಧಿನಕ್ ಧಿನ್ ಧಾ' ಹಾಗೂ ಮುಂಬೈ ದೂರದರ್ಶನದ 'ಧಮ್ ಧಮಾ ಧಮ್' ಕಾರ್ಯಕ್ರಮಗಳಲ್ಲಿ ಬಾಲ ಕಲಾವಿದೆಯಾಗಿ ಭಾಗವಹಿಸಿದ್ದರು. 9 ವರ್ಷ ವಯಸ್ಸಿದ್ದಾಗಲೇ ಡಾ. ವೀರೇಂದ್ರ ಹೆಗ್ಗಡೆ ಅವರಿಂದ ಅಪೂರ್ವ ಬಾಲ ಪ್ರತಿಭೆ ಪ್ರಶಸ್ತಿಯನ್ನು ಪಡೆದಿದ್ದರು. 10 ವರ್ಷದವರಾಗಿದ್ದಾಗಲೇ ಸಾಂಸ್ಕೃತಿಕ ಕ್ಷೇತ್ರದಲ್ಲಿ ಮಾಡಿದ ಸಾಧನೆಗೆ ಕರ್ನಾಟಕ ರಾಜ್ಯ ಪಾಲರಿಂದ ಕರ್ನಾಟಕ ರಾಜ್ಯ ಪ್ರಶಸ್ತಿಯನ್ನು ಪಡೆದಿದ್ದರು. 10ನೇ ವಯಸ್ಸಿನಲ್ಲಿಯೇ ಮಂಗಳೂರಿನ ಟೌನ್ ಹಾಲ್‌ನಲ್ಲಿ ರಂಗಪ್ರವೇಶ ಮಾಡಿದರು. 17ನೇ ವಯಸ್ಸಿಗೆ ವಿದ್ವತ್ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ ಪಡೆದಿದ್ದರು.
ಅಂತರಾಷ್ಟ್ರೀಯ ಮಟ್ಟದಲ್ಲಿ ನೃತ್ಯ ಪ್ರದರ್ಶನ
ಮಲೇಷ್ಯಾ, ಯುಎಸ್, ಸ್ಕಾಟ್ ಲ್ಯಾಂಡ್, ಸಿಂಗಾಫುರ್ ಸೇರಿದಂತೆ 6ಕ್ಕಿಂತ ಹೆಚ್ಚು ಅಂತರಾಷ್ಟೀಯ ಕಾರ್ಯಕ್ರಮಗಳಲ್ಲಿ ನೃತ್ಯ ಪ್ರದರ್ಶನವನ್ನು ನೀಡಿದ್ದಾರೆ. ಡಾ.ಎಪಿಜೆ ಅಬ್ದುಲ್ ಕಲಾಂ ಸೇರಿದಂತೆ ದೊಡ್ಡ ದೊಡ್ಡ ವ್ಯಕ್ತಿಗಳಿಂದ ತಮ್ಮ ಕಲೆಗೆ ಮೆಚ್ಚುಗೆಯನ್ನು ಪಡೆದುಕೊಂಡಿದ್ದಾರೆ. ತನ್ವಿ ರಾವ್ ಅವರಿಗೆ ಕೇವಲ ಆರು ವರ್ಷ ವಯಸ್ಸಿದ್ದಾಗಲೇ ಕಾರ್ಯಕ್ರಮದಲ್ಲಿ ನೃತ್ಯ ಪ್ರದರ್ಶಿಸಿದ ವೀಡಿಯೋವನ್ನು ಡಾ. ಎಪಿಜೆ ಅಬ್ದುಲ್ ಕಲಾಂ ಅವರಿಗೆ ಕಳಿಸಿದ್ದರು. ತನ್ವಿ ನೃತ್ಯವನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿ ಪತ್ರವನ್ನು ಬರೆದಿದ್ದರು. ಅಷ್ಟೇ ಅಲ್ಲದೇ, ಮಂಗಳೂರಿಗೆ ಭೇಟಿ ಕೊಟ್ಟಾಗ ತನ್ವಿ ರಾವ್ ಅವರನ್ನು ಮೀಟ್ ಕೂಡ ಮಾಡಿದ್ದರು.

