Bhagyalakshmi: ತಾಂಡವ್ ವಿರೋಧದ ನಡುವೆಯೂ ಮನೆಗೆ ಬಂದ ಭಾಗ್ಯಾ.. ಕುಸುಮಾಗೆ ಸತ್ಯ ಗೊತ್ತಾಗೋದೇಗೆ?
ಭಾಗ್ಯಾಳಿಗೆ ತನ್ನ ಮನೆ, ಮಕ್ಕಳು, ಅತ್ತೆ - ಮಾವ, ಗಂಡ ಬಿಟ್ಟರೆ ಬೇರೆ ಪ್ರಪಂಚವೇ ಗೊತ್ತಿಲ್ಲ. ತನಗೆ ಎಷ್ಟೇ ನೋವಾದರೂ ಮನೆಯವರ ಸಂತಸದಲ್ಲಿಯೇ ತನ್ನ ಖುಷಿಯನ್ನು ಕಾಣುತ್ತಾಳೆ. ನೋವೇ ತುಂಬಿರುವ ಭಾಗ್ಯಾಳ ಬದುಕಿನಲ್ಲಿ ಸಿಗುವ ಸಣ್ಣ ಪುಟ್ಟ ಸಂತಸಗಳನ್ನೇ ದೊಡ್ಡಮಟ್ಟಕ್ಕೆ ಟ್ರೀಟ್ ಮಾಡುತ್ತಾಳೆ.
ಈಗ ಗಂಡ, ನಿನ್ನ ಜಾಗಕ್ಕೆ ಕೆಲಸದವಳನ್ನು ತರುತ್ತೀನಿ ಎಂದಾಗಲೂ ಭಾಗ್ಯ ತನ್ನ ಮಕ್ಕಳು, ಅತ್ತೆ ಮಾವನಿಗಾಗಿ ಸ್ವಾಭಿಮಾನವನ್ನು ಬಿಟ್ಟಿದ್ದಾಳೆ. ಈಗ ಸ್ವಾಭಿಮಾನಕ್ಕಿಂತ ಮನೆ, ಸಂಸಾರ ಮುಖ್ಯ ಎಂದು, ಮತ್ತೆ ಗಂಡನ ಮನೆ ಬಾಗಿಲನ್ನೇ ತಟ್ಟಿದ್ದಾಳೆ.

ಶ್ರೇಷ್ಠಾಳ ಮನೆಯಿಂದ ಹೊರಟ ಭಾಗ್ಯಾ
ಭಾಗ್ಯಾಳನ್ನು ಕಷ್ಟದಲ್ಲಿದ್ದಾಗ ಕಾಪಾಡಿದ್ದು ಶ್ರೇಷ್ಠಾ ಅಮ್ಮ ಮತ್ತು ಮಾವ. ಈಗ ಸ್ವಾಭಿಮಾನ ಬಿಟ್ಟು ಅಲ್ಲಿಗೆ ಹೇಗೆ ಹೋಗ್ತೀರಾ..? ತವರು ಮನೆಗೆ ಹೋಗಿ ಎಂದಾಗ ಭಾಗ್ಯಾ ಹೇಳಿದ ಒಂದೊಂದು ಮಾತು, ಅವಳ ಇರುವಿಕೆಯನ್ನು ತೋರಿಸಿತು. ಮಕ್ಕಳಿಗೆ ಏನೆಲ್ಲಾ ಬೇಕು, ಅತ್ತೆ ಮಾವನಿಗೆ ಹೇಗಿರಬೇಕು, ನಾನಿಲ್ಲದೆ ಇದ್ದರೆ ಗಂಡನಿಗೆ ಆಗುವ ಸಮಸ್ಯೆ ಈ ಎಲ್ಲವನ್ನು ಬಿಡಿಸಿ ಹೇಳಿದಳು. ಆಗ ಶ್ರೇಷ್ಠಾಳ ಅಮ್ಮ ನನ್ನ ಮಗಳಂತೆ ಎಂದಾಗ ಅವರ ತಂದೆ ಅವಳಿಗೂ ಇವಳಿಗೂ ಹೋಲಿಕೆ ಮಾಡಬೇಡ ಎಂದರು. ಒಂದು ವೇಳೆ ಆ ಶ್ರೇಷ್ಠಾಳಿಂದಾನೇ ಭಾಗ್ಯಾಳ ಸಂಸಾರಕ್ಕೆ ಕುತ್ತು ಬಂದಿದೆ ಎಂದು ಗೊತ್ತಾದರೆ ಸುಮ್ಮನೆ ಅಂತು ಬಿಡಲ್ಲ. ಭಾಗ್ಯಾಳಿಗೆ ಸಮಾಧಾನ ಮಾಡಿ ಕಳುಹಿಸಿದ್ದಾರೆ.
ಬಾಸ್ ಬುದ್ಧಿಮಾತಿಗೆ ತಲೆ ತಗ್ಗಿಸಿದ ತಾಂಡವ್
ಎರಡು ದಿನ ರಜೆಯಲ್ಲಿ ಶ್ರೇಷ್ಠಾಳ ಜೊತೆಗೆ ಮಜಾ, ಒಂದು ದಿನ ಪೊಲೀಸ್ ಸ್ಟೇಷನ್ ಅಲೆದು ಬಂದ ತಾಂಡವ್ ಆಫೀಸಿಗೆ ಬಂದಿದ್ದಾನೆ. ತಾಂಡವ್ ಬಾಸ್ ತನ್ನ ಚೇಂಬರ್‌ಗೆ ಕರೆಸಿಕೊಂಡು, ಫ್ಯಾಮಿಲಿಯ ಪ್ರಾಮುಖ್ಯತೆ ಬಗ್ಗೆ ತಿಳಿ ಹೇಳಿದ್ದಾರೆ. "ನಾನು ಮತ್ತು ಹೆಂಡತಿ ಸಂಸಾರದ ರೀತಿ ರಿವಾಜುಗಳಿಗೆ ಹೆಚ್ಚಿನ ಬೆಲೆ ಕೊಡುವುದು. ಈ ರೀತಿಯಾದ ವಿಚಾರಗಳನ್ನು ಕೇಳುವುದಕ್ಕೂ ಇಷ್ಟ ಆಗಲ್ಲ. ನೀನು ತುಂಬಾ ಬುದ್ಧಿವಂತ ಎಲ್ಲವನ್ನು ಅರ್ಥ ಮಾಡಿಕೊಳ್ಳುತ್ತೀಯಾ ಅಂದುಕೊಂಡಿದ್ದೀನಿ" ಎಂದಿದ್ದಾರೆ.
ಮನೆಗೆ ಬಂದ ಭಾಗ್ಯಾ
ಕುಸುಮಾ ಸೊಸೆ ಬಂದ ಮೇಲೆ ಮನೆಯ ಕೆಲಸಕ್ಕೆ ಕೈಯನ್ನೇ ಇಟ್ಟಿರಲಿಲ್ಲ ಅನ್ಸುತ್ತೆ. ಈಗ ಅಡುಗೆಯೂ ಮಾಡೋದಕ್ಕೆ ಬರ್ತಿಲ್ಲ. ಪಾತ್ರೆ ತೊಳೆಯುವುದಕ್ಕೂ ಸಂಕಟ. ಇಂದು ರಾಶಿ ಪಾತ್ರೆ ಕಂಡು ಭಾಗ್ಯಾಳನ್ನು ಬಾಯ್ತುಂಬ ಬೈಕೊಂಡಿದ್ದಾಳೆ. ನಾನು ತವರು ಮನೆಗೆ ಹೋಗ್ತೀನಿ ಅಂತ ಗೊಣಕಿಕೊಂಡು ಹಾಲ್‌ನಲ್ಲಿ ಬಂದು ಕುಳಿತ ಕುಸುಮಾಗೆ ಡೋರ್ ಸೌಂಡ್ ಕೇಳಿಸಿದೆ.

