ಓದು, ಕಿರುತೆರೆ, ಬೆಳ್ಳಿತೆರೆ, ಬೈಕ್ ಇದಿಷ್ಟೇ ಭೂಮಿ ಶೆಟ್ಟಿ ಪ್ರಪಂಚ
ಕಿನ್ನರಿ' ಧಾರಾವಾಹಿ ಖ್ಯಾತಿಯ ನಟಿ ಭೂಮಿ ಶೆಟ್ಟಿ, ನಟನೆಯಷ್ಟೇ ಅಲ್ಲದೆ ಸಾಹಿತ್ಯಾಭಿಮಾನಿಯೂ ಹೌದು. 'ಕಿನ್ನರಿ' ಧಾರಾವಾಹಿಯ ಮೂಲಕ ಕಿರುತರೆಗೆ ಕಾಲಿಟ್ಟ ನಟಿ ಭೂಮಿ ಶೆಟ್ಟಿ, ಮುಗ್ಧ ಮನಸ್ಸಿನ 'ಮಣಿ'ಯಾಗಿಯೇ ಕಿರುತೆರೆ ಪ್ರಿಯರಿಗೆ ಪರಿಚಯ.
ನಟಿ ಭೂಮಿ ಶೆಟ್ಟಿಗೆ ಚಿಕ್ಕಂದಿನಿಂದಲೂ ನಟನೆ ಅಷ್ಟೇ ಅಲ್ಲದೆ ಹಲವಾರು ಇತರೆ ಕಲಾಸಕ್ತಿಯನ್ನು ಹೊಂದಿದ್ದವರು. ಬಾಲ್ಯದಲ್ಲಿಯೇ ಭರತನಾಟ್ಯ ಯಕ್ಷಗಾನ ಮಾಡುತ್ತಿದ್ದ ಈಕೆಗೆ ಸಾಹಿತ್ಯದ ಓದು, ಬರವಣಿಗೆ ಹಾಗೂ ಪತ್ರ ಬರೆಯುವುದರಲ್ಲೂ ಬಹಳಷ್ಟು ಆಸಕ್ತಿ ಇತ್ತು.
ಕುಂದಾಪುರದ ಸಣ್ಣ ಊರೊಂದರಿಂದ ಬಂದಿರುವ ಈಕೆ, ತಮ್ಮ ಬಣ್ಣದ ಬದುಕಿಗೂ ಹಾಗೂ ನಿಜವಾದ ಜೀವನಕ್ಕೂ ಬಹಳಷ್ಟು ವ್ಯತ್ಯಾಸವಿದೆ ಎಂದು ಹೇಳಿಕೊಂಡಿದ್ದಾರೆ.
ಸಾಂಪ್ರದಾಯಿಕ ಕುಟುಂಬದಿಂದ ಬಂದಿರುವ ಈಕೆ ನಟನೆಯಲ್ಲಿ ಆಸಕ್ತಿ ತೋರಿಸಿದಾಗ ಶುರುವಿಗೆ ತಂದೆ ತಾಯಿ ಹಾಗು ಬಂಧು ಬಳಗದವರಿಂದ ಅಷ್ಟೇನು ಪ್ರೋತ್ಸಾಹ ದೊರಕಿರಲಿಲ್ಲ.

ಇಂಜಿನಿಯರಿಂಗ್‌ನಿಂದ ನಟನೆಯತ್ತ
ಇಂಜಿನಿಯರಿಂಗ್ ಪದವಿ ಪಡೆಯಲು ಊರಿನಿಂದ ಬೆಂಗಳೂರಿಗೆ ಬಂದ ಇವರು ಎರಡೇ ವರ್ಷ ಇಂಜಿನಿಯರಿಂಗ್ ಓದಿದ್ದು, ತದನಂತರ 'ಕಿನ್ನರಿ' ಎಂಬ ಧಾರವಾಹಿಯಲ್ಲಿ ಪಾತ್ರ ಸಿಗುತ್ತಿದ್ದಂತೆಯೇ, ಓದು ಬಿಟ್ಟು ನಟನಾ ಕ್ಷೇತ್ರಕ್ಕೆ ಬಂದರು. ನಂತರ ಸಾಲು ಸಾಲಾಗಿ ಬಣ್ಣದ ಲೋಕದಲ್ಲಿ ಅವಕಾಶ ದೊರಕುತ್ತಲೇ ಹೋಯಿತು. ಹಾಗಾಗಿ ಇಂಜಿನಿಯರಿಂಗ್ ಕೈ ಬಿಟ್ಟು ತಮ್ಮನ್ನು ತಾವು ಪೂರ್ತಿಯಾಗಿ ನಟನೆಯಲ್ಲಿ ತೊಡಗಿಸಿಕೊಂಡರು. ಕೇವಲ ಕನ್ನಡದಲ್ಲಿ ಅಷ್ಟೇ ಅಲ್ಲದೆ ತಮ್ಮ ನಟನೆಗೆ ತೆಲುಗಿನಲ್ಲೂ ಅವಕಾಶ ಗಿಟ್ಟಿಸಿಕೊಂಡಿರುವ ಭೂಮಿ ಅಲ್ಲಿಯೂ ನಾಯಕಿಯಾಗಿ ಪಾತ್ರ ನಿರ್ವಹಿಸುತ್ತಿದ್ದಾರೆ.

