Bhagyalakshmi:ಮಗ ಮಾಡಿದ ಕೆಲಸಕ್ಕೆ ತಾಂಡವ್ ಮುಂದೆ ತಲೆ ತಗ್ಗಿಸುತ್ತಾಳಾ ಭಾಗ್ಯ?
ಭಾಗ್ಯ ಮೇಲೆ ಕನ್ನಿಕಾ ಒಂದು ಕಣ್ಣು ಇಟ್ಟಿದ್ದಾಳೆ. ಭಾಗ್ಯ ಶೆಫ್ ಆಗಿದ್ದ ವೇಳೆ ಆಕೆಯ ಮೇಲೆ ಇಲ್ಲ ಸಲ್ಲದ ಆರೋಪವನ್ನು ಮಾಡಿ ಕೆಲಸದಿಂದ ಓಡಿಸಿದ್ದಾಳೆ. ಆದರೆ ಭಾಗ್ಯ ಅದನ್ನೇ ಚಾಲೆಂಜ್ ಆಗಿ ತೆಗೆದುಕೊಂಡಿದ್ದಾಳೆ. ಶೆಫ್ ಆಗಿ ದುಡಿಯುತ್ತಿದ್ದಾಗ ಭಾಗ್ಯಗೆ ಮನೆಯನ್ನು ನಿಭಾಯಿಸಲು ಸಾಧ್ಯ ಆಗುತ್ತಿತ್ತು. ಯಾರ ಹಂಗೂ ಇಲ್ಲದೆ ಆಕೆ ದುಡಿಯುತ್ತಿದ್ದಳು. ತನ್ನ ಕಾಲ ಮೇಲೆ ತಾನು ನಿಂತಿದ್ದಳು. ಆದರೆ ಕನ್ನಿಕಾಗೆ ಇದೆಲ್ಲವನ್ನು ಸಹಿಸಲು ಆಗಿರಲಿಲ್ಲ. ಜೊತೆಗೆ ಶ್ರೇಷ್ಠಾ ತಾಂಡವನ ಕುಮ್ಮಕ್ಕು ಬೇರೆ. ಹೇಗಾದರೂ ಮಾಡಿ ಕೆಲಸದಿಂದ ಓಡಿಸಿದರೆ ಖಂಡಿತವಾಗಿಯೂ ಭಾಗ್ಯ ಕುಗ್ಗಿ ಹೋಗುತ್ತಾಳೆ. ಮತ್ತೆ ಯಾವತ್ತೂ ಕೂಡ ಆಕೆ ಅಡುಗೆ ಮಾಡುವ ಕೆಲಸಕ್ಕೆ ಬರಬಾರದು ಅನ್ನುಷ್ಟು ದ್ವೇಷ.
ಆದರೆ ಭಾಗ್ಯ ಕೆಲಸ ಕಳೆದುಕೊಂಡ ಬಳಿಕವೂ ಬಹಳ ಛಲದಿಂದ ದುಡಿಯುತ್ತಿದ್ದಾಳೆ. ಆದರೆ ಆಕೆ ಯಾವ ಕೆಲಸ ಮಾಡುತ್ತಿದ್ದಾಳೆ ಎನ್ನುವುದು ಮಾತ್ರ ಯಾರಿಗೂ ತಿಳಿದಿಲ್ಲ. ಮನೆಯಲ್ಲಿ ಎಲ್ಲರೂ ಭಾಗ್ಯ ಅಡುಗೆ ಕೆಲಸಕ್ಕೆ ಹೋಗುತ್ತಿದ್ದಾಳೆ ಎಂದುಕೊಳ್ಳುತ್ತಾರೆ. ಆದ ಕಾರಣ ಯಾರು ಏನು ಕೇಳುತ್ತಿರಲಿಲ್ಲ. ಹಾಗೆಯೇ ತಾಂಡವ್ ಇಲ್ಲದ ಮನೆಗೆ ಭಾಗ್ಯ ಆಧಾರ ಸ್ತಂಭವಾಗಿ ನಿಂತಿದ್ದಾಳೆ.