ಭಾಗ್ಯಾಳನ್ನು ತಪ್ಪಾಗಿ ತಿಳಿದ ಕುಸುಮಾ
ಭಾಗ್ಯಾಳನ್ನು ಕಂಡೊಡನೆ ಕೋಪವನ್ನೆಲ್ಲಾ ಹೊರ ಹಾಕಿದ್ದಾಳೆ. ಅತ್ತೆ ಮಾವ ಅನ್ನೋ ಬೆಲೆ ಬೇಡ, ಹೇಳದೆ ಕೇಳದೆ ತವರು ಮನೆಗೆ ಹೋಗಿಯೇ ಬಿಡೋದಾ ಅಂತ ವಿಚಾರವೇ ಗೊತ್ತಿಲ್ಲದೆ ಬೈಯ್ಯುತ್ತಿದ್ದಾಳೆ. ಭಾಗ್ಯಾ ಏನನ್ನೋ ಹೇಳುವುದಕ್ಕೆ ಹೊರಟಾಗಲೂ ಅದನ್ನು ಕೇಳುವ ತಾಳ್ಮೆ ಆ ಕಡೆ ಕುಸುಮಾಗೆ ಕಾಣಿಸುತ್ತಿಲ್ಲ. ತಾಂಡವ್ ಹೇಳಿದ್ದೆ ಸತ್ಯ ಎಂದು ನಂಬಿರುವ ಕುಸುಮಾ, ಭಾಗ್ಯಾ ತನ್ನ ತವರು ಮನೆಗೆ ಹೋಗಿದ್ದಾಳೆ ಎಂದುಕೊಂಡಿದ್ದಾಳೆ. ಆದರೆ ಭಾಗ್ಯಾಳ ಕಣ್ಣಲ್ಲಿ ತುಂಬಿದ್ದ ಕಣ್ಣೀರು ಕೂಡ ಕುಸುಮಾಗೆ ಕಾಣಿಸುತ್ತಿಲ್ಲ. ಒಂದೇ ಸಮ ಸೊಸೆಯನ್ನು ಬೈಯ್ಯುತ್ತಿರುವ ಕುಸುಮಾಗೆ, ಆ ಸತ್ಯ ಅದ್ಯಾವಾಗ ತಿಳಿಯುತ್ತೋ ಏನೋ..?


Click it and Unblock the Notifications











