ನಟಿ ಸಂಗೀತಾ ಭಟ್ ಹುಟ್ಟುಹಬ್ಬದಂದೇ 'ಆಂಟಿ' ಎಂದ ಪತಿರಾಯ: ಪತ್ನಿ ಪ್ರತಿಕ್ರಿಯೆಗೆ 'ತಾಂಡವ್' ಸೈಲೆಂಟ್!
'ಭಾಗ್ಯಲಕ್ಷ್ಮೀ' ಧಾರಾವಾಹಿಯಲ್ಲಿ ತಾಂಡವ್‌ನನ್ನು ಕಂಡರೆ ಅದೆಷ್ಟೋ ಹೆಣ್ಣು ಮಕ್ಕಳು ಹಿಡಿ ಶಾಪ ಹಾಕುತ್ತಿರುತ್ತಾರೆ. ಭಾಗ್ಯಾಳಿಗೆ ಅದೆಷ್ಟು ಅನ್ಯಾಯ ಮಾಡ್ತಾ ಇದ್ದಾನೆ. ಭಾಗ್ಯಾ ಮೊದಲು ಗಟ್ಟಿಯಾಗಬೇಕು. ತಾಂಡವ್‌ಗೆ ಬುದ್ದಿ ಕಲಿಸಬೇಕು ಎಂದೆಲ್ಲಾ ಕಮೆಂಟ್ ಹಾಕ್ತಾ ಇರ್ತಾರೆ. ಭಾಗ್ಯಾಳ ಪರವಾಗಿ ಬೆಂಬಲ ಕೂಡ ಸೂಚಿಸುತ್ತಾರೆ. ಆದರೆ ತಾಂಡವ್ ನಿಜ ಜೀವನದಲ್ಲಿ ಹೀಗೆ ಇದ್ದಾರಾ ಅಂತ ನೋಡೋದಾದ್ರೆ ಕಳೆದೇ ಹೋಗುತ್ತೀರ.
ತಾಂಡವ್ 'ಭಾಗ್ಯಲಕ್ಷ್ಮೀ' ಧಾರಾವಾಹಿಯಲ್ಲಿ ನೆಗೆಟಿವ್ ಶೇಡ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಮುಗ್ಧ ಹೆಣ್ಣನ್ನ ಗೋಳಾಡಿಸುವ ಪಾತ್ರ ಅದು. ಅಹಂಕಾರದ ಮನುಷ್ಯ, ನನ್ನನ್ನೇ ಹೊಗಳಬೇಕು ಎಂಬ ಸ್ವಾರ್ಥ. ಆದರೆ, ಕುಸುಮಾ ಎಲ್ಲವನ್ನು ಉಲ್ಟಾ ಮಾಡಿದ್ದಾಳೆ. ಈಗ ತಾಂಡವ್ ತನ್ನ ಪಾತ್ರವನ್ನೇ ಬೇರೆ ರೀತಿಯಾಗಿ ನಿಭಾಯಿಸುತ್ತಿದ್ದಾನೆ.

ಇದು ಸೀರಿಯಲ್ ಕಥೆಯಾದೆ, ರಿಯಲ್ ಲೈಫ್‌ನಲ್ಲಿ ಪತ್ನಿ ಹಾಗೂ ನಟಿ ಸಂಗೀತಾ ಭಟ್ ಜೊತೆ ಹೇಗಿರುತ್ತಾರೆ ಅನ್ನೋದಕ್ಕೆ ಇಲ್ಲೊಂದು ಸಾಕ್ಷಿಯಿದೆ. ಪತ್ನಿ ಸಂಗೀತಾ ಭಟ್ ಹುಟ್ಟುಹಬ್ಬದಂದೇ ಕಾಲೆಳೆದಿರೋ ಬಗೆನೇ ಎಲ್ಲವನ್ನೂ ಹೇಳುತ್ತೆ.
ಸಂಗೀತಾ ಭಟ್‌ಗೆ ಹುಟ್ಟುಹಬ್ಬದ ಸಂಭ್ರಮ
ಸಂಗೀತಾ ಭಟ್ ಸಾಕಷ್ಟು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ. ಜೊತೆಗೆ ಸೋಷಿಯಲ್ ಮೀಡಿಯಾದಲ್ಲೂ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದಾರೆ. ಬೋಲ್ಡ್ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಹುಡುಗರ ಎದೆಗೆ ಆಗಾಗ ಕಲ್ಲು ಹೊಡೆಯುತ್ತಾ ಇರುತ್ತಾರೆ. ಇಂದು (ಜುಲೈ 4) ರಂದು ಹುಟ್ಟುಹಬ್ಬ. ಸಂಭ್ರಮದಿಂದ ಆಚರಿಸಿಕೊಂಡಿದ್ದಾರೆ. 31ನೇ ವಸಂತಕ್ಕೆ ಕಾಲಿಟ್ಟ ಸಂಗೀತಾ ಭಟ್‌ಗೆ ವಿಶೇಷವಾಗಿ ವಿಶ್ ಮಾಡಿದ್ದಾರೆ.

