Bhagyalakshmi: ಅತ್ತೆ ಆದ್ರೂ ಸರಿ.. ಅಮ್ಮ ಆದ್ರೂ ಸರಿ.. ಮಹಾಲಕ್ಷ್ಮಿ ವಿಚಾರಕ್ಕೆ ಬಂದ್ರೆ ವೈಷ್ಣವ್ ಸುಮ್ಮನೆ ಬಿಡಲ್ಲ..!
ವೈಷ್ಣವ್‌ಗೆ ಮಹಾಲಕ್ಷ್ಮೀ ಮೇಲೆ ತುಂಬಾ ಗೌರವ. ಅದರಲ್ಲೂ ತವರು ಮನೆಯನ್ನ ಒಬ್ಬಳೇ ದುಡಿದು ನಿಭಾಯಿಸುತ್ತಿದ್ದದ್ದನ್ನು ಹತ್ತಿರದಿಂದ ನೋಡಿದ್ದಾನೆ. ತಾನೊಬ್ಬಳೇ ದುಡಿದು ಆ ಮನೆಯನ್ನು ಹೇಗೆಲ್ಲಾ ನಿಭಾಯಿಸಬಹುದು ಎಂಬುದನ್ನು ಕಲಿತಿದ್ದಾಳೆ. ಇದನ್ನೆಲ್ಲಾ ನೋಡಿ ನೋಡಿ ಮದುವೆಗೂ ಮುಂಚೆಯಿಂದಾನೇ ವೈಷ್ಣವ್, ಲಕ್ಷ್ಮೀ ಮೇಲೆ ಗೌರವ ಇಟ್ಟುಕೊಂಡಿದ್ದ.
ಅತ್ತೆ ಸುಪ್ರೀತಾಳ ಕುತಂತ್ರಕ್ಕೆ ಲಕ್ಷ್ಮೀಯನ್ನೇ ತಪ್ಪಾಗಿ ತಿಳಿದಿದ್ದ. ಅದ್ಯಾವಾಗ ಆಗಿರುವ ಮಿಸ್ಟೇಕ್ ಬಗ್ಗೆ ವೈಷ್ಣವ್‌ಗೆ ಸತ್ಯ ಗೊತ್ತಾಯ್ತೊ ಅಂದಿನಿಂದ ಮತ್ತೆ ಲಕ್ಷ್ಮೀ ಮೇಲೆ ಗೌರವ ಹೆಚ್ಚಾಗಿದೆ. ಈಗ ಮದುವೆಯೂ ಆಗಿದೆ. ಆದಷ್ಟು ಹಳೆಯದ್ದನ್ನು ಮರೆತು, ಲಕ್ಷ್ಮೀ ಜೊತೆಗೆ ಹೊಸ ಜೀವನ ಶುರು ಮಾಡುವುದಕ್ಕೆ ಪ್ರಯತ್ನ ಪಡುತ್ತಾ ಇದ್ದಾನೆ. ಇದರಲ್ಲಿ ವಿಲನ್ ಆದವರಿಗೆಲ್ಲಾ ವೈಷ್ಣವ್ ತನ್ನದೇ ಶೈಲಿಯಲ್ಲಿ ಉತ್ತರ ಕೊಡುತ್ತಿದ್ದಾನೆ. ಈಗ ಅಮ್ಮನಿಗೂ ಅರಗಿಸಿಕೊಳ್ಳಲಾಗದ ಉತ್ತರ ಕೊಟ್ಟಿದ್ದಾನೆ.

