Tanvi rao: 'ಭಾಗ್ಯಲಕ್ಷ್ಮೀ' ಕಥೆಯಲ್ಲಿ ವಿಲನ್ ಆಗುತ್ತಾಳಾ ಕೀರ್ತಿ..?
'ಭಾಗ್ಯಲಕ್ಷ್ಮೀ' ಧಾರಾವಾಹಿಯಲ್ಲಿ ಈಗ ಲಕ್ಷ್ಮೀ ಹಾಗೂ ವೈಷ್ಣವ್‌ಗೆ ಮದುವೆಯಾಗುತ್ತಿದೆ. ಆದರೆ ವೈಷ್ಣವ್, ಕೀರ್ತಿಯನ್ನು ಪ್ರೀತಿಸುತ್ತಿದ್ದಾನೆ. ಎರಡೂ ಕುಟುಂಬಗಳ ನಡುವೆ ದೊಡ್ಡ ಜಗಳವಾಗಿದ್ದು, ಲವ್ ಬರ್ಡ್ಸ್ ಬೇರೆಯಾಗಿವೆ.
ಕೀರ್ತಿ ತುಂಬಾ ಸ್ಟ್ರಾಂಗ್ ಮನಸ್ಸಿನಿಂದ ಪ್ರೀತಿಯನ್ನು ಬಿಟ್ಟುಕೊಟ್ಟಿದ್ದಾಳೆ. ಆದರೆ ವೈಷ್ಣವ್‌ಗೆ ಮಾತ್ರ ಕೀರ್ತಿ ಇಲ್ಲದೇ ಇರಲು ಸಾಧ್ಯವಿಲ್ಲ. ಹಾಗಾಗಿ ಮದುವೆಯನ್ನು ಕ್ಯಾನ್ಸಲ್ ಮಾಡಿಕೊಳ್ಳಲು ಶತಪ್ರಯತ್ನ ಪಡುತ್ತಲೇ ಇದ್ದಾನೆ.
ಮನೆಯವರೆಲ್ಲಾ ಸೇರಿ ಹೇಗಾದರೂ ಮಾಡಿ ಈ ಮದುವೆಯನ್ನು ಮಾಡಲೇಬೇಕು ಎಂದು ಹರಸಾಹಸ ಪಡುತ್ತಿದ್ದಾರೆ. ಭಾಗ್ಯ ತನ್ನ ತಂಗಿಯ ಬಾಳು ಸುಖವಾಗಿರಬೇಕು ಎಂದು ನೂರೆಂಟು ಕನಸುಗಳನ್ನು ಹೊತ್ತುಕೊಂಡು ಈ ಮದುವೆಯನ್ನು ಮಾಡುತ್ತಿದ್ದಾಳೆ. ಆದರೆ, ಈ ಮದುವೆ ನಡೆಯುತ್ತಾ ಎಂಬುದೇ ದೊಡ್ಡ ಅನುಮಾನವಾಗಿದೆ. ಇನ್ನು ಈ ಧಾರಾವಾಹಿಯಲ್ಲಿ ನಟಿಸುತ್ತಿರುವ ನಟಿ ತನ್ವಿ ರಾವ್ ಅವರು ಯಾರು ಗೊತ್ತೇ..?

ಬೆಳ್ಳಿತೆರೆಯಿಂದ ಕಿರುತೆರೆಗೆ ಎಂಟ್ರಿ
ಈ ಹಿಂದೆ ಉದಯ ಟಿವಿಯಲ್ಲಿ 'ಆಕೃತಿ' ಎಂಬ ಧಾರಾವಾಹಿ ಪ್ರಸಾರವಾಗಿತ್ತು. ಇದು ಒಂಟಿ ಮನೆಯಲ್ಲಿರುವ ದೆವ್ವದ ಕಥೆಯನ್ನು ಆಧರಿಸಿತ್ತು. ಈ ಧಾರಾವಾಹಿಯಲ್ಲಿ ತನ್ವಿ ರಾವ್ ಅವರು ಮೊದಲ ಬಾರಿಗೆ ಕಿರುತೆರೆಯಲ್ಲಿ ಕಾಣಿಸಿಕೊಂಡಿದ್ದರು. ಹಾಗಂತ ತನ್ವಿ ನಟಿಸಿದ ಮೊದಲ ಸೀರಿಯಲ್ 'ಆಕೃತಿ'ಯಾಗಿದ್ದರೂ, ತನ್ವಿ ಅವರು ಮೊದಲು ಕ್ಯಾಮರಾವನ್ನು ಎದುರಿಸಿದ್ದು, ಬಾಲಿವುಡ್ ಸಿನಿಮಾ ಮೂಲಕ. ಹೌದು.. ತನ್ವಿ ರಾವ್ ಅವರು ಮೊದಲಿಗೆ ನಟಿಸಿದ್ದು, ಬಾಲಿವುಡ್ ಸಿನಿಮಾದಲ್ಲಿ ಮಾಧುರಿ ದೀಕ್ಷಿತ್ ನಟನೆಯ 'ಗುಲಾಬ್ ಗ್ಯಾಂಗ್' ಚಿತ್ರದಲ್ಲಿ ನಟಿಸಿದ್ದರು.

