Bhagyalakshmi: ತನ್ವಿ ಪಾಲಿಗೆ ಒಗಟಾದ ಅಮ್ಮನ ಮಾತು.. ಅಮ್ಮ ನನ್ನ ಶಾಲೆಗೆ ಸೇರಿದ್ದಾಳೆ ಎಂದುಕೊಂಡ ತನ್ವಿ?
ತನ್ವಿಗೆ ಭಾಗ್ಯಳ ಮೇಲೆ ಎಷ್ಟು ಕೋಪವಿದೆ ಅಂದ್ರೆ ಜೀವನಪೂರ್ತಿ ದ್ವೇಷ ಮಾಡುವಷ್ಟು ಕೋಪವಿದೆ. ಸ್ನೇಹಿತರು ರೇಗಿಸಿದ ಮೇಲಂತೂ ಈ ಅಮ್ಮನಿಂದ ನನಗೆ ಬರೀ ಅವಮಾನವೇ ಆಗುತ್ತಿದೆ ಎಂದು ಬೈದುಕೊಳ್ಳುತ್ತಾ ಇದ್ದಾಳೆ. ಮನೆಗೆ ಬಂದವಳೇ ಫ್ಯಾಮಿಲಿ ಫೋಟೋದಲ್ಲಿ ಭಾಗ್ಯಳನ್ನ ನೋಡಿ ಫೋಟೋ ಫ್ರೇಮ್‌ನನ್ನು ಎಸೆಯಲು ಹೋಗಿದ್ದಾಳೆ. ಅಮ್ಮನ ಸಹವಾಸವೇ ಬೇಡ ಎಂದು ಸುಮ್ಮನೆ ಆಗಿದ್ದಾಳೆ.
ಬಳಿಕ ಭಾಗ್ಯಳನ್ನು ಅಮ್ಮ ಎಂದು ಜೋರಾಗಿ ಕೂಗಿದ್ದಾಳೆ. ಅಷ್ಟರಲ್ಲಿ ಭಾಗ್ಯ ಅಲ್ಲಿಗೆ ಬಂದಿದ್ದು ಏನು ಬೇಕು ಎಂದಿದ್ದಾಳೆ. ನನಗೆ ಹಸಿವಾಗುತ್ತಿದೆ ಸ್ಯಾಂಡ್‌ವಿಚ್ ಮಾಡಿ ಕೊಡು ಎಂದು ಕೇಳಿದ್ದಾಳೆ. ಭಾಗ್ಯ ಎಲ್ಲರಿಗೂ ಕಾಫಿ ಮಾಡಿ ಕೊಟ್ಟು ತನ್ವಿಗೆ ಸ್ಯಾಂಡ್ವಿಚ್ ಮಾಡಿಕೊಟ್ಟಿದ್ದಾಳೆ. ಇದೇ ವೇಳೆ ಎಲ್ಲರೂ ಒಟ್ಟಿಗೆ ಕುಳಿತುಕೊಂಡು ಮಾತನಾಡುತ್ತಿದ್ದಾರೆ. ಕುಸುಮಾ ತನ್ನ ಸೊಸೆ ಶಾಲೆಗೆ ಹೋಗಿ ಬಂದಿದ್ದಾಳೆ ಎನ್ನುವ ಖುಷಿಯಲ್ಲಿದ್ದಾಳೆ.

