Bhagyalakshmi: ಕ್ಷಣ ಕ್ಷಣಕ್ಕೂ ಸುಪ್ರೀತಾ ಕಾಟ.. ಲಕ್ಷ್ಮೀ ಪರ ನಿಂತು ತಿರುಗೇಟು ಕೊಟ್ಟ ವೈಷ್ಣವ್!
ಸುಪ್ರೀತಾಳಿಗೆ ಲಕ್ಷ್ಮೀ ಕಂಡರೆ ಆಗುವುದೇ ಇಲ್ಲ. ಲಕ್ಷ್ಮೀಯನ್ನು ಹಿಯಾಳಿಸದೇ ಇದ್ದರೆ ಮನಸ್ಸಿಗೆ ನೆಮ್ಮದಿಯನ್ನೇ ಕಾಣುವುದಿಲ್ಲ. ಆ ರೀತಿಯ ಕೆಟ್ಟ ನಡವಳಿಕೆ ತೋರಿಸುತ್ತಿದ್ದಾಳೆ ಸುಪ್ರೀತಾ. ಯಾವುದರಲ್ಲಾದರೂ ಸರಿ, ಅವಳ ತಪ್ಪನ್ನೇ ಹುಡುಕುತ್ತಿರುತ್ತಾಳೆ. ಇದು ವೈಷ್ಣವ್‌ಗೆ ತಿಳಿದೇ ಅವಳ ಪರ ನಿಂತಿದ್ದಾನೆ. ಮನೆಗೆ ಬಂದಾಗಿನಿಂದ ಹಿಡಿದು, ಇಲ್ಲಿಯ ತನಕ ಲಕ್ಷ್ಮೀಗೆ ಕೆಡುಕನ್ನೇ ಬಯಸುತ್ತಿದ್ದಾಳೆ.
ಲಕ್ಷ್ಮೀ ಬಡವರ ಮನೆಯಿಂದ ಬಂದಿರುವುದು ಎಂಬುದು ಗೊತ್ತು. ಆದರೂ ಅದನ್ನೇ ಟಾರ್ಗೆಟ್ ಮಾಡಿದ್ದಾಳೆ. ಲಕ್ಷ್ಮೀಗೆ ಮನೆಯಲ್ಲಿ ಯಾವ ಅಧಿಕಾರವಿಲ್ಲ. ಚೆಂದದೊಂದು ಸೀರೆಯಿಲ್ಲ ಎಂದರೆ ವೈಷ್ಣವ್ ಗಂಡನಾಗಿ ಸುಮ್ಮನೆ ಬಿಡುತ್ತಾನೆಯೇ. ಅದಕ್ಕೂ ಉತ್ತರ ಕೊಟ್ಟಿದ್ದಾನೆ. ಆದರೂ ಸುಪ್ರೀತಾಳ ಮನಸ್ಥಿತಿ ಬದಲಾಗುವುದು ಅಷ್ಟು ಸುಲಭವಲ್ಲ.

ಲಕ್ಷ್ಮೀಯ ಬಗ್ಗೆ ದ್ವೇಷ ಮುಂದುವರೆಸಿದ ಸುಪ್ರೀತಾ
ಲಕ್ಷ್ಮೀಗೆ ತವರು ಮನೆಯಲ್ಲಿದ್ದಾಗ ಬೆಳಗ್ಗಿನ ಜಾವವೇ ಎದ್ದು ಅಭ್ಯಾಸ. ಹೀಗಾಗಿ ಇಲ್ಲಿ ಗಂಡನ ಮನೆಯಲ್ಲೂ ಬಹಳ ಬೇಗನೇ ಎದ್ದು, ಕೆಲಸವನ್ನೆಲ್ಲಾ ಹುಡುಕಿದ್ದಾಳೆ. ಕೆಲಸವೇ ಇಲ್ಲದೆ ಇದ್ದಾಗ ಅಕ್ಕಮ್ಮನಿಗೆ ಫೋನ್ ಮಾಡಿ, ಸಲಹೆ ತೆಗೆದುಕೊಂಡು, ಬೆಳಗಿನ ತಿಂಡಿಯನ್ನು ಮಾಡಿ ಮುಗಿಸಿದ್ದಾಳೆ. ಎಲ್ಲರೂ ತಿಂಡಿಗೆ ಬಂದಾಗ, ಲಕ್ಷ್ಮೀಯೇ ಎಲ್ಲರಿಗೂ ತಿಂಡಿ ಬಡಿಸಿದ್ದಾಳೆ. ಆದರೆ ಸುಪ್ರೀತಾ ಮತ್ತು ವಿಧಿ ಮಾತ್ರ ಇಲ್ಲಿಯೂ ತಮ್ಮ ಚಾಳಿ ಬಿಟ್ಟಿಲ್ಲ. ತಿಂಡಿ ಹಂಗಿದೆ, ಹಿಂಗಿದೆ ಅಂತ ಹೀಯಾಳಿಸಿದ್ದಾರೆ.
ಒಲ್ಲೆ ಎಂಬುವವರಿಗೆ ಮೊಸರಲ್ಲೂ ಕಲ್ಲು ಸಿಗುತ್ತೆ ಎಂಬ ಗಾದೆ ಮಾತೇ ಇದೆ. ಹೀಗಾಗಿ ಸುಪ್ರೀತಾ ಮತ್ತು ವಿಧಿಗೆ ಲಕ್ಷ್ಮೀ ಕಂಡರೆ ಆಗುವುದಿಲ್ಲ ಎಂದು ಮನೆಯವರಿಗೆಲ್ಲಾ ಈಗಾಗಲೇ ಗೊತ್ತಿದೆ. ಹೀಗಾಗಿ ಲಕ್ಷ್ಮೀಯನ್ನು ಬೈದಾಗೆಲ್ಲಾ ವೈಷ್ಣವ್ ಅಷ್ಟೇ ಅಲ್ಲ ಮನೆಯವರೆಲ್ಲಾ ಸಪೋರ್ಟ್‌ಗೆ ನಿಲ್ಲುತ್ತಾರೆ. ತಿಂಡಿ ವಿಚಾರಕ್ಕೂ ಅಷ್ಟೇ, ಖಾರ, ಕಲ್ಲು ಅಂತೆಲ್ಲಾ ಹೇಳಿದಾಗ, ವೈಷ್ಣವ್, "ಹಸಿವಿಲ್ಲದವರಿಗೆ ಊಟ ಬಡಿಸಬಾರದು. ಲಕ್ಷ್ಮೀ ಮಾಡಿದ ತಿಂಡಿ ಅದ್ಭುತವಾಗಿದೆ" ಎಂದು ಹೊಗಳಿದ್ದಾರೆ.

