ಮಲ್ಲಿ ಅಲ್ಲ.. ನಾನು ಭಾರ್ಗವಿ: ಪ್ರಮೋಷನ್ ಸಿಕ್ಮೇಲೆ ಮಲ್ಲಿಯ ಕಥೆಯೇನು?
ಕಲರ್ಸ್ ಕನ್ನಡದಲ್ಲಿ 'ಭಾರ್ಗವಿ ಎಲ್ ಎಲ್ ಬಿ' ಧಾರಾವಾಹಿ ಶುರುವಾಗಿದೆ. ಅಪ್ಪನನ್ನು ಹೆಚ್ಚು ಪ್ರೀತಿಸುವ ನಾಯಕಿ ಭಾರ್ಗವಿ ಸಣ್ಣ-ಪುಟ್ಟ ಕೇಸ್‌ಗಳನ್ನು ಹುಡುಕಾಡುತ್ತಿದ್ದಾಳೆ.
ಮಿಡಲ್ ಕ್ಲಾಸ್ ಕುಟುಂಬದ ಹುಡುಗಿಯಾಗಿ ಭಾರ್ಗವಿ ಕಾಣಿಸಿಕೊಂಡಿದ್ದಾಳೆ. ಅವಳ ಬದುಕಿನಲ್ಲಿ ಮುಂದೆ ಏನಾಗುತ್ತದೆ? ನಾಯಕನನ್ನು ಹೇಗೆ ಭೇಟಿ ಮಾಡುತ್ತಾಳೆ? ಎಂಬುದನ್ನು ಮುಂದಿನ ದಿನಗಳಲ್ಲಿ ತಿಳಿದು ಬರಲಿದೆ.
ಇನ್ನು ಪ್ರೋಮೋದಲ್ಲಿ ತೋರಿಸಿರುವಂತೆ ಭಾರ್ಗವಿ ಖಡಕ್ ಹುಡುಗಿ. ಯಾರಿಗೂ ತಲೆ ಕೆಡಿಸಿಕೊಳ್ಳದ ಭಾರ್ಗವಿ ಸ್ವಾಭಿಮಾನಕ್ಕೆ ಒತ್ತು ಹೆಚ್ಚು ಕೊಡುತ್ತಾಳೆ.

ವೀಕ್ಷಕರ ಪ್ರಶ್ನೆಗೆ ಉತ್ತರಿಸಿದ ಮಲ್ಲಿ-ಭಾರ್ಗವಿ
ಸದ್ಯ ಭಾರ್ಗವಿಯಾಗಿ ಕಲರ್ಸ್ ಕನ್ನಡಕ್ಕೆ ಎಂಟ್ರಿ ಕೊಟ್ಟಿರುವ ನಟಿ ರಾಧಾ ಭಾಗವತಿ ಅವರು ಮಲ್ಲಿಯಾಗಿ ಜೀ ಕನ್ನಡದಿಂದ ಹೊರ ನಡೆದಿದ್ದಾರೆ ಎಂಬುದು ಎಲ್ಲರಿಗೂ ಗೊತ್ತೇ ಇದೆ. ಭಾರ್ಗವಿ ಸೀರಿಯಲ್ ಪ್ರೊಮೋ ಬಿಡುಗಡೆಯಾದಾಗಿನಿಂದ ವೀಕ್ಷಕರಲ್ಲಿ ಮೂಡಿದ್ದು ಒಂದೇ ಪ್ರಶ್ನೆ, ಮಲ್ಲಿಯಾಗಿ ಮುಂದುವರೆಯುವುದಿಲ್ವಾ..? ಯಾಕೆ 'ಅಮೃತಧಾರೆ' ಸೀರಿಯಲ್‌ನಿಂದ ಹೊರಗಡೆ ಬಂದಿದ್ದು ಎಂದು ಕೇಳುತ್ತಿದ್ದಾರೆ. ಇದಕ್ಕೆ ಇದೀಗ ನಟಿ ರಾಧಾ ಭಾಗವತಿ ಅವರು ಉತ್ತರ ನೀಡಿದ್ದು, ಅಭಿಮಾನಿಗಳಿಗೆ ಈಗ ಕ್ಲಾರಿಟಿ ಸಿಕ್ಕಿದೆ. ಸಾಕಷ್ಟು ಮಾಧ್ಯಮಗಳಿಗೆ ಸಂದರ್ಶನ ನೀಡಿರುವ ರಾಧಾ ಅವರು ಎಲ್ಲಾ ವಾಹಿನಿಯಲ್ಲೂ ಈ ಪ್ರಶ್ನೆಗೆ ಉತ್ತರ ನೀಡಿದ್ದಾಳೆ.