ತಮಿಳಿನ ಧಾರಾವಾಹಿಯಲ್ಲಿ ನಾಯಕಿ
ಇದಾದ ಬಳಿಕ ಸ್ಯಾಂಡಲ್‌ವುಡ್‌ಗೆ ಎಂಟ್ರಿಕೊಟ್ಟ ತನ್ವಿ 'ರಂಗ್ ಬಿ ರಂಗ್' ಚಿತ್ರಕ್ಕೆ ಬಣ್ಣ ಹಚ್ಚಿದರು. ಬಳಿಕವಷ್ಟೇ ತನ್ವಿ ರಾವ್ ಅವರು 'ಆಕೃತಿ' ಧಾರಾವಾಹಿ ಮೂಲಕ ಕಿರುತೆರೆಗೆ ಪಾದಾರ್ಪಣೆ ಮಾಡಿದರು. ಸ್ಟಾರ್ ಸುವರ್ಣವಾಹಿನಿಯಲ್ಲಿ ಮೂಡಿ ಬಂದ 'ರಾಧೆ ಶ್ಯಾಮ' ಧಾರಾವಾಹಿಯಲ್ಲಿ ನಟಿಸಿದರು. ಈ ಧಾರಾವಾಹಿ ಮುಗಿಯುತ್ತಿದ್ದಂತೆ ತಮಿಳಿನ 'ಜಮೆಲ' ಎಂಬ ಸೀರಿಯಲ್‌ನಲ್ಲಿ ನಾಯಕಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದರಲ್ಲಿ ಮುಸ್ಲಿಂ ಹುಡುಗಿ ಪಾತ್ರದಲ್ಲಿ ನಟಿಸಿದ್ದು, ಸಿಂಗರ್ ಆಗಿ ಕಾಣಿಸಿಕೊಂಡಿದ್ದಾರೆ.

ಭರತನಾಟ್ಯ ಕಲಾವಿದೆ
ಇದೀಗ ಕನ್ನಡದಲ್ಲಿ ಹೊಸದಾಗಿ ಪ್ರಾರಂಭವಾಗಿರುವ 'ಭಾಗ್ಯಲಕ್ಷ್ಮೀ' ಧಾರಾವಾಹಿಯಲ್ಲಿ ಕೀರ್ತಿ ಪಾತ್ರದಲ್ಲಿ ತನ್ವಿ ರಾವ್ ನಟಿಸಿದ್ದಾರೆ. ಇಷ್ಟೇ ಅಲ್ಲದೇ, ಹಿಂದಿಯ 'ಗುಲ್ಮೊಹರ್' ಸಿನಿಮಾದಲ್ಲೂ ದೀಪಿಕಾ ಎಂಬ ಪಾತ್ರಕ್ಕೆ ಬಣ್ಣ ಹಚ್ಚಿದ್ದು, ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಂತಸವನ್ನು ಹಂಚಿಕೊಂಡಿದ್ದಾರೆ. ತನ್ವಿ ರಾವ್ ಭರತನಾಟ್ಯ ಕಲಾವಿದೆಯಾಗಿದ್ದು, ಅದಾಗಲೇ 6ಕ್ಕಿಂತ ಹೆಚ್ಚು ಅಂತರಾಷ್ಟೀಯ ಕಾರ್ಯಕ್ರಮಗಳಲ್ಲಿ ನೃತ್ಯ ಪ್ರದರ್ಶಿಸಿದ್ದಾರೆ. ಭರತನಾಟ್ಯ ಜೊತೆಗೆ ತನ್ವಿ ರಾವ್ ಅವರು ಕಥಕ್ ಹಾಗೂ ಸೆಮಿ ಕ್ಸಾಸಿಕಲ್ ನೃತ್ಯವನ್ನೂ ಅಭ್ಯಾಸ ಮಾಡಿದ್ದಾರೆ.

ವಿಲನ್ ಆಗುತ್ತಾಳಾ ನಾಯಕಿ..?
ಸದ್ಯ ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿರುವ 'ಭಾಗ್ಯಲಕ್ಷ್ಮೀ' ಧಾರಾವಾಹಿಯಲ್ಲಿ ಕೀರ್ತಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇಷ್ಟು ದಿನ ವೈಷ್ಣವ್ ಲವರ್ ಆಗಿದ್ದ ಕೀರ್ತಿ ಈಗ ನೆಗೆಟಿವ್ ಶೇಡ್‌ನತ್ತ ವಾಲುತ್ತಿದ್ದಾರಾ ಎಂಬ ಅನುಮಾನ ಮೂಡಿದೆ. ಮೇಲ್ನೋಟಕ್ಕೆ ವೈಷ್ಣವ್ ಅನ್ನು ಬಿಟ್ಟುಕೊಟ್ಟಿರುವ ಕೀರ್ತಿ, ಸುಪ್ರೀತಾ ಮಾತುಗಳಿಗೆ ಸಿಟ್ಟಾಗಿ, ನನ್ನ ವೈಷ್ಣವ್‌ನ ಬೇರೆ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ನಮ್ಮಿಬ್ಬರ ನಡುವೆ ಬಂದವರನ್ನು ಕೊಲೆ ಮಾಡಲು ಹೆದರಲ್ಲ ಎಂದು ತನ್ನ ಮತ್ತೊಂದು ಮುಖವನ್ನು ತೋರಿಸಿದ್ದಾಳೆ. ತನ್ವಿ ಅವರ ಕೀರ್ತಿ ಪಾತ್ರ ವಿಭಿನ್ನವಾಗಿದ್ದು, ಅವರ ನಟನೆಯನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ.


Click it and Unblock the Notifications











