Bhagyalakshmi: ಕಡೆಗೂ ಭಾಗ್ಯಾಳ ಕಣ್ಣೀರು ಕುಸುಮಾಗೆ ಕಾಣಿಸಿತು.. ಮಗನನ್ನು ಸರಿ ಮಾಡ್ತಾಳಾ..?
ಭಾಗ್ಯಾ ನೋವಲ್ಲಿದ್ದಾಳೆ. ಮನೆಯವರ ಸಂತೋಷವೇ ತನ್ನ ಪ್ರಪಂಚ ಎಂದುಕೊಂಡಿದ್ದ ಸೊಸೆಯ ಕಣ್ಣೀರು ಅತ್ತೆಗೆ ಕಾಣಿಸುತ್ತಿಲ್ಲ. ಭಾಗ್ಯಾ ಯಾಕೆ ಹುಚ್ಚಿಯಂತೆ ಆಡುತ್ತಿದ್ದಾಳೆ ಎಂಬುದು ಗಮನವಿಲ್ಲ. ಪಾರ್ಕಿಗೆ ಹೋಗಿ ಬರುತ್ತೀವಿ ಎಂದು ಹೋದ ಮಗ ಸೊಸೆ, ಬರುವಾಗ ಮಗನೊಬ್ಬನೇ ಬಂದ. ಎರಡು ದಿನವಾದ ಮೇಲೆ ಬಂದ ಸೊಸೆಯ ಮುಖದಲ್ಲಿ ನಗುವೇ ನಾಪತ್ತೆಯಾಗಿತ್ತು. ಅದರ ಪ್ರಶ್ನೆಯೇ ಬರಲಿಲ್ಲ.
ತಾಂಡವ್‌ಗೆ ತನ್ನ ಹೆಂಡತಿಯೆಂದರೆ ಹೀಗೆ ಇರಬೇಕು ಎಂಬೆಲ್ಲಾ ಕನಸು ಇದೆ. ಹೆಂಡತಿ ಜೊತೆಗೆ ಹೊರಗೆ ಹೋದಾಗ ಏನೆಲ್ಲಾ ತಿನ್ನಬೇಕು ಎಂಬ ಆಸೆಯಿದೆ. ತಾನು, ತನ್ನ ಜೀವನ ಎಲ್ಲವನ್ನು ಭಾಗ್ಯಾಳ ಎದುರು ತೆರೆದಿಟ್ಟ ತಾಂಡವ್, ಕಡೆಗೆ ಅವಳನ್ನು ಕೈಬಿಟ್ಟು ಬಂದಿದ್ದ. ಆದರೆ ಗಂಡನ ಇಷ್ಟಕಷ್ಟ ತಿಳಿದ ಭಾಗ್ಯಾ ಈಗ ಬದಲಾಗುವ ಪ್ರಯತ್ನದಲ್ಲೂ ಭಾಗ್ಯಾ ಸೋತಿದ್ದಾಳೆ.