'ಇಕ್ಕಟ್' ಮೂಲಕ ಬೆಳ್ಳಿತೆರೆಗೆ ಎಂಟ್ರಿ
ಲಾಕ್ ಡೌನ್ ಸಮಯದಲ್ಲಿ ಚಿತ್ರೀಕರಣಗೊಂಡ 'ಇಕ್ಕಟ್' ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದರು. ಮುಂದೆ ಭೂಮಿ ಶೆಟ್ಟಿ 'ಕೆಂಡದ ಸೆರಗು' ಸಿನಿಮಾದಲ್ಲಿ ಕುಸ್ತಿ ಪಟುವಾಗಿ ಮೋಡಿ ಮಾಡಿದರು. 'ಕೆಂಡದ ಸರಗು' ಎಂಬ ಚಿತ್ರವು ಬಹಳ ಸೂಕ್ಷ್ಮವಾದ ಕಥೆಯನ್ನು ಹೇಳುತ್ತಿದ್ದು ಒಬ್ಬ ವೇಶ್ಯೆ ಹಾಗೂ ಆಕೆಯ ಮಗಳನ್ನು ಸಮಾಜ ಎಷ್ಟು ಕೆಟ್ಟ ದೃಷ್ಟಿಯಿಂದ ನೋಡುತ್ತದೆ ಎಂಬುದನ್ನು ತೋರಿಸ ಹೊರಟಿದೆ. ವೇಶ್ಯೆಯರನ್ನು ಬಹಳ ಕೀಳಾಗಿ ಸಮಾಜ ನೋಡುತ್ತದೆ. ಆದರೆ ಆ ವೃತ್ತಿಗೆ ಬರಲು ಅವರಿಗೂ ಅವರದ್ದೇ ಆದ ಒಂದಷ್ಟು ಕೆಟ್ಟ ಕಾರಣಗಳು ಇರುತ್ತವೆ. ಜೀವನದ ಕಷ್ಟಗಳು ತಿರುವುಗಳು ನಮ್ಮನ್ನು ಎಲ್ಲೆಲ್ಲಿಗೋ ಕೊಂಡೊಯ್ಯುತ್ತದೆ ಹಾಗೆಯೇ ವೇಶ್ಯೆಯರ ಜೀವನ ಕೂಡ. ಕೇವಲ ಅವರ ವೃತ್ತಿಯಿಂದ ನಾವು ಅವರ ವ್ಯಕ್ತಿತ್ವವನ್ನು ಅಳಿಯಬಾರದು ಎಂಬ ಸಾಮಾಜಿಕ ಕಳಕಳಿ ಹೊಂದಿರುವ ಕಥೆ 'ಕೆಂಡದ ಸೆರಗು' ಎಂದಿದ್ದಾರೆ.

ಅದ್ಭುತ ಬೈಕ್ ರೈಡರ್ ಹೌದು!
ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ ಬಾಸ್ ನಲ್ಲಿಯೂ ತಮ್ಮ ಚಾಪನ್ನು ಮೂಡಿಸಿರುವ ಭೂಮಿ ಶೆಟ್ಟಿ. ಅತ್ಯದ್ಭುತ ಬೈಕ್ ರೈಡರ್ ಕೂಡ ಹೌದು. ಬೆಂಗಳೂರಿನಿಂದ ತಮ್ಮೂರಿಗೆ ಬೈಕ್‌ನಲ್ಲೇ ಪ್ರಯಾಣಿಸುವ ಭೂಮಿಗೆ ರಾಯಲ್ ಎನ್ಫೀಲ್ಡ್ ಇಷ್ಟದ ಬೈಕ್. ಅದರಲ್ಲಿ ಕೇವಲ ಊರಿಗೆ ಮಾತ್ರವಲ್ಲದೇ ಹತ್ತು ಹಲವಾರು ಜಾಗಗಳಿಗೆ ಪ್ರಯಾಣ ಮಾಡಿದ್ದಾರೆ.

ಓದಿನತ್ತ ಭೂಮಿ ಶೆಟ್ಟಿ ಚಿತ್ತ
'ಸದ್ಯ ನಾನು ಓದುತ್ತಿರುವ ಬಿಎ ಪದವಿಯನ್ನು ಒಳ್ಳೆಯ ರೀತಿಯಲ್ಲಿ ಮುಗಿಸಬೇಕು. ಅದರ ಜೊತೆಗೆ ಹಲವಾರು ಸಿನಿಮಾ ಹಾಗೂ ಧಾರವಾಹಿಗಳಲ್ಲಿ ಒಳ್ಳೊಳ್ಳೆಯ ಕಥೆ ಹೇಳುವ ಪ್ರಾಜೆಕ್ಟ್‌ಗಳಲ್ಲಿ ನನ್ನನ್ನು ನಾನು ತೊಡಗಿಸಿಕೊಳ್ಳಬೇಕು. ಹಾಗೆಯೇ ನನ್ನ ಹವ್ಯಾಸಗಳಿಗೆ ಸಮಯ ಕೊಟ್ಟು ಚೆನ್ನಾಗಿ ಬೆಳೆಸಬೇಕು ಎಂಬುದು ನನ್ನ ಸದ್ಯದ ಕನಸು' ಎಂದು ಭೂಮಿ ಶೆಟ್ಟಿ ಹೇಳಿಕೊಂಡಿದ್ದಾರೆ.


Click it and Unblock the Notifications