ತಾನು ಜೋಕರ್ ಆಗಿ ಕೆಲಸ ಮಾಡುತ್ತಿದ್ದೇನೆ ಎಂದು ತಿಳಿದರೆ ಖಂಡಿತವಾಗಿಯೂ ತನ್ನ ಮನೆಯವರು ಕೆಲಸಕ್ಕೆ ಹೋಗಲು ಬಿಡುವುದಿಲ್ಲ ಎನ್ನುವುದು ಭಾಗ್ಯಗೆ ಗೊತ್ತಿದೆ. ಆದ ಕಾರಣ ಭಾಗ್ಯ ಯಾರ ಜೊತೆಯೂ ಏನು ಹೇಳದೆ ಮನಸ್ಸಿನಲ್ಲಿಯೇ ನೋವು ನುಂಗಿಕೊಂಡು ಕೆಲಸ ಮಾಡುತ್ತಿದ್ದಾಳೆ. ಏನೇ ಕಷ್ಟಗಳು ಬಂದರೂ ಅದೆಲ್ಲವನ್ನೂ ಎದುರಿಸುತ್ತಿದ್ದಾಳೆ. ಆದರೆ ಇದೀಗ ಭಾಗ್ಯಗೆ ಗುಂಡಣ್ಣ ಶಾಲೆಗೆ ಹೋಗುತ್ತಿಲ್ಲ ಎನ್ನುವ ವಿಚಾರ ಸ್ಪಷ್ಟವಾಗಿ ಗೊತ್ತಾಗಿದೆ.
ಗುಂಡಣ್ಣ ಶಾಲೆಗೆ ಬಾರದೆ ಇರುವ ವಿಷಯ ಆತನ ಶಾಲೆಯಿಂದಲೇ ಕರೆ ಮಾಡಿ ಹೇಳುತ್ತಾರೆ. ಆಗ ಭಾಗ್ಯಗೆ ಆತಂಕ ಹೆಚ್ಚಾಗುತ್ತದೆ. ಗುಂಡಣ್ಣ ಶಾಲೆಗೆ ಎಂದು ಹೇಳಿ ಎಲ್ಲಿಗೆ ಹೋಗುತ್ತಿದ್ದಾನೆ ಎಂದು ಗಾಬರಿಯಾಗುತ್ತಾಳೆ. ಇತ್ತ ತಾಂಡವ್ ಮಾತ್ರ ಮನೆಯಲ್ಲಿ ರಾದ್ಧಾಂತ ಮಾಡಬೇಕು ಎಂದು ಸಂಚು ರೂಪಿಸಿ ಮನೆಗೆ ಬಂದಿರುತ್ತಾನೆ. ಆತನಿಗೆ ಭಾಗ್ಯ ಮೇಲೆ ಆಪಾದನೆ ಹೊರಿಸುವುದು ಬಿಟ್ಟರೆ ಬೇರೇನೂ ಇಲ್ಲ. ಆತನಿಗೆ ತನ್ನ ಮೊದಲ ಹೆಂಡತಿಗಿಂತ ಎರಡನೇ ಹೆಂಡತಿಯ ಹುಚ್ಚು ಹತ್ತಿದೆ. ಭಾಗ್ಯ ಸ್ಥಾನದಲ್ಲಿ ಶ್ರೇಷ್ಠಾ ಇದ್ದರೆ ಖಂಡಿತವಾಗಿಯೂ ಆಕೆ ಒಳ್ಳೆಯ ರೀತಿಯಲ್ಲಿ ಮನೆಯನ್ನು ನಿಭಾಯಿಸುತ್ತಿದ್ದಳು ಎನ್ನುವುದು ತಾಂಡವ್‌ನ ಯೋಚನೆ. ತಾಂಡವ್‌ಗೆ ಮಕ್ಕಳು ಹೆಂಡತಿ ಬೇಡ. ಆದರೂ ಇದೀಗ ಗುಂಡನ ಸ್ಥಿತಿ ಕಂಡು ಕೋಪ ಉಕ್ಕಿ ಹರಿದಿದೆ. ಇದಕ್ಕೆ ಭಾಗ್ಯಗಿಂತ ತಾಂಡವ್ ಕೂಡ ಕಾರಣನಾಗುತ್ತಾನೆ.