ಮಲ್ಲಿ ಅಲ್ಲ.. ಭಾರ್ಗವಿ ಎಂದ ನಟಿ ರಾಧಾ
ಮಲ್ಲಿ ಪಾತ್ರ ಬಹಳ ಮುಗ್ಧತೆಯಿಂದ ಕೂಡಿತ್ತು. ಈಗಾಗಲೇ ಕೆಲ ಸಿನಿಮಾಗಳಲ್ಲಿ ನಟಿಸಿದ್ದೇನೆ. ಇನ್ನು ಕಿರುತೆರೆಯಲ್ಲಿ ಹಲವು ವರ್ಷಗಳಿಂದ ಸಪೋರ್ಟಿಂಗ್ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದೇನೆ. ಮಲ್ಲಿ ಪಾತ್ರದಿಂದ ಜನರ ಮನಸ್ಸನ್ನು ಗೆದ್ದಿದ್ದೇನೆ. ಎಲ್ಲೇ ಹೋದರೂ ಜನ ನನ್ನನ್ನು ಮಲ್ಲಿ ಎಂದೇ ಗುರುತಿಸುತ್ತಾರೆ. ಇದು ನನಗೆ ಖುಷಿ ಕೊಟ್ಟಿದೆ. ಆದರೆ, ಭಾರ್ಗವಿ ಎಲ್ ಎಲ್ ಬಿ ಧಾರಾವಾಹಿ ಮೂಲಕ ನನಗೆ ಪ್ರಮೋಷನ್ ಸಿಕ್ಕಿದೆ. ಪ್ರಮೋಷನ್ ಸಿಕ್ಕಾಗ ಮತ್ತು ನನ್ನದಲ್ಲದ ಒಂದು ಪಾತ್ರವನ್ನು ಅಳವಡಿಸಿಕೊಂಡು ನಟಿಸಬೇಕು ಎಂದಾಗ ಅದಕ್ಕೇ ಆದ ಸಮಯ ಕೊಡಬೇಕು. ನಾಯಕಿಯ ಪಾತ್ರಕ್ಕೆ ನ್ಯಾಯ ಒದಗಿಸಬೇಕು ಎಂಬ ಕಾರಣಕ್ಕೆ ನಾನು ಮಲ್ಲಿ ಪಾತ್ರದಿಂದ ಹೊರ ಬಂದಿದ್ದೇನೆ ಎಂದು ಹೇಳಿದ್ದಾರೆ.
ನೆಚ್ಚಿನ ನಟಿಯ ನಿರ್ಧಾರ ಒಪ್ಪಿದ ಫ್ಯಾನ್ಸ್
ಈ ಮಾತನ್ನು ಕೇಳಿದ ಅಭಿಮಾನಿಗಳು ನಟಿ ರಾಧಾ ಭಾಗವತಿ ಅವರ ನಿರ್ಧಾರವನ್ನು ಒಪ್ಪಿಕೊಂಡಿದ್ದಾರೆ. ಆದರೂ ಕೂಡ ಮಲ್ಲಿ ಪಾತ್ರವನ್ನು ಮಿಸ್ ಮಾಡಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ. ಈಗ ಭಾರ್ಗವಿಯಾಗಿ ಕಾಣಿಸಿಕೊಂಡಿರುವ ರಾಧಾ ಅವರನ್ನು ಖುಷಿಯಿಂದಲೇ ವೆಲ್ ಕಮ್ ಮಾಡಿದ್ದಾರೆ. ಇನ್ನು ನಟಿ ರಾಧಾ ಭಾಗವತಿ ಈಗಾಗಲೇ 'ವಸಂತ ಕಾಲದ ಹೂವುಗಳು' ಚಿತ್ರದಲ್ಲಿ ನಟಿಸಿದ್ದು, ಈ ಸಿನಿಮಾ ಮೂಲಕ ಬೆಳ್ಳಿಪರದೆಗೆ ಎಂಟ್ರಿ ಕೊಟ್ಟರು. ಮೂಲತಃ ಬಿಜಾಪುರದ ಹುಡುಗಿ ಆಗಿರುವ ನಟಿ ರಾಧಾ ಅವರು, ಮಾಡೆಲ್ ಕೂಡ ಹೌದು. ಅಲ್ಲದೇ 'ರಾಮಾಚಾರಿ' ಸೀರಿಯಲ್‌ನಲ್ಲೂ ತಂಗಿಯ ಪಾತ್ರದ ಮೂಲಕ ಮೋಡಿ ಮಾಡಿದ್ದರು. ಹಾಗೇ 'ಉಘೇ ಉಘೇ ಮಾದೇಶ್ವರ' ಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದರು.
ಬ್ಯುಸಿಯಾಗಿರುವ ಬಹುಮುಖ ಪ್ರತಿಭೆ
'ಆ 90 ದಿನಗಳು', 'ಅಪಾಯವಿದೆ ಎಚ್ಚರಿಕೆ' ಸಿನಿಮಾಗಳಲ್ಲಿಯೂ ನಟಿಸಿದ್ದು, ಧಾರಾವಾಹಿಯಲ್ಲಿಯೂ ನಟಿಸುತ್ತಿದ್ದಾರೆ. 'ಅಮೃತಧಾರೆ'ಯ ಮಲ್ಲಿ ಮೂಲಕ ಚಿರಪರಿಚಿತರಾಗಿರುವ ರಾಧಾ ಅವರು ಸಧ್ಯ ಭಾರ್ಗವಿ ಎಲ್‌ಎಲ್‌ಬಿ ಧಾರಾವಾಹಿಯಲ್ಲಿ ಬ್ಯುಸಿಯಾಗಿದ್ದಾರೆ. ಇದರೊಂದಿಗೆ ಎಸ್. ನಾರಾಯಣ್ ಅವರ ನಿರ್ದೇಶನದ 'ಒಂದ್ಸಲ ಮೀಟ್ ಮಾಡೋಣ' ಎಂಬ ಚಿತ್ರದಲ್ಲಿ ನಾಯಕನ ತಂಗಿಯ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಇದೆಲ್ಲದರ ಜೊತೆಗೆ 'ಮದುಮಗಳು' ಎಂಬ ಧಾರಾವಾಹಿಗೆ ಕಂಠದಾನ ಮಾಡುತ್ತಿದ್ದಾರೆ. ಒಟ್ನಲ್ಲಿ ನಟಿ ರಾಧಾ ಭಾಗವತಿ ಅವರು ಬಹುಮುಖ ಪ್ರತಿಭೆ ಎಂದರೆ ತಪ್ಪಾಗಲಾರದು.


Click it and Unblock the Notifications