ತನ್ವಿ ವರ್ತನೆಯ ಬಗ್ಗೆ ಧರ್ಮರಾಜ್ ಅನುಮಾನ ಬಂದಿದೆ. ಜಂಭದ ಕೋಳಿ ಈ ರೀತಿ ಯಾಕೆ ಇದ್ದಾಳೆ? ಶಾಲೆಯಲ್ಲಿ ಏನಾದರೂ ಆಯಿತಾ ಎಂದು ಯೋಚನೆ ಮಾಡುತ್ತಿದ್ದಾರೆ. ತನ್ವಿ ಆಡುತ್ತಿರುವ ಮಾತಿಗೂ ಏನನ್ನು ರಿಯಾಕ್ಟ್ ಮಾಡದೇ ಇರುವುದಕ್ಕೂ ಶಾಲೆಯಲ್ಲಿ ಏನೋ ಆಗಿರಬೇಕು ಎಂದು ಅವರು ತಿಳಿದುಕೊಂಡಿದ್ದಾರೆ. ಕುಸುಮ ಸಹ ಶಾಲೆಯಿಂದ ಬೇಗ ಬಂದಿದ್ದಕ್ಕೆ ಪ್ರಶ್ನೆ ಮಾಡಿದ್ದಾರೆ. ಪರೀಕ್ಷೆ ಇತ್ತು ಎಂದು ತನ್ವಿ ಸುಳ್ಳು ಹೇಳಿ ತಪ್ಪಿಸಿಕೊಂಡಿದ್ದಾಳೆ.
ತನ್ವಿಗೆ ಒಗಟಾದ ಅಮ್ಮನ ಮಾತು
ಭಾಗ್ಯ ಎಲ್ಲರಿಗೂ ಕಾಫಿ ಮಾಡಿಕೊಟ್ಟಿದ್ದಾಳೆ. ಇದೆ ವೇಳೆ ಕುಸುಮ ತನ್ನ ಸೊಸೆಯ ಬಗ್ಗೆ ವಿಚಾರಿಸಿಕೊಳ್ಳುತ್ತಿದ್ದಾಳೆ. ಭಾಗ್ಯ ಇವತ್ತಿನ ತರಗತಿ ಹೇಗಿತ್ತು? ತನ್ವಿ ನಿನ್ನ ಮಗಳು ಎಂದು ಎಲ್ಲರಿಗೂ ಪರಿಚಯ ಮಾಡಿಕೊಂಡ್ಯಾ ಎಂದು ಕೇಳಿದ್ದಾರೆ. ನೀನು ಮತ್ತು ತನ್ವಿ ಒಂದೇ ತರಗತಿಯಲ್ಲಿ ಒಂದೇ ಬೆಂಚ್‌ನಲ್ಲಿ ಅಕ್ಕ ಪಕ್ಕ ಕುಳಿತುಕೊಂಡು ಓದಿದ್ರಾ ಎಂದು ಕುಸುಮಾ ಪ್ರಶ್ನೆ ಮಾಡಿದ್ದಾಳೆ.
ಅಜ್ಜಿಗೆ ಮಾತಿಗೆ ತನ್ವಿ ಗಾಬರಿ
ನಿನಗೆ ಏನು ಕಷ್ಟವಾಗಲಿಲ್ವಾ? ಎಲ್ಲರೂ ಸಹ ಚೆನ್ನಾಗಿ ಮಾತನಾಡಿಸಿದ್ರಾ ಎಂದು ಕುಸುಮ ಕೇಳಿದಾಗ ತನ್ವಿಗೆ ಸ್ವಲ್ಪ ಗಾಬರಿಯಾಗಿದೆ. ಇವತ್ತು ಎಲ್ಲರೂ ಪರೀಕ್ಷೆ ಬರೆಯುವಾಗ ನೀ ಏನು ಮಾಡುತ್ತಿದ್ದೆ ಎಂದು ಕುಸುಮಾ ಕೇಳಿದಾಗ ತನ್ವಿಗೆ ಭಯವಾಗಿದೆ. ಭಾಗ್ಯ, ತನ್ವಿಯ ಮುಖ ನೋಡಿಕೊಂಡು ಚೆನ್ನಾಗಿತ್ತು ಅತ್ತೆ, ವಿಶಾಲ ಮೇಡಮ್ ನಿಮ್ಮ ಬಗ್ಗೆ ತುಂಬಾ ಹೊಗಳಿದ್ರು ಎಂದು ಹೇಳಿದ್ದಾಳೆ. ಇದಕ್ಕೆ ವಿಶಾಲ ಟೀಚರ್ ನಮ್ಮ ಟೀಚರ್ ಎಂದು ತನ್ವಿ ಅಂದುಕೊಂಡಿದ್ದಾಳೆ.