ಅಮ್ಮನ ಕಷ್ಟ ಸ್ಪಂದಿಸಲು ಶೂ ಪಾಲೀಶ್
ಮುಗ್ಧ ಹುಡುಗಿಯನ್ನು ಮದುವೆಯಾದ ತಾಂಡವ್, ಮಕ್ಕಳಾಗಿ ಸುಮಾರು ವರ್ಷ ಅವರೆಲ್ಲರ ಜೊತೆಗೆ ಇದ್ದು ಇದೀಗ ಬೇರೊಬ್ಬಳ ಹಿಂದೆ ಹೋಗಿದ್ದಾನೆ. ತಾಂಡವ್‌ಗೆ ಇದೀಗ ಇದ್ದಕ್ಕಿದ್ದ ಹಾಗೆ ಮಗನ ಮೇಲೆ ಮಮಕಾರ ಬಂದಿದೆ. ಇದೇ ಮಮಕಾರ ಇನ್ನೊಂದು ಮದುವೆ ಆಗುವ ಮುಂಚೆ ಇದ್ದಿದ್ದರೆ ಚೆನ್ನಾಗಿತ್ತು ಎಂದು ಸೀರಿಯಲ್ ಅಭಿಮಾನಿಗಳು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಇತ್ತ ಭಾಗ್ಯ ಮೇಲೆ ಕೋಪಗೊಂಡ ತಾಂಡವ್ ರುದ್ರ ತಾಂಡವವಾಡುತ್ತಾನೆ. ಗುಂಡಣ್ಣನಿಂದಾಗಿ ಭಾಗ್ಯ ತಾಂಡವನ ಕೈಯಿಂದ ಕೆಟ್ಟ ಮಾತುಗಳನ್ನು ಹೇಳಿಸಿಕೊಳ್ಳುವ ಹಾಗೆ ಆಯಿತು. ಆದರೆ ಮೊದಲಿಗೆ ಯಾಕೆ ತಾಂಡವ್ ಹೀಗೆ ಮಾಡುತ್ತಿದ್ದಾನೆ ಎಂದು ಭಾಗ್ಯ ಹಾಗೂ ಮನೆಯವರಿಗೆ ತಿಳಿಯಲಿಲ್ಲ. ಆದರೆ ಕೊನೆಗೆ ಗುಂಡಣ್ಣ ಮಾಡಿದ ತಪ್ಪು ಭಾಗ್ಯಗೆ ತಿಳಿಯುತ್ತೆ.
ಮಗನ ಬಗ್ಗೆ ಬೆಟ್ಟದಷ್ಟು ಕನಸು ಕಟ್ಟಿಕೊಂಡಿದ್ದ ಭಾಗ್ಯ
ಮಗನ ಮೇಲೆ ಬಹಳಷ್ಟು ಭರವಸೆ ಇಟ್ಟಿದ್ದ ಭಾಗ್ಯಗೆ ಆಕಾಶವೇ ಕಳಚಿ ತಲೆ ಮೇಲೆ ಬಿದ್ದ ಹಾಗಾಗುತ್ತೆ. ತನ್ನ ಮಗ ತನ್ನ ಕಷ್ಟ ನೋಡಲಾಗದೆ ಈ ರೀತಿ ನಿರ್ಧಾರ ಮಾಡಿದ್ದಾನಲ್ಲ ಎಂದು ಬೇಸರ ಪಟ್ಟುಕೊಳ್ಳುತ್ತಾಳೆ. ಇತ್ತ ತಾಂಡವ ಮಗನನ್ನು ಶೂ ಪಾಲೀಶ್‌ಗೆ ಇಟ್ಟು ಹಣ ಸಂಪಾದನೆ ಮಾಡುತ್ತಿದ್ದೀರಾ ನಿಮಗೆ ನಾಚಿಕೆ ಆಗುವುದಿಲ್ವೇ.? ನಾನು ಮಾತ್ರ ಖಂಡಿತವಾಗಿಯೂ ಸುಮ್ಮನೆ ಇರುವುದಿಲ್ಲ. ಪೊಲೀಸ್ ಕಂಪ್ಲೇಂಟ್ ಕೊಡುತ್ತೇನೆ ಎಂದು ತಾಂಡವ್ ಕೋಪದಿಂದ ಹೇಳುತ್ತಾನೆ. ಇತ್ತ ತಾಂಡವ್‌ಗೆ ಭಾಗ್ಯ ಯಾವ ಕೆಲಸಕ್ಕೆ ಹೋಗುತ್ತಿದ್ದಾಳೆ ಎನ್ನುವುದನ್ನು ಪತ್ತೆ ಹಚ್ಚಲು ಸಂಚು ರೂಪಿಸುತ್ತಿದ್ದಾನೆ. ತಾಂಡವ್ ಮುಂದೇನು ಮಾಡುತ್ತಾನೆ ನೋಡಬೇಕಿದೆ.


Click it and Unblock the Notifications











