ಗುರುಮೂರ್ತಿಯಾಗಿ ಕಿರುತೆರೆಯಲ್ಲಿ ಮೋಡಿ ಮಾಡಿದ್ದ ಭವಾನಿ ಸಿಂಗ್ ಈಗೇನು ಮಾಡ್ತಿದ್ದಾರೆ?
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಧಾರಾವಾಹಿಗಳ ಪೈಕಿ 'ಸುಬ್ಬಲಕ್ಷ್ಮಿ ಸಂಸಾರ' ಕೂಡಾ ಒಂದು. ವರ್ಷಗಳ ಹಿಂದೆ ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಈ ಧಾರಾವಾಹಿಯಲ್ಲಿ ನಾಯಕ ಗುರುಮೂರ್ತಿ ಆಗಿ ಅಭಿನಯಿಸಿ ಕಿರುತೆರೆ ವೀಕ್ಷಕರ ಮನ ಸೆಳೆದಿರುವ ನಟನ ಹೆಸರು ಭವಾನಿ ಸಿಂಗ್.
'ಸುಬ್ಬಲಕ್ಷ್ಮಿ ಸಂಸಾರ' ಧಾರಾವಾಹಿಯ ನಂತರ ಕಿರುತೆರೆಯಿಂದ ದೂರವಿದ್ದ ಭವಾನಿ ಸಿಂಗ್ ನಂತರ ತಮ್ಮ ಪತ್ನಿ ಪಂಕಜಾ ಶಿವಣ್ಣ ಅವರೊಂದಿಗೆ ಜೋಡಿ ನಂ 1 ರಿಯಾಲಿಟಿ ಶೋವಿನಲ್ಲಿ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದರು.

ರಾಜಸ್ಥಾನ ಮೂಲದವರಾದ ಭವಾನಿ ಸಿಂಗ್ ಹುಟ್ಟಿ ಬೆಳೆದಿದ್ದೆಲ್ಲಾ ಬೆಂಗಳೂರಿನಲ್ಲಿ. ಬಿಬಿಎಂ ಪಧವೀಧರರಾಗಿರುವ ಅವರಿಗೆ ಬಾಲ್ಯದಿಂದಲೂ ತಾನೊಬ್ಬ ನಟನಾಗಬೇಕು ಎಂಬ ಬಯಕೆ. ಅದರಲ್ಲೂ 'ಕಭೀ ಖುಷಿ ಕಭಿ ಗಮ್' ಚಿತ್ರ ನೋಡಿದ ಬಳಿಕ ಅವರ ಬಯಕೆ ಹೆಚ್ಚಾಯಿತು. ಪದವಿ ವಿದ್ಯಾಭ್ಯಾಸದ ಬಳಿಕ ಪ್ರತಿಷ್ಟಿತ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಭವಾನಿ ಸಿಂಗ್ ನಟನಾಗುವ ನಿರ್ಧಾರ ಮಾಡಿದ್ದರು.
ಬಣ್ಣದ ಜಗತ್ತಿಗೆ ಕಾಲಿಡುವ ಮೊದಲು
ಅಭಿನಯ ತರಂಗ ಸಂಸ್ಥೆ ಸೇರಿಕೊಂಡ ಭವಾನಿ ಸಿಂಗ್ ನಟನೆಯ ರೀತಿ ನೀತಿಗಳನ್ನು ತಿಳಿದುಕೊಂಡರು. 'ಚರಣದಾಸಿ' ಧಾರಾವಾಹಿಯಲ್ಲಿ ನಾಯಕ ಕಾರ್ತಿಕ್ ಆಗಿ ಕಾಣಿಸಿಕೊಳ್ಳುವ ಮೂಲಕ ಕನ್ನಡ ಕಿರುತೆರೆಗೆ ಕಾಲಿಟ್ಟ ಭವಾನಿ ಸಿಂಗ್ ಮುಂದೆ ಗುರುಮೂರ್ತಿ ಅಲಿಯಾಸ್ ಗ್ಯಾರಿಯಾಗಿ ವೀಕ್ಷಕರನ್ನು ರಂಜಿಸಿದ್ದರು.