ಸುಪ್ರೀತಾ ಮಾಡಿದ ಪ್ಲ್ಯಾನ್ ವರ್ಕೌಟ್ ಆಗುತ್ತಾ..?
ಇತ್ತ ವೈಷ್ಣವ್‌ನ ಒಂದೊಂದೇ ಜವಾಬ್ದಾರಿಯನ್ನು ಲಕ್ಷ್ಮೀ ತೆಗೆದುಕೊಳ್ಳುತ್ತಿದ್ದಾಳೆ. ಅದು ಕಾವೇರಿಗೆ ಬಿಲ್ ಕುಲ್ ಇಷ್ಟವಿಲ್ಲ. ಈಗ ಕಾವೇರಿಗೆ ಆರೋಗ್ಯ ಸರಿಯಿಲ್ಲ. ಅದೇ ಕಾರಣಕ್ಕಾಗಿಯೇ ಲಕ್ಷ್ಮೀ, ವೈಷ್ಣವ್‌ಗೆ ಬೇಕಾದ ತಯಾರಿ ಮಾಡಿಕೊಳ್ಳುತ್ತಿದ್ದಾಳೆ. ವೈಷ್ಣವ್ ಹೊರಗೆ ಹೋಗುವಾಗ ಅಮ್ಮನಿಗೆ ಹೇಳದೆ ಹೋದವನೇ ಅಲ್ಲ. ಅಷ್ಟೇ ಅಲ್ಲ ವೈಷ್ಣವ್‌ಗೆ ಏನಿಷ್ಟ, ಏನಿಷ್ಟವಿಲ್ಲ ಎಂಬುದೆಲ್ಲವನ್ನು ಕಾವೇರಿ ತಿಳಿದುಕೊಂಡಿದ್ದಾಳೆ. ಅದೇ ಕಾರಣಕ್ಕೆ ಮಗನ ಜವಾಬ್ದಾರಿಯನ್ನು ತಾನಲ್ಲದೆ ಬೇರೆ ಯಾರಿಗೂ ನೀಡಿಲ್ಲ.
ಸುಪ್ರೀತಾಗೆ ಹೇಗಾದರು ಮಾಡಿ ಲಕ್ಷ್ಮೀಯನ್ನು ತೊಂದರೆಗೆ ಸಿಲುಕಿಸಬೇಕೆಂಬ ಬಯಕೆ. ಅದು ಆಗಾಗ ಚಿಗುರೊಡೆಯುತ್ತಲೇ ಇರುತ್ತದೆ. ಈಗ ಕಾವೇರಿ ವಿರುದ್ಧವೇ ಎತ್ತಿಕಟ್ಟಲು ಶುರು ಮಾಡಿದ್ದಾಳೆ. ಅದಕ್ಕೆ ಮಲಗಿರುವ ಕಾವೇರಿಗೆ ಹೇಳಿ ಹೋಗು ಅಂತ, ಬಾಕ್ಸ್ ಕಟ್ಟೋದಕ್ಕೆ ಕಾವೇರಿಯನ್ನು ಏಳಿಸು ಅಂತ ಹೇಳುವ ಮೂಲಕ, ಇಬ್ಬರಲ್ಲೂ ಗೊಂದಲ ಮೂಡಿಸಿದ್ದಾಳೆ. ಸುಪ್ರೀತಾಳ ಮಾತಿಗೆ ಕೋಪಗೊಂಡ ವೈಷ್ಣವ್, "ಅಮ್ಮ ಏನು ಬೇಡ. ನಾನೇ ಬಾಕ್ಸ್ ಮಾಡಿಕೊಳ್ಳುತ್ತೇನೆ" ಎಂದಿದ್ದಾನೆ. ಅದಕ್ಕೆ ಉತ್ತರವಾಗಿ ಲಕ್ಷ್ಮೀ ನಾನೇ ಪ್ಯಾಕ್ ಮಾಡುತ್ತೇನೆ ಎಂದು ಹೋಗಿದ್ದಾಳೆ. ಇದರಿಂದ ಕಾವೇರಿಗೂ ಲಕ್ಷ್ಮೀಗೂ ಜಗಳ ತಂದಿಡುವ ಪ್ಲ್ಯಾನ್ ಮಾಡಿದ್ದಾಳೆ ಸುಪ್ರೀತಾ.


Click it and Unblock the Notifications