ಶಿವಾನಿ ಹೆಸರು ಹೇಳಿ ಟೆನ್ಷನ್
ಭಾಗ್ಯ ಯಾವಾಗ ವಿಶಾಲ ಮೇಡಮ್ ಹೆಸರು ಹೇಳಿದ್ದಳೋ ಆಗ ತನ್ವಿಗೆ ಕೆಲವು ವಿಚಾರ ಗೊತ್ತಾಗಿದೆ. ನಂತರ ಶಿವಾನಿ ಹೆಸರನ್ನು ಹೇಳಿದ ಕೂಡಲೇ ಹಾಗಾದರೆ ಅಮ್ಮ ನಾನು ಓದುತ್ತಿರುವ ಶಾಲೆಗೆ ಸೇರಿಕೊಂಡಿದ್ದಾಳೆ. ಅದು ಸಹ ನನ್ನ ತರಗತಿಯಲ್ಲಿ ಇದ್ದಾಳೆ, ಅಮ್ಮನಿಗೆ ಎಲ್ಲಾ ಸುಳ್ಳು ಸಹ ಗೊತ್ತಾಗಿ ಹೋಗಿದೆ ಎಂದು ತನ್ವಿ ಟೆನ್ಷನ್ ಮಾಡಿಕೊಂಡಿದ್ದಾಳೆ. ಅತ್ತೆ ಹಾಜರಾತಿ ಕೂಗುವಾಗ ವಿಶಾಲ ಮೇಡಮ್ ತನ್ವಿ ಗುಣಗಾನ ಮಾಡಿದರು ಎಂದು ಭಾಗ್ಯ ಕುಸುಮ ಬಳಿ ಹೇಳಿದ್ದಾಳೆ. ಇಡೀ ತರಗತಿಯ ತುಂಬಾ ನಮ್ಮ ತನ್ವಿಯದ್ದೇ ಮಾತು ಎಂದಿದ್ದಾಳೆ.
ಏನಂತೆ ಇವಳದ್ದು ಅಲ್ಲೂ ಸಹ ಕೊಬ್ಬು ತೋರಿಸ್ತಾಳಾ? ಅದಕ್ಕೆ ಎಲ್ಲರೂ ಮಾತಾಡ್ತಾ ಇದ್ದಾರಾ? ಎಂದು ಕುಸುಮಾ ಕೇಳಿದ್ದಾಳೆ. ಇದಕ್ಕೆ ಭಾಗ್ಯ ಇಲ್ಲ ಅತ್ತೆ ಆ ಸೊಕ್ಕು ತೋರಿಸೋದಿಲ್ಲ ಮನೆಯಲ್ಲಿ ಮಾತ್ರ ಅವಳು ಈ ರೀತಿ ಇರುತ್ತಾಳೆ, ತರಗತಿಯಲ್ಲಿ ತುಂಬಾ ಜಾಣೆ. ಒಂದೇ ಒಂದು ತರಗತಿಯನ್ನು ಮಿಸ್ ಮಾಡದೇ ಶಾಲೆಗೆ ಸರಿಯಾದ ಸಮಯಕ್ಕೆ ಹೋಗುತ್ತಾಳಂತೆ ಎಂದು ಮಗಳ ಮುಖ ನೋಡಿ ಭಾಗ್ಯ ಅತ್ತೆಯ ಬಳಿ ಹೇಳಿದ್ದಾಳೆ. ಅಮ್ಮನ ಮಾತುಗಳನ್ನ ಕೇಳುತ್ತಿರುವ ತನ್ವಿಗೆ ಮಾತ್ರ ಶಾಕ್ ಮೇಲೆ ಶಾಕ್ ಆಗ್ತಿದೆ. ನನ್ನ ವಿಚಾರ ಅಮ್ಮನಿಗೆ ಎಲ್ಲವೂ ತಿಳಿದಿದೆ ಮುಂದೆ ನನಗೆ ಹಬ್ಬ ಕಾದಿದೆ ಎಂದು ತನ್ವಿ ಎಂದುಕೊಂಡಿದ್ದಾಳೆ.


Click it and Unblock the Notifications