'ಚರಣದಾಸಿ' ಧಾರಾವಾಹಿಯ ನಂತರ ಹಿಂದಿಯ ಆಶಯ ಧಾರಾವಾಹಿಯಲ್ಲಿ ನಟಿಸುವ ಅವಕಾಶವನ್ನು ಭವಾನಿ ಸಿಂಗ್ ಪಡೆದುಕೊಂಡಿದ್ದರು. ಮೊದಲ ಬಾರಿಗೆ ನೆಗೆಟಿವ್ ರೋಲ್‌ಗೆ ಜೀವ ತುಂಬಿ ಯಶಸ್ವಿಯಾಗಿದ್ದರು ಭವಾನಿ ಸಿಂಗ್. ನಂತರ ಹಿಂದಿಯ 'ಕ್ರೈಂ ಪೆಟ್ರೋಲ್'ಗೆ ಕ್ರಿಯೆಟಿವ್ ಡೈರೆಕ್ಟರ್ ಆಗಿಯೂ ಇವರು ಕೆಲಸ ಮಾಡಿದ್ದ ಭವಾನಿ ಸಿಂಗ್ ಕೆಲವೊಂದು ಎಪಿಸೋಡ್‌ಗಳಲ್ಲಿ ಅಭಿನಯಿಸಿದ್ದರು.
ನಟನೆಯ ಹೊರತಾಗಿ ಮಾಡೆಲಿಂಗ್‌ನಲ್ಲೂ ಇವರು ಸೈ ಎನಿಸಿಕೊಂಡಿರುವ ಹುಡುಗ. ಒಂದಷ್ಟು ಜಾಹೀರಾತುಗಳಲ್ಲಿ ರೂಪದರ್ಶಿಯಾಗಿ ಮಿಂಚಿರುವ ಭವಾನಿ ಸಿಂಗ್, ಕೆಲವೊಂದು ಫ್ಯಾಷನ್ ಶೋಗಳಲ್ಲಿ ಮೋಡಿ ಮಾಡಿದ್ದಾರೆ. ಬಾಲ್ಯದಲ್ಲಿ ನಟನಾಗಬೇಕು ಎಂಬ ಕನಸು ಕಂಡಿದ್ದ ಭವಾನಿ ಸಿಂಗ್‌ಗೆ ಇದೀಗ ಅದು ಈಡೇರಿದ ಖುಷಿಯಿದೆ. ಕಿರುತೆರೆಯ ಮೂಲಕ ಜನರ ಪ್ರೀತಿ ಗಳಿಸುವಲ್ಲಿ ಯಶಸ್ವಿಯಾಗಿರುವ ಭವಾನಿ ಸಿಂಗ್ ನಟನೆಯಲ್ಲಿ ಮುಂದುವರಿಯಬೇಕು ಎಂದರೆ ಶಿಸ್ತು ಅತೀ ಮುಖ್ಯವಾಗುತ್ತದೆ ಎಂದು ಈ ಹಿಂದೆ ಹೇಳಿಕೊಂಡಿದ್ದರು.
ರಾಜ್ ಕುಮಾರ್, ವಿಷ್ಣುವರ್ಧನ್ ಹಾಗೂ ಅಮಿತಾಭ್ ಬಚ್ಚನ್ ಅವರಿಂದ ಸ್ಫೂರ್ತಿ ಪಡೆದಿರುವ ಭವಾನಿ ಸಿಂಗ್ 'ಸುಬ್ಬಲಕ್ಷ್ಮಿ ಸಂಸಾರ' ಧಾರಾವಾಹಿಯ ನಂತರ ಕಿರುತೆರೆಯಿಂದ ದೂರವೇ ಉಳಿದಿದ್ದಾರೆ. ತಮ್ಮ ನಟನೆಯ ಮೂಲಕ ವೀಕ್ಷಕರ ಮನ ಸೆಳೆದಿರುವ ಇವರು ಮತ್ತೆ ಕನ್ನಡ ಕಿರುತೆರೆಗೆ ಮರಳುತ್ತಾರಾ ಎಂದು ನೋಡಬೇಕಾಗಿದೆ.


Click it and Unblock the Notifications