ಅಮ್ಮನ ಬಳಿಯೂ ಲಕ್ಷ್ಮೀ ಪರ ಮಾತನಾಡಿದ ವೈಷ್ಣವ್
ವೈಷ್ಣವ್ ಇಷ್ಟು ವರ್ಷದ ಅನುಭವದಲ್ಲಿ ಯಾವತ್ತಿಗೂ ಅಮ್ಮನಿಗೆ ಒಂದು ಮಾತನ್ನು ಹೇಳದೆ ಹೊರಗೆ ಹೋದವನೆ ಅಲ್ಲ. ಆದರೆ ಈಗ ಮೊದಲ ಬಾರಿಗೆ, ಅದರಲ್ಲೂ ಮದುವೆಯಾದ ಹೊಸತನದಲ್ಲಿಯೇ ಅಮ್ಮನಿಗೆ ಒಂದು ಮಾತು ಹೇಳದೆ ಹೋಗಿದ್ದಾನೆ. ಇದು ಕಾವೇರಿಗೆ ತಲೆ ಕೆಡಿಸಿದೆ. ಅಮ್ಮನಿಗೆ ಹೇಳದೆ ಹೋದ್ಯಲ್ಲ ಪುಟ್ಟ ಅಂತ ಫೋನ್ ಮಾಡಿ ಕಾವೇರಿ ಕೇಳಿದರೆ, "ನೀವೂ ಚಿಂತೆ ಮಾಡಬೇಡಿ. ಮಹಾಲಕ್ಷ್ಮೀ ಇದ್ದಾರೆ ಎಲ್ಲಾ ನೋಡಿಕೊಳ್ಳುತ್ತಾರೆ. ಒಂದು ಮನೆಯನ್ನೇ ನಿಭಾಯಿಸ್ತಾ ಇದ್ದ ಲಕ್ಷ್ಮೀಗೆ ನಮ್ಮ ಮನೆಯಲ್ಲಿ ಅಷ್ಟೇನು ಕೆಲಸ ಇರಲ್ಲ, ಇನ್ನು ಸುಲಭವೆ. ನೀವೂ ರೆಸ್ಟ್ ಮಾಡಿ. ನಾನೇ ಮುಂದೆ ನಿಂತು ಲಕ್ಷ್ಮಿ ಹತ್ರ ಟಿಫನ್ ಪ್ಯಾಕ್ ಮಾಡಿಸಿಕೊಂಡು ಬಂದೆ" ಎಂದಿದ್ದಾನೆ.
ಹೀಗೆ ವೈಷ್ಣವ್‌ಗೆ ಲಕ್ಷ್ಮೀಯ ಬಗ್ಗೆ ಸಾಧ್ಯವಾದಷ್ಟು ದೂರು ನೀಡಲು ನೋಡಿದ್ದಾಳೆ ಕಾವೇರಿ. "ಆ ಹುಡುಗಿಗೆ ಏನು ಗೊತ್ತಾಗುತ್ತೆ. ಎಲ್ಲಾ ಕೆಲಸ ಮಾಡುತ್ತಾಳೆ ಅನ್ನಿಸುತ್ತಾ..? ಬಂದ ಎರಡನೇ ದಿನಕ್ಕೆ ಎಲ್ಲಾ ಗೊತ್ತಾಗಿ ಹೋಗಿ ಬಿಡುತ್ತಾ" ಎಂದೆಲ್ಲಾ ಪ್ರಶ್ನೆ ಕೇಳಿದ್ದಾಳೆ. ಜೊತೆಗೆ ನನ್ನ ಆರೋಗ್ಯದ ಬಗ್ಗೆ ವಿಚಾರಿಸಲೇ ಇಲ್ಲವಲ್ಲ ಎಂದಾಗಲೂ ವೈಷ್ಣವ್, "ಮಹಾಲಕ್ಷ್ಮೀ ಇರಬೇಕಾದ್ರೆ ಸ್ಪೆಷಲ್ ಆಗಿ ಎಲ್ಲಾ ವಿಚಾರಿಸಿಕೊಳ್ಳುವ ಅವಶ್ಯಕತೆ ಇಲ್ಲ. ಅವರು ನಿಮ್ಮನ್ನು ಚೆನ್ನಾಗಿಯೇ ನೋಡಿಕೊಳ್ಳುತ್ತಾರೆ" ಅಂತ ಹೇಳಿ ಫೋನ್ ಕಟ್ ಮಾಡಿದ್ದಾನೆ.
ಡಿವೋರ್ಸ್ ಪೇಪರ್ ಹಿಡಿದು ಬಂದ ಕೀರ್ತಿ
ಕೀರ್ತಿ ನಮ್ಮ ಮನೆಗೆ ಸರಿಯಾಗಲ್ಲ. ಸಂಸಾರ ಮಾಡಲ್ಲ ಅನ್ನೋ ಕಾರಣಕ್ಕೆ ಕೀರ್ತಿಯನ್ನು ರಿಜೆಕ್ಟ್ ಮಾಡಿ, ಲಕ್ಷ್ಮೀಯನ್ನು ಮದುವೆ ಮಾಡಿಕೊಳ್ಳುವಂತೆ ಕುಸುಮಾ ಸಲಹೆ ನೀಡಿದಳು. ಆದರೆ ಲಕ್ಷ್ಮೀ ಬಂದ ಒಂದೇ ದಿನಕ್ಕೆ ವೈಷ್ಣವ್ ಮನಸ್ಸನ್ನು ಗೆದ್ದು ಬಿಟ್ಟಿದ್ದಾಳೆ. ಇದು ಕಾವೇರಿಯ ಆತಂಕಕ್ಕೆ ಕಾರಣವಾಗಿದೆ. "ನಮ್ಮ ಅಕ್ಕನ ಆಯ್ಕೆ ತಪ್ಪಾಗಿ ಹೋಯ್ತಾ?" ಎಂದು ತನಗೆ ತಾನೇ ಬೇಸರ ಮಾಡಿಕೊಂಡಿದ್ದಾಳೆ.

ಈ ಕಡೆ ಕೀರ್ತಿ, ಕಾವೇರಿಯ ಹಿಂದೆ ಬಿದ್ದಿದ್ದಾಳೆ. ಡಿವೋರ್ಸ್ ಪೇಪರ್ ಅನ್ನು ಕೈಯಲ್ಲಿಡಿದು ಬಂದು, ಅವರಿಬ್ಬರಿಗೂ ಆದಷ್ಟು ಬೇಗ ಡಿವೋರ್ಸ್ ಕೊಡಿಸಿ, ನನ್ನ ಮನೆ ತುಂಬಿಸಿಕೊಳ್ಳಿ ಅಂತಿದ್ದಾಳೆ. ಕೀರ್ತಿಗೆ ಈ ಕಡೆ ಅಪಾರವಾದ ನಂಬಿಕೆಯೂ ಇದೆ. ಲಕ್ಷ್ಮೀಗೆ, ವೈಷ್ಣವ್ ನನ್ನೋನು ಅಂತ ಗೊತ್ತಾದ್ರೆ ಬಿಟ್ಟು ಹೋಗ್ತಾಳೆ ಅನ್ನೋದು. ಆದರೆ, ಗಂಡನನ್ನು ಬಿಟ್ಟು ಕೊಡುವಷ್ಟು ಮುಗ್ಧಳಲ್ಲ ಲಕ್ಷ್ಮೀ.


Click it and Unblock the Notifications