ಹೆಂಡತಿಗೆ ಕ್ಯೂಟ್ ಆಗಿ ವಿಶ್
ಭಾಗ್ಯಲಕ್ಷ್ಮಿ ಧಾರಾವಾಹಿಯಲ್ಲಿ ತಾಂಡವ್ ಆಗಿ ನಟಿಸುತ್ತಿರುವ ಇವರ ಅಸಲಿ ಹೆಸರು ಸುದರ್ಶನ್. ಸಂಗೀತಾ ಭಟ್ ಅವರನ್ನು ಪ್ರೀತಿಸಿ ಮದುವೆಯಾಗಿದ್ದಾರೆ. ಹಲವು ವರ್ಷಗಳ ಪ್ರೀತಿಗೆ ಮದುವೆಯ ಮುದ್ರೆ ಒತ್ತಿ ಜೀವನ ನಡೆಸುತ್ತಾ ಇದ್ದಾರೆ. ಗಂಡ ಹೆಂಡತಿ ಇಬ್ಬರೂ ಪ್ರವಾಸ ಪ್ರಿಯರು. ಆಗಾಗ ಪ್ರವಾಸಕ್ಕೆ ಹೋದ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಾಕುತ್ತಾ ಇರುತ್ತಾರೆ. 'ಭಾಗ್ಯಲಕ್ಷ್ಮೀ' ಧಾರಾವಾಹಿಯ ತಾಂಡವ್ ಅಲಿಯಾಸ್ ಸುದರ್ಶನ್ ಆಗಾಗ ತಮಾಷೆಗೆ ಪತ್ನಿ ಸಂಗೀತಾ ಭಟ್ ಅವರ ಕಾಲೆಳೆಯುತ್ತಾ ಇರುತ್ತಾರೆ. ಇದೀಗ ಹೆಂಡತಿಗೆ ಹುಟ್ಟುಹಬ್ಬದಂದು ಕ್ಯೂಟ್ ಆಗಿ ವಿಶ್ ಮಾಡಿದ್ದಾರೆ.
ಹೆಂಡತಿಗೆ ಆಂಟಿ ಎಂದ ಸುದರ್ಶನ್
ಸುದರ್ಶನ್ ತನ್ನ ಹೆಂಡತಿ ಜೊತೆಗಿನ ಫೋಟೋ ಹಾಕಿ 'ಹ್ಯಾಪಿ ಬರ್ತ್‌ಡೇ ಸಂಗೀತಾ ಭಟ್. ನಿನಗೆ ಈಗ 31 ವರ್ಷ ಅಂತ ನಾನು ಯಾರಿಗೂ ಹೇಳೋದಿಲ್ಲ. ನೀನು ಆಂಟಿಯಾಗಿ ಒಂದು ವರ್ಷ ಅನುಭವವಿದೆ' ಎಂದು ಕ್ಯಾಪ್ಶನ್ ಹಾಕಿದ್ದಾರೆ. ಇದಕ್ಕೆ ಸಂಗೀತಾ ಭಟ್ ಕ್ಯೂಟ್ ಆಗಿ ರೇಗಿಸಿದ್ದಾರೆ. "ಇಲ್ಲಿಯೇ ನಿನ್ನ ವಯಸ್ಸನ್ನು ಹೇಳಲಾ?" ಅಂತ ತಿರುಗೇಟು ಕೊಟ್ಟಿದ್ದಾರೆ. ಅದಕ್ಕೆ ನಟ ಸುದರ್ಶನ್ ಫುಲ್ ಸೈಲೆಂಟ್.
ಇಬ್ಬರ ವಯಸ್ಸು ಎಷ್ಟು ಗೊತ್ತಾ..?
ಇನ್ನು ಈ ಕ್ಯೂಟ್ ಫೋಟೋಗಳಿಗೆ ಸಾಕಷ್ಟು ಕಮೆಂಟ್ ಗಳು ಬಂದಿದೆ. ಸಂಗೀತಾ ಭಟ್ ಆತ್ಮೀಯರು ವಿಶ್ ಮಾಡದ್ದಾರೆ. ಸಂಗೀತಾ ಭಟ್‌ಗೆ ಕ್ಯೂಟ್, ಬ್ಯೂಟಿಫುಲ್ ಅಂತೆಲ್ಲಾ ಹೊಗಳಿದ್ದಾರೆ. ಈ ಕಮೆಂಟ್‌ಗಳ ನಡುವೆಯೇ ಸುದರ್ಶನ್ ಮಾಡಿರುವ ಮತ್ತೊಂದು ಕಮೆಂಟ್ ಗಮನ ಸೆಳೆದಿದೆ. ಸಂತೋಷ್ ಗೌಡ ಎಂಬುವವರು ನಿಮ್ಮ ಏಜ್ 32 ಅಲ್ವಾ ಸರ್ ಅಂದ್ರೆ, ಸುದರ್ಶನ್, ಇಲ್ಲ ಇಲ್ಲ23 ಅಂದಿದ್ದಾರೆ. ಅಂದ್ರೆ ಸುದರ್ಶನ್ ಹೆಂಡತಿಗಿಂತ 8 ವರ್ಷ ಚಿಕ್ಕವರಾದಂತೆ ಆಯ್ತು. ಈಗ ಸಂಗೀತಾ ಭಟ್ ಅವರೇ ರಿಯಲ್ ವಯಸ್ಸನ್ನ ಹೇಳ್ಬೇಕು.


Click it and Unblock the Notifications