ಗಂಡನ ಮಾತಿನಿಂದ ಗೊತ್ತಾಯ್ತು ಸತ್ಯ
ಭಾಗ್ಯಾ ಚೂಡಿದಾರ್ ಹಾಕಿಕೊಂಡಿದ್ದನ್ನು ಕಂಡು ಕುಸುಮಾ ಮತ್ತಷ್ಟು ಕೆಂಡಾಮಂಡಲವಾಗಿದ್ದಳು. ಆದರೆ ಭಾಗ್ಯಾಳ ಮಾವನಿಗೆ ಏನೋ ಸಮಸ್ಯೆಯಾಗಿದೆ ಎಂಬುದು ಅನುಮಾನವಿತ್ತು. ಎಷ್ಟೇ ಹೇಳಿದರೂ ಕೇಳದ ಕುಸುಮಾಗೆ ಜೋರಾಗಿ ಗದರಿ, ಮೊದಲು ಆ ಮಗು ಮನಸ್ಸಿಗೆ ಏನಾಗಿದೆ ಅಂತ ತಿಳಿದುಕೋ. ಅವರಿಬ್ಬರು ಪಾರ್ಕಿಗೆ ಹೋಗಿದ್ದರು ನಿಜ. ಆದರೆ ಅದಾದ ಮೇಲೆ ಏನಾಯ್ತು ಅನ್ನೋದು ನಿಂಗೆ ಗೊತ್ತಿದೆಯಾ. ರಾಜ ಕೂಡ ಮುಖಕ್ಕೆ ಮುಖ ಕೊಟ್ಟುಮಾತನಾಡುತ್ತಿಲ್ಲ ಎಂದಾಗ ಭಾಗ್ಯಾಳನ್ನು ವಿಚಾರಿಸಲು ಹೊರಟಿದ್ದಾಳೆ ಕುಸುಮಾ.
ಕುಸುಮಾಗೆ ತಿಳಿಯಿತು ಭಾಗ್ಯಾಳ ಮನಸ್ಥಿತಿ
ಭಾಗ್ಯಾಳ ರೂಮು ಅದೇ ಸ್ಥಿತಿಯಲ್ಲಿತ್ತು. ಬಟ್ಟೆಯೆಲ್ಲಾ ಹರಡಿತ್ತು. ಅತ್ತೆ ಕೊಟ್ಟ ಸೀರೆಯುಟ್ಟು ಭಾಗ್ಯಾ, ಜೋರು ಅಳುತ್ತಾ ಕೂತಿದ್ದಳು. ಅದನ್ನು ಕಂಡ ಕುಸುಮಾಗೆ ನಿಜಾಂಶ ಅರ್ಥವಾಯಿತು. ಮಂಡಿನೋವು ಇದ್ದರೂ, ಭಾಗ್ಯಾಳ ಬಳಿ ಬಂದು ಕೂತಳು. ಭಾಗ್ಯಾಳಿಗೆ ಆಗಲು ಅತ್ತೆಯದ್ದೇ ಚಿಂತೆ. ನಿಮಗೆ ಮಂಡಿ ನೋವು ಇದೆ. ಎದ್ದೇಳಿ ಮೇಲೆ ಕುಳಿತುಕೊಳ್ಳಿ ಎಂದೇ ಹೇಳುತ್ತಿದ್ದಳು. ಭಾಗ್ಯಾಳನ್ನು ಹೆಗಲ ಮೇಲೆ ಮಲಗಿಸಿಕೊಂಡು ಕುಸುಮಾ ಸಮಾಧಾನ ಮಾಡಿದಳು.
ಶ್ರೇಷ್ಠಾ ಮನೆಯಲ್ಲಿಯೇ ಉಳಿದ ತಾಂಡವ್
ಆ ಕಡೆ ಭಾಗ್ಯಾ ಮನೆಗೆ ಬಂದಿದ್ದಾಳೆ ಎಂದು ಗೊತ್ತಾಗಿದ್ದೇ ತಡ ತಾಂಡವ್ ಭಯಕ್ಕೆ ಶ್ರೇಷ್ಠಾ ಮನೆ ಸೇರಿದ್ದಾನೆ. ಇನ್ಮುಂದೆ ಇಲ್ಲೆ ಇರುತ್ತೀನಿ ಅಂತ ಬೇರೆ ಹೇಳುತ್ತಿದ್ದಾನೆ. ಶ್ರೇಷ್ಠಾ ಬಯಸಿದ್ದು ಅದನ್ನೇ. ಈಗ ಅವಳ ದಾರಿ ಸುಲಭವಾಗಿದೆ. ಹಾಗಂತ ತಾಂಡವ್‌ನ ಈ ಮಾತು ಹೆಚ್ಚು ಸಮಯ ಇರುತ್ತೆ ಎಂದು ಹೇಳುವ ಹಾಗಿಲ್ಲ. ಅಮ್ಮನಿಂದ ಕರೆ ಬಂದ್ರೆ, ಶ್ರೇಷ್ಠಾಳ ವಿರುದ್ಧವೇ ಅದ್ಯಾವಾಗ ತಿರುಗಿ ಬೀಳುತ್ತಾನೋ ಗೊತ್ತಿಲ್ಲ.

ಕುಸುಮಾಗೆ ಗೊತ್ತಾಯ್ತು ಮಗನ ಅವತಾರ
ಭಾಗ್ಯಾ ಬಿಕ್ಕಿ ಬಿಕ್ಕಿ ಒಳ್ಳೆ ಮಗು ರೀತಿ ಕಣ್ಣೀರು ಹಾಕಿದ್ದಾಳೆ. "ನನ್ನನ್ನು ನಿಮ್ಮ ಸೊಸೆಯಾಗಿ ಯಾಕೆ ಮಾಡಿಕೊಂಡ್ರಿ ಅತ್ತೆ. ನನಗೆ ಏನು ಗೊತ್ತಾಗಲ್ಲ. ಯಾರ ಹತ್ರ ಹೇಗೆ ಮಾತನಾಡಬೇಕು ಅನ್ನೋದು ಗೊತ್ತಾಗಲ್ಲ. ದಡ್ಡಿ ದಡ್ಡಿ ನಾನು. ಏನು ಮಾಡ್ಲಿ ಅತ್ತೆ. ನಂಗೆ ಏನು ಗೊತ್ತಾಗೋದೆ ಇಲ್ಲ. ನಿಮ್ಮ ಜಾಸ್ತಿ ಓದಿದ್ದಾರೆ. ದೊಡ್ಡ ಕೆಲಸದಲ್ಲಿದ್ದಾರೆ. ನಾನು ಬರೀ 9ನೇ ಕ್ಲಾಸ್ ಓದಿದ್ದೀನಿ. ಅವರು ಇಷ್ಟಪಡುವಂತ ಹೆಂಡತಿ ನಾನಲ್ಲ. ಈ ರೀತಿ ಬಟ್ಟೆ ಹಾಕೋದು ಅವರಿಗೆ ಇಷ್ಟ ಆಗಲ್ಲ. ಅವರು ಮೊದಲನೇ ಸಲ ಮನಸ್ಸು ಬಿಚ್ಚಿ ಮಾತಾಡಿದ್ರು. ನಾನು ಅವರಿಷ್ಟ ಪಡುವ ಹೆಂಡತಿ ಅಲ್ಲ ಅತ್ತೆ" ಅಂತ ತಾಂಡವ್ ಆಡಿದ ಒಂದೊಂದು ಮಾತುಗಳನ್ನು ಕುಸುಮಾ ಬಳಿ ಹೇಳಿದ್ದಾಳೆ.


Click it and Unblock the Notifications