ಧಾರಾವಾಹಿ ಮೂಲಕ ಚಿರಪರಿಚಿತೆ
ಅತೀ ಚಿಕ್ಕ ವಯಸ್ಸಿಗೆ ಇಷ್ಟೆಲ್ಲಾ ಸಾಧನೆ ಮಾಡಿರುವ ತನ್ವಿ ರಾವ್ ಸಾಮಾನ್ಯ ಜನರಿಗೆ ಪರಿಚಯವಾಗಿದ್ದು, ಬಣ್ಣದ ಲೋಕದ ಮೂಲಕ ಅದರಲ್ಲೂ ಇತ್ತೀಚೆಗೆ ನಟಿ ತನ್ವಿ ರಾವ್ ಆಗಾಗ ಸುದ್ದಿ ಮಾಧ್ಯಮದಲ್ಲಿ ಕಾಣಿಸಿಕೊಳ್ಳುತ್ತಲೇ ಇರುತ್ತಾರೆ. ಇದಕ್ಕೆ ಕಾರಣ ಭಾಗ್ಯಲಕ್ಷ್ಮಿ ಧಾರಾವಾಹಿ. ಹೌದು, ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಭಾಗ್ಯಲಕ್ಷ್ಮೀ' ಧಾರಾವಾಹಿಯಲ್ಲಿ ಕೀರ್ತಿ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಇದರಲ್ಲಿ ವಿಲನ್ ಪಾತ್ರ ಮಾಡಿದರೂ ಕೂಡ ವೀಕ್ಷಕರ ಮನವನ್ನು ಗೆದ್ದಿದ್ದಾರೆ. ತನ್ವಿ ರಾವ್ ತಮ್ಮ ವಿಭಿನ್ನ ರೀತಿಯ ನಟನೆಯಿಂದಲೇ ಫೇಮಸ್ ಆಗಿದ್ದಾರೆ.
ತಂಬೂರಿ ಹಿಡಿದು ಕಣ್ಮನ ಸೆಳೆದ ಚೆಲುವೆ
ಇದೀಗ ಹೊಸ ಬಗೆಯಲ್ಲಿ ಸೀರೆಯನ್ನು ಧರಿಸಿರುವ ತನ್ವಿ ರಾವ್ ಫೋಟೋ ಶೂಟ್ ಮಾಡಿಸಿದ್ದಾರೆ. ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ತನ್ವಿ ರಾವ್ ವಿವಿಧ ಭಂಗಿಯಲ್ಲಿ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಇದರ ವೀಡಿಯೋ ಕೂಡ ಹಂಚಿಕೊಂಡಿದ್ದಾರೆ. ತಂಬೂರಿ ಹಿಡಿದು ಕೊಟ್ಟಿರುವ ಪೋಸ್ ನೋಡಿದ ಅಭಿಮಾನಿಗಳು ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ. ಇನ್‌ಸ್ಟಾಗ್ರಾಂ ಒಂದು ಕ್ಷಣ ಟೆಲಿಸ್ಕೋಪ್ ಆಗಿದ್ದು, ಅದರಲ್ಲಿ ಕಂಡ ನಕ್ಷತ್ರದಂತೆ ಹೊಳೆಯುತ್ತಿದ್ದೀರಾ ಎಂದು ಹೊಗಳಿ ಕಮೆಂಟ್ ಮಾಡಿದ್ದಾರೆ. ತನ್ವಿ ರಾವ್ ಸೌಂದರ್ಯ, ಕಣ್ಣೋಟವನ್ನು ಎಲ್ಲರೂ ಹೊಗಳಿ ಕಮೆಂಟ್‌ಗಳನ್ನು ಹಾಕಿದ್ದಾರೆ.


Click it and Unblock the Notifications











